Advertisement

ಯಕ್ಷಗಾನದಿಂದ ಸಮಾಜಕ್ಕೆ ಉತ್ತಮ ಸಂಸ್ಕಾರ ಲಭ್ಯ

03:24 PM Feb 25, 2020 | Suhan S |

ಹೊನ್ನಾವರ: ಜನಜೀವನಕ್ಕೆ ಉತ್ತಮ ಸಂಸ್ಕಾರ ಯಕ್ಷಗಾನ ಕಲೆಯಿಂದ ಸಿಗುತ್ತಿದೆ. ನಾಡಿನಲ್ಲಿ ಯಕ್ಷಗಾನ ಉಳಿಯಬೇಕು. ಇದಕ್ಕೆ ಸರಕಾರ ಮತ್ತು ಸಮಾಜ ಪ್ರೋತ್ಸಾಹ ನೀಡುವ ಅವಶ್ಯಕತೆ ಇದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Advertisement

ಅವರು ಗುಣವಂತೆ ಯಕ್ಷಾಂಗಣದಲ್ಲ ನಡೆದ ಕೆರೆಮನೆ ಶಂಭು ಹೆಗಡೆ 11ನೇ ರಾಷ್ಟ್ರೀಯ ನಾಟ್ಯೋಕೋತ್ಸವದ ಐದನೇ ದಿನದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಯಕ್ಷಗಾನದಂತಹ ಸಮೃದ್ಧ ಕಲೆ ಉಳಿಸಿ ಬೆಳೆಸಲು ಸರಕಾರ ಸಹ ಅವಶ್ಯ ಸಹಕಾರ ನೀಡಲಿದೆ. ನಾಡಿನ ಸಾಂಸ್ಕೃತಿಕ ಕ್ಷೇತ್ರ ಬಲಗೊಂಡಷ್ಟೂ ನಾಡಿನಲ್ಲಿ ಸಂಸ್ಕಾರಯುತ ಸಮಾಜ ಪ್ರಗತಿ ಸಾಧಿಸಲು ಸಾಧ್ಯ ಎಂದರು.

ನಗದು, ಪ್ರಶಸ್ತಿಫಲಕ ಸಹಿತ ಪ್ರತಿಷ್ಠಿತ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪುರಸ್ಕಾರ ಸ್ವೀಕರಿಸಿದ ಖ್ಯಾತ ಭರತನಾಟ್ಯ ಕಲಾವಿದೆ ಪದ್ಮಭೂಷಣ ಡಾ| ಪದ್ಮಾ ಸುಬ್ರಹ್ಮಣ್ಯ ಚೆನ್ನೈ ಮಾತನಾಡಿ, ಭಾರತದ ಭವ್ಯ ಸಂಸ್ಕೃತಿ ಭರತನಾಟ್ಯ ಶಾಸ್ತ್ರದಲ್ಲಿ ಅಡಗಿದೆ. ಭರತನಾಟ್ಯ ಶಾಸ್ತ್ರ ಎನ್ನುವುದು ಒಂದು ಸಾರ್ವತ್ರಿಕ ಕಲೆಯಾಗಿದೆ.

ಇತಿಹಾಸವನ್ನು ಪರಾಮರ್ಶಿಸಿದರೆ ಪೌರಾಣಿಕ ಕಾಲಘಟ್ಟದಲ್ಲೇ ಜಂಬುದ್ವೀಪ ಎಂದು ಕರೆಯಲಾಗುವ ಏಷ್ಯಾ ರಾಷ್ಟ್ರವನ್ನು ಒಳಗೊಂಡು ಭರತನಾಟ್ಯ ಕಲೆ ವ್ಯಾಪಕವಾಗಿತ್ತು ಎನ್ನುವದನ್ನು ಅರಿಯಬಹುದಾಗಿದೆ ಎಂದರು. ಕೆರೆಮನೆ ಕುಟುಂಬ ಯಕ್ಷಗಾನ ಕಲಾಪ್ರಕಾರದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಜತೆ ರಸಾನುಭವಗಳನ್ನು ನೀಡುತ್ತ ಒಂದು ಸನಾತನ ಪರಂಪರೆಯಂತೆ ಮುಂದುವರಿದು ಬಂದಿರುವುದು ಶ್ಲಾಘನೀಯ ಎಂದರು.

ಕುಂದಾಪುರದ ಗೀತಾ ಎಚ್‌ಎಸ್‌ಎನ್‌ ಫೌಂಡೇಶನ್‌ ಅಧ್ಯಕ್ಷ ಎ.ಶಂಕರ ಐತಾಳರಿಗೆ ಶ್ರೀಮಯ ಕಲಾಪೋಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅದಮ್ಯ ಚೇತನ ಫೌಂಡೇಶನ್‌ ಬೆಂಗಳೂರು ಇದರ ಮೇನೆಜಿಂಗ್‌ ಟ್ರಸ್ಟಿ ಡಾ| ತೇಜಸ್ವಿನಿ ಅನಂತಕುಮಾರ್‌ ಅತಿಥಿಗಳಾಗಿ ಪಾಲ್ಗೊಂಡು ಯಕ್ಷಗಾನ ಕಲೆ ಭಾರತದ ಪುರಾಣಗಳನ್ನು ಸಮಾಜಕ್ಕೆ ತಲುಪಿಸಿ ಆರೋಗ್ಯಕರ ಸಮಾಜ ನಿರ್ಮಿಸುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದರು.

Advertisement

ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ಮಾತನಾಡಿ, ಕೆರೆಮನೆ ಯಕ್ಷಾಂಗಣ ಯಕ್ಷಗಾನ ಕಲೆಯ ನಿತ್ಯೋತ್ಸವದ ತಾಣವಾಗಿದೆ. ರಾಜ್ಯ ಸಭೆಗೆ ಕಲಾವಿದರನ್ನು ಕರೆಸಿಕೊಳ್ಳುವುದಾದಲ್ಲಿ ಕಲಾವಿದರ ಪ್ರತಿನಿಧಿಯಾಗಿ ಡಾ|ಪದ್ಮಸುಬ್ರಹ್ಮಣ್ಯ ಅವರನ್ನು ಕರೆಸಿಕೊಳ್ಳಿ ಎಂದು ಆಗ್ರಹಿಸಿದರು.

ಸಂಸ್ಕಾರ ಭಾರತಿ ಅಖೀಲಭಾರತ ಸಂಘಟನಾ ಕಾರ್ಯದರ್ಶಿ ಪ.ರಾ. ಕೃಷ್ಣಮೂರ್ತಿ ಮಾತನಾಡಿದರು. ಪತ್ರಕರ್ತ ವಿನಾಯಕ ಭಟ್ಟ ಮೂರೂರು ಮಾತನಾಡಿ, ಇಂದು ಟಿ.ವಿ, ಮೊಬೈಲ್‌ ನೋಡಿ ಸಮಾಜ ಕೆಡುತ್ತಿದೆ ಎನ್ನುವ ಹೇಳಿಕೆಗಳ ನಡುವೆ ಯಕ್ಷಗಾನ ನೋಡಿ ಈವರೆಗೆ ಯಾರೂ ಕೆಟ್ಟಿರುವ ಬಗ್ಗೆ ಮಾತುಗಳು ಕೇಳಿಬರುತ್ತಿಲ್ಲ ಎನ್ನುವುದನ್ನು ಗಮನಿಸಬೇಕಿದೆ. ಯಕ್ಷಗಾನ ಹಾಗೂ ಯಾವುದೇ ಕಲೆಗೂ ಕಲಾವಿದರು, ಪ್ರೋತ್ಸಾಹಿಸುವವರು ಇರುವವರೆಗೂ ಯಾವ ಕಲೆಯೂ ಅಳಿಯುವುದಿಲ್ಲ ಎಂದರು.

ಲೇಖಕ ವಿದ್ವಾನ್‌ ಕೂರ್ಗಿ ಶಂಕರನಾರಾಯಣ ಉಪಾಧ್ಯಾಯ ಅಭಿನಂದನಾ ಭಾಷಣ ಮಾಡಿದರು. ಲಕ್ಷ್ಮೀನಾರಾಯಣ ಕಾಶಿ ಸ್ವಾಗತಿಸಿದರು. ಶಿವಾನಂದ ಹೆಗಡೆ ಕೆರೆಮನೆ ವಂದಿಸಿದರು. ಶ್ರೀಧರ ಹೆಗಡೆ ಗೌರವ ಸಮರ್ಪಿಸಿದರು. ಬಿ.ಎಂ. ಭಟ್ಟ, ಲಕ್ಷ್ಮೀಕಾಂತ ಗೌಡ ಕಾರ್ಯಕ್ರಮ ನಿರೂಪಿಸಿದರು. 11ನೇ ರಾಷ್ಟ್ರೀಯ ನಾಟ್ಯೋತ್ಸವಕ್ಕೆ ತೆರೆ ಎಳೆಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next