Advertisement

ಚಾತುರ್ಮಾಸದಲ್ಲಿ ಶೂರ್ಪನಖಾ ಪ್ರಕರಣ

05:35 PM Nov 07, 2019 | mahesh |

ಶ್ರೀ ವೆಂಕಟರಮಣ ಯಕ್ಷಗಾನ ಕಲಾಸಮಿತಿ ಕಾರ್ಕಳ ಚಾತುರ್ಮಾಸದ ಅಂಗವಾಗಿ ಶೂರ್ಪನಖಾ ಪ್ರಕರಣ ತಾಳಮದ್ದಳೆ ಕೂಟ ನಡೆಯಿತು.

Advertisement

ರಾಮ, ಸೀತೆ, ಲಕ್ಷ್ಮಣರು ದಂಡಕಾರಣ್ಯವನ್ನು ಪ್ರವೇಶಿಸಿ ಅಲ್ಲಿ ಪಂಚವಟಿಯಲ್ಲಿ ಪರ್ಣಕುಟೀರವನ್ನು ಕಟ್ಟಿಕೊಂಡು ನೆಲೆ ನಿಲ್ಲುತ್ತಾರೆ.ಒಮ್ಮೆ ದಂಡಕಾರಣ್ಯದಲ್ಲಿದ್ದ ಋಷಿ ಮುನಿಗಳು ರಾಮನನ್ನು ಕಂಡು ಇಲ್ಲಿರುವ ರಕ್ಕಸರಿಂದ ತಮಗಾಗುತ್ತಿರುವ ಹಿಂಸೆ ಅನ್ಯಾಯಗಳನ್ನು ನಿವೇದಿಸಿ ರಕ್ಷಣೆಗಾಗಿ ಮೊರೆಯಿಡುತ್ತಾರೆ. ಆವಾಗ ಒಂದು ಹೆಣ್ಣು ರಕ್ಕಸಿಯ ಬೊಬ್ಬೆ,ಆರ್ಭಟ ಕೇಳಿ ಬರುತ್ತದೆ.ಇಲ್ಲಿಂದ ಶೂರ್ಪನಖಾ ಪ್ರಕರಣ ತೆರೆದುಕೊಳ್ಳುತ್ತದೆ.

ರಾಮನಾಗಿ ಡಾ| ಎಂ.ಪ್ರಭಾಕರ ಜೋಶಿಯವರು ಹಾಗೂ ಶೂರ್ಪನಖೀಯಾಗಿ ಉಜಿರೆ ಅಶೋಕ ಭಟ್ಟರ ನಡುವಿನ ಸಂವಾದವು ಒಗಟುಗಳ ಸುರಿಮಳೆ,ಪ್ರಾಸಬದ್ಧ ಮಾತಿನ ವಿನಿಮಯ ,ಸಿನೆಮಾ ಹಾಡಿನ ತುಣುಕುಗಳು,ನೆರೆದ ಪ್ರೇಕ್ಷಕರನ್ನು ರಂಜನೆಯೊಂದಿಗೆ ನಗೆಗೆಡಲಿನಲ್ಲಿ ತೇಲಿಸಿದಂತೂ ಸತ್ಯ.ಲಕ್ಷ್ಮಣನಾಗಿ ಅಪ್ಪು ನಾಯಕ್‌ ಅತ್ರಾಡಿಯವರು ಶೂರ್ಪನಖೀಯೊಂದಿಗೆ ವ್ಯವಹರಿಸುವಾಗ ಆಡಿದ ನಿಷ್ಠುರದ ಗಾಂಭೀರ್ಯದ ನುಡಿಗಳು ಶಹಬ್ಟಾಸ್‌ ಎನಿಸಿತು.ಹಿರಿಯ ಅರ್ಥದಾರಿ ಕೆ.ವಸಂತರವರು ಸೀತೆಯಾಗಿ ತನ್ನ ಧ್ವನಿ ಹೆಣ್ಣಿನ ಧ್ವನಿಗೆ ಸರಿಹೊಂದದಿದ್ದರೂ ರಾಮನ ಮಾಡದಿಯಾಗಿ,ಶೂರ್ಪನಖೀಯ ಬೊಬ್ಬೆಗೆ ಭಯಭೀತಿಯಿಂದ ಆತಂಕಕ್ಕೊಳಗಾದ ಸನ್ನಿವೇಶ ರಾಮನೊಂದಿಗಿನ ಸಂವಾದದಲ್ಲಿ ಉತ್ತಮವಾಗಿ ಅರ್ಥ ಹೇಳಿದರು. ಮುನಿಯಾಗಿ ದೈನ್ಯತೆಯಿಂದ ಮತ್ತು ಖರಾಸುರನಾಗಿ ಭೀತಿ ಹುಟ್ಟಿಸುವ ಪಾತ್ರದಿಂದ ಅರ್ಥಗಾರಿಕೆಯ ಪ್ರಭುದ್ಧತೆ ಮೆರೆದ ಎಸ್‌. ರಾಮ ಭಟ್ಟ ಕಾರ್ಕಳ ಪ್ರಶಂಸೆಗೆ ಪಾತ್ರರಾದರು.

ಒಟ್ಟಾರೆಯಾಗಿ ಕೊನೆಯವರೆಗೂ ಪ್ರೇಕ್ಷಕರನ್ನು ಎಲ್ಲ ಪಾತ್ರಧಾರಿಗಳೂ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಕೂಟದ ಯಶಸ್ಸಿಗೆ ಕಾರಣವಾಯಿತು.

ಇದೇ ವೇದಿಕೆಯಲ್ಲಿ ಹಿಂದೊಮ್ಮೆ ಶೂರ್ಪನಖಾ ಮಾನಭಂಗದ ಆಖ್ಯಾನದಲ್ಲಿ ಶೂರ್ಪನಖಾ ಭಂಡಾರಿಯೆಂದೇ ಖ್ಯಾತರಾಗಿದ್ದ ದಿವಂಗತ ಮಾರೂರು ಮಂಜುನಾಥ ಭಂಡಾರಿಯವರ ಶೂರ್ಪನಖಾ ಪಾತ್ರವನ್ನು ಆವಾಗ ಆನಂದಿಸಿ ಅನುಭವಿಸಿದ್ದ ಹಲವರು ಈ ಬಾರಿ ಮತ್ತೆ ಮತ್ತೇ ಅವರನ್ನು ನೆನಪಿಸಿಕೊಂಡದ್ದು ಕೂಟದ ಸಾರ್ಥಕತೆಯನ್ನು ಸಾರಿತು.

Advertisement

ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ಧಾರೇಶ್ವರರು ಸುಮಧುರವಾಗಿ ಭಾಗವತಿಕೆ ನಡೆಸಿದರು.ಚೆಂಡೆಯಲ್ಲಿ ಕೃಷ್ಣಾನಂದ ಶೆಣೈ ಬ್ರಹ್ಮಾವರ,ಮದ್ದಳೆಯಲ್ಲಿ ನಾರಾಯಣ ಜಿ ಹೆಗ್ಡೆ ಉತ್ತಮ ನಿರ್ವಹಣೆ ತೋರಿದರು.

-ಎಂ.ರಾಘವೇಂದ್ರ ಭಂಡಾರ್‌ಕರ್‌

Advertisement

Udayavani is now on Telegram. Click here to join our channel and stay updated with the latest news.

Next