ಉಡುಪಿ : ರಾಜ್ಯದ ಮೊದಲ ಸಮಗ್ರ ಕರ್ನಾಟಕ ಯಕ್ಷಗಾನ ಸಮ್ಮೇಳನವು ಫೆ. 11 ಮತ್ತು 12ರಂದು ಎಂಜಿಎಂ ಕಾಲೇಜಿನ ಮೈದಾನದಲ್ಲಿ ನಡೆಯಲಿದ್ದು, ಸರಕಾರದಿಂದ 2 ಕೋ.ರೂ. ಅನುದಾನ ನೀಡಲಾಗುವುದು. ಸಮ್ಮೇಳನಾಧ್ಯಕ್ಷರಾಗಿ ಡಾ| ಪ್ರಭಾಕರ ಜೋಶಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಹಾಗೂ ಸಮ್ಮೇಳನದ ಸಲಹಾ ಸಮಿತಿಯ ಅಧ್ಯಕ್ಷ ವಿ. ಸುನಿಲ್ ಕುಮಾರ್ ತಿಳಿಸಿದರು.
ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದ ಹಿಂಭಾಗದಲ್ಲಿ ಅಕಾಡೆಮಿಯ ತಾತ್ಕಾಲಿಕ ಕಚೇರಿಯನ್ನು ಸೋಮವಾರ ಉದ್ಘಾಟಿಸಿ, ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿದ ಅವರು ಮಾತನಾಡಿದರು.
ಯಕ್ಷಗಾನಕ್ಕೆ ತನ್ನದೇ ಆದ ಹಿರಿಮೆ-ಗರಿಮೆ ಇದ್ದು ತುಳುನಾಡಿನಲ್ಲಿ ಇನ್ನೂ ಹೆಚ್ಚಿನ ಮಹತ್ವ ಇದೆ. ಯಕ್ಷಗಾನದಲ್ಲಿ ಪ್ರಸ್ತುತ ಇರುವ ಮತ್ತು ಮುಂದೆ ಎದುರಾಗುವ ಹೊಸ ಸವಾಲುಗಳನ್ನು ಎದುರಿಸಲು, ಹೊಸ ಪೀಳಿಗೆಗೆ ಯಕ್ಷಗಾನದ ಬಗ್ಗೆ ತಿಳಿಸುವುದು ಸೇರಿದಂತೆ ಯಕ್ಷಗಾನದ ಸಮಗ್ರ ಬೆಳವಣಿಗೆಯ ಕುರಿತು ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ ಎಂದರು.
ಯಶಸ್ಸಿಗೆ ಸರ್ವ ಕ್ರಮ: ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ರಾಜ್ಯದಲ್ಲೇ ಪ್ರಥಮ ಬಾರಿಗೆ ನಡೆಯುತ್ತಿರುವ ಈ ಸಮ್ಮೇಳನದ ಅಪೂರ್ವ ಯಶಸ್ಸಿಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಜಿಲ್ಲೆಯ ಹಿರಿಯ ಯಕ್ಷಗಾನ ಕಲಾವಿದರು, ಯಕ್ಷಗಾನ ಆಸಕ್ತರು, ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳ ಸಹಕಾರ ಪಡೆಯಲಾಗುವುದು ಎಂದರು.
ಯಕ್ಷಗಾನ ಸಮ್ಮೇಳನದ ಕಾರ್ಯಾಧ್ಯಕ್ಷ ಡಾ| ಜಿ.ಎಲ್. ಹೆಗಡೆ ಪ್ರಸ್ತಾವನೆಗೈದು, ಯಕ್ಷಗಾನವು ಕನ್ನಡ ಭಾಷೆಯ ಸಮೃದ್ಧ ಬೆಳವಣಿಗೆಗೆ ಅತಿ ಹೆಚ್ಚಿನ ಕೊಡುಗೆ ನೀಡಿದೆ. ಕನ್ನಡದ ಕಾವ್ಯಗಳನ್ನು ಕಟ್ಟಿ ನಿಲ್ಲಿಸಿದೆ. ಇದುವರೆಗೆ 52 ಮಂದಿ ಯಕ್ಷಗಾನದಲ್ಲಿ ಪಿಎಚ್.ಡಿ. ಪಡೆದಿದ್ದಾರೆ ಎಂದರು.
ಪ್ರಮುಖರಾದ ಪ್ರೊ| ಎಂ.ಎಲ್. ಸಾಮಗ, ಸುರೇಂದ್ರ ಫಣಿಯೂರು, ಸಾಲಿಗ್ರಾಮ ಮತ್ತು ಇತರ ಮೇಳಗಳ ಮುಖ್ಯಸ್ಥ ಪಿ. ಕಿಶನ್ ಹೆಗ್ಡೆ, ಮಂದಾರ್ತಿ ವೇಳದ ಅಧ್ಯಕ್ಷ ಧನಂಜಯ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು.
ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಸ್ವಾಗತಿಸಿ, ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಶಿವರುದ್ರಪ್ಪ ವಂದಿಸಿದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ನಿರ್ವಹಿಸಿದರು.