ಉಡುಪಿ: ಜನವರಿಯಲ್ಲಿ ಉಡುಪಿಯಲ್ಲಿ ಯಕ್ಷಗಾನ ಸಮ್ಮೇಳನ ಆಯೋಜಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ತಿಳಿಸಿದರು.
ರವಿವಾರ ಯಕ್ಷ ಶಿಕ್ಷಣ ಟ್ರಸ್ಟ್ ವತಿಯಿಂದ ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಕೃಷ್ಣಾಪುರ ಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿದ ಕಿಶೋರ ಯಕ್ಷಗಾನ ಸಂಭ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.
ಯಕ್ಷಗಾನವನ್ನು ಶಾಲಾ ಹಂತದಲ್ಲಿಯೇ ಕಲಿಸುವ ಪ್ರಯತ್ನ ಶ್ಲಾಘನೀಯ. ಈ ಮೂಲಕ ಮಕ್ಕಳಿಗೆ ಪೌರಾಣಿಕ, ಮಹಾಭಾರತದ ಜ್ಞಾನದ ಅರಿವು ಸಿಗುತ್ತಿದೆ. ಈ ಕಲೆಯಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಟ್ರಸ್ಟ್‌ನ ಕಿಶೋರ ಯಕ್ಷಗಾನ ಕಾರ್ಯಕ್ರಮಕ್ಕೆ ಇಲಾಖೆ 10 ಲಕ್ಷ ರೂ. ನಿಶ್ಚಿತ ಅನುದಾನ ನೀಡಲಿದ್ದು, ಕಾರ್ಕಳ ಕ್ಷೇತ್ರದ ಶಾಲೆಯ ಮಕ್ಕಳಿಗೂ ಇದೇ ಮಾದರಿಯ ಶಿಕ್ಷಣಕ್ಕೆ ಯಕ್ಷ ಶಿಕ್ಷಣ ಟ್ರಸ್ಟ್ ಜತೆ ಮಾತುಕತೆ ನಡೆಸಲಾಗುವುದು. ಉಡುಪಿಯಲ್ಲಿ ಯಕ್ಷಗಾನ ಸಮ್ಮೇಳನ ಆಯೋಜಿಸುವ ಮೂಲಕ ತುಳುನಾಡಿನ ಸಾಂಸ್ಕೃತಿಕ ಚಟುವಟಿಕೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನವಾಗಲಿದೆ ಎಂದರು.
ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿ, ಕಲೆ ಬಲ್ಲವರು ಸುಸಂಸ್ಕೃತರು. ಕಲೆಯನ್ನು ಆರಾಧಿಸುವ ಪ್ರೇಕ್ಷಕ, ಕಲೆಗೆ ಬದುಕನ್ನು ಅರ್ಪಿಸಿದ ಕಲಾವಿದ ಇಬ್ಬರು ಸಂಸ್ಕಾರವಂತರಾಗಿರುತ್ತಾರೆ. ಉಡುಪಿ ಯಕ್ಷಗಾನ ಕಲೆಯ ಮೂಲ ಭೂಮಿಯಾಗಿದ್ದು, ಯಕ್ಷಗಾನ ಧಾರ್ಮಿಕ ಕ್ಷೇತ್ರಕ್ಕೆ ಹತ್ತಿರವಾದ ನಂಟನ್ನು ಹೊಂದಿದೆ. ವಿವಿಧ ಕಲೆಗಳಿಂದ ನೈತಿಕ ವಿಚಾರವನ್ನು ಸಮಾಜಕ್ಕೆ ತಿಳಿಸುವ ಕೆಲಸ ನಡೆಯುತ್ತಿದೆ. ಇದರಲ್ಲಿ ಯಕ್ಷಗಾನದ ಪಾತ್ರ ಮಹತ್ವದ್ದಾಗಿದೆ ಎಂದು ಟ್ರಸ್ಟ್‌ನ ಕಾರ್ಯವನ್ನು ಶ್ಲಾಘಿಸಿದರು.
ಉಡುಪಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪ್ರೌಢಶಾಲೆ ಮತ್ತು ಪ.ಪೂ. ಕಾಲೇಜುಗಳಲ್ಲಿ ಪಬ್ಲಿಕ್ ಪರೀಕ್ಷೆಯ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ ಶಾಲಾ ಕಾಲೇಜು, ಶಿಕ್ಷಕರನ್ನು ಪುರಸ್ಕರಿಸಲಾಯಿತು. ಟ್ರಸ್ಟ್‌ನ ಅಧ್ಯಕ್ಷ, ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್ ಶುಭಾಶಂಸನೆಗೈದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ್ ರಾವ್, ಪಣಂಬೂರು ವಾಸುದೇವ ಐತಾಳ, ಪ್ರವೀಣ ಶೆಟ್ಟಿ ಪುತ್ತೂರು, ಡಯಟ್ ಉಪಪ್ರಾಂಶುಪಾಲ ಡಾ| ಅಶೋಕ ಕಾಮತ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಿ.ಎಚ್. ಚಂದ್ರೇಗೌಡ, ರಂಗನಾಥ್ ಕೆ., ಟ್ರಸ್ಟ್ ನ ಮೀನಾ ಲಕ್ಷ್ಮಣಿ ಅಡ್ಯಂತಾಯ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೇಕಾರ್ ನಿರೂಪಿಸಿದರು.