ಯಕ್ಷಭಾರತಿ ಕನ್ಯಾಡಿ: ತೃತೀಯ ವಾರ್ಷಿಕೋತ್ಸವ
ಬೆಳ್ತಂಗಡಿ: ರಾಜ್ಯ, ರಾಷ್ಟ್ರ, ವಿಶ್ವಮಟ್ಟದಲ್ಲಿ ಯಕ್ಷಗಾನಕ್ಕೆ ಮಾನ್ಯತೆ ದೊರೆಯುತ್ತಿದೆ. ಭಾರತೀಯ ಸಾಂಸ್ಕೃತಿಕ ರಾಯಭಾರಿಯಾಗಿ ಯಕ್ಷಗಾನಕ್ಕೆ ಗೌರವದ ಸ್ಥಾನವಿದೆ. ಚಿಕ್ಕ ಮೇಳದ ಮೂಲಕ ಯಕ್ಷ ಕಲೆಯನ್ನು ಮನೆ ಮನೆಗೂ ಮುಟ್ಟಿಸುವ ಕೆಲಸ ನಡೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ನೇಪಥ್ಯಕ್ಕೆ ಸರಿದ ಹಿರಿಯ ಶ್ರೇಷ್ಠ ಕಲಾವಿದರ ಮಟ್ಟಕ್ಕೆ ಇಂದಿನ ಕಲಾವಿದರು ಮುಟ್ಟಿಲ್ಲ. ಅಂಥವರನ್ನು ತಯಾರು ಮಾಡಿ, ಸಾಹಿತ್ಯಿಕವಾಗಿ ಬೆಳೆಯಲು ಇನ್ನಷ್ಟು ಪ್ರಯತ್ನಗಳಾಗಬೇಕು. ಯಕ್ಷಗಾನದಲ್ಲಿ ಯುವ ಪೀಳಿಗೆಗೆ ಅವಕಾಶ ಕಲ್ಪಿಸುತ್ತಿರುವ ಪ್ರಯತ್ನ ಶ್ಲಾಘನೀಯ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯರು ಹೇಳಿದರು.
ಅವರು ಉಜಿರೆ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಯಕ್ಷ ಮಿತ್ರರು ಬೆಳ್ತಂಗಡಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇವರ ಸಹಕಾರದೊಂದಿಗೆ ನಡೆದ ಸೇವಾಭಾರತಿ ಅಂಗ ಸಂಸ್ಥೆ ಯಕ್ಷಭಾರತಿ ಕನ್ಯಾಡಿಯ ತೃತೀಯ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಡಾ| ಎಂ. ಎಂ. ದಯಾಕರ್, ಸೇವಾಭಾರತಿ ಉಪಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಉದ್ಯಮಿ ಮೋಹನ ಶೆಟ್ಟಿಗಾರ್ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ನರೇಂದ್ರ ಕುಮಾರ್ ಉಜಿರೆ, ಕೃಷ್ಣ ಶೆಟ್ಟಿ ಬೆಳ್ತಂಗಡಿ ಮತ್ತು ಡಿ. ಶ್ರೀರಾಮ ಭಟ್ ಭಂಡಿಹೊಳೆ ಅವರನ್ನು ಯಕ್ಷಭಾರತಿ ಪರವಾಗಿ ಸಮ್ಮಾನಿಸಲಾಯಿತು. ಉಜಿರೆ ಎಸ್‌ಡಿಎಂ ಕಾಲೇಜಿನ ರಕ್ಷಿತಾ ಮತ್ತು ನಿತಿನ್ ಕುಮಾರ್, ಪುಂಜಾಲಕಟ್ಟೆ ಸರಕಾರಿ ಪದವಿ ಕಾಲೇಜಿನ ಸುಚಿತ್ರಾ ಮತ್ತು ಸುಶ್ಮಿತಾರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸಮ್ಮಾನಿತರ ಪರವಾಗಿ ನರೇಂದ್ರ ಕುಮಾರ್, ವಿದ್ಯಾರ್ಥಿ ವೇತನ ಸ್ವೀಕರಿಸಿದವರ ಪರವಾಗಿ ನಿತಿನ್ ಕುಮಾರ್ ಕೃತಜ್ಞತೆ ವ್ಯಕ್ತಪಡಿಸಿದರು. ಗಂಗಾಧರ ಕಾಯರ್ತಡ್ಕ ವಾರ್ಷಿಕ ವರದಿ ಮಂಡಿಸಿದರು. ಚಂದ್ರಮೋಹನ ಮರಾಠೆ ಸಮ್ಮಾನಿತರನ್ನು ಅಭಿನಂದಿಸಿ, ಶಿತಿಕಂಠ ಭಟ್ ಸಮ್ಮಾನ ಪತ್ರ ವಾಚಿಸಿದರು. ಯಕ್ಷಭಾರತಿ ಅಧ್ಯಕ್ಷ ಹರಿದಾಸ ಗಾಂಭೀರ ಸ್ವಾಗತಿಸಿ, ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ನಿರೂಪಿಸಿದರು. ಶ್ರೀಕೃಷ್ಣಲೀಲೆ- ಕಂಸವಧೆ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು. ಅತಿಥಿ ಕಲಾವಿದರಾಗಿ ತುಳು ಚಲನಚಿತ್ರರಂಗದ ಭೋಜರಾಜ ವಾಮಂಜೂರು, ಅರವಿಂದ ಬೋಳಾರ್ ಪಾತ್ರ ನಿರ್ವಹಿಸಿದರು.