Advertisement
ಶ್ರೀ ಕ್ಷೇತ್ರ ಮಂದಾರ್ತಿಯಲ್ಲಿ 1960ರಲ್ಲಿ ಪದ್ಮನಾಭ ಕಾಮತ್-ರಾಧಾಬಾಯಿ ದಂಪತಿಯ 8ನೇ ಪುತ್ರನಾಗಿ ಜನಿಸಿದ ಇವರಿಗೆ, ಮದ್ದಳೆಯಲ್ಲಿ ಆಸಕ್ತಿ ಹೊಂದಿದ್ದ ತಂದೆ ಪದ್ಮನಾಭಯ್ಯ ಅವರೇ ಪ್ರೇರಣೆಯಾಗಿದ್ದರು. ಅನಂತರ ಕೋಡಂಗಿ ವೇಷ, ಕಟ್ಟು ವೇಷ ಕಲಾವಿದನಾಗಿ ಮೇಳ ಪ್ರವೇಶಿಸಿ, ಖ್ಯಾತ ಚೆಂಡೆ ವಾದಕ ದಿ| ಕೆಮ್ಮಣ್ಣು ಆನಂದ ಅವರ ಚೆಂಡೆಯ ಪೆಟ್ಟಿಗೆ ಮರುಳಾಗಿ ಅವರಿಂದಲೇ ಪ್ರಾಥಮಿಕ ವಾದನ ಅಭ್ಯಾಸ ಮಾಡಿದರು. ಅನಂತರ ಸುರಗಿಕಟ್ಟೆ ಬಸವ ಗಾಣಿಗರಿಂದ ಶ್ರುತಿ-ಲಯಗಳ ಅನುಭವ ಪಡೆದು, ಕೊಲ್ಲೂರು ಕೊಗ್ಗ ಆಚಾರ್ಯ ಅವರಿಂದಲೂ ಚೆಂಡೆಯನ್ನು ಅಭ್ಯಸಿಸಿದ್ದರು.
Related Articles
Advertisement
ಭಾಗವತರು ಹಾಗೂ ಮುಮ್ಮೇಳ ಕಲಾವಿದರಿಗೆ ಸಿಗುವ ಪ್ರಾತಿನಿಧ್ಯ, ಪ್ರಚಾರಗಳು ಚೆಂಡೆ-ಮದ್ದಳೆ ಯವರಿಗೆ ಸಿಗುವುದಿಲ್ಲ ಎನ್ನುವ ಸಂದರ್ಭದಲ್ಲಿ ಕಠಿನ ಪರಿಶ್ರಮ, ಪ್ರತಿಭೆ ಇದ್ದರೆ ಚೆಂಡೆಯವರು ಸ್ಟಾರ್ ಪಟ್ಟದಲ್ಲಿ ಗುರುತಿಸಿಕೊಳ್ಳಬಹುದು, ಅಭಿಮಾನಿಗಳಿಗೆ ಹತ್ತಿರವಾಗಬಹುದು ಎಂದು ತೋರಿಸಿಕೊಟ್ಟ ಬಡಗುತಿಟ್ಟಿನ ಬೆರಳೆಣಿಕೆ ಕಲಾವಿದರಲ್ಲಿ ರಾಮಕೃಷ್ಣ ಮಂದಾರ್ತಿ ಅವರೂ ಓರ್ವರು.
ನಿಮ್ಮ ವೃತ್ತಿ ಜೀವನದ ಆರಂಭ ಹೇಗಿತ್ತು ?ನಾನು ಯಕ್ಷಗಾನದ ಚಟ ಹಿಡಿಸಿಕೊಂಡು ಮೇಳ ಸೇರಿದವನು. ಮೊದ-ಮೊದಲು ಕಿಲೋ ಮೀಟರ್‌ಗಟ್ಟಲೆ ಕಾಲ್ನಡಿಗೆಯಲ್ಲಿ ಸಾಗಿ ಆಟ ಮಾಡಬೇಕಿತ್ತು. ಒಂದು ರೂಪಾಯಿ ದಿನ ಸಂಬಳಕ್ಕೆ ಕೆಲಸ ಮಾಡಿದ್ದೆ. ಆ ಕಾಲದಲ್ಲಿ ನರಸಿಂಹ ದಾಸರು, ಮತ್ಯಾಡಿ ನರಸಿಂಹ ಶೆಟ್ಟರು, ನಾವಡರು, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಲವಳ್ಳಿ ವೆಂಕಟೇಶ ರಾವ್, ಶಿರಿಯಾರ ಮಂಜು ನಾಯ್ಕ, ಐರೋಡಿ ಗೋವಿಂದಪ್ಪ, ಘಟಾನುಘಟಿಗಳ ಜತೆ ಕೆಲಸ ಮಾಡಿದ್ದೆ. ಮೂರು ವರ್ಷ ಇಡೀ ರಾತ್ರಿ ಒಬ್ಬನೇ ಚೆಂಡೆ ಬಾರಿಸಿದ್ದೆ. ಆರಂಭದಲ್ಲಿ ಮಂದಾರ್ತಿ ಮೇಳದಲ್ಲಿ ಕೋಡಂಗಿ ವೇಷಕ್ಕೆ ಸೇರಿದ್ದು, ಅನಂತರ ಕಮಲಶಿಲೆ ಮೇಳಕ್ಕೆ ಸೇರಿದಾಗ “ನೀ ವೇಷಕ್ಕೆ ಬೇಡ ಚೆಂಡೆಗೆ ಬಾ’ ಎಂದು ಗುರುಗಳಾದ ಚೆಂಡೆ ಆನಂದರು ಕರೆದರು. ಅಂದಿನಿಂದ ಚೆಂಡೆಯೇ ಖಾಯಂ ಆಯಿತು. ಚೆಂಡೆಯಲ್ಲಿ ಅಂದು-ಇಂದಿನ ಬದಲಾವಣೆ ಏನು?
ಹಿಂದೆ ಚೆಂಡೆಯವರು ಬಾರಿಸಿದಂತೆ ಕಲಾವಿದ ಕುಣಿಯಬೇಕಿತ್ತು. ಎಷ್ಟೇ ದೊಡ್ಡ ಕಲಾವಿದನಾದರು ಹೊಸ ಹೆಜ್ಜೆಗಳನ್ನು ಪ್ರಯೋಗ ಮಾಡುವಾಗ ಚೆಂಡೆಯವರ ಬಳಿ ಮಾತನಾಡಿಕೊಂಡು ರಂಗದಲ್ಲಿ ಪ್ರಯೋಗ ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಕಲಾವಿದ ಕುಣಿದಂತೆ ಚೆಂಡೆಗಾರ ಬಾರಿಸಬೇಕಿದೆ. ಅನಿವಾರ್ಯ ಆಗಿರುವುದರಿಂದ ನಾನು ಕೂಡ ಅದಕ್ಕೆ ಒಗ್ಗಬೇಕಾದ ಸ್ಥಿತಿ ಇದೆ. ಕಲಾವಿದ ಕುಣಿದಂತೆ ಚೆಂಡೆಯವರು ಬಾರಿಸಬೇಕಾದ ಸ್ಥಿತಿ ಯಾಕೆ ಬಂತು?
ಯಕ್ಷಗಾನ ರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದೇ ರೀತಿ ಇದು ಕೂಡ ಒಂದು ಬದಲಾವಣೆ. ಇದು ಶುದ್ಧ ತಪ್ಪು ಎಂದು ಹೇಳುವುದಕ್ಕೂ ಆಗುವುದಿಲ್ಲ. ಯಾಕೆಂದರೆ ಅಂದಿನ ಕ್ರಮ, ಇಂದಿನ ಕ್ರಮದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಕಾಳಿಂಗ ನಾವಡರೊಂದಿಗಿನ ನಿಮ್ಮ ಒಡನಾಟದ ನೆನಪುಗಳು?
ನಾವಡರನ್ನು ನೆನಪು ಮಾಡಿಕೊಂಡರೆ ಈಗಲೂ ಕಣ್ಣಂಚು ಒದ್ದೆಯಾಗುತ್ತದೆ. ಅವರ ಜತೆಗಿನ ತಿರುಗಾಟ ನನ್ನ ಜೀವನದ ಸುವರ್ಣಯುಗ. ಚೆಂಡೆ ರಾಮನಾಗಿದ್ದ ನನ್ನನ್ನು ಜನರು ರಾಮಕೃಷ್ಣ ಮಂದಾರ್ತಿ ಎಂದು ಗೌರವದಿಂದ ಗುರುತಿಸುವಂತೆ ಮಾಡಿದ್ದು ನಾವಡರು. ರಂಗದಲ್ಲಿ ನಾವಡರು ಏನು ಬಯಸುತ್ತಾರೆ ಅದು ನನಗೆ ತಿಳಿಯುತ್ತಿತ್ತು. ಅದೇ ರೀತಿ ಪ್ರತಿಕ್ರಿಯೆ ನನ್ನ ಚೆಂಡೆಯಿಂದ ಹೊರಹೊಮ್ಮುತ್ತಿತ್ತು. ಅವರು ತಪ್ಪು-ಒಪ್ಪುಗಳನ್ನು ತಿಳಿಸುತ್ತಿದ್ದರು. “ಶರಧಿಗೆ ಶರಧಿಯೇ ಸಾಟಿ’ ಎನ್ನುವಂತೆ ನಾವಡರಿಗೆ ನಾವಡರೇ ಸಾಟಿ. ಈ ಹಿಂದಿನ ಹಳೆ, ಹೊಸ ಪ್ರಸಂಗಗಳಲ್ಲಿ ಯಾವ ತೆರನಾದ ಭಿನ್ನತೆ ಇತ್ತು?
ನಾವಡರ ಜತೆಗೆ ತಿರುಗಾಟ ಮಾಡುವಾಗ ಹೊಸ ಪ್ರಸಂಗ-ಹಳೆ ಪ್ರಸಂಗವೆಂಬ ಭೇದ ಇರಲಿಲ್ಲ. ಯಾಕೆಂದರೆ ಹೊಸ ಪ್ರಸಂಗಗಳು ಹಳೆ ಪ್ರಸಂಗದ ಗತಿಯಲ್ಲೇ ಪ್ರದರ್ಶನಗೊಳ್ಳುತ್ತಿದ್ದವು ಹಾಗೂ ಹಳೆ ಪ್ರಸಂಗದ ಎಲ್ಲ ವೈಶಿಷ್ಟéಗಳು ಅದರಲ್ಲಿದ್ದವು. ಬೇಗ ನಿವೃತ್ತಿ ಪಡೆಯಲು ಯಕ್ಷರಂಗದ ಮೇಲಿನ ಬೇಸರ ಕಾರಣವೇ?
ಖಂಡಿತ ಇಲ್ಲ. ನಾವಡರ ಕಾಲಾನಂತರವೂ ನಾನು 3 ವರ್ಷ ಸಾಲಿಗ್ರಾಮ, 5 ವರ್ಷ ಮಂದಾರ್ತಿ ಮೇಳದಲ್ಲಿ ತಿರುಗಾಟ ಮಾಡಿದ್ದೆ. ಆದರೆ ಮನೆಯನ್ನು ನೋಡಿಕೊಳ್ಳುವವರು ಯಾರೂ ಇಲ್ಲದಾದಾಗ ಅನಿವಾರ್ಯವಾಗಿ ಮೇಳ ತ್ಯಜಿಸಿದೆ. ರಾಮಣ್ಣನ ಚೆಂಡೆಯ ಧ್ವನಿಯೇ ವಿಶಿಷ್ಟ ಎನ್ನುವ ಮಾತಿದೆ ಹೇಗೆ ಇದು?
ಎಲ್ಲರೂ ಬಳಸುವ ಚೆಂಡೆಯನ್ನೇ ನಾನು ಬಳಸುವುದು. ಚೆಂಡೆಯ ಮುಚ್ಚಿಗೆ, ಕೋಲು ಇದೆಲ್ಲ ನನ್ನದೇ ಆಯ್ಕೆ ಇರುತ್ತದೆ ಹಾಗೂ ಚೆಂಡೆಯನ್ನು ಬಾರಿಸುವ ಕೈಚಳಕ, ವಿಧಾನದಿಂದ ಈ ರೀತಿ ನಾದ ಹೊರಹೊಮ್ಮುತ್ತದೆ ಹೊರತು ಚೆಂಡೆಯಲ್ಲಿ ವಿಶೇಷ ಇಲ್ಲ. ಇಂದಿನ ಪೀಳಿಗೆಯ ಚೆಂಡೆ ವಾದಕರಿಗೆ ನೀವು ಏನು ಕಿವಿಮಾತು ಹೇಳುತ್ತೀರಿ?
ಏನೂ ಹೇಳುವ ಅಗತ್ಯ ಇಲ್ಲ; ಯಾಕೆಂದರೆ ಬದಲಾವಣೆ ಸಾಕಷ್ಟು ಆಗಿದೆ. ಆದರೆ ಯಾವುದೇ ಚೆಂಡೆಗಾರನಿದ್ದರೂ ಹೆಸರು ಬರಬೇಕು ಎನ್ನುವ ಕಾರಣಕ್ಕೆ ಬೇಡವಾದ ಪೆಟ್ಟು ಬಾರಿಸಬೇಡಿ. ಎಲ್ಲಿ ಎಷ್ಟು ಬೇಕು, ಯಾವಾಗ ಬೇಕು ಅದನ್ನ ಮಾತ್ರ ಬಳಸಿ. ವೃತ್ತಿಯ ಬಗ್ಗೆ ಶ್ರದ್ಧೆ ಇರಲಿ, ಒಂದಷ್ಟು ಪರಿಶ್ರಮ ಹಾಕಿ. ಆಗ ಜನ ನಿಮ್ಮನ್ನು ಇಷ್ಟಪಡುತ್ತಾರೆ. ಪ್ರಶಸ್ತಿ-ಪುರಸ್ಕಾರಗಳ ಬಗ್ಗೆ ನಿಮ್ಮ ಅನಿಸಿಕೆ?
ನಾನಂತು ಪ್ರಶಸ್ತಿಗಾಗಿ ಅರ್ಜಿ ಹಿಡಿದು ತಿರುಗಾಡುವವನಲ್ಲ. ಯಾರ ಬಳಿ ಗೋಗರೆಯುವವನಲ್ಲ. ಗುರುತಿಸಿ ಕೊಟ್ಟ ಪ್ರಶಸ್ತಿಗಳನ್ನು ಗೌರವದಿಂದ ಸ್ವೀಕರಿಸಿ ದ್ದೇನೆ. ಕಾಳಿಂಗ ನಾವಡರ ಕಾಲಘಟ್ಟದವರು ಈಗಲೂ ನನ್ನನ್ನು ಕರೆದು ಮಾತನಾಡಿಸುತ್ತಾರೆ. ಈಗಿನ ಹುಡುಗರು ರಾಮಣ್ಣ ಎಂದು ಪ್ರೀತಿ ತೋರುತ್ತಾರೆ. ಇದಕ್ಕಿಂತ ದೊಡ್ಡ ಗೌರವ ಇನ್ನೇನಿದೆ?. ಒಂದು ಉತ್ತಮ ಪ್ರದರ್ಶನಕ್ಕೆ ಹಿಮ್ಮೇಳ-ಮುಮ್ಮೇಳ ಹೇಗಿರಬೇಕು?
ಹಿಮ್ಮೇಳ-ಮುಮ್ಮೇಳದ ನಡುವೆ ಉತ್ತಮ ಸಮನ್ವಯ ಇದ್ದರೆ ಮಾತ್ರ ಒಳ್ಳೆ ಆಟ ಸಾಧ್ಯ. ಹಿಮ್ಮೇಳದವರು ಮಾಡುವ ತಪ್ಪು ಮುಮ್ಮೇಳದವರಿಗೂ; ಮುಮ್ಮೇಳದ್ದು ಹಿಮ್ಮೇಳಕ್ಕೂ ತಿಳಿಯುತ್ತದೆ. ಆಟ ಮುಗಿದ ಅನಂತರ ಇಬ್ಬರೂ ಸಾಮರಸ್ಯದಿಂದ ಮಾತಾಡಿಕೊಂಡು, ತಪ್ಪುಗಳನ್ನು ಸರಿಪಡಿಸಿಕೊಂಡರೆ ಎಲ್ಲ ಕಲಾವಿದರು ಪರಿಪೂರ್ಣರಾಗಲು ಸಾಧ್ಯ. *ರಾಜೇಶ್ ಗಾಣಿಗ, ಅಚ್ಲಾಡಿ