ದಶಾವತಾರಿ ಸೂರಿಕುಮೇರು ಗೋವಿಂದ ಭಟ್ಟರಿಂದ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ಕಲಿತ ಅವರು ಇತರ ಕಲಾವಿದರನ್ನು ನೋಡಿಯೇ ಮುಂದೆ ತಮ್ಮ ನೃತ್ಯಾಭಿನಯವನ್ನು ವಿಸ್ತರಿಸಿಕೊಂಡಿದ್ದರು. ಕುಂಡಾವು ಮೇಳದಲ್ಲಿ ಅರುವ ಕೊರಗಪ್ಪ ಶೆಟ್ಟರ ಸಾಂಗತ್ಯದಲ್ಲಿ ಇನ್ನಷ್ಟು ಪಕ್ವಗೊಂಡರು. ಮುಂದೆ ಕರ್ನಾಟಕ ಮೇಳವೊಂದರಲ್ಲೇ 36 ವರ್ಷಗಳ ಕಾಲ ವೇಷಧಾರಿಯಾಗಿ ಮಿಂಚಿದರು. ದಾಮೋದರ ಮಂಡೆಚ್ಚ, ಅಳಿಕೆ, ಬೋಳಾರ, ಮಂಕುಡೆ, ಸಾಮಗ, ಕ್ರಿಶ್ಚನ್ ಬಾಬು, ಮಿಜಾರು, ಕೋಳ್ಯೂರು ಮೊದಲಾದ ದಿಗ್ಗಜರ ಒಡನಾಟ ಹೊಂದಿದ್ದರು. ಕಲ್ಲಾಡಿ ಮನೆತನದ ಮೂವರು ಯಜಮಾನರೊಂದಿಗೆ ಕೆಲಸ ಮಾಡಿದ ಅವರು, ಕಲ್ಲಾಡಿ ಕೊರಗ ಶೆಟ್ಟರಿಂದಾಗಿ ಮಂಗಳೂರಿನ ಜಪ್ಪಿನಮೊಗರಿನಲ್ಲಿ ನೆಲೆಸಿ ಜಪ್ಪು ದಯಾನಂದ ಶೆಟ್ಟಿ ಎಂದು ಹೆಸರು ಪಡೆದರು.
Advertisement
ಖಚಿತ ಲಯ ಜ್ಞಾನ, ಲಾಲಿತ್ಯಪೂರ್ಣ ನಾಟ್ಯ, ಭಾವನಾತ್ಮಕ ಅಭಿನಯಕ್ಕೆ ಹೆಸರಾದ ದಯಾನಂದ ಶೆಟ್ಟರು, ಪುಂಡು ವೇಷ, ಸ್ತ್ರೀ ವೇಷ, ಇದಿರು ವೇಷ, ಹಾಸ್ಯ, ಬಣ್ಣ, ಹೀಗೆ ಯಕ್ಷರಂಗದ ವಿಭಿನ್ನ ವೇಷಗಾರಿಕೆಯಲ್ಲಿ ಪಳಗಿದ ಕಲಾವಿದ. ಅಭಿಮನ್ಯು, ಬಬ್ರುವಾಹನ, ಪರಶುರಾಮ, ಅಶ್ವತ್ಥಾಮ, ವಿಕರ್ಣ, ಸುದೇವ, ನಕ್ಷತ್ರಿಕ, ಜಲಂಧರ, ಹಿರಣ್ಯಾಕ್ಷ, ಇಂದ್ರಜಿತು, ರಕ್ತಬೀಜ, ಋತುಪರ್ಣ, ದಾರಿಗಾಸುರ ಮುಂತಾದ ಪೌರಾಣಿಕ ಪಾತ್ರಗಳು ಅವರಿಗೆ ಹೆಸರು ತಂದುಕೊಟ್ಟಿವೆ. ತುಳು ಪ್ರಸಂಗಗಳಲ್ಲಿ ದೇವುಪೂಂಜ, ಬಬ್ಬು, ಚೆನ್ನಯ, ಕಾಂತಣ, ಅತಿಕಾರಿಯಂತಹ ಪಾತ್ರಗಳಲ್ಲದೆ ದೇಯಿ, ಕಿನ್ನಿದಾರು, ಭಾಗೀರಥಿ, ಚೇದಿರಾಣಿ, ನೀಲು ಮೊದಲಾದ ಸ್ತ್ರೀ ಪಾತ್ರಗಳನ್ನೂ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.
Related Articles
ಹಿಂದೆ ಎಲ್ಲ ಯಕ್ಷಗಾನ ಎಂದರೆ ಅದು ಜಾತ್ರೆಯಂತೆ ಇರುತ್ತಿತ್ತು. ಆಗ “ಕೇಳಿ ಬೊಟ್ಟುನ’ ಎನ್ನುವ ಸಂಪ್ರದಾಯವಿತ್ತು. ಎತ್ತರದ ಸ್ಥಳಕ್ಕೆ ಹೋಗಿ ಅಲ್ಲಿ ಅಬ್ಬರ ತಾಳದಲ್ಲಿ ಚೆಂಡೆ ಬಡಿಯುತ್ತಿದ್ದರು. ಊರಿನಲ್ಲಿ ಯಕ್ಷಗಾನ ಇದೆ ಎಂದು ಅದರಿಂದ ತಿಳಿಯುತ್ತಿತ್ತು. ಆ ಶಬ್ದಕ್ಕೆ ನಾವು ಮಕ್ಕಳೆಲ್ಲ ಸೇರಿ ಕುಣಿಯುತ್ತಿದ್ದೆವು. ಚೆಂಡೆ ಬಡಿಯುತ್ತಿದ್ದ ವ್ಯಕ್ತಿಯೊಬ್ಬರು ಇದನ್ನು ನೋಡಿ, ನನ್ನನ್ನು ಕರೆದು “ಯಕ್ಷಗಾನಕ್ಕೆ ಬಾ’ ಎಂದು ಕರೆದರು. ಹಾಗಾಗಿ ವೇಣೂರು ಮೇಳಕ್ಕೆ ನಾನು ಸೇರ್ಪಡೆಗೊಂಡೆ. ಮರುದಿನವೇ ವೇಷ ಮಾಡಿದೆ. ಕಟ್ಟು ವೇಷ ಹಾಕಿ ರಂಗಕ್ಕೆ ಕಳುಹಿಸಿದರು. ಜತೆಗಾರನನ್ನು ನೋಡಿ ನಾನೂ ಕುಣಿದೆ.
Advertisement
ಆರಂಭಿಕ ಯಕ್ಷ ಜೀವನ ಹೇಗಿತ್ತು?ವೇಣೂರು ಮೇಳದಲ್ಲಿ ಸಣ್ಣ ಪಾತ್ರ ಮಾಡಲು ತೊಡಗಿದೆ. ವಿಟ್ಲ ಬಳಿಯ ಉಕ್ಕುಡದಲ್ಲಿ ವೇಣೂರು ಮೇಳದ ಆಟ ನಡೆಯುತ್ತಿತ್ತು. ಪಾತ್ರ ಮುಗಿದ ಬಳಿಕ ಮರದ ಬುಡದಲ್ಲಿ ಕುಳಿತವನಿಗೆ ಹಾಗೇ ನಿದ್ದೆ ಬಂತು. ಯಕ್ಷಗಾನದವರು ಬೆಳಗ್ಗೆ ಎತ್ತಿನಗಾಡಿಗೆ ಲೋಡು ಮಾಡಿ ಹೊರಟೇ ಹೋದರು. ನನಗೆ ಎಚ್ಚರ ಆಗುವಾಗ ಮಧ್ಯಾಹ್ನವಾಗಿತ್ತು. ಸ್ಥಳದಲ್ಲಿ ಯಾರೂ ಇಲ್ಲ. ಎಲ್ಲಿಗೆ ಹೋಗಿದ್ದಾರೆ ಎಂದು ಗೊತ್ತಿಲ್ಲ. ನನ್ನಷ್ಟಕ್ಕೇ ನಡೆದುಕೊಂಡು ಹೋದೆ. ದಾರಿಯಲ್ಲಿ ಗ್ಯಾಸ್‌ಲೈಟ್ ಹಿಡಿದುಕೊಂಡು, ತಲೆಯಲ್ಲಿ ಬುಟ್ಟಿ ಹೊತ್ತುಕೊಂಡು ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದರು. ಅವರು ಪೆರುವಾಯಿ ಜಾತ್ರೆಗೆ ಬರ್ತೀಯಾ ಎಂದು ಕೇಳಿದರು. “ಆಯಿತು’ ಎಂದು ಹೇಳಿ ಅವರ ಗ್ಯಾಸ್‌ಲೈಟ್ ಹಿಡಿದುಕೊಂಡು ಹೊರಟೆ. ಅಲ್ಲಿಗೆ ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲ ಬಂದಿದ್ದರು. ಸುಬ್ರಾಯ ಮಾರ್ಲ ಎನ್ನುವವರು ನನ್ನನ್ನು ನೋಡಿ ನೀನ್ಯಾರು ಎಂದು ಪ್ರಶ್ನಿಸಿದರು. ಅವರಿಗೆ ನನ್ನ ಕಥೆ ವಿವರಿಸಿದೆ. ನನ್ನ ಮನೆಗೆ ಬರುತ್ತೀಯಾ ಎಂದು ಕೇಳಿದರು. ಅವರ ಜತೆ ಅವರ ಮನೆಗೆ ಹೋಗಿ ಅಲ್ಲಿಯೇ ಇದ್ದೆ. ಒಂದು ದಿನ ಲಾರಿಯೊಂದರಲ್ಲಿ ಹೋಗುತ್ತಿದ್ದವರು “ಮಾರ್ಪಿನಡ್ಕದಲ್ಲಿ ಆಟ’ ಎಂದು ಕೂಗಿಕೊಂಡು ಹೋಗುತ್ತಿದ್ದುದು ಕೇಳಿಸಿತು. ಅದನ್ನು ಕೇಳಿ ಅಲ್ಲಿಂದ ಸೀದಾ ಹೊರಟೆ. ದಾರಿ ಗೊತ್ತಿಲ್ಲ, ಪೆರುವಾಯಿಯಿಂದ ಬದಿಯಡ್ಕಕ್ಕೆ ಹೋಗಿ ಅಲ್ಲಿಂದ ನಡೆದುಕೊಂಡೇ ಮಾರ್ಪಿನಡ್ಕಕ್ಕೆ ಹೋಗಿ ಸಂಜೆ ತಲುಪಿದೆ. ಅಲ್ಲಿ ಹೋದಾಗ ಕುಂಡಾವು ಮೇಳದ ಯಕ್ಷಗಾನವಾಗಿತ್ತು. ಅಲ್ಲಿ ಈಸಿ ಚೆಯರ್ ಸೆಟ್ ಮಾಡಲು ಸೇರಿದೆ. ಮರುದಿನವೂ ಅಲ್ಲಿಯೇ ಯಕ್ಷಗಾನ ಇತ್ತು. ಬೆಳಗ್ಗೆ ಆಟ ಮುಗಿದ ಬಳಿಕ ಚೌಕಿಗೆ ಹೋಗಿ ನಿಂತೆ. ಅಲ್ಲಿ ಕೆಲವರ ಪರಿಚಯ ಇತ್ತು. ನನ್ನ ಕಥೆ ಹೇಳಿದೆ. ಅವರು ಮೇಳದಲ್ಲಿ ನಿಲ್ಲುವಂತೆ ಹೇಳಿದರು. ಆಗ ಕುಂಡಾವು ಮೇಳದಲ್ಲಿ ಕಲ್ಲಾಡಿ ಶೀನ ಶೆಟ್ಟಿ ಅವರು ಮ್ಯಾನೇಜರ್ ಆಗಿದ್ದರು. ಬಳಿಕ ಮನೆಯವರಿಗೆಲ್ಲ ತಿಳಿಸಿ ಮೇಳದಲ್ಲಿಯೇ ಕಲಾವಿದನಾಗಿ ಸೇರಿದೆ. ಕಲ್ಲಾಡಿ ಕೊರಗ ಶೆಟ್ಟಿಯವರು ಸೂರಿಕುಮೇರು ಗೋವಿಂದ ಭಟ್ಟರ ಬಳಿ ಕಳುಹಿಸಿ ಯಕ್ಷಗಾನದ ನಾಟ್ಯಾಭ್ಯಾಸ ಮಾಡುವಂತೆ ತಿಳಿಸಿದರು. ಬಳಿಕ ಕೂಡ್ಲು ಮೇಳಕ್ಕೆ ಸೇರಿದೆ. ಅಲ್ಲಿಯೂ 3 ವರ್ಷ ಕೆಲಸ ಮಾಡಿದೆ. ಬಳಿಕ ಕರ್ನಾಟಕ ಮೇಳಕ್ಕೆ ಸೇರಿದೆ. ನಿಮ್ಮ ಯಾವೆಲ್ಲ ಪಾತ್ರಗಳಿಗೆ ಮನ್ನಣೆ ಸಿಕ್ಕಿದೆ?
ಹಿರಿಯ ಕಲಾವಿದ ಚೌಕಿಗೆ ಬರುವಾಗ ಇತರ ಕಲಾವಿದರು ಭಯ ಭಕ್ತಿಯಿಂದ ಕಾಣುತ್ತಿದ್ದರು. ನಾನು ಸಮಯ ಸಿಕ್ಕಾಗಲೆಲ್ಲ ಹಿರಿಯ ಕಲಾವಿದರ ಪಾತ್ರ ನೋಡಿ, ಅವರು ಹೇಗೆ ಪಾತ್ರ ಮಾಡುತ್ತಾರೆ ಎಂದು ನೋಡುತ್ತಿದ್ದೆ. ಇದು ಕಲಿಯಲು ಮತ್ತು ಅವರ ಅನಂತರ ಆ ಪಾತ್ರಗಳನ್ನು ನಿರ್ವಹಿಸಲು ನನಗೆ ಅವಕಾಶ ಲಭಿಸಲು ಸಹಕಾರಿಯಾಯಿತು. ಚೆನ್ನಯ, ಕೋರªಬ್ಬು ನನ್ನ ಅಚ್ಚುಮೆಚ್ಚಿನ ಪಾತ್ರಗಳು. “ಗೋಣತಂಕರೆ’ ಪ್ರಸಂಗದ “ಗೋಣತಂಕರ’ನ ಪಾತ್ರ ಜನಮನ್ನಣೆ ಪಡೆಯಿತು. ಕೋಟಿಯ ಪಾತ್ರವನ್ನೂ ಮಾಡುತ್ತಿದ್ದೆ, ಆದರೆ ನನಗೆ ಹೆಚ್ಚು ಪ್ರಸಿದ್ಧಿ ತಂದಿರುವುದು ಚೆನ್ನಯನ ಪಾತ್ರ. ಯಕ್ಷಗಾನ ಕ್ಷೇತ್ರದಲ್ಲಿನ ಸದ್ಯದ ಬೆಳವಣಿಗೆಗಳ ಬಗ್ಗೆ ನಿಮ್ಮ ಅಭಿಪ್ರಾಯ?
ಹಿಂದೆ ಯಕ್ಷಗಾನಕ್ಕೆ ಅದರದ್ದೇ ಆದ ತೂಕವಿತ್ತು. ಆದರೆ ಇಂದು ಎಲ್ಲವೂ ಕಳೆದು ಹೋಗಿದೆ. ಈಗಿನ ಕಲಾವಿದರು ಹಗಲು ಕೆಲಸ ಮಾಡಿ, ರಾತ್ರಿ ಯಕ್ಷಗಾನದಲ್ಲಿ ವೇಷ ಹಾಕುತ್ತಾರೆ. ರಾತ್ರಿಯಾಗುವಾಗ ಬಂದು ಬಣ್ಣ ಹಚ್ಚಿ, ಪಾತ್ರ ನಿರ್ವಹಿಸಿ, ರಂಗಸ್ಥಳದಲ್ಲಿ ಎರಡು ಮಾತು ಹೇಳಿ ತಮ್ಮ ಗಾಡಿ ಹಿಡಿದುಕೊಂಡು ಹೋಗುತ್ತಾರೆ. ಅನಂತರ ಪ್ರಸಂಗದಲ್ಲಿ ಏನಾಯಿತು ಎನ್ನುವ ಯೋಚನೆಯೇ ಅವರಿಗೆ ಇರುವುದಿಲ್ಲ. ನಾವು ನಮ್ಮ ವೇಷ ತೆಗೆದ ಬಳಿಕ ಇತರ ಕಲಾವಿದರ ಅಭಿನಯವನ್ನು ವೀಕ್ಷಿಸುತ್ತ, ಮಾತುಗಾರಿಕೆಯನ್ನೂ ಕೇಳುತ್ತಿದ್ದೆವು. ಯಕ್ಷಗಾನ ಮಾತುಗಾರಿಕೆ ಹಾದಿ ತಪ್ಪುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆಯಲ್ಲ?
ರಂಗದ ನಾಲ್ಕು ಕಂಬದೊಳಗೆ ಏನು ಮಾತನಾಡಬೇಕೋ ಅದನ್ನೇ ಮಾತನಾಡಬೇಕು. ಆದರೆ ಈಗ ಹೇಳುವವರು ಕೇಳುವವರು ಯಾರೂ ಇಲ್ಲ. ದಾಮೋದರ ಮಂಡೆಚ್ಚರು, ವಿಟuಲ ಶೆಟ್ರಾ ಮೊದಲಾದ ಹಿರಿಯ ಕಲಾವಿದರು ಮರುದಿನ ನಮ್ಮನ್ನು ಕರೆದು ಎಚ್ಚರಿಕೆ ನೀಡುತ್ತಿದ್ದರು. ಅಷ್ಟು ಕಟ್ಟುನಿಟ್ಟಾಗಿತ್ತು. ಇಂದಿನ ಹಾಸ್ಯ ಕಲಾವಿದರು ಏನು ಹಾಸ್ಯ ಮಾಡುತ್ತಾರೆ ಎಂದು ಅವರಿಗಷ್ಟೇ ಗೊತ್ತು. ಮಿಜಾರು ಅಣ್ಣಪ್ಪ, ಪುಳಿಂಚರಂತಹ ಹೆಸರಾಂತ ಕಲಾವಿದರು ನೈಜ ಹಾಸ್ಯವನ್ನು ರಂಗದ ಮೇಲೆ ತೋರ್ಪಡಿಸುತ್ತಿದ್ದರು. ಅಣ್ಣಾ ಎನ್ನುವ ಪದವೂ ಹಾಸ್ಯಪೂರ್ಣವಾಗಿರುತ್ತಿತ್ತು. ಹಾಸ್ಯದಲ್ಲಿಯೂ ಪದ ಬಳಕೆ ಮಾಡುವಾಗ ಎಚ್ಚರ ವಹಿಸಬೇಕಾಗಿತ್ತು. ಕೆಳ ಮಟ್ಟದ ಪದಗಳನ್ನು ಬಳಕೆ ಮಾಡುವಂತೆಯೂ ಇರಲಿಲ್ಲ. ಯಕ್ಷ ಜೀವನ ಸಂತೃಪ್ತಿ ಕೊಟ್ಟಿದೆಯೇ?
ಯಕ್ಷಜೀವನ ಖುಷಿ ಕೊಟ್ಟಿದೆ, ಮರ್ಯಾದೆಯ ಜತೆಗೆ ಮನಸ್ಸಿಗೆ ಸಂತಸ ನೆಮ್ಮದಿ ತಂದು ಕೊಟ್ಟಿದೆ. ಅಂದು ಮಾಡಿದ ಸಾಧನೆಯಿಂದ ಜನರು ಇಂದೂ ನೆನಪಿಟ್ಟುಕೊಂಡು ಗೌರವಿಸುತ್ತಾರೆ. “ಕರ್ನಾಟಕ ಮೇಳದ ಹುಡುಗ’ ಎಂದು ಜನರು ಕರೆಯುತ್ತಿದ್ದಾಗ ಹೆಮ್ಮೆ ಅನ್ನಿಸುತ್ತಿತ್ತು. ಮಕ್ಕಳು, ಮೊಮ್ಮಕ್ಕಳೂ ಯಕ್ಷಗಾನ ಕಲಿತಿದ್ದಾರೆ. ಆ ಮೂಲಕ ಯಕ್ಷ ಪರಂಪರೆ ಮುಂದುವರಿದಿದೆ. ಹೆಣ್ಣು ಮಕ್ಕಳಿಗೂ ಯಕ್ಷಗಾನ ಕಲಿಸಿದ್ದಕ್ಕೆ ಹೆಮ್ಮೆಯಿದೆ. ವೇಷ-ಭೂಷಣ, ಕುಣಿತದಲ್ಲಿನ ಬದಲಾವಣೆಗಳು ಯೋಗ್ಯವೇ?
ಇಂದು ಪಾತ್ರಧಾರಿಗಳು ತಮಗೆ ಬೇಕಾದಂತೆ ಬಟ್ಟೆಯನ್ನು ಧರಿಸುತ್ತಾರೆ. ಎಲ್ಲ ಪಾತ್ರಗಳು ಕುಣಿಯುವಂತಿಲ್ಲ. ಇಂತಿಷ್ಟೇ ಕುಣಿಯಬೇಕು ಎಂದಿದೆ. ಕುಣಿಯಲೆಂದೇ ಇರುವ ಪಾತ್ರ ಅಭಿಮನ್ಯು. ಬಬ್ರುವಾಹನನಿಗೆ ಅಭಿಮನ್ಯುವಿನಷ್ಟು ಕುಣಿಯಲು ಇಲ್ಲ. ಇಂದು ಎಲ್ಲ ಪಾತ್ರಗಳು ಕುಣಿಯಲು ಆರಂಭಿಸಿವೆ. ಸೀತೆ, ದಮಯಂತಿ ಪಾತ್ರಧಾರಿಗಳೂ ಕುಣಿಯುವುದನ್ನು ಕಾಣಬಹುದಾಗಿದೆ. ರಕ್ಕಸ ಪಾತ್ರಕ್ಕೂ ಅದರದ್ದೇ ಆದ ಘನತೆ ಇದೆ. ಗಾನ- ವೈಭವ ಮಾಡಿ, ಆದರೆ ಅದರ ಶೈಲಿಯನ್ನು ಯಕ್ಷಗಾನಕ್ಕೆ ತರುವುದು ಬೇಡ. ತೆಂಕಿನ ಸ್ತ್ರೀ ವೇಷಗಳು ಬಡಗಿನ ಸ್ತ್ರೀ ವೇಷಗಳನ್ನು ಅನುಕರಿಸುತ್ತಿವೆ. ತೆಂಕಿನ ಶೈಲಿ ಎನ್ನುವಾಗ ಸಂಪೂರ್ಣವಾಗಿ ತೆಂಕಿನಂತೆಯೇ ಇರಬೇಕು. ಭರತ್ ಶೆಟ್ಟಿಗಾರ್