Advertisement

ಬ್ರಹ್ಮಕಲಶದ ಸಾಂಸ್ಕೃತಿಕ ಹಬ್ಬಕ್ಕೆ ಕಲಶಪ್ರಾಯವಾದ ಯಕ್ಷ ಕೂಡಾಟ

05:39 PM Feb 28, 2020 | Team Udayavani |

ಕಟೀಲು ಬ್ರಹ್ಮಕಲಶದ ಸಂದರ್ಭದಲ್ಲಿ ನಡೆದ ಹನ್ನೆರಡು ದಿವಸಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಾಕರ್ಷಣೆಯನ್ನು ಪಡಕೊಂಡಿದ್ದವು. ಈ ಎಲ್ಲವುಗಳಿಗೆ ಕಲಶಪ್ರಾಯದಂತೆ ನಡೆದುದು ಕೊನೆಯ ದಿವಸದ ಯಕ್ಷಗಾನ ಸೇವೆ.

Advertisement

ಯೋಜಿಸಿಕೊಂಡ ಪ್ರಸಂಗ “ಶ್ರೀಕೃಷ್ಣಾರ್ಪಣಮಸ್ತು’. ಜೋಡಿಸಿಕೊಂಡ ಪ್ರಸಂಗಗಳು ಹದಿನಾಲ್ಕು. ಪ್ರದರ್ಶನಾವಧಿ ಹತ್ತು ಘಂಟೆಗಳು. ಕೃತಯುಗದಿಂದ ತೊಡಗಿ ಕಲಿಯುಗದವರೆಗಿನ ಎಲ್ಲ ವಿಷ್ಣುವಿಗೆ ಸಂಬಂಧಪಟ್ಟ ಪ್ರಸಂಗಗಳನ್ನು ಆಯ್ದುಕೊಳ್ಳಲಾಗಿತ್ತು. ವಸ್ತು ರೂಪದಲ್ಲಿ ಯಾ ಪ್ರಾಣರೂಪದಲ್ಲಿ ವಿಷ್ಣುವಿಗೆ ಸಮರ್ಪಣೆಯಾಗುವ ಕಥಾ ಭಾಗಗಳನ್ನು ಸಂಯೋಜಿಸಿ, ಪದ್ಯಗಳನ್ನು ಆಯ್ದು, ಶಿಸ್ತಿನ ಪರಿಧಿಯನ್ನು ಹಾಕಿಕೊಳ್ಳಲಾಗಿತ್ತು.

ಪೂರ್ವರಂಗ ಮತ್ತು ಪ್ರಸಂಗನಡೆಗಳ ಕುರಿತು ಎರಡು ದಿನಗಳ ಮೊದಲೇ ಆರೂ ಮೇಳಗಳ ಮುಖ್ಯ ಭಾಗವತರುಗಳನ್ನು ಕರೆದು ಸಭೆ ನಡೆಸಿ ಸೂಚನೆ ನೀಡಲಾಗಿತ್ತು. ಆರೂ ಮೇಳಗಳ ಪೂರ್ವರಂಗ ಪ್ರಸ್ತುತಿ ವೇದಿಕೆಯಲ್ಲಿ ಜೊತೆಯಾಗಿ ಸುಂದರವಾಗಿ ನಡೆಯಿತು. ಆರೂ ಮೇಳಗಳ ದೇವರು ಒಮ್ಮೆಲೆ ಒಂದೇ ರಂಗದಲ್ಲಿ ಜೊತೆಯಾದುದು ನೆರೆದವರ ಮೈನವಿರೆದ್ದಿತು. ಇದು ಅಪೂರ್ವ.

ಪ್ರಸಂಗ ಪ್ರದರ್ಶನ ಆರೂ ಮೇಳಗಳ ಕೂಡಾಟವಾಗಿತ್ತು. ಹದಿನಾಲ್ಕು ಪ್ರಸಂಗಗಳನ್ನು ಆರು ಮೇಳಗಳ ಹಿಮ್ಮೇಳಕ್ಕೆ ಹಂಚಿ ಕೊಡಲಾಗಿತ್ತು. ಪ್ರತೀ ಪ್ರಸಂಗಕ್ಕೂ ಸಮಯಾವಧಿ ನಿಗದಿ ಪಡಿಸಲಾಗಿತ್ತು. ಒಂದನೇ ಮೇಳದ ಹಿಮ್ಮೇಳದವರು ಸಮುದ್ರ ಮಥನ- ಜಟಾಯು ಮೋಕ್ಷ ಪ್ರಸಂಗವನ್ನು ಸುಂದರವಾಗಿ ನಡೆಸಿಕೊಟ್ಟರು. ಲಕ್ಷ್ಮೀ ಸ್ವಯಂವರ ಮತ್ತು ಅಮೃತದ ಪ್ರಕರಣವನ್ನು ಆಟಕೂಟಗಳ ಸರದಾರ ಕಾವಳಕಟ್ಟೆ ದಿನೇಶ ಶೆಟ್ಟಿಯವರು ವಿಷ್ಣು ಪಾತ್ರದಲ್ಲಿ ಅಚ್ಚುಕಟ್ಟಾಗಿ ಪ್ರಸಂಗದ ಹೃದಯಭಾಗಗಳನ್ನು ಯಾವುದನ್ನೂ ಬಿಡದೆ ನಿಗದಿತ ಸಮಯಕ್ಕಿಂತ ಮುಂಚೆಯೇ ಮುಗಿಸಿಕೊಟ್ಟರು.

ಆರನೇ ಮೇಳದ ಹಿಮ್ಮೇಳದವರು ಶಬರಿ ಮೋಕ್ಷ – ಅತಿಕಾಯ ಮೋಕ್ಷ – ರಾವಣ ವಧೆ ಪ್ರಸಂಗವನ್ನು ಚೆನ್ನಾಗಿ ನಿರ್ವಹಿಸಿಕೊಟ್ಟರು. ಶಬರಿ – ರಾಮ (ಪ್ರಶಾಂತ ನೆಲ್ಯಾಡಿ – ವಾದಿರಾಜ ಕಲ್ಲೂರಾಯ), ಅತಿಕಾಯ – ಲಕ್ಷ್ಮಣ (ಸುಣ್ಣಂಬಳ – ಶಿವಾನಂದ) ಅದ್ಭುತ ರಸಸೃಷ್ಟಿಯನ್ನು ಮಾಡಿದವು. ಸುಣ್ಣಂಬಳರಂತೂ ಅತೀ ಕಡಿಮೆ ಅವಧಿಯಲ್ಲಿ ಯಾವ ಭಾಗವನ್ನೂ ಬಿಡದೆ, ತೂಕದ ಮಾತಿನಿಂದ ನಿಗದಿತ ಸಮಯಕ್ಕಿಂತಲೂ ಮೊದಲೇ ಪ್ರಸಂಗವನ್ನು ಮುಗಿಸಿಕೊಟ್ಟರು. ಭಾಗವತ ಗೋಪಾಲಕೃಷ್ಣ ಬಲಿಪರು ಪ್ರಸಂಗದ ಮೇಲಿನ ತಮ್ಮ ಹಿಡಿತವನ್ನು ತೋರಿಸಿಕೊಟ್ಟರು.

Advertisement

ಎರಡನೇ ಮೇಳದ ಹಿಮ್ಮೇಳದವರು ಕೃಷ್ಣ ಲೀಲೆ – ರುಕ್ಮಿಣಿ ಸ್ವಯಂವರ ಭಾಗವನ್ನು ನಿರ್ದೇಶಿಸಿದರು. ಕೃಷ್ಣ ಲೀಲೆಯಲ್ಲಿ ಅಕ್ರೂರ – ಕುಬ್ಜೆಯರ ಭಾಗವನ್ನು ಮಾತ್ರ ಪರಿಗಣಿಸಲಾಗಿತ್ತು. ರುಕ್ಮಿಣಿ – ಬ್ರಾಹ್ಮಣ (ಮಹೇಶ ಸಾಣೂರು – ವಳಕ್ಕುಂಜ ರವಿಶಂಕರ ಭಟ್‌) ಸಂಭಾಷಣೆ ಗಮನ ಸೆಳೆಯಿತು.

ನಾಲ್ಕನೇ ಮೇಳದ ಹಿಮ್ಮೇಳದವರುಭಕ್ತ ಸುಧಾಮ – ಜಾಂಬವತಿ ಕಲ್ಯಾಣ – ನರಕಾಸುರ ವಧೆ (ಪೂರ್ವಾರ್ಧ)ಯ ನಿರ್ವಹಣೆಯನ್ನು ಸಮಯಕ್ಕನುಸಾರವಾಗಿ ಸುಲಲಿತವಾಗಿ ಮಾಡಿತೋರಿಸಿದರು. ಸುಧಾಮ- ಕೃಷ್ಣ (ಮವ್ವಾರು ಬಾಲಕೃಷ್ಣ – ಮರಕಡ ಲಕ್ಷ್ಮಣ) ಸಂಭಾಷಣೆ ಮತ್ತು ತಲಪಾಡಿ ದೇವಿಪ್ರಸಾದರ ಪದ್ಯ ಭಕ್ತಿರಸದ ತುರೀಯ ಸ್ಥಿತಿಯ ಅನುಭವವನ್ನು ಉಣಬಡಿಸಿತು.

ಐದನೇ ಮೇಳದ ಹಿಮ್ಮೇಳದವರು ನರಕಾಸುರ ವಧೆ (ಉತ್ತರಾರ್ಧ) – ವಿದುರಾತಿಥ್ಯ – ಕರ್ಣ ಪರ್ವ (ಪೂರ್ವಾರ್ಧ) ಪ್ರಸಂಗವನ್ನು ಆಡಿಸಿದರು. ಮೂರನೇ ಮೇಳದ ಹಿಮ್ಮೇಳದವರು ಕರ್ಣ ಪರ್ವ (ಉತ್ತರಾರ್ಧ) – ತಾಮ್ರಧ್ವಜ ಕಾಳಗ – ಶ್ರೀನಿವಾಸ ಕಲ್ಯಾಣ ಪ್ರಸಂಗಗಳನ್ನು ಅಚ್ಚುಕಟ್ಟಾಗಿ ಮುನ್ನಡೆಸಿದರು. ಕಠಿಣ ಪ್ರಸಂಗವಾದ ತಾಮ್ರಧ್ವಜ ಕಾಳಗದಲ್ಲಿ ವಿಷ್ಣು ಶರ್ಮ (ಕೃಷ್ಣ) ಮತ್ತು ಬಾಯಾರು ರಮೇಶ ಭಟ್ರಾ (ತಾಮ್ರಧ್ವಜ) ಗಮನ ಸೆಳೆದರು.

ಪ್ರದರ್ಶನ ಯಶಸ್ವಿಯಾಗಿದೆ ಎನ್ನುವುದಕ್ಕೆ ಸಾಕ್ಷಿ ಬೆಳಗ್ಗೆ 7.30ರ ತನಕವೂ ಸಭಾಂಗಣ ಭರ್ತಿ ಇದ್ದ ಜನಸ್ತೋಮ. ಸುಮಾರು 250ರಷ್ಟು ಕಲಾವಿದರು ಒಂದೇ ವೇದಿಕೆಯಲ್ಲಿ ಹತ್ತು ತಾಸುಗಳ ಅವಧಿಯಲ್ಲಿ ಯಕ್ಷರಸದೌತಣವನ್ನೇ ಉಣಬಡಿಸಿದರು.

ಡಾ| ಶ್ರುತಕೀರ್ತಿರಾಜ

Advertisement

Udayavani is now on Telegram. Click here to join our channel and stay updated with the latest news.

Next