Advertisement

ಪೂಂಜರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ

06:51 PM May 09, 2019 | mahesh |

ಯಕ್ಷಗಾನ ಕಲಾರಂಗ ಪ್ರತಿವರ್ಷ ಮೇ ತಿಂಗಳಲ್ಲಿ ಯಕ್ಷಗಾನ ವಿದ್ವಾಂಸರಿಗೆ ನೀಡುವ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ನೆನಪಿನ ಯಕ್ಷಗಾನ ಕಲಾರಂಗ ಪ್ರಶಸ್ತಿ ವಿಶಿಷ್ಟವಾದುದು. ಪ್ರಶಸ್ತಿ ಪುರಸ್ಕೃತರ ಕುರಿತು ಕಾರ್ಯಕ್ರಮ ಮಾಡಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಮೇ 12ರಂದು ಎಂ.ಜಿ.ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಜರಗಲಿದೆ. ಅಂದು ಪ್ರಶಸ್ತಿ ಸ್ವೀಕರಿಸಲಿರುವವರು ಬೊಟ್ಟಿಕೆರೆ ಪುರುಷೋತ್ತಮ ಪೂಂಜ.

Advertisement

ಪೂಂಜರು ಯಕ್ಷಗಾನದ ಸರ್ವಾಂಗವನ್ನು ಬಲ್ಲವರು. ಯಕ್ಷಗಾನ ಗುರುಗಳಾಗಿ ಹಲವರನ್ನು ಸಿದ್ಧ ಪಡಿಸಿದವರು. ಪ್ರಸ್ತುತ ಕಟೀಲು ಒಂದನೇ ಮೇಳದಲ್ಲಿ ಪ್ರಧಾನ ಭಾಗವತರು. ಕಪೂಂಜರಿಗೆ ಈಗ 66ರ ಹರೆಯ. 45 ವರ್ಷಗಳ ಹಿಂದೆಯೇ ಬಿ.ಎಸ್ಸಿ ಪದವಿಧರರಾಗಿರುವ ಇವರು ಯಕ್ಷಗಾನವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಲು ಯಕ್ಷಗಾನದ ಮೇಲಿರುವ ಆಕರ್ಷಣೆಯೇ ಕಾರಣ. ಆರನೇ ತರಗತಿಯಿಂದಲೆ ಯಕ್ಷಗಾನ ವೇಷ ಹಾಕುತ್ತಾ ಬಂದ ಇವರು ಇದನ್ನು ವೃತ್ತಿಯಾಗಿ ಸ್ವೀಕರಿಸಿದ್ದು ಉಪ್ಪಳದ ಭಗವತೀ ಮೇಳದಲ್ಲಿ. ಅಲ್ಲಿ ಮೂರು ವರ್ಷ ವೇಷಧಾರಿಯಾಗಿ ಕಲಾಸೇವೆ ಗೈದಿದ್ದಾರೆ. ಆಮೇಲೆ ನಾಲ್ಕು ವರ್ಷ ಮುಂಬಯಿಯಲ್ಲಿ ಭಾಗವತಿಕೆ ಮಾಡಿದರು. ಊರಿಗೆ ಬಂದು ಪುತ್ತೂರು ಮೇಳದಲ್ಲಿ 2 ವರ್ಷ, ಕರ್ನಾಟಕ ಮೇಳದಲ್ಲಿ 5 ವರ್ಷ ತಿರುಗಾಟ ಮಾಡಿ ಮೂರು ದಶಕಗಳಿಂದ ಕಟೀಲು ಮೇಳದಲ್ಲಿ ಭಾಗವತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪೂಂಜರು ತುಳು ಮತ್ತು ಕನ್ನಡದಲ್ಲಿ ಸುಮಾರು 35 ಪ್ರಸಂಗಗಳನ್ನು ರಚಿಸಿದ್ದಾರೆ. ಉಭಯ ಕುಲ ಬಿಲ್ಲೋಜ, ನಳಿನಾಕ್ಷ ನಂದನೆ, ಮಾನಿಷಾದ, ಕ್ಷಾತ್ರಮೇಧ, ರಾಜಾ ದ್ರುಪದ, ಕುಡಿಯನ ಕೊಂಬಿರೆಳ್‌, ಕುಡಿಯನ ಕಣ್‌¡ ಮೊದಲಾದವು ರಂಗದಲ್ಲಿ ಯಶಸ್ವಯಾದ ಪ್ರಸಂಗಗಳು. ಭಾಗವತರಾಗಿ ಸಮರ್ಥ ನಿರ್ದೇಶನದಲ್ಲಿ ಪ್ರಸಂಗ ಕೊಂಡು ಹೋಗುವ ಕಲೆ ಅವರಿಗೆ ಕರಗತ. ರಂಗ ತಂತ್ರವನ್ನು ಚೆನ್ನಾಗಿ ಬಲ್ಲವರು. ಭಾಗವತಿಕೆಯೊಂದಿಗೆ ಚಂಡೆ ಮದ್ದಳೆ ನುಡಿಸುವಲ್ಲೂ ಪರಿಣಿತರು.

ಗುರುಗಳಾಗಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವಲ್ಲಿ ಸಿದ್ಧಹಸ್ತರು. ಆರಂಭದಲ್ಲಿ ವೇಷಧಾರಿಯಾಗಿ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಿದ ಅನುಭವ ಮಕ್ಕಳಿಗೆ ಹೆಜ್ಜೆಗಾರಿಕೆ ಅಭಿನಯ ಪರಿಣಾಮಕಾರಿಯಾಗಿ ಹೇಳಿ ಕೊಡುವಲ್ಲಿ ಅನುಕೂಲವಾಗಿದೆ. ಯಕ್ಷಗಾನ ಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸುವಷ್ಟು ಪ್ರೌಢವಾಗಿ ಛಂದಸ್ಸನ್ನು ಬಲ್ಲವರು. ಅದು ಅವರ ಯಕ್ಷಗಾನ ಕೃತಿಗಳ ಗುಣವನ್ನು ಹೆಚ್ಚಿಸಿದೆ.

ಯಕ್ಷಗಾನಕ್ಕೆ ಸಮರ್ಪಣಾ ಭಾವದಿಂದ ಕೊಡುಗೆ ನೀಡುತ್ತಿರುವ ಬೊಟ್ಟಿಕೆರೆಯವರು ಈ ಕ್ಷೇತ್ರ ಕಂಡ ಅಪೂರ್ವ ಕಲಾವಿದ. ಯಕ್ಷಗಾನದ ಎಲ್ಲ ಅಂಗಗಳನ್ನು ಬಲ್ಲ ಅಪರೂಪದ ಕಲಾ ಸಾಧಕ.

Advertisement

ಪ್ರೊ| ನಾರಾಯಣ ಎಂ. ಹೆಗ್ಡೆ

Advertisement

Udayavani is now on Telegram. Click here to join our channel and stay updated with the latest news.

Next