ಶಿರಸಿ: ಯಕ್ಷಗಾನ ಕಲಿಕೆಗೆ ಮಾರ್ಗದರ್ಶಿಯಾಗಿ ಏಕ ಸೂತ್ರದ ಮಾದರಿಯಲ್ಲಿ ಬೇಕಾಗಿದ್ದ ಪಠ್ಯ ಪುಸ್ತಕ ಏಳು ವರ್ಷಗಳ ಬಳಿಕ ಆಸಕ್ತರ ಕೈಗೆ ಲಭಿಸಿದೆ. ಅನೇಕ ಏಳು-ಬೀಳುಗಳ ಬಳಿಕ ಅಂತೂ ಇಂತೂ ಬಡಗು ಹಾಗೂ ತೆಂಕುತಿಟ್ಟಿನ ಪ್ರಾಥಮಿಕ ವಿಭಾಗದ ಪಠ್ಯ ಆಸಕ್ತರಿಗೆ ಲಭಿಸಿದ್ದು, ಯಕ್ಷಗಾನ ಪ್ರಿಯರಲ್ಲಿ ಹರ್ಷಕ್ಕೆ ಕಾರಣವಾಗಿದೆ.
2018, ನ.16ರಂದು ಪ್ರಾಥಮಿಕ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ಎಂ.ರಾಘವೇಂದ್ರ ಅವರು ಕರ್ನಾಟಕ ಪಠ್ಯ ಪುಸ್ತಕ ಸಂಘದ ವ್ಯವಸ್ಥಾಪಕರಿಗೆ ಪತ್ರ ಬರೆದು ಈ ಪಠ್ಯ ಮುದ್ರಣಕ್ಕೆ ಆದೇಶಿಸಿದ್ದರು. ಕಳೆದ ಜೂನ್‌ನ ಶೈಕ್ಷಣಿಕ ವರ್ಷದಿಂದಲೇ ಮಕ್ಕಳಿಗೆ ಸಿಗುತ್ತದೆ ಎಂದು ಭಾವಿಸಲಾಗಿತ್ತಾದರೂ ಮತ್ತೆ ಮೂರು ತಿಂಗಳ ಬಳಿಕ ಲಭ್ಯವಾಗಿದೆ. ಪ್ರಾಥಮಿಕ ಹಂತದಲ್ಲಿ ತಲಾ ಐದು ಸಾವಿರ ಪಠ್ಯಗಳು ಮುದ್ರಣವಾಗಿದ್ದು, ಧಾರವಾಡ, ಕಲಬುರಗಿ, ಮೈಸೂರು, ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧಡೆಯ ಸರಕಾರಿ ಮುದ್ರಣಾಲಯದಲ್ಲಿ ಲಭ್ಯವಿದೆ.
ಏಕಿತ್ತು ಆಗ್ರಹ?: ಯಕ್ಷಗಾನ ಜಾನಪದ ಕಲೆ ಎಂಬ ಮಾತಿದ್ದರೂ ಅದು ಶಾಸ್ತ್ರೀಯ ಕಲೆ ಎಂದು ನಿರೂಪಿಸುವ ಅನೇಕ ಕಾರಣಗಳಿವೆ. ನೃತ್ಯ, ಅಭಿನಯ, ಪದ್ಯಗಳ ಜೊತೆ ಹಿಮ್ಮೇಳ, ಮುಮ್ಮೇಳ, ವೇಷಭೂಷಣ ಎಲ್ಲವೂ ಇದೆ. ಕಲಿಕೆಗೆ ಕರಾರುವಕ್ಕಾದ ಸೂತ್ರವೂ ಇದೆ. ಆದರೆ, ಒಂದೊಂದು ಮಾದರಿಯಲ್ಲಿ ಒಂದೊಂದು ಗುರುಗಳು, ಕಲಿಕಾ ಕೇಂದ್ರಗಳು ರೂಢಿಸಿಕೊಂಡಿದ್ದವು. ಇದನ್ನು ತಪ್ಪಿಸಿ ಏಕ ಸೂತ್ರವಾಗಿ ಪಠ್ಯ ನೀಡಬೇಕು ಎಂಬುದು ಆಗ್ರಹವಾಗಿತ್ತು.
ಅಂತೂ ಬಂತು: ಇದೇ ಕಾರಣಕ್ಕೆ ಈ ಮೊದಲಿದ್ದ ಬಿಜೆಪಿ ಸರ್ಕಾರದಲ್ಲಿ ಇಂದಿನ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಆಸಕ್ತಿಯಿಂದ ಯಕ್ಷಋಷಿ, ಗುರು ಹೊಸ್ತೋಟ ಮಂಜುನಾಥ ಭಾಗವತ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಎಂ.ಎಲ್. ಸಾಮಗರು ಪರಿಶೀಲಕರಾಗಿ, ಪ್ರಕಾಶ ಮೂಡಿತ್ತಾಯ, ಸುಜಯೀಂದ್ರ ಹಂದೆ, ತಾರಾನಾಥ ವರ್ಕಾಡಿ, ಗೋವಿಂದ ಭಟ್ಟ ಸೇರಿದಂತೆ ಇತರ ತಜ್ಞರು ಸಮಿತಿಯಲ್ಲಿದ್ದರು. ಕುಂಬಳೆ ಸುಂದರರಾವ್, ಡಾ| ಜಿ.ಎಸ್. ಭಟ್ಟ ಸಾಗರ, ಸದಾನಂದ ಐತಾಳ, ಡಾ| ಕಮಲಾಕ್ಷ, ರಾಧಾಕೃಷ್ಣ ಕಲ್ಚಾರ್ ಸಹಕಾರ ನೀಡಿದ್ದರು. ದಿನೇಶ ಕುಕ್ಕುಜಡ್ಕ ಪಠ್ಯಕ್ಕೆ ಚಿತ್ರ ರಚಿಸಿಕೊಟ್ಟಿದ್ದರು.
ವರ್ಷಗಳ ಕಾಲ ಶ್ರಮಿಸಿ ಸಿದ್ಧಗೊಳಿಸಿ ಸರ್ಕಾರಕ್ಕೆ ಸಮಿತಿ ನೀಡಿದ್ದ ಪಠ್ಯ ಮುದ್ರಿಸಲು ನೆರವಾಗುವಂತೆ ನಿಕಟಪೂರ್ವ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ಅವರು ಕಾಗೇರಿ, ಪ್ರಮೋದ ಮಧ್ವರಾಜ್‌ರಲ್ಲಿ ವಿನಂತಿಸಿದ್ದರು. ಈ ಕಾರ್ಯ ಈಗ ಒಂದು ಹಂತಕ್ಕೆ ಪೂರ್ಣವಾಗಿದ್ದು, ಪ್ರಾಥಮಿಕ ವಿಭಾಗದಲ್ಲಿ ಪಠ್ಯ ಸಿಗುವಂತಿದೆ. ಕೇವಲ 99 ರೂ.ಗೆ 178 ಪುಟದ ಪಠ್ಯವಾಗಿದ್ದು, ಎರಡು ವರ್ಷಗಳ ಅಧ್ಯಯನ ಬಳಿಕ ಜ್ಯೂನಿಯರ್ ಪರೀಕ್ಷೆ ಬರೆಯಬೇಕಿದೆ.
ಕೇಂದ್ರಗಳಿಗೂ ಮಾನ್ಯತೆ ಸಿಗಲಿ: ಸಂಗೀತ, ಭರತನಾಟ್ಯಕ್ಕೆ ಇದ್ದಂತೆ ಯಕ್ಷಗಾನಕ್ಕೂ ಜ್ಯೂನಿಯರ್, ಸೀನಿಯರ್ ಪರೀಕ್ಷೆ, ವಿದ್ವತ್ ಮಾದರಿಯಲ್ಲಿ ಮುಂದೆ ಕರ್ನಾಟಕ ಪ್ರಾಥಮಿಕ ಹಾಗೂ ಪ್ರೌಢ ಪರೀಕ್ಷಾ ಮಂಡಳಿ ನಡೆಸಬೇಕಿದೆ. ಯಕ್ಷಗಾನ ತರಬೇತಿ ನೀಡುವ ಗುರುಗಳಿಗೂ ಪಠ್ಯದ ವ್ಯಾಪ್ತಿ, ಆಳವನ್ನು ಇನ್ನೊಮ್ಮೆ ತಿಳಿಸಿ ಮಕ್ಕಳಿಗೆ ತಲುಪುವಲ್ಲಿ ಇಲಾಖೆ ಮುಂದಾಗಬೇಕಿದೆ. ಯಕ್ಷಗಾನದ ವಿದ್ವತ್ ಪರೀಕ್ಷೆಗೆ ಕೂಡ ಪಠ್ಯ ರಚನೆ ಮಾಡಬೇಕಿದೆ. ಯಕ್ಷಗಾನ ಕಲಿಸುವ ಕೇಂದ್ರಗಳಿಗೆ ಕೂಡ ಸರ್ಕಾರ ಮಾನ್ಯತೆ ಕೊಟ್ಟು ಆಯಾ ಕೇಂದ್ರಗಳ ಮೂಲಕವೇ ಪರೀಕ್ಷೆ ನಡೆಸುವ ಕಾರ್ಯ ಕೂಡ ಮಾಡಿಸಬೇಕಿದೆ.