Advertisement

ವಿನಯ ಆಚಾರ್ಯ; ದಕ್ಷಿಣಕ್ಕೇ ಹೋದ ಉತ್ತರಾಧಿಕಾರಿ

05:53 PM Sep 26, 2019 | mahesh |

ಯಾಕಾಗಿ ಹೀಗಾ ಗುತ್ತದೆಯೋ? ಬೆಳೆದು ಮಿಂಚಿ ಕಾಂತಿಯನ್ನು ಸೂಸ ಬೇಕಾದ ತಾರುಣ್ಯದಲ್ಲೇ ಕಾಲನ ಪಾದವನ್ನು ಸೇರಿಬಿಟ್ಟರಲ್ಲಾ ಅಪೂರ್ವ ಕಾಲ ಗಾರ-ಲಯವಾದ್ಯಕಾರ ಕಡಬ ವಿನಯ ಆಚಾರ್ಯ. ಪ್ರತಿಭೆಯನ್ನು ಬಸಿದು ಬಸಿದು ಕಟ್ಟಿದ ಕಲಾತೋರಣವನ್ನು 33ರ ಹರೆಯದಲ್ಲಿ ಕಾಲನ ಕೈಗೆ ಕೊಟ್ಟು ಹೋಗಿಯೇ ಬಿಟ್ಟರು. ವಿನಯ್‌ ಮೇಳ ಸೇರುವ ಮೊದಲೇ ಅವರ ತಂದೆ ದಿ| ಕಡಬ ನಾರಾಯಣಾಚಾರ್ಯ ಇವರ ಜತೆ ಹಲವಾರು ಸಲ ಹೇಳಿದ್ದೆ ನಿಮಗೆ ಸಿಕ್ಕ ಸಮರ್ಥ ಉತ್ತರಾಧಿಕಾರಿ ಎಂದು. ಆದರೆ ದಕ್ಷಿಣಕ್ಕೇ ಹೋದರಲ್ಲ ಉತ್ತರಾಧಿಕಾರಿ.

Advertisement

ವಾದನ ಪ್ರತಿಭೆಯಿಂದ ಬೆರಗೆಬ್ಬಿಸುತ್ತಿದ್ದ ಕಡಬ ವಿನಯ್‌ ಸಂಕೋಚ ಸ್ವಭಾವದವರು. ಯಾವತ್ತೂ ಮೇಲೆಬಿದ್ದು ಯಾವುದನ್ನೂ ಮಾಡುತ್ತಿದ್ದವರಲ್ಲ. ಸಮಾನ ಸಿದ್ಧಿ ಚೆಂಡೆ- ಮದ್ದಳೆ ಎರಡರಲ್ಲೂ ಇತ್ತು. ಆದರೆ, ತೊಡಗಿದ್ದು ಮದ್ದಳೆಯಲ್ಲಿ ಜಾಸ್ತಿ.

ತಂದೆ, ಹಿರಿಯ ಮದ್ದಳೆಗಾರ ದಿ| ಕಡಬ ನಾರಾಯಣಾಚಾರ್ಯರ ವಿರೋಧದ ನಡುವೆಯೂ ಮದ್ದಳೆಯ ನಾದ ಗುಂಜನದ ಬೆನ್ನು ಹಿಡಿದ ಕಡಬ ವಿನಯ ಆಚಾರ್ಯರು ಮದ್ದಳೆಯ ಭಿನ್ನ ಛಾಪು. ವಿನಯರ ಕಲಿಕೆ ಶಾಸ್ತ್ರೀಯ ಅಲ್ಲ. ಸಹಜವಾಗಿ ಅದೇ ಒಲಿದು ಬಂದದ್ದು. ಬೆರಳುಗಳಲ್ಲಿ ನಲಿಯುತ್ತಿದ್ದುದು. ಸಹಜವಾಗಿ ಒಲಿದ ಕಲೆಯಲ್ಲಿ ಕಾಂತಿ ಇರುತ್ತದೆ.

ಇವರ ಮದ್ದಳೆವಾದನ ಗಮನಿಸಿದಾಗ ಅದರ ನಡೆಯ, ಉರುಳಿಕೆಗಳ, ಉಳಿದ ಪಾಟಾಕ್ಷರಗಳ ರಾಚನಿಕ ವಿನ್ಯಾಸಗಳು ತಂದೆಯವರಾದ ಕಡಬ ನಾರಾಯಣಾಚಾರ್ಯರು ಮತ್ತು ಪದ್ಯಾಣ ಜಯರಾಮ ಭಟ್ಟರ ನುಡಿಸಾಣಿಕೆಯ ಮಧ್ಯದಲ್ಲೆಲ್ಲೋ ಇದೆಯೆಂಬಂತಿತ್ತು. ಏಕತಾಳದ ಬಿಡಿತದಲ್ಲಿನ ಮದ್ದಳೆಯ ಮೇಲ್ಕಾಲದ ಉರುಳಿಕೆ ನುಡಿಸುವಾಗ ಅದರಲ್ಲೂ ತಾಳದ ಉತ್ತರಾರ್ಧದ ಉಪಸಂಹಾರದಲ್ಲಿ ಬೆರಳುಗಳ ತಾಡನ ಸಾಂದ್ರತೆ ಗಮನಿಸಿದಾಗ ಇದರ ಅರಿವಾಗುತ್ತದೆ . ಉರುಳಿಕೆಯ ಪೂರ್ವಾಧ‌ì ಮಿದುವಾಗಿ ಸಾಗಿ ಉತ್ತರಾರ್ಧದಲ್ಲಿ ಬಿಗುವಿನಿಂದ ಕೂಡಿರುತ್ತದೆ. ದೃಢವಾಗಿ ಅಭ್ಯಾಸ ಮಾಡಿದ ಲಕ್ಷಣ ಇದು. ಸಲ್ಲಕ್ಷಣವಾದ ಬೆರಳುಗಳ ಚಲನೆ ಮದ್ದಳೆಯ ಎಡ-ಬಲಗಳ ಮೇಲೆ. ಹೆಚ್ಚಾಗಿ ಮದ್ದಳೆಯ ಮೂಲ ಪಾಠಗಳೇ (ಧೀಂ, ಧೋಂ, ಧಾ, ನಂ ಹೀಗೆ) ಪ್ರಧಾನವಾಗಿ ರಚಿತವಾಗಿ ಸೊಲ್ಲು ಕಟ್ಟುಗಳು. ಇದು ತುಂಬಾ ಸೊಗಸಾಗಿ ಅರಳಿಕೊಂಡು ಬರುತ್ತಿತ್ತು.

ವಿನಯರದ್ದು ಕ್ಷಣಕ್ಷಣಕ್ಕೆ ರಂಗದಲ್ಲಿ ಮೂಡುತ್ತಿದ್ದ ಕಲ್ಪನಾ ವಿಲಾಸ. ಮನಸ್ಸಿನಲ್ಲೆಲ್ಲೋ ಇದ್ದದ್ದಕ್ಕೆ ಗಾನ ಮೂರ್ತತೆ ಕೊಟ್ಟಾಗ ಮದ್ದಳೆಯ ಮಾತಾಗಿ ಬರುವಂತಹಾದ್ದು. ಕೈಬೆರಳುಗಳು ನೀಳವಲ್ಲದಿದ್ದರೂ ದೃಢವಾದ ಬೆರಳುಗಾರಿಕೆ. ಪದ್ಯಾಣ ಗಣಪತಿ ಭಟ್ಟರ ಹಾಗೂ ರವಿಚಂದ್ರ ಕನ್ನಡಿಕಟ್ಟೆಯವರ ಹಾಡಿಕೆಗೆ ಒಮ್ಮೆಯೇ ಹೊಂದಿಕೊಳ್ಳುವಂತಹಾದ್ದು. ಆದರೆ ಆಗಾಗ ನೆನಪಿಗೆ ಬರುವುದು ದಿನೇಶ ಅಮ್ಮಣ್ಣಾಯರೊಡಗಿನ ಒಡನಾಟ.

Advertisement

ಕೃಷ್ಣಪ್ರಕಾಶ ಉಳಿತ್ತಾಯ

Advertisement

Udayavani is now on Telegram. Click here to join our channel and stay updated with the latest news.

Next