Advertisement

ಜಾನಪದ ಶ್ರೀಯಂತೆ ಯಕ್ಷಗಾನ ಶ್ರೀ ಪ್ರಶಸ್ತಿಯೂ ಆರಂಭವಾಗಲಿ ಅಕಾಡೆಮಿಯೂ ಸಂಖ್ಯೆ ಹೆಚ್ಚಲಿ

06:32 AM Feb 20, 2022 | Team Udayavani |

ಶಿರಸಿ: ಯಕ್ಷಗಾನ ಅಕಾಡೆಮಿ 2020ನೇ ಸಾಲಿನ ಪಾರ್ತಿಸುಬ್ಬ, ಯಕ್ಷ ಗೌರವ ಹಾಗೂ ಯಕ್ಷ ಸಿರಿ‌ಪ್ರಶಸ್ತಿ ಪ್ರದಾನಕ್ಕೆ ಸಿದ್ದತೆಗಳು ಶುರುವಾಗಿದೆ. ರವಿವಾರ ಶಿರಸಿಯಲ್ಲಿ ಯಕ್ಷಗಾನ ಅಕಾಡೆಮಿ‌ ಮೂಲಕ ನಾಡಿನ ಯಕ್ಷಗಾನ ಸಾಧಕರಿಗೆ ಈ ಪ್ರಶಸ್ತಿ ಪ್ರದಾನ ಆಗಲಿದೆ‌.

Advertisement

ಆದರೆ, ಇವು ಯಕ್ಷಗಾನ ಅಕಾಡೆಮಿ‌ ನೀಡುವ‌ ಪ್ರಶಸ್ತಿಗಳು‌ ಉಳಿದ ಅಕಾಡೆಮಿಗಳಿಗೆ ಹೋಲಿಸಿದರೆ ಯಕ್ಷಗಾನ ಸಾಧಕರಿಗೆ‌ ನೀಡುವ ಪ್ರಶಸ್ತಿಗಳ ಸಂಖ್ಯೆ ಕೂಡ‌ ಕಡಿಮೆಯೇ.  ಯಕ್ಷಗಾನಕ್ಕೆ ‌ಅಸಂಖ್ಯ ಕೃತಿ ಕೊಟ್ಟ ಪಾರ್ತಿ ಸುಬ್ಬ ಅವರ ಹೆಸರಿನಲ್ಲಿ ಪ್ರಶಸ್ತಿ‌ ಪ್ರದಾನ ಆಗಲಿದೆ. ಅಕಾಡೆಮಿ‌ ಗೌರವ ಪ್ರಶಸ್ತಿ ೫೦ ಸಾವಿರ ‌ರೂ. ಮೊತ್ತದ್ದನ್ನು‌ ನೀಡಲಾಗುತ್ತದೆ. ಯಕ್ಷಸಿರಿ ಪ್ರಶಸ್ತಿಯನ್ನು ಹಿಂದಿನ‌ ಅಧ್ಯಕ್ಷ‌ ಪ್ರೋ. ಎಂ.ಎ.ಹೆಗಡೆ ಅವರು ಸ್ವತಃ‌ ಅಕಾಡೆಮಿ‌ ಅನುದಾನದಲ್ಲಿ‌ ನೀಡುತ್ತಿದ್ದು, ೨೫ ಸಾವಿರ ರೂ. ಮೌಲ್ಯದ್ದಾಗಿದೆ.

ಕ್ಷೇತ್ರ ದೊಡ್ಡದು, ಸಂಖ್ಯೆ ಕಡಿಮೆ:

ಆದರೆ ಈ‌ ಪ್ರಶಸ್ತಿಗಳ ಆಯ್ಕೆಯಲ್ಲಿ ಬಡಗು, ತೆಂಕು, ಮೂಡಲಪಾಯ, ಘಟ್ಟದ ಕೋರೆ, ಕೇಳಿಕೆ, ಹಿಮ್ಮೇಳ,‌ ಮುಮ್ಮೇಳ, ತಾಳಮದ್ದಲೆ, ಸಾಹಿತ್ಯ ಎಲ್ಲವನ್ನೂ‌ ನೋಡಬೇಕು. ಸಾವಿರಾರು ಅರ್ಹ ಕಲಾವಿದರು ಇದ್ದಾರೆ.

ಸಾಧ್ಯ ಇದ್ದಷ್ಟು‌ 60 ದಾಟಿದ ಸಾಧಕರ‌ನ್ನು ಗೌರವಿಸಬೇಕಿದೆ. ಯುವ‌ ಕಲಾವಿದರಿಗೆ, ನಡು‌ ವಯಸ್ಸಿನವರಿಗೆ 2020ರ ಪ್ರಶಸ್ತಿ ಈಗ ಪ್ರದಾನ ಮಾಡಲಾಗುತ್ತಿದೆ. ಯಕ್ಷ‌ ಸಿರಿ ಪ್ರಶಸ್ತಿ ಭಾಜನರಾದ ಗೋಪಾಲ ಆಚಾರಿ ಅವರಿಗೆ ಈ ಪ್ರಶಸ್ತಿ ಘೋಷಣೆ ಆದ ಬಳಿಕ ರಾಜ್ಯೋತ್ಸವ‌ ಪ್ರಶಸ್ತಿ ಕೂಡ ಬಂದಿದೆ.

Advertisement

ಯಕ್ಷಗಾನದ ತೆರೆಯ ಹಿಂದೆ, ಮುಂದೆ ಕೆಲಸ‌ ಮಾಡುವ ಅನೇಕರಿಗೆ, ಎಲೆಮರೆಯ ಕಾಯಿಗಳಿಗೆ ನೀಡಲಾಗುವ ಕೆಲಸ ಇನ್ನೂ ಆಗಬೇಕು. ಅದಕ್ಕಾಗಿ‌ ಅಕಾಡೆಮಿ ತನ್ನ ಪ್ರಶಸ್ತಿ ಸಂಖ್ಯೆ ಹೆಚ್ಚಿಸಿಕೊಳ್ಳಬೇಕಿದೆ.

ಈ ಹೆಚ್ಚಳ ಉಂಟಲ್ಲ, ಇದು ಅಪ್ಪಟ ಕನ್ನಡದ ಕಲೆಯ ಉಳಿವು, ಬೆಳವಣಿಗೆ ಹಾಗೂ ಈವರೆಗೆ ನಿಷ್ಕಾಮವಾಗಿ ಕಾರ್ಯ ಮಾಡಿದವರಿಗೆ ಅಭಿನಂದಿಸಲು ಅಗತ್ಯವಾದ ಕಾರ್ಯ ಆಗಿದೆ, ಆಗಬೇಕಿದೆ ಕೂಡ.

ಪ್ರಸ್ತಾವನೆ ಸಲ್ಲಿಕೆ:

ಇದೀಗ ಸರಕಾರದ ಎದುರು, ಮುಖ್ಯವಾಗಿ ಕನ್ನಡ‌ ಮತ್ತು‌ ಸಂಸ್ಕ್ರತಿ ಇಲಾಖೆ ಸಚಿವ ಸುನೀಲಕುಮಾರ ಅವರ ಎದುರು ಈ‌ ಅಕಾಡೆಮಿ ನೀಡುವ ಪ್ರಶಸ್ತಿ ಬಿಟ್ಟು ಇಲಾಖೆಯೂ ಪ್ರಶಸ್ತಿ ನೀಡುವಂತೆ ಆಗಬೇಕು ಎಂಬ ಪ್ರಸ್ತಾವ ಇದೆ.

ಇಲಾಖೆ ನೀಡುವ ಜಾನಪದ ಶ್ರೀ ಮಾದರಿಯಲ್ಲಿ ಯಕ್ಷಶ್ರೀ ಅಥವಾ ಯಕ್ಷಗಾನ ಶ್ರೀ ಪ್ರಶಸ್ತಿ‌ ಕೂಡ ನೀಡಬೇಕು ಎಂಬುದು ಆಗ್ರಹವಾಗಿದೆ.

ಹಿಂದೆ ಜಾನಪದ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ‌ ಲಭಿಸಿತ್ತು. ಅದೇ ಮಾದರಿಯಲ್ಲಿ ವರ್ಷಕ್ಕೆ ಒಂದಾದರೂ ಇಲಾಖೆ‌ ಯಕ್ಷಗಾನಕ್ಕೆ ಇಂಥ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿ ಸ್ವತಃ ಯಕ್ಷಗಾನ ಅಕಾಡಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಸರಕಾರಕ್ಕೆ ಪತ್ರ ಬರೆದಿದ್ದಾಗಿ ಉದಯವಾಣಿಗೆ ತಿಳಿಸಿದ್ದಾರೆ.

ಪ್ರಶಸ್ತಿ ಪ್ರದಾನ 20ಕ್ಕೆ :

ಫೆ.20ರಂದು ಶಿರಸಿಯಲ್ಲಿ ಪಾರ್ತಿಸುಬ್ಬ ಪ್ರಶಸ್ತಿ, ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ, ಯಕ್ಷ ಸಿರಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ಯಕ್ಷಗಾನದ ಅರ್ಥಧಾರಿ ಹಾಗೂ ಪ್ರಸಂಗಕರ್ತೃ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ದರೇಮನೆ ನಿಟ್ಟೂರಿನ ಡಿ.ಎಸ್.ಶ್ರೀಧರ ಈ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಭಾಜನರಾಗಿದ್ದು, ಈ ಪ್ರಶಸ್ತಿಯು 1 ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಫಲಕ, ಪ್ರಮಾಣ ಪತ್ರಗಳನ್ನು ಒಳಗೊಂಡಿದೆ.

ಬನ್ನಂಜೆ ಸಂಜೀವ ಸುವರ್ಣ, ತಲಕಳ ಕೆ.ತಿಮ್ಮಪ್ಪ ಗುಜರನ್  ಶಿರಸಿಯ ಡಾ.ವಿಜಯ ನಳಿನಿ ರಮೇಶ, ಬೆಂಗಳೂರಿನ ಡಾ. ಚಕ್ಕರೆ ಶಿವಶಂಕರ, ಹರಪನಹಳ್ಳಿಯ ಬಿ. ಪರಶುರಾಮ ಅವರು ಅಕಾಡೆಮಿ ವಾರ್ಷಿಕ ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ತಲಾ 50 ಸಾವಿರ ರೂ. ಮೊತ್ತವನ್ನು ಈ ಪುರಸ್ಕಾರವು ಒಳಗೊಂಡಿದೆ. ಯಕ್ಷಗಾನ ಗುರು ಹರಿನಾರಾಯಣ ಬೈಪಾಡಿತ್ತಾಯ, ಗೋಪಾಲ ಆಚಾರ್ಯ ತೀರ್ಥಹಳ್ಳಿ, ಬೇಲ್ತೂರು ರಮೇಶ, ಆವರ್ಸೆ ಶ್ರೀನಿವಾಸ ಮಡಿವಾಳ ಹಾಗೂ ಸಂಜಯ ಕುಮಾರ ಶೆಟ್ಟಿ, ಎಂ.ಆರ್. ಹೆಗಡೆ ಕಾನಗೋಡ, ಸುಬ್ರಹ್ಮಣ್ಯ ಧಾರೇಶ್ವರ, ವಿಟ್ಲ ಶಂಭು ಶರ್ಮ, ಬರಗೂರಿನ ಹನುಮಂತರಾಯಪ್ಪ ಮತ್ತು ಕೋಲಾರ ವಕ್ಕಲೇರಿಯ ಎ.ಎಂ. ಮುಳವಾಗಲಪ್ಪ ಅವರಿಗೆ ಯಕ್ಷ ಸಿರಿ ವಾರ್ಷಿಕ ಪ್ರಶಸ್ತಿ ನೀಡಲಾಗುತ್ತದೆ.

ಎಂ.ಎ.ಹೆಗಡೆ ಅವರ‌ ನೆನಪಿನಲ್ಲಿ‌ ಸಮಾರಂಭ :

ಮಧ್ಯಾಹ್ನ 12 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭವು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ,  ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚವ ಶಿವರಾಮ ಹೆಬ್ಬಾರ,

ಎನ್.ಡಬ್ಲ್ಯು.ಕೆ.ಆರ್.ಟಿ.ಸಿ.  ಅಧ್ಯಕ್ಷ ವಿ.ಎಸ್.ಪಾಟೀಲ, ಸಂಸದ ಅನಂತ ಕುಮಾರ ಹೆಗಡೆ, ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಇತರರು ಭಾಗವಹಿಸುವರು.

ದಿ‌.ಎಂ.ಎ.ಹೆಗಡೆ ಸಂಸ್ಮರಣ ಹಾಗೂ ತಾಳಮದ್ದಲೆ‌ ಯಕ್ಷಗಾನ ಪ್ರದರ್ಶನ ಕೂಡ‌ ನಡೆಯಲಿದೆ. ಇಡೀ ದಿನ ಯಕ್ಷಗಾನ ರಿಂಗಣವಾಗಲಿದೆ. ಪ್ರಶಸ್ತಿ‌ ಪುರಸ್ಕೃತರು ಮಾರಿಕಾಂಬಾ ನೆಲಕ್ಕೆ ಬರಲಿದ್ದಾರೆ.

ಈ ನೆಲದಿಂದ ಯಕ್ಷಗಾನ ಶ್ರೀ ಪ್ರಶಸ್ತಿ ಹಾಗೂ ಅಕಾಡೆಮಿ‌ ಪ್ರಶಸ್ತಿ ಸಂಖ್ಯೆ ಹೆಚ್ಚಿಸಿಕೊಳ್ಳುವ ತೀರ್ಮಾನ ಕೈಗೊಳ್ಳಲಿ, ಯಕ್ಷಗಾನ‌ ಕಲಾವಿದರಿಗೆ ಗುರುತಿನ ಚೀಟಿ, ಮಾಶಾಸನ ಅಧಿಕವಾಗಿ‌ಸಿಗುವ ಕ್ರಮವಾಗಲಿ ಎಂಬುದು ಆಗ್ರಹವಾಗಿದೆ.

ಯಕ್ಷಗಾನ ಶ್ರೀ ಪ್ರಶಸ್ತಿ ನೀಡುವಂತೆ ಸರಕಾರಕ್ಕೆ‌ ಪ್ರಸ್ತಾವನೆ ಸಲ್ಲಿಸಲಾಗಿದೆ. ಡಾ.‌ಜಿ.ಎಲ್.ಹೆಗಡೆ, ಕುಮಟಾ ಅಧ್ಯಕ್ಷರು ಯಕ್ಷಗಾನ

 

ರಾಘವೇಂದ್ರ ಬೆಟ್ಟಕೊಪ್ಪ, ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next