Advertisement

2021 ಹಿನ್ನೋಟ: “ಕೊರೊನಾಸುರನ”ಆರ್ಭಟಕ್ಕೆ ನಲುಗಿದ ಯಕ್ಷರಂಗ

06:27 PM Dec 31, 2021 | Team Udayavani |

2021 ರಲ್ಲಿ ಯಕ್ಷಗಾನ ರಂಗ ಕೊರೊನ ಕಾರಣದಿಂದ ವ್ಯಾಪಕ ಸಂಕಷ್ಟಕ್ಕೆ ಸಿಲುಕಿ ನಲುಗಿತು. ಯಕ್ಷಗಾನ ರಂಗದ ಇತಿಹಾಸದಲ್ಲೇ ಕರಾಳ ಎನಿಸುವಷ್ಟರ ಮಟ್ಟಿಗೆ ಕೋವಿಡ್ ಕರಿಛಾಯೆ ರಂಗದ ಮೇಲೆ ಪ್ರಭಾವ ಬೀರಿತು. ಡೇರೆ ಮೇಳಗಳು ಆರ್ಥಿಕ ಸಂಕಷಕ್ಕೆ ಸಿಲುಕುವಂತಾದರೆ, ಕಲಾವಿದರು ಸಂಕಷ್ಟಕ್ಕೆ ಗುರಿಯಾದರು. ಈ ವೇಳೆ ಸರಕಾರ ಸೇರಿದಂತೆ ಹಲವು ಸಂಘಟನೆಗಳು ಕಲಾವಿದರ ನೆರವಿಗೆ ಧಾವಿಸಿ ಸಣ್ಣ ಮಟ್ಟಿನ ನೆರವನ್ನು ನೀಡಿ ಆಧರಿಸಿದರು.

Advertisement

ಅತ್ಯುತ್ತಮ ಪ್ರದರ್ಶನ ಕಾಣುವ ವೇಳೆಯಲ್ಲೇ ಡೇರೆ ಮೇಳಗಳಿಗೆ ಲಾಕ್ ಡೌನ್ ಸಂಕಷ್ಟ ಎದುರಾಯಿತು. ಎಲ್ಲಾ ಮೇಳಗಳು ಕೊರೊನ ಸಂಕಷ್ಟದಿಂದಾಗಿ ಅವಧಿಗೆ ಮುನ್ನವೇ ಅನಿವಾರ್ಯವಾಗಿ ಪ್ರದರ್ಶನಗಳನ್ನು ನಿಲ್ಲಿಸಬೇಕಾಯಿತು. ನೂರಾರು ಹರಕೆ ಸೇವೆಗಳು ಉಳಿದು ಹೋದವು. ಮಳೆಗಾಲದಲ್ಲೂ ಹರಕೆ ಸೇವೆ ನಡೆಸುವಂತಹ ಮಂದಾರ್ತಿ ಮೇಳಗಳಿಗೂ ಸರಿಯಾಗಿ ಸೇವೆಗಳನ್ನು ಮಾಡಲಾಗಲಿಲ್ಲ.ಕೊನೆಯ ದೇವರ ಸೇವೆಗಳನ್ನೂ ಸರಿಯಾಗಿ ನಡೆಸಲು ಎಲ್ಲಾ ಮೇಳಗಳಿಗೆ ಸಾಧ್ಯವಾಗಲಿಲ್ಲ.

ಪರವೂರಿನ ತಿರುಗಾಟವೂ ಸಾಧ್ಯವಾಗದೆ ಕಲಾವಿದರು ಕೈ ಕಟ್ಟಿ ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಯಿತು. ಹಲವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರೆ, ಕೆಲವರು ಪರ್ಯಾಯ ಉದ್ಯೋಗಗಳನ್ನು ಅರಸಿಕೊಂಡರು. ಹವ್ಯಾಸಿ ರಂಗದಲ್ಲೂ ಅನೇಕ ಸಂಘಟನೆಗಳ ಪ್ರದರ್ಶನಗಳು ರದ್ದುಗೊಡವು, ಪ್ರಸಾದನ ತಂಡಗಳು ತೀವ್ರ ಸಂಕಷ್ಟಕ್ಕೆ ಗುರಿಯಾದವು.

ಆನ್ ಲೈನ್ ಪ್ರಯೋಗ

ಕೊರೊನ ಬಳಿಕ ಆನ್ ಲೈನ್ ಯಕ್ಷಗಾನ ಪ್ರಯೋಗ ಹೊಸ ಟ್ರೆಂಡ್ ಆಯಿತು. ಓಟಿಟಿ ಮಾದರಿಯಲ್ಲಿ ಆನ್ಲೈನ್ ಪೇಮೆಂಟ್ ಮೂಲಕ ಯಕ್ಷಗಾನ ಪ್ರದರ್ಶನಗಳನ್ನು ಮಾಡುವ ಯೋಚನೆಗೆ ಅಷ್ಟೊಂದು ಬೆಂಬಲ ದೊರಕದೆ, ಆ ಪ್ರಯತ್ನ ವಿಫಲವಾಯಿತು.

Advertisement

ಕೊರೊನೋತ್ತರ ನೂರಾರು ಪ್ರದರ್ಶನಗಳು ಲೈವ್ ಪ್ರಸಾರವನ್ನು ಕಂಡವು. ಇದೀಗ ಯಕ್ಷಗಾನ ಹರಕೆ ದಾರರು ತಮ್ಮ ಮನೆಯ ಆಟವನ್ನು ಲೈವ್ ಮಾಡಲು ಉತ್ಸಾಹ ತೋರುತ್ತಿದ್ದು, ಏಕಕಾಲದಲ್ಲಿ ಸಾವಿರಾರು ಮಂದಿ ಬಯಲಾಟಗಳನ್ನು ಆನ್ ಲೈನ್ ಮೂಲಕ ವೀಕ್ಷಿಸಬಹುದಾಗಿದೆ.

ಹಲವು ಸಂಕಷ್ಟದ ನಡುವೆಯೂ ಯಕ್ಷರಂಗ ಮೈ ಕೊಡವಿ ಹೊಸ ಉತ್ಸಾಹದೊಂದಿಗೆ ಮುನ್ನುಗ್ಗಲು ಯತ್ನಿಸುವ ವೇಳೆ ಡಿಸೆಂಬರ್ ಅಂತ್ಯಕ್ಕೆ ಬಂದ ನೈಟ್ ಕರ್ಫ್ಯೂ ಮತ್ತೊಂದು ಸಂಕಷ್ಟ ಎದುರುಗೆ ತಂದಿಟ್ಟಿದೆ. ಮುಂದಿನ ವರ್ಷದ ತಿರುಗಾಟದ ಕುರಿತು, ಮೇಳದ ಯಜಮಾನರು, ಕಲಾವಿದರು, ಹರಕೆ ದಾರರು ಮತ್ತು ಯಕ್ಷ ಅಭಿಮಾನಿಗಳು ಚಿಂತೆಗೊಳಗಾಗುವಂತೆ ಮಾಡಿದೆ.

ರಂಗಸ್ಥಳದಲ್ಲೇ ಹೃದಯಾಘಾತ

ಮಂದಾರ್ತಿ ಮೇಳದ ಪ್ರಧಾನ ವೇಷಧಾರಿಯಾಗಿದ್ದ ಸಾಧು ಕೊಠಾರಿ (58) ಅವರು ಶಿರಿಯಾರದ ಕಾಜ್ರಲ್ಲಿ ಸಮೀಪ ಕಲ್ಬೆಟ್ಟು ಎನ್ನುವಲ್ಲಿ ಜನವರಿ ತಿಂಗಳಿನಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ‘ಮಹಾಕಲಿ‌ ಮಗದೇಂದ್ರ’ ಪ್ರಸಂಗದಲ್ಲಿ ಮಾಗಧನಾಗಿ ಪ್ರದರ್ಶನ ನೀಡುತ್ತಿದ್ದ ಸಂದರ್ಭ ರಂಗದಲ್ಲೇ ಹೃದಯಾಘಾತದಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟ ಘಟನೆ ಹಲವರಿಗೆ ಆಘಾತ ತಂದಿಟ್ಟಿತ್ತು. ಅಸ್ವಸ್ಥಗೊಂಡ ನಂತರ ತತ್‍ಕ್ಷಣ ವೇಷ ಕಳಚಿ, ಸಹಕಲಾವಿದರು ಹಾಗೂ ಸ್ಥಳೀಯರು ಜತೆಯಾಗಿ ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದರೂ ಆಸ್ಪತ್ರೆ ತಲುಪುವಾಗ ಮೃತಪಟ್ಟಿದ್ದರು.

ಅಕಾಡೆಮಿ ಅಧ್ಯಕ್ಷರ ನಿಧನ

ದುರಂತವೆಂದರೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ಅವರು ಎ. 18ರಂದು ನಿಧನ ಹೊಂದಿದರು. ಅವರ ಸಾರಥ್ಯದಲ್ಲಿ ಯಕ್ಷಗಾನ ಅಕಾಡೆಮಿಯಿಂದ ತರಬೇತಿ ಶಿಬಿರ, ದಾಖಲೀಕರಣ, ಹಿರಿಯ ಕಲಾವಿದರಿಗೆ ಗೌರವಾರ್ಪಣೆ, ನೆನಪಿನ ಬುತ್ತಿ ಎನ್ನುವ ಆನ್‌ಲೈನ್‌ ಲೈವ್‌ ಮೂಲಕ ಹಿರಿಯ ಕಲಾವಿದರನ್ನು ಪರಿಚಯಿಸುವ ಕಾರ್ಯಗಳು ಎಂ.ಎ. ಹೆಗಡೆ ಅವರ ನೆನಪು ಉಳಿಯುವಂತೆ ಮಾಡಿದೆ.

ಸ್ವತಃ ಪಾತ್ರಧಾರಿಯಾಗಿದ್ದ ಎಂ.ಎ. ಹೆಗಡೆಯವರು 15ಕ್ಕೂ ಹೆಚ್ಚು ಪ್ರಸಂಗಗಳನ್ನು ರಚಿಸಿದ್ದರು. ಸೀತಾ ವಿಯೋಗ, ತ್ರಿಶಂಕು ಚರಿತೆ, ಮುಂತಾದ ಜನಪ್ರಿಯ ಪ್ರಸಂಗಗಳನ್ನು ರಚಿಸಿದ್ದರು. ಅಲಂಕಾರ ತತ್ವ, ಭಾರತೀಯ ತತ್ವಶಾಸ್ತ್ರ ಪರಿಚಯ, ಬ್ರಹ್ಮಸೂತ್ರ ಚತು; ಸೂತ್ರಿ, ಮತ್ತು ಸಿದ್ಧಾಂತ ಬಿಂದು ಮುಂತಾದ ಗ್ರಂಥಗಳನ್ನು ಅವರು ಬರೆದಿದ್ದರು.

ಹಿರಿಯ ಭಾಗವತ ಮತ್ಯಾಡಿ ನರಸಿಂಹ ಶೆಟ್ಟಿ ನಿಧನ

ಸುಮಾರು ಅರ್ಧ ಶತಮಾನಗಳ ಕಾಲ ಯಕ್ಷಗಾನ ಲೋಕವನ್ನು ತನ್ನ ಕಂಠಸಿರಿಯ ಮೂಲಕ ಶ್ರೀಮಂತಗೊಳಿಸಿದ ಬಡಗುತಿಟ್ಟಿನ ಸಾಂಪ್ರದಾಯಿಕ ಶೈಲಿಯ ಅಗ್ರಮಾನ್ಯ ಭಾಗವತ ಮತ್ಯಾಡಿ ನರಸಿಂಹ ಶೆಟ್ಟಿ (95) ನಿಧನ ಹೊಂದಿದರು. ಮೊದಲು ಕೊಡವೂರು ಮೇಳದಲ್ಲಿ ಭಾಗವತರಾಗಿ ದುಡಿದ ಅವರು ಪೆರ್ಡೂರು ಮೇಳದಲ್ಲಿ, ಕುಂಜಾಲು ಶೈಲಿಯ ಭಾಗವತಿಕೆ ಅಭ್ಯಾಸ ನಡೆಸಿ ಕೋಟ ಅಮೃತೇಶ್ವರೀ ಮೇಳದ ಲ್ಲಿ, ಮಂದರ್ತಿ, ಮಾರಣಕಟ್ಟೆ ಮೇಳದಲ್ಲಿ ದುಡಿದು ಹಾರಾಡಿ ರಾಮ ಗಾಣಿಗ, ಕುಷ್ಟ ಗಾಣಿಗ, ವೀರಭದ್ರ ನಾಯ್ಕ , ಕೊಕ್ಕರ್ಣೆ ನರಸಿಂಹ, ನೀಲಾವರ ಮಹಾಬಲ ಶೆಟ್ಟಿ, ಮೊಳಹಳ್ಳಿ ಹೆರಿಯ ನಾಯ್ಕ, ಐರೋಡಿ ಗೋವಿಂದಪ್ಪ ರಂತಹ ಮಹಾನ್‌ ಕಲಾವಿದರನ್ನು ತಮ್ಮ ಹಾಡುಗಾರಿಕೆಯ ಮೂಲಕ ವಿಜೃಂಭಿಸಿದ್ದರು.

ಸ್ತ್ರೀವೇಷಧಾರಿ ವಂಡ್ಸೆ ನಾರಾಯಣ ಗಾಣಿಗ ನಿಧನ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನದ ಹಿರಿಯ ಸ್ತ್ರೀವೇಷಧಾರಿ ವಂಡ್ಸೆ ನಾರಾಯಣ ಗಾಣಿಗ ಅವರು ನಿಧನ ಹೊಂದಿದರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಕೊಲ್ಲೂರಿನ ವಂಡ್ಸೆ ಗ್ರಾಮದ ಗಾಣಿಗರು, ಹಲವು ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಮಾರಣಕಟ್ಟೆ, ಮಂದಾರ್ತಿ, ಕೊಲ್ಲೂರು, ಧರ್ಮಸ್ಥಳ, ಪೆರ್ಡೂರು, ಸಾಲಿಗ್ರಾಮ ಮತ್ತು ಇಡಗುಂಜಿ ಮೇಳಗಳಲ್ಲಿ ಇವರು ಕಲಾಕೃಷಿ ನಡೆಸಿದ್ದರು.

ಹಿರಿಯ ಕಲಾವಿದ ಶೀನಪ್ಪ‌ ರೈ‌ ನಿಧನ

ಯಕ್ಷಗಾನ ಕ್ಷೇತ್ರದ ತೆಂಕು ತಿಟ್ಟಿನ ಹಿರಿಯ ಕಲಾವಿದ, ಹಲವು ದಶಕಗಳ ಕಾಲ ಯಕ್ಷ ಸೇವೆ ಮಾಡಿದ್ದಸಂಪಾಜೆ ಶೀನಪ್ಪ ರೈ ಅವರು ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದರು. ರಕ್ತಬೀಜ, ಹಿರಣ್ಯಾಕ್ಷ, ಶಿಶುಪಾಲ ಮುಂತಾದ ಪಾತ್ರಗಳಿಗೆ ಪ್ರಸಿದ್ಧರಾಗಿದ್ದ ಅವರು ಇರಾ ಸೋಮನಾಥೇಶ್ವರ, ವೇಣೂರು, ಇರುವೈಲು, ಸೌಕೂರು, ಚೌಡೇಶ್ವರಿ ಮೇಳ, ಕಟೀಲು ಮೇಳ, ಹೊಸನಗರ ಎಡನೀರು ಹಾಗೂ ಹನುಮಗಿರಿ ಮೇಳದಲ್ಲಿ ಕಲಾ ವ್ಯವಸಾಯವನ್ನು ಮಾಡಿದ್ಧರು.

ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿಧಿವಶ

ಅಭಿನವ ವಾಲ್ಮೀಕಿ, ಯಕ್ಷಗಾನದ ಸವ್ಯಸಾಚಿ ಎಂದೇ ಹೆಸರಾದ ಪ್ರಸಿದ್ದ ಪ್ರಸಂಗಕರ್ತ, ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು 68ರ ಹರೆಯದಲ್ಲಿ ವಿಧಿವಶರಾದರು.ಮಂಗಳೂರಿನ ಬೊಟ್ಟಿಕೆರೆಯ ಪುರುಷೋತ್ತಮ ಪೂಂಜರು ಬಿ.ಎಸ್ ಸಿ ಪದವೀಧರರಾಗಿದ್ದರು. ಕಟೀಲು ಒಂದನೇ ಮೇಳದ ಪ್ರಧಾನ ಭಾಗವತರಾಗಿ ಯಕ್ಷ ಸೇವೆಗೈಯುತ್ತಿದ್ದರು. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸುಮಾರು 32 ಪ್ರಸಂಗಗಳನ್ನು ಬರೆದಿದ್ದ ಪೂಂಜರು, ಮಾನಿಷಾದ, ಉಭಯಕುಲ ಬಿಲ್ಲೋಜ, ನಳಿನಾಕ್ಷಿ ನಂದಿನಿ, ಮೇಘ ಮಯೂರಿ, ಸ್ವರ್ಣನೂಪುರ, ದಳವಾಯಿ ಮುದ್ದಣೆ, ಕುಡಿಯನ ಕೊಂಬಿರೆಲ್‌, ಗರುಡಕೇಂಜವೆ, ಪಟ್ಟದಕತ್ತಿ, ಕುಡಿಯನ ಕಣ್ಣ್‌, ಸ್ವರ್ಣಕೇದಗೆ ಮುಂತಾದ ಪ್ರಸಂಗಗಳು ಯಕ್ಷ ರಂಗದಲ್ಲಿ ಜನಪ್ರಿಯವಾಗಿದ್ದವು.

ಅನಂತ ಕುಲಾಲ್ ವಿಧಿವಶ

ಬಡಗು ತಿಟ್ಟು ಯಕ್ಷಗಾನ ರಂಗದ ಹಿರಿಯ ವೇಷಧಾರಿ ಅನಂತ ಕುಲಾಲ್ ಅವರು 66 ನೇ ಹರೆಯದಲ್ಲಿ ನಿಧನ ಹೊಂದಿದರು.ಐದು ದಶಕಗಳ ಕಾಲ ಯಕ್ಷಗಾನ ರಂಗದಲ್ಲಿ ಗೆಜ್ಜೆ ಸೇವೆ ಮಾಡಿ, ವೈವಿಧ್ಯಮಯ ವೇಷಗಳನ್ನು ನಿರ್ವಹಿಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದ ಅನಂತ ಕುಲಾಲ್ ಅವರು ಪ್ರಸಿದ್ಧ ಮಾರಣಕಟ್ಟೆ ಕ್ಷೇತ್ರದ ಬಯಲಾಟ ಮೇಳಗಳಲ್ಲೇ ಸುಮಾರು ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು.

ಸಾಂತೂರು ಸದಾಶಿವ ರಾವ್ ವಿಧಿವಶ

ಬಹುಶ್ರುತ ವಿದ್ವಾಂಸ ಹವ್ಯಾಸಿ ವೇಷಧಾರಿ, ಅರ್ಥಧಾರಿ, ಧಾರ್ಮಿಕ ಪ್ರವಚನಕಾರರಾದ ನಿವೃತ್ತ ಉಪನ್ಯಾಸಕ ಸಾಂತೂರು ಸದಾಶಿವ ರಾವ್ ವರು ನಿಧಾನ ಹೊಂದಿದರು. ಆರು ದಶಕಗಳಿಗೂ ಅಧಿಕ ಕಾಲ ಯಕ್ಷಗಾನ ಅರ್ಥಧಾರಿಯಾಗಿ, ವೇಷಧಾರಿಯಾಗಿ ವಿಶೇಷ ಕೊಡುಗೆಯನ್ನು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ್ದರು, ನೂರಾರು ಶಿಷ್ಯರನ್ನು ರೂಪಿಸಿದ್ದರು.

ಶಿವರಾಮ ಶೆಟ್ಟಿ ಹೊಸಕೊಪ್ಪ

ಶಿವಮೊಗ್ಗ ಜಿಲ್ಲೆಯ ನರಸಿಂಹರಾಜಪುರ ನಿವಾಸಿ ಹೊಸಕೊಪ್ಪ ಶಿವರಾಮ ಶೆಟ್ಟಿ (69) ನಿಧನ ಹೊಂದಿದರು. ಗಂಭಿರ ಪುರುಷ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದ ಶಿವರಾಮ ಶೆಟ್ಟಿಯವರು ತೆಂಕು ತಿಟ್ಟು ಮತ್ತು ಬಡಗು ತಿಟ್ಟುಗಳಲ್ಲಿ ಸಮರ್ಥ ವೇಷಧಾರಿಯಾಗಿದ್ದರು.

ಸತೀಶ್ ಹೆಗಡೆ ಆನೆಗದ್ದೆ ನಿಧನ

ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಡಗುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಸತೀಶ್ ಹೆಗಡೆ ಆನೆಗದ್ದೆ ಅವರು ನಿಧನ ಹೊಂದಿದರು 35 ಕ್ಕೂ ಹೆಚ್ಚು ವರ್ಷಗಳಿಗೂ ಹೆಚ್ಚು ಕಾಲ ವಿವಿಧ ಮೇಳಗಳಲ್ಲಿ ಯಕ್ಷಗಾನ ಸೇವೆಗೈದಿದ್ದ ಸತೀಶ್ ಹೆಗಡೆ ಅವರು ಹಲವು ಪಾತ್ರಗಳಿಂದ ಜನಪ್ರಿಯರಾಗಿದ್ದರು.

ರಾಷ್ಟ್ರಮಟ್ಟದಲ್ಲೂ ಯಕ್ಷಗಾನ ಸಂಕಷ್ಟದಲ್ಲೂ ಕಲಿಕೆ

ಕೋವಿಡ್ ಸಂಕಷ್ಟ ಕಾಲದಲ್ಲೂ ಗುವಾಹಟಿ, ಮಹಾರಾಷ್ಟ್ರ, ದಿಲ್ಲಿ, ರಾಜಸ್ಥಾನ, ಪಂಜಾಬ್‌, ಉತ್ತರ ಪ್ರದೇಶದ ಮೂಲದ ವಿದ್ಯಾರ್ಥಿಗಳು, ಯಕ್ಷಗಾನದ ಮೇಲಿನ ಅಭಿಮಾನ, ಪ್ರೀತಿಯಿಂದ ಇಂದ್ರಾಳಿ ಯಕ್ಷಗಾನ ಕೇಂದ್ರದಲ್ಲಿ ಮಣಿಪಾಲ ಮಾಹೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಒಂದು ತಿಂಗಳ ಕಾಲ ಯಕ್ಷಗಾನ ಕೇಂದ್ರದ ಗುರು ಸಂಜೀವ ಸುವರ್ಣ ಅವರಿಂದ ತರಬೇತಿ ಪಡೆದುಕೊಂಡರು.

ಪೆರ್ಡೂರು ಮೇಳದಲ್ಲಿ ಜನ್ಸಾಲೆ ಸ್ಥಾನಕ್ಕೆ ಧಾರೇಶ್ವರ

ಯಕ್ಷಗಾನ ರಂಗದಲ್ಲಿ ಪ್ರಸಕ್ತ ವರ್ಷ ಸಂಚಲನ ಮೂಡಿಸಿದ ವಿದ್ಯಮಾನ, ಭಾರಿ ಚರ್ಚೆ, ಭಾರಿ ಸುದ್ದಿಯಾದ ವಿದ್ಯಮಾನವಿದು. ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿ ಸುಬ್ರಹ್ಮಣ್ಯ ಧಾರೇಶ್ವರ 9 ವರ್ಷದ ಬಳಿಕ ಮತ್ತೆ ಈ ತಿರುಗಾಟದಿಂದ ರಂಗಮಂಚವೇರಿದ್ದು, 9 ವರ್ಷದಿಂದ ಪ್ರಧಾನ ಭಾಗವತರಾಗಿದ್ದ ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರು ಮೇಳದಿಂದ ದಿಢೀರ್‌ ನಿರ್ಗಮಿಸಿದ್ದು, ಅಭಿಮಾನಿಗಳ ನೋವಿಗೆ ಕಾರಣವಾಗಿತ್ತು.

ಗೋಪಾಲ್ ಆಚಾರ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ

ಬಡಗು ತಿಟ್ಟು ಯಕ್ಷಗಾನದಲ್ಲಿ ‘ತೀರ್ಥಹಳ್ಳಿ’ ಎಂದೇ ಜನಪ್ರಿಯರಾಗಿರುವ ‘ಯಕ್ಷರಂಗದ ಸಿಡಿಲ ಮರಿ’, ‘ಅಭಿಮನ್ಯು’ ಬಿರುದಾಂಕಿತ ಗೋಪಾಲ್ ಆಚಾರ್ಯ ಅವರಿಗೆ ಅರ್ಹವಾಗಿಯೇ 2020-21 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಂದಿತು.

Advertisement

Udayavani is now on Telegram. Click here to join our channel and stay updated with the latest news.

Next