ಉಡುಪಿ: ಆಧುನಿಕ ಮಾಧ್ಯಮಗಳಿಂದಾಗಿ ಹಲವಾರು ಕಲಾ ಪ್ರಕಾರಗಳು ನೆಲಕಚ್ಚಿವೆ. ಯಕ್ಷ ಗಾನ ಮಾತ್ರ ಉಳಿದು ಉಚ್ಛಾಯ ಸ್ಥಿತಿಯಲ್ಲಿದೆ ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನುಡಿದರು.
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮೇ 21ರಿಂದ 27ರ ವರೆಗೆ ಜರಗ ಲಿರುವ ಉಡುಪಿ ಯಕ್ಷಗಾನ ಕಲಾರಂಗ ಆಯೋಜನೆಯ ತಾಳ ಮದ್ದಲೆ ಸಪ್ತಾಹವನ್ನು ಶ್ರೀಪಾದರು ಸೋಮವಾರ ಉದ್ಘಾಟಿಸಿ ಆಶೀರ್ವ ಚನ ನೀಡಿದರು. ಸಪ್ತಾಹದಿಂದ ಇನ್ನೇಳು ದಿನ ಉಡುಪಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ ಎಂದು ಅವರು ನುಡಿದರು.
ಅದಮಾರು ಮಠದ ಶ್ರೀ ಈಶಪ್ರಿಯತೀರ್ಥರು ಆಶೀರ್ವಚನ ನೀಡಿ, ಮಾತುಗಾರಿಕೆ ಕಲಿಯಲು ತಾಳ ಮದ್ದಲೆ ಉತ್ತಮ ವೇದಿಕೆ ಎಂದರು.
ಸಿಂಡಿಕೇಟ್ ಬ್ಯಾಂಕ್ ಜಿಎಂ ಭಾಸ್ಕರ ಹಂದೆ, ಮಂಗಳೂರು ವಿ.ವಿ. ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ| ಧನಂಜಯ ಕುಂಬ್ಳೆ, ಉಡುಪಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ| ವರದೇಶ್ ಹಿರೇಗಂಗೆ, ಯುಎಸ್‌ಎ ಯಕ್ಷಗಾನ ಕಲಾವೃಂದದ ಪಿ. ವಾಸುದೇವ ಐತಾಳ ಶುಭಾಶಂಸನೆಗೈದರು.
ಎಸ್.ವಿ. ಭಟ್, ಗಂಗಾಧರ ರಾವ್, ಮುರಲಿ ಕಡೆಕಾರ್ ಉಪಸ್ಥಿತರಿದ್ದರು. ಚಿನ್ನದ ಗೋಪುರಕ್ಕೆ ದೇಣಿಗೆ ನೀಡಿದ ದಾನಿಗೆ ಶ್ರೀಪಾದರು ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು. ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್ ಸ್ವಾಗತಿಸಿ, ನಾರಾಯಣ ಎಂ. ಹೆಗಡೆ ನಿರೂಪಿಸಿದರು.