Advertisement

 ಗುರುವಿನ ಪ್ರಭೆಯಲ್ಲಿ ಮಿನುಗಿದ ಯಕ್ಷರು

06:27 AM Jan 12, 2019 | |

ಕಲಾಪ್ರಕಾರವೊಂದನ್ನು ಒಂದು ಕಾಲಘಟ್ಟ ಲಿಂಗಭೇದದಲ್ಲಿ ಬಂಧಿಸಬಹುದು. ಅನಿವಾರ್ಯತೆ ಇದಕ್ಕೆ ಕಾರಣವಾಗಿರಲೂಬಹುದು. ಆದರೆ, ಕಲೆ ನಿತ್ಯ ಹೊಸದನ್ನು ರೂಢಿಸಿಕೊಂಡಂತೆ ಚಲನಶೀಲವೂ ಆಗುತ್ತಿರುತ್ತದೆ. ಯಕ್ಷಗಾನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಅದು ಕಾಲದಿಂದ ಪುರುಷಪ್ರಧಾನ ಕಲೆಯಾಗಿಯೇ ಇದೆ. ಸ್ತ್ರೀಪಾತ್ರಗಳನ್ನು ಪುರುಷರೇ ಸ್ತ್ರೀಯರು ನಾಚುವಂತೆ ತಮ್ಮ ಹಾವಭಾವದಲ್ಲಿ ಅಭಿನಯಿಸಿ ತೋರಿಸಿದ್ದಾರೆ. ಹಾಗಾಗಿ, ಇಂದಿಗೂ ಯಕ್ಷಗಾನದಲ್ಲಿ ಪುರುಷ ಕಲಾವಿದನೊಬ್ಬ ಹಾಕುವ ಸ್ತ್ರೀವೇಷಕ್ಕೆ ಹೆಚ್ಚು ಮಹತ್ವವಿದೆ. ಇದರ ಅರ್ಥ ಸ್ತ್ರೀಯರು ಈ ಕಲಾಪ್ರಕಾರದಲ್ಲಿ ಈ ಪರಿ ಕುಣಿಯಲಾರರು ಎಂದಲ್ಲ. ರೂಢಿ ಬೆಳೆದುಕೊಂಡು ಬಂದಿರುವುದೇ ಹಾಗಿದೆ.

Advertisement

ಈ ರೂಢಿ ಪಲ್ಲಟಗೊಳ್ಳುವುದೇ ಇಲ್ಲ ಎಂದುಕೊಂಡವರ ಕಣ್ಣೆದುರೂ ಕಾಲ ಸರಿಯುತ್ತಲೇ ಇರುತ್ತದೆ. ಅದು ನಿತ್ಯ ಹೊಸತು. ಜೊತೆಗೆ ಪ್ರಯೋಗಶೀಲ ಕೂಡ. ಒಂದು ಘಟ್ಟದ ವಂಚಿತರಿಗೆ ಅದು ಅವಕಾಶ ಕಲ್ಪಿಸುತ್ತದೆ. ಉತ್ಸಾಹದ ಜೊತೆಗೆ ಶಕ್ತಿಯನ್ನೂ ತುಂಬುತ್ತದೆ. ಯಕ್ಷಗುರುಗಳನ್ನು ಹೊಸ ಕಾಲಕ್ಕೆ ಒಗ್ಗಿಸುತ್ತದೆ. ಪರಿಣಾಮವಾಗಿ ಹೆಣ್ಣುಗಳು ಯಕ್ಷರಾಗುತ್ತಾರೆ, ಕುಣಿಯುತ್ತಾರೆ, ಜೊತೆಗೆ ಸಾಬೀತುಪಡಿಸುತ್ತಾರೆ.

ಈಚೆಗೆ ಈ ಎಲ್ಲವನ್ನೂ ಮೌಂಟ್‌ ಕಾರ್ಮೆಲ್‌ ಕಾಲೇಜಿನ ಹೆಣ್ಣುಮಕ್ಕಳು ಸಾಧ್ಯಮಾಡಿ ತೋರಿಸಿದರು. ಹದಿನೈದೇ ದಿನಗಳ ಅಭ್ಯಾಸ; ಯಾರೂ ಯಕ್ಷಗಾನದಲ್ಲಿ ನುರಿತವರಲ್ಲ. ಚೂರು ಬೇರೆಬೇರೆ ಪ್ರಕಾರಗಳ ನೃತ್ಯಗಳ ಬಗೆಗೆ ತಿಳಿದರಷ್ಟೇ. ಆಗಾಗ ಹೆಜ್ಜೆಗಳನ್ನು ಹಾಕಿದವರು. ಅದನ್ನು ಮೆಲುಕು ಹಾಕುವಷ್ಟು ಅಂತರ ಕಾಯ್ದುಕೊಂಡವರು. ಇವರುಗಳು ಯಕ್ಷಗಾನಕ್ಕೆ ತಮ್ಮನ್ನು ತಾವು ಅಣಿಮಾಡಿಕೊಂಡ ರೀತಿ ಅನನ್ಯ. ಯಕ್ಷಗಾನ ಶಾಸ್ತ್ರೀಯ ಕಲೆಯಾದ್ದರಿಂದ ಹೆಜ್ಜೆಗಳು, ಅಭಿನಯದಲ್ಲಿ ಕರಾರುವಕ್ಕು ಅಗತ್ಯ. 

 ಇದರ ಹಿಂದೆ ಗುರು ರಾಧಾಕೃಷ್ಣ ಉರಾಳ ಅವರ ಜಾಣ್ಮೆ ಇದೆ. ಪ್ರಸಂಗ ನಿರ್ಧರಿಸುವ ಮೊದಲು ಅವರು ಹೆಣ್ಣುಮಕ್ಕಳಲ್ಲಿನ ತಾಳಜ್ಞಾನ, ಹೆಜ್ಜೆಗಳ ಸ್ಪಷ್ಟತೆ, ಅಭಿನಯದ ಸಾಧ್ಯಾಸಾಧ್ಯತೆಗಳನ್ನು ಅಳೆದರು. ಪ್ರತಿ ಹೆಣ್ಣುಮಗಳೂ ಯಕ್ಷಗಾನಕ್ಕೆ ಹೊಸಬಳು. ಇದು ತಿಳಿದು ತಾಳ ಮತ್ತು ಹೆಜ್ಜೆಗಳಲ್ಲಿ ಚೂರು ಸ್ಪಷ್ಟತೆ ಹೊಂದಿರುವವರ ಸಂಖ್ಯೆ ಆಧರಿಸಿ, ಪ್ರಸಂಗ ನಿಗದಿ ಮಾಡಿದರು. “ಚಕ್ರವ್ಯೂಹ ಕಾಳಗ’ ನಿಗದಿ ಆದದ್ದು ಯಾಕೆ ಎನ್ನುವುದು ದಿನದಿನದ ತಾಲೀಮುಗಳಲ್ಲಿ ಸ್ಪಷ್ಟವಾಗತೊಡಗಿತು. ಉರಾಳಾರ ಆಯ್ಕೆಯಲ್ಲಿ ಖಾಚಿತ್ಯ ಇತ್ತು. ಇದರ ಸಲುವಾಗಿಯೇ ಆಟ ಕಳೆಕಟ್ಟಿತು. ಈ ಆಟದಲ್ಲಿ ಕೆಲವು ಬದಲಾವಣೆಗಳೂ ನುಸುಳಿದ್ದವು. ಉದಾಹರಣೆಗೆ ರಂಗದ ಮಧ್ಯಭಾಗದಲ್ಲಿ ಭಾಗವತರು ಕೂತು ಹಾಡಲಿಲ್ಲ. ಅವರ ಬದಿಯಲ್ಲಿ ಕೂತು ಯಾರೂ ಚಂಡೆ ನುಡಿಸಲಿಲ್ಲ. ಬದಲಾಗಿ ಹಾಡು ಮತ್ತು ಮಾತು ಮೊದಲೇ ಧ್ವನಿಮುದ್ರಿತಗೊಂಡಿತ್ತು. ಹೆಣ್ಣುಮಕ್ಕಳ ಧ್ವನಿಮುದ್ರಿಸಿದ್ದರಿಂದ ಅವರಿಗೂ ಒಂದು ಬಗೆಯ ನೆಮ್ಮದಿ ಮತ್ತು ತಮ್ಮ ಧ್ವನಿಗಳ ಬಗೆಗೆ ಒಲವು. ಉದ್ದೇಶವಿದ್ದದ್ದು ಜೋರಾಗಿ ಕೇಳಿಸಲಿ ಎಂದು. ಹೀಗಾದಾಗ ಎರಡು ಪ್ರಯೋಜನಗಳಿವೆ. ಒಂದು, ಮರೆಗೆ ಅವಕಾಶವಿರುವುದಿಲ್ಲ. ಎರಡು ಈ ಹೆಣ್ಣುಮಕ್ಕಳಿಗೆ ಸಮಯಸ್ಫೂರ್ತಿಯಿಂದ ಮಾತಾಡುವ ಕಲೆಗಾರಿಕೆ ಬಗ್ಗೆ  ತಿಳಿದಿಲ್ಲ ಹಾಗೂ ಸಿದ್ಧಿಸಿಲ್ಲವಾದ್ದರಿಂದ ಈ ಪ್ರಯೋಗ ನೆರವಿಗೆ ಬಂದೀತು.

ಸುಭದ್ರೆ ಬಿಟ್ಟರೆ ಉಳಿದೆಲ್ಲವೂ ಇಲ್ಲಿ ಗಂಡು ಪಾತ್ರೆಗಳೇ. ಅಭಿನಯಿಸಿದವರು ಹೆಣ್ಣುಮಕ್ಕಳೇ. ಇಲ್ಲಿ ಬಡಗು ಮತ್ತು ತೆಂಕು ಎರಡೂ ತಿಟ್ಟುಗಳು ಮಿಳಿತಗೊಂಡಿದ್ದವು. ಹೆಜ್ಜೆಗಳಲ್ಲಿ ಚೂರು ವ್ಯತ್ಯಾಯವಾಯಿತಾದರೂ ಅದು ನಗಣ್ಯವಾಯಿತು. ತಮ್ಮ ಅಭಿನಯದ ಹಾವಭಾವಗಳಲ್ಲಿ ಹೆಣ್ಣುಮಕ್ಕಳು ವಿಜೃಂಭಿಸಿದರು. ಅಭಿಮನ್ಯುವಿನ ಸಾವನ್ನು “ಭಾವನೆಗಳನ್ನು ಕೊಲ್ಲುವ ಯುದ್ಧಬೇಡ’ ಎಂಬಂತೆ ಬಿಂಬಿಸಿದ್ದು ಪ್ರಸಂಗದ ಒಟ್ಟಾರೆ ಅಂತರಾರ್ಥವನ್ನು ಅದು ತೆರೆದಿಟ್ಟಿತು. ಹಲವು ರಸಗಳು ಈ ಪ್ರಯೋಗದಲ್ಲಿ ಮಿಳಿತಗೊಂಡಿದ್ದರಿಂದ ಪ್ರಸಂಗ ಹಂತದಿಂದ ಹಂತಕ್ಕೆ ತೀವ್ರವಾಗತೊಡಗಿತು.
ಹೆಣ್ಣುಮಕ್ಕಳ ಭಂಗಿಗಳಲ್ಲಿ ಲೋಪ ಎಣಿಸುವ ಹಾಗಿರಲಿಲ್ಲ. ಪಾತ್ರಗಳನ್ನು ಹಾಗೆ ಅಂತರಂಗೀಕರಿಸಿಕೊಳ್ಳದಿದ್ದರೆ ಅಭಿನಯ ಬರಡಾಗುತ್ತಿತ್ತು. ಆದರೆ, ಗುರುವಿನ ಪ್ರಭೆಯಲ್ಲಿ ಎಲ್ಲರೂ ಮಿನುಗಿದರು. ಅಭಿಮನ್ಯುವಾಗಿ ಸಹನಾ, ಸುಭದ್ರೆಯಾಗಿ ಯುಕ್ತ ಪಾತ್ರಗಳ ಒಳಹೊಕ್ಕು ರಸಾನುಭೂತಿ ಮೂಡಿಸಿದರು. ಕೃಷ್ಣನಾಗಿ ಶ್ರೀಲಕ್ಷ್ಮಿ, ಅರ್ಜುನನಾಗಿ ಅಖೀಲ ಚಲನೆ ತಪ್ಪದೇ ಚೇತೋಹಾರಿಯಾಗಿ ನಟಿಸಿದರು. ಉಳಿದವರು ಅವರವರ ಪಾತ್ರಗಳಿಗೆ ನ್ಯಾಯ ಸಲ್ಲಿಸಿದರು. ಬೆಳಕಿನ ಬಣ್ಣಗಳ ಮಿನುಗಿನಲ್ಲಿ ಕದಲಿದ ಈ ಪ್ರಸಂಗ ತನ್ನ ಅಭಿವ್ಯಕ್ತಿಯಲ್ಲಿ ಬೆಳಕಿಗಿಂತ ಸ್ಪಷ್ಟವಾಗಿತ್ತು.

Advertisement

 ಎನ್‌.ಸಿ.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next