ನೀಲಾವರ ಮಹಿಷಮರ್ದಿನಿ ದಶಾವತಾರ ಯಕ್ಷಗಾನ ಮೇಳದ ಯಕ್ಷಗಾನ ಪ್ರದರ್ಶನವೊಂದು ಇತ್ತೀಚೆಗೆ ಕೂರಾಡಿಯಲ್ಲಿ ಜರಗಿತು.ಕಾರ್ತ್ಯ – ರತ್ನಾವತಿ ಕಲ್ಯಾಣ ಎಂಬೆರಡು ಆಖ್ಯಾನಗಳನ್ನು ರಂಗದಲ್ಲಿ ಅನಾವರಣಗೊಳಿಸಿ ರಂಗರಸಿಕರ ಹೃನ್ಮನ ಸೂರೆಗೊಳ್ಳುವಲ್ಲಿ ಕಲಾವಿದರ ಶ್ರಮ ಅನನ್ಯವಾಗಿತ್ತು.
ಆರಂಭದಲ್ಲಿ ನಡೆದ ಕಾರ್ತ್ಯ ಪ್ರಸಂಗದಲ್ಲಿ ಲಂಕಾಧಿಪತಿ ರಾವಣೇಶ್ವರ ದಿಗ್ವಿಜಯಾರ್ಥಿಯಾಗಿ ಅನುಜ ವಿಭೀಷಣ, ಮಂತ್ರಿ ಪ್ರಹಸ್ತನೊಂದಿಗೆ ಅಬ್ಬರದ ರಂಗಪ್ರವೇಶ. ರಾವಣನಾಗಿ ವಿಠuಲ ಚೋರಾಡಿ ಪೀಠಿಕೆಯಲ್ಲಿ ವಿಷಯ ಮಂಡನೆ ತುಸು ಕಡಿಮೆಯಾದರೂ ಕುಣಿತ – ಅಭಿನಯದಲ್ಲಿ ಸೈ ಎನಿಸಿಕೊಂಡರು . ವಿಭೀಷಣ ( ಗಂಗಾಧರ ಹೊನ್ನಾವರ ) , ಪ್ರಹಸ್ತ (ಗಿರೀಶ ಮಾವಿನಕಟ್ಟೆ ) ಇವರೀರ್ವರ ಹಿತಮಿತ ಮಾತುಗಾರಿಕೆ , ನಾಟ್ಯ ಕೌಶಲ ಹಿತವೆನಿಸಿತು.
ಪ್ರಸಂಗದ ಕೇಂದ್ರ ಬಿಂದು ಕಾರ್ತವೀರ್ಯನ ಪಾತ್ರದಲ್ಲಿ ರಾಘವೇಂದ್ರ ಶೆಟ್ಟಿ ಬಡಾಬಾಳು ಅಭಿನಯಿಸಿದ ಪರಿ ಮೆಚ್ಚಬೇಕು . ಪೀಠಿಕೆಯಲ್ಲಿ ತನ್ನ ಪೂರ್ವಾಪರವನ್ನು ತೆರೆದಿಟ್ಟ ಬಗೆ , ಸಾಹಿತ್ಯ ಮಿಳಿತ ವಾಗ್ವೆ„ಖರಿ , ಸಂಪ್ರದಾಯಬದ್ಧ ಕುಣಿತ ಜನಮಾನಸದಲ್ಲಿ ಅಚ್ಚೊತ್ತಿ ನಿಲ್ಲುವಂತೆ ಮಾಡಿತು . ಸಖೀಯರೊಂದಿಗೆ (ರಾಘವೇಂದ್ರ ತೀರ್ಥಹಳ್ಳಿ, ರಾಘವೇಂದ್ರ ಜೋಗಿ ) ಕಾರ್ತವೀರ್ಯ ವನವಿಹಾರದಲ್ಲಿ ವಿಹರಿಸುವ ಸಂದರ್ಭ; ನೀಲ ಗಗನದೊಳು …ಮೇಘಗಳ … ಹಾಡಿಗೆ ನಾಟ್ಯ ವೈಭವ ಸೊಗಸಾಗಿತ್ತು .
ರಾವಣನ ಸೊಕ್ಕನ್ನು ಮುರಿಯುವುದರ ಜತೆಗೆ ಕೈಸೆರೆಯಾಗಿ ಸಿಕ್ಕ ಆತನನ್ನು ಮೂದಲಿಸುವ ಸನ್ನಿವೇಶದಲ್ಲಿನ “ಸಿಕ್ಕಿದೆಯಲೋ ದೈತ್ಯರಾಯ …’ ಎನ್ನುವ ಪದ್ಯಕ್ಕೆ ಕಾರ್ತವೀರ್ಯನ ಅಭಿನಯ ಅಮೋಘವಾಗಿತ್ತು .ಎರಡನೇ ಪ್ರಸಂಗ ರತ್ನಾವತಿ ಕಲ್ಯಾಣ. ಕವಿಮುದ್ದಣ ರಚಿಸಿದ ಯಕ್ಷಕೃತಿ ಈಗಾಗಲೇ ಪ್ರೇಕ್ಷಕರ ಮನೋಭೂಮಿಕೆಯಲ್ಲಿ ಸ್ಥಿರವಾಗಿ ನಿಂತ ಪ್ರಸಂಗ. ದೃಢವರ್ಮವಾಗಿ ರಂಗಪ್ರವೇಶ ಮಾಡಿದ ಗುರುಪ್ರಸಾದ್ ಸರಳಾಯ ಇವರ ಮಾತಿನಲ್ಲಿ ಸ್ಪಷ್ಟತೆ , ಸ್ವರಭಾರ, ಹಿತಮಿತ ಹೆಜ್ಜೆಗಾರಿಕೆ , ಅಭಿನಯಗಳೆಲ್ಲವೂ ಪ್ರಸಂಗಕ್ಕೆ ವಿಶೇಷ ಕಳೆ ಕೊಟ್ಟಿತು. ಭದ್ರಸೇನನಾಗಿ ಚಂದ್ರಶೇಖರ ಹೆಬ್ಬುರುಳಿ ಇವರ ಸ್ವರಭಾರ ಹಿತವೆನಿಸದಿದ್ದರೂ ವೀರಾವೇಶದ ಪದ್ಯಕ್ಕೆ ಇವರ ನೃತ್ಯಾಭಿನಯ ಮೆಚ್ಚುಗೆಯಾಯಿತು . ರತ್ನಾವತಿಯಾಗಿ ಗಣೇಶ ಉಪ್ಪುಂದರ ಒನಪು ,ವಯ್ನಾರ , ಬೆಡಗುಬಿನ್ನಾಣ ಆಖ್ಯಾನಕ್ಕೆ ಕಳಸ ಇಟ್ಟಂತ್ತಿತ್ತು. ಭಾವಸೃಷ್ಟಿಯನ್ನು ತೆರೆದಿಟ್ಟ ಬಗೆ ನಯ ನಾಜೂಕಿನ ಕುಣಿತ ಮೆಚ್ಚುಗೆಗೆ ಪಾತ್ರವಾಯಿತು. ಸಿಡಿಯುವ ಶೌರ್ಯನಾಗಿ, ಮಂಡಿವೀರನಾಗಿ , ಪಾದರಸ ಚಲನೆಯ ಕುಣಿತಗಾರನಾಗಿ ಕಾಣಿಸಿಕೊಂಡವನು ವತ್ಸಾಖ್ಯ ಪಾತ್ರಧಾರಿ ಕುಮಾರ ಹೆಬ್ಬುರುಳಿ. ವತ್ಸಾಖ್ಯ ಹಾಗೂ ರತ್ನಾವತಿ ಇವರ ಕಲ್ಯಾಣದೊಂದಿಗೆ ರತ್ನಾವತಿ ಕಲ್ಯಾಣಕ್ಕೆ ತೆರೆ ಬೀಳುತ್ತದೆ. ಎರಡೂ ಪ್ರಸಂಗಗಳಲ್ಲಿ ತನ್ನದೇ ಘನ ಹಾಸ್ಯ ಸೃಷ್ಟಿಯ ಸಂಕೋಲೆಯಿಂದ ಪ್ರೇಕ್ಷಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ನಾರಾಯಣ ಅರೋಡಿಯವರು.
ಹಿಮ್ಮೇಳದಲ್ಲಿ ಅಣ್ಣಪ್ಪ ಹಳ್ಳಿಹೊಳೆ ಇವರ ಭಾಗವತಿಕೆ ಮೊಳಗಿತು. ಯುವ ಭಾಗವತ ಪಲ್ಲವ ಗಾಣಿಗರ ಪದ್ಯದಲ್ಲಿ ತಂದೆ ಹೆರಂಜಾಲು ಗೋಪಾಲ ಗಾಣಿಗರ ಸ್ವರಸಿರಿ ಎದ್ದು ಕಾಣುತ್ತಿತ್ತು. ಮದ್ದಳೆ ಚಂಡೆಯಲ್ಲಿ ನಾಗೇಶ ಭಂಡಾರಿ , ಬಾಲಚಂದ್ರ ಶಿರಾಲಿ ,ರಾಮಬಾಯಿರಿ ಕೂರಾಡಿ ಸಹಕರಿಸಿದರು.
-ಕೂರಾಡಿ ಕೇಶವ ಆಚಾರ್