Advertisement

ಯಕ್ಷಗಾನ ಕಲಾರಂಗದ ಬಡಗುತಿಟ್ಟು ಯಕ್ಷಗಾನ ಯಶಸ್ವಿಯಾದ ರಾಧೇಯ

08:07 AM Jul 28, 2017 | |

ಉಡುಪಿಯ ಯಕ್ಷಗಾನ ಕಲಾರಂಗವು ಯಕ್ಷಗಾನ ಕಲೆ ಮತ್ತು ಕಲಾವಿದರ ಸರ್ವತೋಮುಖ ಅಭಿವೃದ್ಧಿಗೆ ಅನೇಕ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆ ದಿಸೆಯಲ್ಲಿ ಶ್ರಮಿಸುತ್ತಾ ಬಂದಿದೆ. ಅದು ಹೆಮ್ಮೆಯ ಸಂಗತಿ ಕೂಡ. ಯಕ್ಷಗಾನ ಕಲಾರಂಗ ಪ್ರತೀ ವರ್ಷವೂ ಜುಲೈ ತಿಂಗಳಿನಲ್ಲಿ ನಡೆಸುವ ತೆಂಕು ಹಾಗೂ ಬಡಗು ತಿಟ್ಟಿನ ಯಕ್ಷಗಾನ ಪ್ರದರ್ಶನಗಳಲ್ಲಿ, ಈ ವರ್ಷದ ಬಡಗಿನ ಕಲಾವಿದರ ಪ್ರಸ್ತುತಿಯಾಗಿ ಜುಲೈ 9ರಂದು ರಾಧೇಯ ಯಕ್ಷಗಾನ ಪ್ರಸ್ತುತಗೊಂಡಿತ್ತು.

Advertisement

ಹಿಮ್ಮೇಳದಲ್ಲಿ ಮೊದಲಿಗೆ ಭಾಗವತರಾಗಿ ಹಿಲ್ಲೂರು ರಾಮಕೃಷ್ಣ ಹೆಗಡೆ, ಮದ್ದಲೆಯಲ್ಲಿ ಪರಮೇಶ್ವರ ಭಂಡಾರಿ ಹಾಗೂ ಚೆಂಡೆಯಲ್ಲಿ ಲಕ್ಷ್ಮೀನಾರಾಯಣ ಸಂಪ ಭಾಗವಹಿಸಿದ್ದು, ಉತ್ತಮ ಹಿಮ್ಮೇಳವನ್ನು ನೀಡಿದರು. ಹರಸಿ ಕಳುಹಿದಳು ರಾಧೆ ಎಂಬ ಭಾಮಿನಿಯನ್ನು ಭಾಗವತರು ಚಂದ್ರಕಂಸ ರಾಗದಲ್ಲಿ ತುಂಬಾ ಚೆನ್ನಾಗಿ ಹಾಡಿದರು. 

ಕುಂತೀಭೋಜನ ಒಡ್ಡೋಲಗದಿಂದ ಪ್ರಸಂಗ ಪ್ರಾರಂಭವಾಯಿತು. ಕುಂತಿ ಪಾತ್ರವನ್ನು ಶಶಿಕಾಂತ ಶೆಟ್ಟಿಯವರು ನಿರ್ವಹಿಸಿದ್ದರು. ಅವರ ಉಡುಗೆ ಪಾತ್ರಕ್ಕೆ ಪೂರಕವಾಗಿಲ್ಲದಿದ್ದರೂ ತಮ್ಮ ಮಾತು ಹಾಗೂ ಭಾವನೆಗಳಿಂದ ಆ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದರು. ವಸುಷೇಣನ‌ ಪಾತ್ರದಲ್ಲಿ ಮಂಕಿ ಈಶ್ವರ ನಾಯ್ಕ ಕಾಣಿಸಿಕೊಂಡರು. ಆ ಪಾತ್ರದ ಭಾವನೆಗಳ ಕೊರತೆ ಕಂಡುಬಂದರೂ ಪಾತ್ರದ ಒಟ್ಟಂದ ಚೆನ್ನಾಗಿಯೇ ಇತ್ತು. ದ್ರೋಣರ ಪಾತ್ರವನ್ನು ಅನಂತ ಹೆಗಡೆ ನಿಟ್ಟೂರು ಒಳ್ಳೆಯ ರೀತಿಯಲ್ಲಿ ಮಾಡಿದರು. ಹಾಗೆಯೇ ಪರಶುರಾಮನ ಪಾತ್ರದಲ್ಲಿ ಆರ್ಗೋಡು ಮೋಹನದಾಸ ಶೆಣೈ ತಮ್ಮ ಹಿರಿತನವನ್ನು ತೋರಿಸಿಕೊಟ್ಟರು. 

ಪರೀಕ್ಷಾರಂಗ ಸನ್ನಿವೇಶದಲ್ಲಿ ಕೌರವನು ಪ್ರಭುತ್ವ ಸಾಧಿಸುವ ಹುನ್ನಾರವನ್ನು ಸೊಗಸಾಗಿ ನಿರೂಪಿಸಿದ್ದು, ಕೌರವ ಪಾತ್ರಧಾರಿ ಅಶೋಕ ಭಟ್‌ ಸಿದ್ದಾಪುರ ಈ ಭಾಗವನ್ನು ಚುರುಕಾಗಿ, ಚೆನ್ನಾಗಿ ಕೊಂಡೊಯ್ದರು. ಈ ಭಾಗದಿಂದ ಮುಂದೆ ಕರ್ಣ ವಿವಾಹದವರೆಗೂ ಕರ್ಣನ ಪಾತ್ರವನ್ನು ಜಲವಳ್ಳಿ ವಿದ್ಯಾಧರ ರಾವ್‌ ಬಿಸಿಯಾಗಿ, ಸೊಗಸಾಗಿ ನಿರ್ವಹಿಸಿದರು. ರುಕ್ಮನ ಪಾತ್ರದಲ್ಲಿ ಕುಂದಾಪುರ ತಿಟ್ಟಿನ ಹಿರಿಯ ವೇಷಧಾರಿ ಕೋಡಿ ವಿಶ್ವನಾಥ ಗಾಣಿಗರು ಕರ್ಣ ಹಾಗೂ ರುಕ್ಮನ ಯುದ್ಧ ಸಂದರ್ಭದಲ್ಲಿ ಮೇಳ ಕಟ್ಟುವುದು, ಯಜಮಾನರಿಗೆ ನಿಷ್ಠೆ ಮುಂತಾದ ವಿಷಯಗಳನ್ನು ಅನಾವಶ್ಯಕವಾಗಿ ತಂದರು. ಸೋಮಪ್ರಭೆಯ ಪಾತ್ರವನ್ನು ಮಾಧವ ನಾಗೂರು ಸೊಗಸಾಗಿ ನಿರ್ವಹಿಸಿದರು; ಸಮಯ ಮಿತಿಯ ಪ್ರದರ್ಶನವಾದ್ದರಿಂದ ಈ ಭಾಗದಲ್ಲಿ ನರ್ತನ ಸ್ವಲ್ಪ ಹೆಚ್ಚಿನ್ನಿಸಿತು. 

Advertisement

ಕರ್ಣ ಭೇದನ ಸಂದರ್ಭದಿಂದ ಕರ್ಣನ ಪಾತ್ರವನ್ನು ತುಂಬಾ ಸೊಗಸಾಗಿ ಬಿಂಬಿಸಿದ ಹಿರಿಯ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರು ಭಾಷೆ, ಭಾವನೆಗಳಿಂದ ಜನಮನ ಗೆದ್ದರು. ಕೃಷ್ಣನಾಗಿ ಬಂದ ತೀರ್ಥಹಳ್ಳಿ ಗೋಪಾಲ ಆಚಾರ್ಯರು ಕೃಷ್ಣನ ಮಾತು- ತಂತ್ರಗಾರಿಕೆಗಿಂತ ಕುಣಿತಕ್ಕೆ ಪ್ರಾಶಸ್ತ್ಯ ಕೊಟ್ಟರೂ ಪಾತ್ರ  ಕಟ್ಟುವಲ್ಲಿ ಯಶಸ್ವಿಯಾದರು. ಕರ್ಣನ ಹಾಗೂ ಕುಂತಿಯ ಸಂದರ್ಭವಂತೂ ತುಂಬಾ ಚೆನ್ನಾಗಿ ಮೂಡಿಬಂತು. 

ಅನಂತರ ಪ್ರಾರಂಭವಾದ ಅಭಿಮನ್ಯು ವಧೆ ಭಾಗ ಚಿಕ್ಕದಾದರೂ ಬಿರುಸಾಗಿ ಕಂಡುಬಂದು ಇಡಿಯ ಯಕ್ಷಗಾನ ಪ್ರಸ್ತುತಿಗೆ ಉಠಾವ್‌ ಒದಗಿಸಿತು. ಅನಂತರ ಶಲ್ಯಸಾರಥ್ಯ ಸಂದರ್ಭದಲ್ಲಿ ಆ ಪಾತ್ರವನ್ನು ಶ್ರೀಪಾದ ಭಟ್‌ ಥಂಡಿಮನೆ ಹಾಗೂ ಕೌರವನ ಪಾತ್ರವನ್ನು ನೀಲ್ಕೋಡು ಶಂಕರ ಹೆಗಡೆ ನಿರ್ವಹಿಸಿ ತಮ್ಮ ತಮ್ಮ ಕಲಾ ಪ್ರೌಢಿಮೆಯನ್ನು ಮೆರೆದರಾದರೂ “ರಾಧೇಯ’ ಪ್ರಸಂಗಕ್ಕೆ ಇದು ಬೇಕಿತ್ತೇ?’ ಎಂಬ ಅನೇಕರ ಮಾತು ತಪ್ಪು ಅನ್ನಿಸಲಿಲ್ಲ. 

ಸಮಯದ ಕೊರತೆಯಿಂದಾಗಿ ಚುರುಕಾಗಿ ಪ್ರಾರಂಭವಾದ ಕರ್ಣಾವಸಾನ ಭಾಗದಲ್ಲಿ ಕೃಷ್ಣಯಾಜಿಯವರ ಕರ್ಣ ಮನಮುಟ್ಟುವಂತೆ ಇತ್ತು. ಥಂಡಿಮನೆ ಶ್ರೀಪಾದ ಭಟ್‌ ತಮ್ಮ ಗತ್ತು ಗಾಂಭೀರ್ಯದಿಂದಲೇ ಶಲ್ಯ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದರು. ಅರ್ಜುನನ ಪಾತ್ರದಲ್ಲಿ ತೋಟಿಮನೆ ಗಣಪತಿ ಹೆಗಡೆ ಹಾಗೂ ಕೃಷ್ಣನಾಗಿ ತೀರ್ಥಹಳ್ಳಿ ಗೋಪಾಲ ಆಚಾರ್ಯರು ತಮ್ಮ ಪಾತ್ರಕ್ಕೆ ನ್ಯಾಯ ನೀಡುವಲ್ಲಿ ಯಶಸ್ವಿಯಾದರು. ಇನ್ನುಳಿದಂತೆ ರಾಧೆಯ ಪಾತ್ರದಲ್ಲಿ ರಾಜು ಶೆಟ್ಟಿ, ಸೋಮಶೇಖರನಾಗಿ ಪ್ರಸನ್ನ ಶೆಟ್ಟಿಗಾರ, ಭೀಮನಾಗಿ ಗಣಪತಿ ಭಟ್‌ ಗುಂಡಿಬೈಲು, ಅಭಿಮನ್ಯುವಾಗಿ ತೊಂಬಟ್ಟು ವಿಶ್ವನಾಥ ಆಚಾರ್ಯ, ಕೃಪಾಚಾರ್ಯನಾಗಿ ಚಂದ್ರಕುಮಾರ, ಬ್ರಾಹ್ಮಣನಾಗಿ ಶ್ರೀಧರ ಭಟ್‌ ಕಾಸರಕೋಡು ತಮ್ಮ ತಮ್ಮ ಪಾತ್ರಗಳನ್ನು ಪ್ರೇಕ್ಷಕರು ಮೆಚ್ಚುವಂತೆ ನಿರ್ವಹಿಸಿದರು. ಕರ್ಣ ವಿವಾಹ ಸಂದರ್ಭದಿಂದ ಹಾಡಿದ ಜನಪ್ರಿಯ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್‌ ತಮ್ಮ ಕಂಠ ಸಿರಿಯಿಂದ ಇಡೀ ಪ್ರಸಂಗಕ್ಕೆ ಮೆರುಗು ಕೊಟ್ಟು ಜನಮನ ಗೆಲ್ಲುವಲ್ಲಿ ಯಶಸ್ವಿಯಾದರು. ಅವರಿಗೆ ಮದ್ದಲೆ ಮತ್ತು ಚೆಂಡೆಗಳಲ್ಲಿ ಸಾಥ್‌ ನೀಡಿದ ಸುನಿಲ್‌ ಭಂಡಾರಿ ಮತ್ತು ರಾಮಕೃಷ್ಣ ಮಂದಾರ್ತಿ ತಮ್ಮ ಕೈಚಳಕದಿಂದ ಸೈ ಎನ್ನಿಸಿಕೊಂಡರು.

ಬಡಗು ತಿಟ್ಟಿನ ಅನೇಕ ಪ್ರಸಿದ್ಧ ಕಲಾವಿದರನ್ನು ಒಂದೇ ವೇದಿಕೆಗೆ ತಂದು, ಬೇರೆ ಬೇರೆ ಕವಿಗಳ ಪದ್ಯಗಳನ್ನು ಜೋಡಿಸಿ ರಾಧೇಯ ಪ್ರಸಂಗವನ್ನು ಸಂಯೋಜಿಸಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಕ್ಷಗಾನ ಕಲಾರಂಗ ಮತ್ತು ಸಂಯೋಜಕರ ಶ್ರಮ ಗುರುತಿಸುವಂತಿತ್ತು. ಕಲಾರಸದೌತಣ ನೀಡಿ ಯಶಸ್ವಿಯಾದ ಕಲಾರಂಗದ ಎಲ್ಲ ಬಂಧುಗಳಿಗೆ ಅಭಿನಂದನೆಗಳು.

ಗುರುನಂದನ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next