Advertisement
ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ರವಿವಾರ ಸ್ವೀಪ್ ಸಮಿತಿ, ಕುಂದಾಪುರ ತಾಲೂಕು ಆಡಳಿತ, ಪುರಸಭೆ ಹಾಗೂ ಕಲ್ಪಿತಾ ಕೋಟ ಸಂಸ್ಥೆಯ ವತಿಯಿಂದ ಮೇ 12 ರಂದು ನಡೆಯುವ ಮತದಾನದಲ್ಲಿ ಎಲ್ಲರೂ ತಪ್ಪದೇ, ನಿರ್ಭೀತಿಯಿಂದ, ಮುಕ್ತವಾಗಿ ಮತದಾನ ಮಾಡುವಂತೆ ಅರಿವು ಮೂಡಿಸುವ ಸಲುವಾಗಿ ‘ಮತ ಮಹಿಮಾಮೃತ’ ಎನ್ನುವ ಯಕ್ಷಗಾನ ಪ್ರಸಂಗದ ಪ್ರದರ್ಶನ ಏರ್ಪಡಿಸಲಾಗಿತ್ತು.
ಹಣ, ಹೆಂಡ, ಆಮಿಷಗಳಿಗೆ ಬಲಿಯಾಗದೇ ನಾಡಿನ ಆಶೋತ್ತರಗಳನ್ನು ಈಡೇರಿಸಬಲ್ಲ ನಾಯಕನನ್ನು ಆಯ್ಕೆ ಮಾಡಿ ಎನ್ನುವ ಸಂದೇಶವು ಇಲ್ಲಿದೆ. ಮತದಾನ ಹೇಗೆ ಮಾಡಬೇಕು ಎನ್ನುವ ಮಾಹಿತಿಯನ್ನು ನೀಡಲಾಗುತ್ತಿದೆ. ಪಿಂಕ್ ಮತಗಟ್ಟೆ, ವಿವಿಪ್ಯಾಟ್, ಹೀಗೆ ಉಡುಪಿ ಜಿಲ್ಲಾಡಳಿತವು ಕೈಗೊಂಡಿರುವ ಆಕರ್ಷಕ ಕ್ರಮಗಳ ಕುರಿತ ವಿವರವೂ ನೀಡಲಾಗುತ್ತಿದೆ.
Related Articles
‘ಧರೆಯ ಭಾಗ್ಯವ ಕೆಡಿಸಬೇಡಿ, ಸುರೆಯು ಧನದ ಆಮಿಷಕ್ಕೆ ಬಗ್ಗದೇ, ಸುರುಪುರದ ನಿಜ ಮತವ ನೀಡಿ ಹರುಷರಾಗಿ’ ಎಂದು ಭಾಗವತ ಸತೀಶ್ ಕೆದ್ಲಾಯ ಅವರ ಕಂಠದಲ್ಲಿ ಮೂಡಿಬರುವ ಹಾಡಿನಲ್ಲಿ ಹಣ, ಆಮಿಷಕ್ಕೆ ಬಲಿಯಾಗಿ ಈ ನಾಡಿನ ಹಿತವನ್ನು, ಅಭಿವೃದ್ಧಿ ಮಾರಿಕೊಳ್ಳಬೇಡಿ ಎನ್ನುವ ಮಹತ್ವದ ಅರಿವು ವ್ಯಕ್ತವಾಗಿದೆ. 45 ನಿಮಿಷದ ಈ ಪ್ರಸಂಗವನ್ನು ಬರೆದವರು ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ನಾಗೇಶ್ ಶಾನುಭಾಗ್. ನಿರ್ದೇಶಿಸಿದವರು ನರಸಿಂಹ ತುಂಗ. ಚೆಂಡೆಯಲ್ಲಿ ಸುದೀಪ್, ಕಲಾವಿದರಾಗಿ ವಿಷ್ಣುದಾಸ್, ವಿಠಲ, ಅಭಿನವ ಸಹಕರಿಸಿದ್ದಾರೆ.
Advertisement
ರವಿವಾರ ನಡೆದ ಪ್ರದರ್ಶನದ ವೇಳೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಿರಂಜನ್ ಭಟ್, ಕುಂದಾಪುರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಿರಣ್ ಪೆಡ್ನೆಕರ್, ಉಪ ನಿರೀಕ್ಷಕರ ಕಚೇರಿಯ ವಿಷಯ ಪರಿವೀಕ್ಷಕ ನಾಗರಾಜ್, ಪುರಸಭೆಯ ಇಂಜಿನಿಯರ್ ದಿನೇಶ್, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನು ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಮತದಾರರು ಸೇರಿದ್ದರು.