Advertisement

Yakshagana ಕಟ್ಟು ಮೀಸೆಯ ಔಚಿತ್ಯ

12:10 AM Dec 03, 2023 | Team Udayavani |

ಮೀಸೆ ಪುರುಷರಿಗೆ ಪೌರುಷದ ಲಕ್ಷಣ. ಯಕ್ಷಗಾನದಲ್ಲಿ ನಾವು ನೋಡುವುದು ಅಲೌಕಿಕ ಲೋಕದ ರಾಜ ಮಹಾರಾಜರನ್ನು. ಈ ಮಹಾರಾಜರು ಅವರ ಪ್ರಜೆಗಳಿಗೆ ಸಿಂಹಪ್ರಾಯರು. ಸಿಂಹದ ಮೀಸೆ ಹೇಗಿರುತ್ತದೆ! ಮೂಗಿನ ಕೆಳಗೆ ಒಂದು ಗಂಟುರುಳಿನಂತಿದ್ದು ಮೀಸೆ ಎರಡು ಕಡೆಗಳಲ್ಲಿ ಕರ್ಣಪಟಲದವರೆಗೆ ಚಾಚಿ ರುತ್ತದೆ. ಒಂದು ನೇರ ರೇಖೆಯಂತೆ ಕಾಣುತ್ತದೆ. ಯಕ್ಷಗಾನದ ಪುರುಷ ವೇಷ ಗಳಿಗೆ ಇದನ್ನೇ ಬಳಸುವುದು ರೂಢಿ. ಅಲ್ಲದೆ ಪ್ರಸಾಧನ ತಜ್ಞರು ಹೇಳುವಂತೆ ಕಟ್ಟು ಮೀಸೆಯು ಚಪ್ಪಟೆ ಕಪೋಲಗಳು ಉಬ್ಬಿ ಬಂದಂತೆ ಕಾಣುತ್ತದೆ. ಇದು ಇನ್ನೊಂದು ವಿಶೇಷ. ಆ ಮೂಲಕ ಸಿಂಹದ ಗಂಭೀರತೆಯನ್ನು ಹಾಗೂ ರಾಜ ಮಹಾ ರಾಜರ ಪೌರುಷದ ಸಂಕೇತವನ್ನು ಈ ಕಟ್ಟು ಮೀಸೆ ಪ್ರತಿಪಾದಿಸುತ್ತದೆ.

Advertisement

ಕಟ್ಟು ಮೀಸೆ ಕಟ್ಟಿದ ಅನಂತರ ಅದು ಜಾರುತ್ತದೋ ಎಂಬ ಭಾಸ ಮತ್ತು ಮಾತಾಡಲು ಆತಂಕ ಎನ್ನುವವರು ಇದ್ದಾರೆ. ಆದರೆ ಅಭ್ಯಾಸದ ಬಲದಲ್ಲಿ ಮಾತಿನ ನಿರರ್ಗಳತೆಗೆ ತೊಡಕಾಗುವುದಿಲ್ಲ ಎನ್ನುವುದನ್ನು ಹಿಂದಿನ ಕಲಾವಿದರು ಹಾಗೂ ಈಗಲೂ ವೃತ್ತಿ ಮೇಳದ ಹಿರಿಯ ಸಂಪ್ರದಾಯದ ಒಲವಿನ ಕಲಾ ವಿದರು ತೋರಿಸಿ ಕೊಟ್ಟಿದ್ದಾರೆ.

ಇನ್ನು ದಪ್ಪ ಕಟ್ಟು ಮೀಸೆ ಮುಖಾಭಿನಯಕ್ಕೆ ಪೂರಕ ವಾಗಿಲ್ಲ ಎಂಬ ಅಭಿಪ್ರಾಯವನ್ನೂ ಮಹಿಳಾ ಯಕ್ಷಗಾನ ತಂಡದ ಮುಖ್ಯಸ್ಥೆಯೊಬ್ಬರು ಒಮ್ಮೆ ನನ್ನಲ್ಲಿ ಹೇಳಿದ್ದುಂಟು. ಆಗಲೇ ನನ್ನ ಅರಿವಿನಲ್ಲಿರುವ ಮಾಹಿತಿ ಅವರಿಗೆ ತಿಳಿಸಿದ್ದೆ. ಅದಾವುದೆಂದರೆ, ಯಕ್ಷಗಾನದ ಪ್ರಸ್ತುತಿಗೆ ಗೀತ, ವಾದನ, ನರ್ತನ, ಆಹಾರ್ಯ ಹಾಗೂ ವಾಚಿಕಗಳೆಂಬ ಐದು ಪರಿಕರಗಳನ್ನು ಬಳಸಲಾಗುತ್ತದೆ. ಅವುಗಳನ್ನು ಕ್ರಮಬದ್ಧವಾಗಿ ಹಾಗೂ ಪ್ರಮಾಣ ಬದ್ಧವಾಗಿ ಬಳಸಿದರೆ ಪದದ ಸ್ಥಾಯಿಭಾವ ಪ್ರಕಟವಾಗುತ್ತದೆ. ಅನ್ಯಥಾ ಮುಖಾ ಭಿನಯದ ಮೂಲಕ ಹೆಚ್ಚೇನೂ ಪ್ರಕಟಪಡಿಸುವ ಅಗತ್ಯವಿರುವುದಿಲ್ಲ.

ಬಡಗು (ನಡು)ತಿಟ್ಟಿನ ಕೃಷ್ಣನ ವೇಷ
ಯಕ್ಷಗಾನವೆಂಬ ದೃಶ್ಯಮಾಧ್ಯಮ ಶತಮಾನಗಳಿಂದ ಕರಾವಳಿ ಜನರ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಕರಾವಳಿ ಪ್ರದೇಶದಲ್ಲಿ ವೈಷ್ಣವ ಸಂಪ್ರದಾಯದಂತೆ ಕೃಷ್ಣನ ಪೂಜೆ ಪ್ರಸಿದ್ಧಿಗೆ ಬಂದ ಕಾಲವದು. ಕೃಷ್ಣ, ಪ್ರಕೃತಿ -ಪುರುಷ ಸಂಯೋಗವೆಂಬುದು ಬಡಗು (ನಡು) ತಿಟ್ಟಿನ ಸೀಮೆಯ ಜನರ ಪರಿಕಲ್ಪನೆ. ನಮ್ಮ ಯಕ್ಷಗಾನ ಕಲಾವಿದರು ಈ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸೊಂಟದ ಕೆಳಭಾಗ ಪ್ರಕೃತಿ ಎಂತಲೂ, ಕಟಿಯ ಮೇಲ್ಭಾಗ ಪುರುಷವೆಂತಲೂ ಪರಿಗಣಿಸಿ, ಕಟಿಯಿಂದ ಕೆಳಗೆ ಚೌಕುಳಿ ಸೀರೆಸುತ್ತಿ, ಕಟಿಯಿಂದ ಮೇಲೆ ಪುರುಷನಂತೆ ಧಗಲೆ ಅಂಗಿ ಹಾಕಿ, ಕೇದಿಗೆ ಮುಂದಲೆ ಕಟ್ಟಿ ಮುಖಕ್ಕೆ ಗೌರ (ಬಿಳಿ) ಬಣ್ಣ ಬಳಿದು ಕೃಷ್ಣನ ವೇಷ ಚಾಲ್ತಿಗೆ ತಂದರು. ಜತೆಯಲ್ಲಿ ಪ್ರಕೃತಿ-ಪುರುಷ ವೇಷಕ್ಕೆ ತಕ್ಕ ಆಭರಣಗಳನ್ನೆಲ್ಲ ಹಾಕಿ ಅಲಂಕಾರಗೊಳಿ ಸಿದರು. ಕೃಷ್ಣನ ವೇಷದ ರಂಗಸ್ಥಳ ಪ್ರವೇಶ ಕ್ರಮವೂ ಭಿನ್ನ. ಇತರ ವೇಷಗಳು ಚೌಕಿಗೆ ಮುಖ ಮಾಡಿ (ಗಣಪತಿ ಹೂಡಿರುತ್ತಾರೆ) ತೆರೆ ಕುಣಿದು ರಂಗಸ್ಥಳ ಪ್ರವೇಶಿಸಿದರೆ ಕೃಷ್ಣನ ವೇಷ ತೆರೆ ಸರಿದು ನೇರ ರಂಗಸ್ಥಳ ಪ್ರವೇಶಿಸುವುದು ಕ್ರಮ. ಅವನೇ ದೇವರಲ್ಲವೇ! ಇದು ಬಡಗು (ನಡು) ತಿಟ್ಟಿನ ವೈಶಿಷ್ಟ್ಯ. ಕಲಾವಿದರು ಪ್ರದರ್ಶನ ನೀಡುವ ಸೀಮೆಯಲ್ಲಿ ಚಾಲ್ತಿಯಲ್ಲಿರುವ ಸಂಪ್ರದಾಯವನ್ನು ಪಾಲಿಸುವುದು ಧರ್ಮ.

ಬೇಳೂರು ರಾಘವ ಶೆಟ್ಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next