Advertisement

ನವೆಂಬರ್‌ನಿಂದ ಮೇಳಗಳ ತಿರುಗಾಟ?- ಮೇಳಗಳ ಆರ್ಥಿಕ ಸಂಕಷ್ಟ ನೀಗಿಸಲು ಸಹಕಾರ: ಸಚಿವರ ಭರವಸೆ

03:49 AM Oct 07, 2020 | Hari Prasad |

ಮಂಗಳೂರು: ಕೋವಿಡ್ 19 ಸೋಂಕು ಹಿನ್ನೆಲೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಯಕ್ಷಗಾನ ಮೇಳಗಳ ಈ ಬಾರಿಯ ತಿರುಗಾಟಕ್ಕೆ ಸರಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಧಾರ್ಮಿಕ ದತ್ತಿ ಇಲಾಖೆ, ಮೀನುಗಾರಿಕೆ ಮತ್ತು ಬಂದರು ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಯಕ್ಷಗಾನ ಮೇಳಗಳ ಯಜಮಾನರು, ಸಂಚಾಲಕರು ಮತ್ತು ಕಲಾವಿದರ ಸಭೆಯಲ್ಲಿ ಅವರು ಮಾತನಾಡಿದರು.

ನವೆಂಬರ್‌ ಅಂತ್ಯಕ್ಕೆ/ ನಿಗದಿತ ದಿನಾಂಕಗಳಲ್ಲಿ ತಿರುಗಾಟ ಆರಂಭಿಸಲು ಪೂರಕ ಸಿದ್ಧತೆ ಮಾಡಿಕೊಳ್ಳಬೇಕು.

ಕೋವಿಡ್ 19 ಸೋಂಕು ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಿಂದ ಯಾವುದೇ ಮೇಳಗಳು ತಿರುಗಾಟ ನಿಲ್ಲಿಸುವಂತಾಗಬಾರದು. ಯಾವೊಬ್ಬ ಕಲಾವಿದನ ಉದ್ಯೋಗಕ್ಕೂ ತೊಂದರೆಯಾಗಬಾರದು.

ಮೇಳಗಳ ಯಜಮಾನರು ಮೇಳಗಳ ತಿರುಗಾಟವನ್ನು ನಿಲ್ಲಿಸುವ, ಮೇಳವನ್ನೇ ನಿಲ್ಲಿಸುವ ಬಗ್ಗೆ ಯೋಚಿಸದಿರಿ. ದೇವಸ್ಥಾನಗಳ ಮೂಲಕ ಆರ್ಥಿಕ ಸಹಕಾರ ಒದಗಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು.

Advertisement

ಈ ಬಗ್ಗೆ ಶಾಸಕರ ಜತೆಗೂ ಸಮಾಲೋಚನೆ ನಡೆಸಲಾಗುವುದು. ಅಲ್ಲದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷಗಾನ ಅಕಾಡೆಮಿಗಳ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದಲೂ ನೆರವು ಒದಗಿಸಲು ಪ್ರಯತ್ನಿಸಲಾಗುವುದು ಎಂದು ಸಚಿವರು ಹೇಳಿದರು.

ಪರ್ಯಾಯ ಅವಕಾಶ
ಒಂದು ವೇಳೆ ತೀರಾ ಅನಿವಾರ್ಯವಾಗಿ ಯಾವುದಾದರೂ ಮೇಳವನ್ನು ನಿಲ್ಲಿಸಿದರೆ ಅದರಲ್ಲಿರುವ ಕಲಾವಿದರ ಹಿತದೃಷ್ಟಿಯಿಂದ ಬೇರೊಂದು ಹೊಸ ಮೇಳವನ್ನು ಆರಂಭಿಸಲು ಕೂಡ ಸಹಕಾರ ನೀಡಲಾಗುವುದು. ಕೆಲವು ದೇವಸ್ಥಾನಗಳಲ್ಲಿ ಮೇಳ ನಡೆಸಬಹುದಾದ ಸಾಮರ್ಥ್ಯ ಇದೆ. ಅಂತಹ ಕೆಲವು ದೇವಸ್ಥಾನಗಳ ಸಹಕಾರವನ್ನು ಈಗಾಗಲೇ ಕೇಳಿದ್ದೇವೆ. ಕೆಲವು ದಿನಗಳ ಅನಂತರ ಮತ್ತೂಮ್ಮೆ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಮಾತನಾಡಿ, ಸ್ಯಾನಿಟೈಸರ್‌ ವ್ಯವಸ್ಥೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಬಯಲು ಪ್ರದೇಶಗಳಲ್ಲಿ 200 ಜನ ಮೀರದಂತೆ ಪ್ರದರ್ಶನ ಮಾಡಬಹುದು ಎಂದು ತಿಳಿಸಿದರು.  ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ವೆಂಕಟೇಶ್‌ ಉಪಸ್ಥಿತರಿದ್ದರು.

ದಾಖಲೀಕರಣಕ್ಕೆ ಕ್ರಮ
ಎಲ್ಲಾ ಯಕ್ಷಗಾನ ಕಲಾವಿದರು ಮತ್ತು ಮೇಳಗಳ ದಾಖಲೀಕರಣವಾಗಬೇಕು ಎಂದು ಮೇಳಗಳ ಯಜಮಾನರು, ಕಲಾವಿದರು ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಸರಕಾರ ವಾರದೊಳಗೆ ಕ್ರಮ ಕೈಗೊಳ್ಳಲಿದೆ ಎಂದರು.

ಎಲ್ಲಾ ಕಲಾವಿದರಿಗೆ ಕೋವಿಡ್ 19 ಪರೀಕ್ಷೆ
ಎಲ್ಲಾ ಯಕ್ಷಗಾನ ಕಲಾವಿದರ ಕೋವಿಡ್ 19 ಸೋಂಕು ತಪಾಸಣೆಯನ್ನು ಸರಕಾರದ ವತಿಯಿಂದಲೇ ನಡೆಸಲಾಗುವುದು. ಕೋವಿಡ್ 19 ಸೋಂಕು ಹಿನ್ನೆಲೆಯಲ್ಲಿ ಈ ಬಾರಿ 60 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರು ಅವರು ಬಯಸಿದರೆ ಮನೆಯಲ್ಲಿಯೇ ಉಳಿದುಕೊಳ್ಳಬಹುದು. ಅಂತಹ ಕಲಾವಿದರಿಗೆ ಸರಕಾರದಿಂದಲೇ ವೇತನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next