ಉಡುಪಿ: ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿದ್ಯಾರ್ಥಿಗಳಾದ ನಿಧಿ ಹಾಗೂ ಭೂಮಿಕಾ ಸಹೋದರಿಯರಿಗೆ ಬ್ರಹ್ಮಾವರ ತಾಲೂಕಿನ ಹೇರಾಡಿಯ ಸಂಕಾಡಿಯಲ್ಲಿ ಪಣಂಬೂರಿನ ಎಂಜಿನಿಯರ್ ವಾಸುದೇವ ಐತಾಳ್ ಅವರು ತಮ್ಮ ಹುಟ್ಟುಹಬ್ಬದ ಸವಿನೆನಪಿನಲ್ಲಿ ಪ್ರಾಯೋಜಿಸಿದ ನೂತನ ಮನೆ “ಕೃಪಾರಂಗ’ವನ್ನು ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು.
ಪಣಂಬೂರು ವಾಸುದೇವ ಐತಾಳ್, ಮೀನಾಕ್ಷಿ ವಿ. ಐತಾಳ ದಂಪತಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಐತಾಳ್, ಕಲಾರಂಗ ವಿಶ್ವಾಸಾರ್ಹತೆ ಮತ್ತು ಸಮಾಜ ಪ್ರೀತಿ ಯಿಂದ ಕೆಲಸ ಮಾಡುವ ಅನನ್ಯ ಸಂಘಟನೆ. ಸಹಾಯ ಪಡೆದ ವಿದ್ಯಾರ್ಥಿ ಗಳು ಪ್ರತ್ಯರ್ಪಣದಿಂದ ಸಮಾಜದ ಋಣ ತೀರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಯಕ್ಷಗಾನ ಕಲಾರಂಗದ ಕಾರ್ಯಕರ್ತರ ನಿಸ್ಪೃಹ ಸಮಾಜಪರ ಕೆಲಸ ಶ್ಲಾಘನಾರ್ಹ ಎಂದರು.
ಸಂಸ್ಥೆಯ ಉಪಾಧ್ಯಕ್ಷರಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ, ನಿವೃತ್ತ ಪ್ರಾಂಶುಪಾಲೆ ತಾರಾ, ಉಪನ್ಯಾಸಕಿ ಅನುರಾಧಾ, ನಿವೃತ್ತ ಬ್ಯಾಂಕ್ ಉದ್ಯೋಗಿಗಳಾದ ನರಸಿಂಹ ಮೂರ್ತಿ, ಸಂಸ್ಥೆಯ ಕಾರ್ಯಕರ್ತ ರಾದ ಬಿ. ಭುವನಪ್ರಸಾದ ಹೆಗ್ಡೆ, ವಿಜಯಕುಮಾರ್ ಮುದ್ರಾಡಿ, ಅನಂತರಾಜ್ ಉಪಾಧ್ಯಾಯ, ಎ. ಅಜಿತ್ ಕುಮಾರ್, ಡಾ| ಪೃಥ್ವಿರಾಜ್, ಡಾ| ರಾಜೇಶ ನಾವಡ, ಗಣಪತಿ ಭಟ್, ವಿನೋದಾ ಎಂ. ಕಡೆಕಾರ್, ಜಯಶ್ರೀ, ಎಚ್.ಎನ್. ಶೃಂಗೇಶ್ವರ, ವಿಶ್ವನಾಥ ಪ್ರಾಕ್ತನ ವಿದ್ಯಾಪೋಷಕ್ ವಿದ್ಯಾರ್ಥಿಗಳಾದ ಸುಶ್ಮಾ, ಕಲ್ಪಶ್ರೀ, ಚೆನ್ನಬಸವ ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು. ನಾರಾಯಣ ಎಂ. ಹೆಗ್ಡೆ ವಂದಿಸಿದರು.
ವಿದ್ಯಾಪೋಷಕ್ 55ನೇ ಮನೆ
ಮನೆಯ ಮೇಲೆ ಮರ ಬಿದ್ದು ಸಂಪೂರ್ಣ ಭಗ್ನಗೊಂಡ ಮನೆಯನ್ನು 6 ಲಕ್ಷ ರೂ. ವೆಚ್ಚದಲ್ಲಿ, ಕೇವಲ 80 ದಿನಗಳಲ್ಲಿ ನಿರ್ಮಿಸಿ ಹಸ್ತಾಂತರಿಸಿರುವುದು ಸಂಸ್ಥೆಯ ಮನೆ ನಿರ್ಮಾಣದ ಚರಿತ್ರೆಯಲ್ಲಿ ಹೊಸ ದಾಖಲೆಯಾಗಿದೆ. ಇದು ಕಲಾರಂಗ ದಾನಿಗಳ ನೆರವಿನಿಂದ ನಿರ್ಮಿಸಿದ 55ನೆಯ ಮನೆಯಾಗಿದೆ ಎಂದು ಮುರಲಿ ಕಡೆಕಾರ್ ತಿಳಿಸಿದ್ದಾರೆ.