Advertisement

‘ಯಕ್ಷಗಾನ ಸಾಂಸ್ಕೃತಿಕ ಸಂಪನ್ನತೆಯ ಮಹಾನ್‌ ಕಲೆ’

10:22 AM Apr 27, 2018 | |

ಮೂಡಬಿದಿರೆ: ಯಕ್ಷಗಾನ ಸಾಂಸ್ಕೃತಿಕ ಸಂಪನ್ನತೆಯ ಮಹಾನ್‌ ಕಲೆ. ಮನುಷ್ಯರನ್ನು ಆಧ್ಯಾತ್ಮಿಕವಾಗಿ ಶ್ರೀಮಂತಗೊಳಿಸುವ ಕಲೆ. ಯಾವುದೇ ವಿದ್ಯೆಯನ್ನು ಕಲಿಯಲು ನಾಯಿ ನಿದ್ರೆ, ಬಕ ಧ್ಯಾನ, ಕಾಕ ಚೇಷ್ಟೆ, ಮಿತಾಹಾರಿ ಹಾಗೂ ಗೃಹತ್ಯಾಗಿ ಎಂಬ ಗುಣಗಳಿರಬೇಕು ಎಂಬುದು ಯಕ್ಷಗಾನಕ್ಕೂ ಅನ್ವಯ. ಪಾಠದೊಂದಿಗೆ ಯಕ್ಷಗಾನವನ್ನೂ ಕಲಿತು, ಶರೀರ, ಬುದ್ಧಿ, ಮನಸ್ಸುಗಳ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಿರಿ ಎಂದು ಯಕ್ಷಗಾನ ಕಲಾವಿದ, ಯಕ್ಷಗಾನ ಅಕಾಡೆಮಿಯ ನೂತನ ಸದಸ್ಯ ಜಬ್ಟಾರ್‌ ಸಮೋ ತಿಳಿಸಿದರು.

Advertisement

ಬುಧವಾರ ಯಕ್ಷ ದೇಗುಲ ಕಾಂತಾವರದ ಆಶ್ರಯದಲ್ಲಿ ಕಾಂತಾ ವರ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಎ. 11ರಿಂದ 25ರವರೆಗೆ ನಡೆದ ಉಚಿತ ಯಕ್ಷ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕಿರಿಯ, ಹಿರಿಯ ಹಾಗೂ ಪ್ರೌಢ ವಿಭಾಗಗಳಲ್ಲಿ ಪಾಲ್ಗೊಂಡಿದ್ದ, ಉಡುಪಿ ಮತ್ತು ದ.ಕ. ಜಿಲ್ಲಾವ್ಯಾಪ್ತಿಯ 87 ಮಂದಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ, ಅಂಕಪಟ್ಟಿ ವಿತರಿಸಿ ಅವರು ಮಾತನಾಡಿದರು. ಶುಲ್ಕಗಳ ಶಿಬಿರಗಳೇ ವಿಜೃಂಭಿಸುತ್ತಿರುವ ಈ ಕಾಲದಲ್ಲಿ ಯಾವುದೇ ಶುಲ್ಕವಿಲ್ಲದೆ ಶಿಬಿರವನ್ನು ಒಂದು ತಪಸ್ಸಿನಂತೆ ಮಹಾವೀರ ಪಾಂಡಿಯವರು ನಡೆಸಿದ್ದಾರೆ ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಅಮೆ ರಿಕಾದಲ್ಲಿ ಎಂಜಿನಿಯರ್‌ ಆಗಿದ್ದು ಉದ್ಯೋಗದೊಂದಿಗೆ ಯಕ್ಷಗಾನದ ಕಂಪನ್ನೂ ಪಸರಿಸುತ್ತಿರುವ ಹವ್ಯಾಸಿ ಕಲಾವಿದ ಕೌಡೂರು ರಘು ರಾಮ ಶೆಟ್ಟಿ, ‘ಕಣಿಪುರ’ ಯಕ್ಷಗಾನ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಎಂ. ನಾ. ಚಂಬಲ್ತಿಮಾರ್‌, ಗ್ರಾ.ಪಂ. ಸದಸ್ಯೆ ಶಕುಂತಳಾ ಶೆಟ್ಟಿ ಭಾಗವಹಿಸಿದ್ದರು.

ಯಕ್ಷ ದೇಗುಲದ ಅಧ್ಯಕ್ಷ ಶ್ರೀಪತಿ ರಾವ್‌ ಬೆಳುವಾಯಿ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಧರ್ಮರಾಜ ಕಂಬಳಿ, ಪ್ರೊ| ಬಿ. ಪದ್ಮನಾಭ ಗೌಡ, ಗೋವರ್ಧನ ಎಂ., ಸಂದೀಪ್‌ ಪುತ್ರನ್‌ ಬೆಳ್ಮಣ್‌ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಯಕ್ಷಗುರು ಮಹಾವೀರ ಪಾಂಡಿ ನಿರೂಪಿಸಿದರು.

ಭಾಗವಹಿಸಿದ ಕಲಾವಿದರು
ಹದಿನೈದು ದಿನಗಳ ಶಿಬಿರದಲ್ಲಿ ದಿವಾಣ ಶಿವಶಂಕರ ಭಟ್‌, ದೀವಿತ್‌ ಎಸ್‌. ಕೋಟ್ಯಾನ್‌, ಹರಿರಾಜ್‌ ಶೆಟ್ಟಿಗಾರ್‌ ಕಿನ್ನಿಗೋಳಿ, ಗಣೇಶ್‌ ಶೆಟ್ಟಿ ಸಾಣೂರು (ನಾಟ್ಯ), ಶ್ರೀಧರ ಡಿ.ಎಸ್‌. , ಉಜಿರೆ ಅಶೋಕ ಭಟ್‌, ಕೆರೆಗದ್ದೆ ವೆಂಕಟರಮಣ ಭಟ್‌, ಗಾಳಿಮನೆ ವಿನಾಯಕ ಭಟ್‌ (ಪ್ರಸಂಗ ಮಾಹಿತಿ, ಅರ್ಥಗಾರಿಕೆ), ಚಂದ್ರನಾಥ ಬಜಗೋಳಿ (ಅಭಿನಯ ಸಿದ್ದಾಂತ), ಎಂ. ನಾ. ಚಂಬಲ್ತಿಮಾರ್‌ (ಯಕ್ಷಗಾನ ಮತ್ತು ಮಾಧ್ಯಮ), ದೇವಾನಂದ ಭಟ್‌ (ಪಾತ್ರಗಳ ಮೌಲ್ಯ ವಿವೇಚನೆ), ಸುಗಂಧ ಕುಮಾರ್‌ ಕಾರ್ಕಳ, ಶಶಿಕಲಾ ಹೆಗ್ಡೆ ಕಾರ್ಕಳ (ಕಲಾಭಿರುಚಿ, ಕಲಾವಿದರ ವ್ಯಕ್ತಿತ್ವ) ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next