ಉಡುಪಿ: ಕರ್ತವ್ಯಗಳನ್ನು ಶ್ರದ್ಧೆಯಿಂದ ಮಾಡಿದಾಗ ಅವಕಾಶಗಳು ಸಹಜವಾಗಿ ಪ್ರಾಪ್ತಿಯಾಗುತ್ತದೆ. ಕೃಷ್ಣ ಗೀತೆಯ ಸಂದೇಶದಂತೆ ಭಗವದರ್ಪಣ ಬುದ್ಧಿಯಿಂದ ಮಾಡಿದ ಕೆಲಸ ವ್ಯರ್ಥವಾಗುವುದಿಲ್ಲ. ಉತ್ತಮ ಸ್ಥಿತಿಯನ್ನು ದೇವರು ಕೊಡುತ್ತಾನೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಲೌಕಿಕ ಶಿಕ್ಷಣದ ಜತೆಗೆ ಆಧ್ಯಾತ್ಮಿಕ ವಿದ್ಯೆಯನ್ನು ಕಲಿತು ಜೀವನದಲ್ಲಿ ಯಶಸ್ಸು ಗಳಿಸಬೇಕು ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ರವಿವಾರ ವಿನಮ್ರ ಸಹಾಯಧನ ವಿತರಿಸಿ ಅವರು ಅನುಗ್ರಹ ಸಂದೇಶ ನೀಡಿದರು.ಪಡೆದ ಸಹಾಯವನ್ನು ದಾನದ ರೂಪದಲ್ಲಿ ಮುಂದಿನ ಪೀಳಿಗೆಗೆ ತಲುಪಿಸಿದರೆ ಜೀವನ ಸಾರ್ಥಕವಾಗುತ್ತದೆ. ನಮ್ಮ ಕರ್ತವ್ಯದಲ್ಲಿ ನಿಷ್ಠೆ ಇರಬೇಕು. ಇದರಿಂದ ಜೀವನ ಪರಿಪೂರ್ಣವಾಗುತ್ತದೆ ಎಂದರು.
ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಅಶೀವರ್ಚನ ನೀಡಿ, ಯುವ ಪ್ರತಿಭೆಗಳಿಗೆ ವಿದ್ಯಾಪೋಷಕ್ ಮುಖ್ಯವಾಗಿದೆ. ಸಾಧನೆ ಮಾಡಿ ಗುರಿ ತಲುಪುವಾಗ ವಿನಯವನ್ನು ಮರೆಯಬಾರದು. ಸಮಾಜಕ್ಕೆ ನೀಡುವ ಕೊಡುಗೆಯಿಂದಲೂ ಸಾಧನೆ ಪರಿಪೂರ್ಣವಾಗುತ್ತದೆ ಎಂದರು.
1,179 ಮಂದಿ ವಿದ್ಯಾರ್ಥಿಗಳಿಗೆ 1,15,36,000 ರೂ. ವಿದ್ಯಾರ್ಥಿವೇತನ ವಿತರಿಸಲಾಯಿತು. 10 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.
ಧಾರವಾಡದ ವಿದ್ಯಾಪೋಷಕ್ ಸ್ಥಾಪಕ ವಿಶ್ವಸ್ಥ ಪ್ರಮೋದ್ ಕುಲಕರ್ಣಿ, ಕೋಟದ ಗೀತಾನಂದ ಫೌಂಡೇಶನ್‌ನ ಆನಂದ ಸಿ. ಕುಂದರ್, ಮುಂಬಯಿ ಒಎನ್‌ಜಿಸಿ ಇದರ ನಿವೃತ್ತ ಸಿಜಿಎಂ ಬನ್ನಾಡಿ ನಾರಾಯಣ ಆಚಾರ್, ಉದ್ಯಮಿ ಹರೀಶ್ ರಾಯಸ್, ಬೀಜಾಡಿ ನಾಗರಾಜ ರಾವ್, ಸಾಯಿರಾಧ ಸಮೂಹ ಸಂಸ್ಥೆಗಳ ಮನೋಹರ ಎಸ್.ಶೆಟ್ಟಿ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಹರಿಶ್ಚಂದ್ರ, ಮಂಗಳೂರು ಪ್ರೇರಣಾ ಇನ್ಫೋಸಿಸ್‌ನ ರವಿರಾಜ್ ಬೆಳ್ಮ, ಮಲ್ಪೆಯ ಉದ್ಯಮಿ ಆನಂದ ಪಿ. ಸುವರ್ಣ, ಬ್ರಹ್ಮಾವರ ಪ್ರಣವ್ ಆಸ್ಪತ್ರೆಯ ಡಾ| ರಂಜಿತ್ ಕುಮಾರ್ ಶೆಟ್ಟಿ, ಕಲಾರಂಗದ ಉಪಾಧ್ಯಕ್ಷರಾದ ಕಿಶನ್ ಹೆಗ್ಡೆ, ವಿಜಿ ಶೆಟ್ಟಿ ಉಪಸ್ಥಿತರಿದ್ದರು. ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.