Advertisement
ನ್ಯಾಯಾಲಯದಲ್ಲಿ ತಮ್ಮ ಕಕ್ಷಿದಾರರ ಪರವಾಗಿ ವಾದಿಸುವ ನ್ಯಾಯವಾದಿಗಳು ಯಕ್ಷಗಾನದ ವೇದಿಕೆಯಲ್ಲಿ ಅರ್ಥಧಾರಿಗಳಾಗಿ ತಮ್ಮ ಪಕ್ಷಕ್ಕೆ ನ್ಯಾಯ ದೊರಕಿಸಿ ಕೊಡಲು ವಾದಿಸುವುದರಲ್ಲಿ ತಾವು ಕಡಿಮೆಯಿಲ್ಲವೆಂಬುದನ್ನು ಶ್ರುತಪಡಿಸಿದ್ದಾರೆ. ಕರ್ಣಾರ್ಜುನರ ನಡುವಿನ ಯುದ್ಧದ ಸನ್ನಿವೇಶವನ್ನು ಯಾವ ಯಕ್ಷಗಾನ ಅರ್ಥದಾರಿಗೂ ಸರಿಗಟ್ಟುವ ರೀತಿಯಲ್ಲಿ ಪಾತ್ರದ ಘನತೆ, ಗಾಂಭೀರ್ಯವನ್ನು ಎತ್ತಿ ತೋರಿಸಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿಯೂ ಯಕ್ಷಗಾನವನ್ನು ಪ್ರವೃತ್ತಿಯಾಗಿ ಬೆಳೆಸಿ ಪಾತ್ರಕ್ಕೆ ಸಮರ್ಪಕವಾಗಿ ಜೀವ ತುಂಬಿ ನ್ಯಾಯ ದೊರಕಿಸಿ ಕೊಟ್ಟಿದ್ದಾರೆ. ಸುಬ್ರಹ್ಮಣ್ಯ ಕುಮಾರ್ ಅಗರ್ತ ಕರ್ಣನಾಗಿ ಆರಂಭದಿಂದ ಅಂತ್ಯದವರೆಗೂ ಒಂದೇ ವಾಗ್ಝರಿಯಲ್ಲಿ ತನ್ನ ದೃಢ ನಿಲುವನ್ನು ಸಮರ್ಥಿಸುತ್ತ ಬದ್ಧತೆಯನ್ನು ಪ್ರತಿಪಾದಿಸಿ ಭೇಷ್ ಎನಿಸಿಕೊಂಡಿದ್ದಾರೆ. ಸುಬ್ರಹ್ಮಣ್ಯ ಕುಮಾರ್ ಪಡಂಗಡಿ ಅರ್ಜುನನ ಸಾರಥಿ ಕೃಷ್ಣನಾಗಿ ಕರ್ಣನ ಶೌರ್ಯವನ್ನು ಶ್ಲಾ ಸಿ ಅರ್ಜುನನನ್ನು ಹುರಿದುಂಬಿಸುತ್ತಾರೆ. ಕರ್ಣನ ಸಾರಥಿ ಶಲ್ಯನಾಗಿ ಕೇಶವ ಬೆಳಾಲು ಪ್ರಖರವಾದ ಮಾತುಗಳಿಂದ ಮತ್ತೆ ಅರ್ಜುನನೆಡೆಗೆ ಅಸ್ತ್ರ ಪ್ರಯೋಗಿಸುವಂತೆ ಕರ್ಣನನ್ನು ಉತ್ತೇಜಿಸುತ್ತಾರೆ. ಅರ್ಜುನನಾಗಿ ಶೈಲೇಶ್ ಠೊಸರ್ ಪ್ರತ್ಯಸ್ತ್ರ ಪ್ರಯೋಗದಲ್ಲಿ ತನ್ನ ಮಾತಿನ ಚಾಟಿಯಿಂದ ಕರ್ಣನನ್ನು ಬಡಿದೆಬ್ಬಿಸುತ್ತಾರೆ. ಪುಟ್ಟ ಪಾತ್ರವಾದರೂ ಸರ್ಪಾಸ್ತ್ರ ಅಶ್ವಸೇನನಾಗಿ ಪ್ರತಾಪ ಸಿಂಹ ನಾಯಕ್ ಮತ್ತೆ ಅಸ್ತ್ರ ಪ್ರಯೋಗಿಸುವಂತೆ ಪ್ರಚೋದಿಸುವ ಮಾತಿನ ವೈಖರಿ ಗಮನ ಸೆಳೆದಿತ್ತು.
ಸಾಂತೂರು ಶ್ರೀನಿವಾಸ ತಂತ್ರಿ