Advertisement

ಕೋವಿಡ್ 19 ಜಾಗೃತಿಗೆ ಯಕ್ಷಗಾನ “ಸೇವೆ’

06:53 PM Mar 23, 2020 | Suhan S |

ಶಿರಸಿ: ಕೋವಿಡ್ 19 ವೈರಸ್‌ ಕುರಿತು ಇಡೀ ಸರಕಾರ ಜಾಗೃತಿ, ಸ್ಪಂದನೆ ನೀಡುತ್ತಿದ್ದರೆ ಇತ್ತ ಯಾವತ್ತೂ ಸಮಾಜದಲ್ಲಿ ನೈತಿಕತೆ, ಜಾಗೃತಿ ಮೂಡಿಸುತ್ತಿರುವ ಯಕ್ಷಗಾನದ ಮೂಲಕವೂ ನಡೆಯುತ್ತಿರುವುದು ವೈರಲ್‌ ಆಗಿದೆ.

Advertisement

ಕೋವಿಡ್ 19  ವೈರಸ್‌ ತಡೆಗೆ ಪ್ರದರ್ಶನ ಕಾಣುತ್ತಿದ್ದ ಹಾಗೂ ತಿಂಗಳ ಮೊದಲೇ ನಿಗದಿಯಾಗಿದ್ದ ಆಟಗಳು ನಿಂತಿವೆ. ಕಲಾವಿದರು ಉದ್ಯೋಗ ಇಲ್ಲದೇ ಮನೆ ಸೇರಿದ್ದಾರೆ. ಇನ್ನೊಂದೆಡೆ ಈ ಕುರಿತು ಏನಾದರೂ ಮಾಡಿ ಜಾಗೃತಿ ಮೂಡಿಸಬೇಕು ಎಂಬ ಕಾರಣಕ್ಕೆ ಯಕ್ಷಗಾನ ಬಯಲಿನಲ್ಲಿ ಆಡುವ ಮೂಲಕ ಅದನ್ನು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಯುಟ್ಯೂಬ್‌ ಗಳ ಮೂಲಕ ಮಕ್ಕಳ, ಮಹಿಳೆ, ಯುವಕರನ್ನೂ ತಲುಪುವ ಕಾರ್ಯ ಸದ್ದಿಲ್ಲದೇ ನಡೆದಿದೆ.

ಏನಿದು ಕೋವಿಡ್ 19  ಆಟ! ಕೊರೊನಾ ವೈರಸ್‌ ಅಟ್ಟಹಾಸ ಆಡುತ್ತಿದ್ದರೆ ಇತ್ತ ಅದರ ವಿರುದ್ಧ ಯಕ್ಷಗಾನ ಆಟ ಆಡುತ್ತಿದ್ದಾರೆ. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ಅವರ ಆಶಯದ ನುಡಿಯ ಮೂಲಕ ಆರಂಭಗೊಳ್ಳುವ ಒಂದು ಗಂಟೆ ಅವಧಿಯ ಪ್ರದರ್ಶನ ಈಗ ಕೊರೊನಾ ಆಟವಾಗಿ ಜಾಗೃತಿ ಬಿತ್ತುತ್ತಿದೆ.

ಕಾಸರಗೋಡಿನ ಸಿರಿಬಾಗಿಲು ವೆಂಕಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಈ ಕೊರೊನಾ ಜಾಗೃತಿ ಯಕ್ಷಗಾನ ಪ್ರದರ್ಶನವನ್ನು ಚಿತ್ರೀಕರಿಸಿ ದಾಖಲಿಸಿ ಶನಿವಾರ ರಾತ್ರಿ ಬಿಡುಗಡೆಗೊಳಿಸಿದೆ. ಕೇವಲ ಒಂದೇ ದಿನದಲ್ಲಿ ಯಕ್ಷಗಾನ ಮೂಲಕ ಮಾರಕ ಕೋವಿಡ್ 19  ವಿರುದ್ಧ ದಾಖಲಾಯಿತು. ಯಕ್ಷಗಾನ ರಂಗಕ್ಕೇರಲು ಗಣೇಶ ಕಲಾವೃಂದ ಪೈವಳಿಕೆ ಸಹಕಾರ ನೀಡಿದ್ದಾರೆ. ಯಕ್ಷಗಾನಕ್ಕೆ ಮನ ಮುಟ್ಟುವ ನಿಟ್ಟಿನಲ್ಲಿ ಪದ್ಯರಚನೆಯನ್ನು ಪ್ರೊ| ಎಂ.ಎ. ಹೆಗಡೆ ದಂಟ್ಕಲ್‌ ಹಾಗೂ ಶ್ರೀಧರ ಡಿ.ಎಸ್‌. ರಚಿಸಿಕೊಟ್ಟಿದ್ದನ್ನು ಬಳಸಲಾಗಿದೆ. ಸುಮಾರು 14 ಪದ್ಯಗಳ ಈ ಆಖ್ಯಾನಕ್ಕೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ಹಾಗೂ ಸದಸ್ಯ ಯೊಗೀಶರಾವ್‌ ಚಿಗುರುಪಾದೆ ಸಲಹೆ ನೀಡಿದ್ದಾರೆ.

ಕೋವಿಡ್ 19  ಕಾರಣ!: ಮನುಷ್ಯನ ದರ್ಪ, ಅಹಂಕಾರ ಉರುಳಿಸಲು ಕೋವಿಡ್ 19 ವಾಗಿ ಹುಟ್ಟಿದ್ದೇನೆ. ಪ್ರಕೃತಿ ನಾಶವೇ ಇದಕ್ಕೆ ಕಾರಣ. ಇದಕ್ಕೆ ಮಾನವರೇ ಕಾರಣ. ಎಲ್ಲ ಪ್ರಾಣಿ ಕೊಂದು ತಿನ್ನುವವರಿಗೆ ಮೊದಲು ಬಂದ ಕಥೆ ಬಿಚ್ಚಿಡಲಾಗಿದೆ. ಮುಂದುವರಿದ ರಾಷ್ಟ್ರದ ಒಂದು ಮಾರುಕಟ್ಟೆ ಪ್ರಪಂಚ ಎಲ್ಲ ಪ್ರಾಣಿಗಳನ್ನು ಹಸಿಯಾಗಿ ಜೀವಂತ ತುಂಡರಿಸಿ ವಿಕ್ರಯಿಸುವ ಸ್ಥಳದಲ್ಲಿ ಹುಟ್ಟಿ ವಿಶ್ವ ಪರ್ಯಾಟನೆ ಮಾಡಿ 170ಕ್ಕೂ ಮಿಗಿಲಾದ ರಾಜ್ಯದಲ್ಲಿ ಪ್ರಭಾವ ಬೀರಿದ್ದೇನೆ ಎಂದೂ ಕೊರೊನಾ ಪಾತ್ರಧಾರಿ ಮೂಲಕ ಹೇಳಿಸಲಾಗಿದೆ.

Advertisement

ಸೋಂಕು ತಗುಲಿದ್ದು ಗೊತ್ತಾಗುವುದು ಒಂದೆರಡು ದಿನಕ್ಕಲ್ಲ. ಯಾರೇ ಕೆಮ್ಮಿದರೂ, ಸೀನಿದರೂ ಇನ್ನೊಬ್ಬರ ದೇಹಕ್ಕೆ ಹೋಗುವೆ ಎಂಬಂತಹ ವೈರಸ್‌ ಪ್ರಸರಣ, ನಿಯಂತ್ರಣದ ಮಾರ್ಗಗಳೂ ಇಲ್ಲಿ ಕಲಾವಿದರು ಮಾತಿನಲ್ಲಿ ಆಡಿದ್ದಾರೆ.

ಕಲಾ ಸೇವಕರು: ಕೋವಿಡ್ 19 ಜಾಗೃತಿ ಯಕ್ಷಗಾನ ತಂಡವಾಗಿ ಕೆಲಸ ಮಾಡಿದೆ. ಕೊರೊನಾ ಕುರಿತ ಜಾಗೃತಿಗೆ ಪದ್ಯಗಳು ಸಿಕ್ಕ ಒಂದೆರಡು ದಿನದಲ್ಲೇ ರಂಗ ರೂಪ ನೀಡಿದ್ದೂ ಅಭಿನಂದನೀಯವೇ. ಸಿರಿಬಾಗಿಲು ರಾಮಕೃಷ್ಣ ಮಯ್ಯ ಪದ್ಯ ಹಾಡಿದ್ದರೆ, ಹಿಮ್ಮೇಳದಲ್ಲಿ ಶಂಕರ ಭಟ್‌, ನಿಡುವಜ್ಜೆ, ಉದಯ ಕಂಬಾರು, ಚಕ್ರತಾಳ ಶ್ರೀಮುಖ ಎಸ್‌.ಆರ್‌. ಮಯ್ಯ ಸಹಕಾರ ನೀಡಿದ್ದಾರೆ. ಮುಮ್ಮೇಳದಲ್ಲಿ ಕೋವಿಡ್ 19 ಪಾತ್ರಧಾರಿಯಾಗಿ ರಾಧಾಕೃಷ್ಣ ನಾವಡ ಮಧೂರು, ಧನ್ವಂತರಿಯಾಗಿ ವಾಸುದೇವ ರಂಗಾಭಟ್‌, ಮಧೂರು, ರಾಜೇಂದ್ರನಾಗ ಜಯಪ್ರಕಾಶ್‌ ಶೆಟ್ಟಿ, ಪೆರ್ಮುದೆ, ಮಣಿಭದ್ರನಾಗಿ ಗುರುರಾಜ ಹೊಳ್ಳ ಬಾಯಾರು, ಪತ್ನಿಯಾಗಿ ಪ್ರಕಾಶ್‌ ನಾಯಕ್‌ ನೀರ್ಚಾಲು, ಮಣಿಕರ್ಣನಾಗಿ ಕಿಶನ್‌ ಅಗ್ಗಿತ್ತಾಯ ನೆಲ್ಲಿಕಟ್ಟೆ, ಪುರಜನರಾಗಿ ಕೃಷ್ಣ ಭಟ್‌ ದೇವಕಾನ, ಶಬರೀಶ ಮಾನ್ಯ ಕಿರಣ್‌ ಕುದ್ರೆಕ್ಕೂಡ್ಲು ಸಹಕಾರ ನೀಡಿದ್ದಾರೆ.

ವೇಷಭೂಷಣವನ್ನು ಗಣೇಶ ಕಲಾವೃಂದ ಪೈವಳಿಕೆ, ಚಿತ್ರೀಕರಣವನ್ನು ವರ್ಣ ಸ್ಟುಡಿಯೊ ನೀರ್ಚಾಲ್‌, ಕೆಮರಾ ಸಹಕಾರವನ್ನು ಉದಯ ಕಂಬಾರ, ವೇಣೂಗೋಪಾಲ, ಶೇರ ವಾಂತಿಚ್ಚಾಲು, ಮಹೇಶ ತೇಜಸ್ವಿ ನೀಡಿದ್ದಾರೆ.

ಕೋವಿಡ್ 19  ವೈರಸ್‌ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಹಲವು ಪ್ರಯತ್ನ ನಡೆಯುತ್ತಿದೆ. ಯಕ್ಷಗಾನ ಮೂಲಕ ಕೂಡ ಈ ಪ್ರಯತ್ನ ನಡೆಸಿ ಪ್ರದರ್ಶನ ಸಾಧ್ಯವಿಲ್ಲದ ಕಾರಣ, ಸಾಮಾಜಿಕ ಜಾಲ ತಾಣಗಳ ಮೂಲಕ ಸಂದೇಶ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಇದೊಂದು ಸಾಮಾಜಿಕ ಋಣದ ಕಾರ್ಯ.-ಪ್ರೊ| ಎಂ.ಎ.ಹೆಗಡೆ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ

ನಮ್ಮ ಪ್ರತಿಷ್ಠಾನದ ಸದಾಶಯಕ್ಕೆ ಸ್ಪಂದಿಸಿ, ಪ್ರತಿಫಲಾಪೇಕ್ಷೆ ಇಲ್ಲದೆ, ಸಾಮಾಜಿಕ ಬದ್ಧತೆಯಿಂದ ಯಕ್ಷಗಾನ ಕಲಾವಿದರು ಅಕ್ಷರಶಃ ಕೊರೊನಾ ಜಾಗೃತಿಗೆ ಸೇವೆಯಾಗಿ ಸಹಕಾರ ನೀಡಿದ್ದಾರೆ. ಯಕ್ಷಗಾನ ನೋಡಿ ಕೋವಿಡ್ 19  ಕುರಿತು ಜಾಗೃತಿ ವಹಿಸಿದರೆ ಶ್ರಮ ಸಾರ್ಥಕ. -ಸಿರಿಬಾಗಿಲು ರಾಮಕೃಷ್ಣ ಮಯ್ಯ, ಭಾಗವತ

 

-ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next