Advertisement

ಕಾಂಗರೂ ನೆಲದಲ್ಲಿ ನಲಿದಾಡಿದ ಯಕ್ಷಗಾನ

06:27 PM Nov 21, 2019 | mahesh |

ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಈ ಬಾರಿ ಅ. 14ರಿಂದ ನ. 4ರ ವರೆಗೆ 22 ದಿವಸ ಆಸ್ಟ್ರೇಲಿಯಾದಲ್ಲಿ ಯಕ್ಷ ದಿಗ್ವಿಜಯವನ್ನು ಯಶಸ್ವಿಯಾಗಿ ನಡೆಸಿದೆ.

Advertisement

ಆಸ್ಟ್ರೇಲಿಯಾದಲ್ಲಿ ಮೊದಲ ಪ್ರಾಶಸ್ಥ್ಯ ರಾಷ್ಟ್ರೀಯ ಶಿಸ್ತಿಗೆ. ಅಲ್ಲಿನ ಪ್ರತಿ ವಿಚಾರದಲ್ಲೂ ನಮಗೆ ಮೊದಲು ಕಾಣಸಿಗುವುದು ಶಿಸ್ತು. ಹೀಗಾಗಿ ಅಲ್ಲಿಗೆ ಹೋಗಲು ಹೆದರುವವರೇ ಹೆಚ್ಚು. ಅಂತಹ ನಾಡಿಗೆ ಮಂಡಳಿಯನ್ನು ಮತ್ತು ಕಲೆಯನ್ನು ಬರಿಸಿಕೊಂಡದ್ದು ಅಲ್ಲಿನ ಪುತ್ತಿಗೆ ಮಠ, ಕನ್ನಡ ಸಂಘ ಮತ್ತು ಪರ್ತ್‌ನ ನಮ್ಮ ಕರಾವಳಿ ತಂಡ. ಹೋದದ್ದು ಆರು ಜನರ ಪುಟ್ಟ ತಂಡ, ಅಲ್ಲಿನ ನೆಲದಲ್ಲಿ ಕಾಲಿಡುವಾಗ ನಿಗದಿಯಾದದ್ದು ಮೂರು ಕಾರ್ಯಕ್ರಮ. ವಾಪಾಸು ಬರುವ ಮೊದಲು 12 ಕಾರ್ಯಕ್ರಮಗಳನ್ನು ನೀಡುವಂತಾಯಿತು.

ತಂಡ ಮೊದಲ ಹೆಜ್ಜೆ ಇರಿಸಿದ್ದು ವಿಕ್ಟೋರಿಯಾ ರಾಜ್ಯದ ಮೆಲ್ಬರ್ನ್ನಲ್ಲಿ. ಮೊದಲ ಪ್ರದರ್ಶನ ಸುಧನ್ವಾರ್ಜುನ. ಸುಮಾರು 350 ಪ್ರೇಕ್ಷಕರ ಎದುರು ಅದ್ಭುತ ಯಶಸ್ಸು ಕಂಡಿತು. ಎರಡು ತಾಸುಗಳ ಈ ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರೂ ಎದ್ದುನಿಂತು ದೀರ್ಘ‌ ಕರತಾಡನದ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.

ಮನೆ ಮನೆಗಳಲ್ಲಿ ಕಾರ್ಯಕ್ರಮಗಳು ನಿಗದಿಯಾದವು. ಮೂರು ನರಕಾಸುರ ಮೋಕ್ಷ ಯಕ್ಷಗಾನ, ಒಂದು ಜಾಬಾಲಿ – ನಂದಿನಿ ತಾಳಮದ್ದಳೆ, ಒಂದು ಸುದರ್ಶನ ವಿಜಯ ಯಕ್ಷಗಾನ ಮತ್ತು ಒಂದು ಹಾಸ್ಯ ವೈಭವ ಅಲ್ಲಿನ ಕಲಾರಸಿಕರನ್ನು ರಂಜಿಸಿದವು. ಮೆಲ್ಬರ್ನ್ ಭಾರತೀಯರೇ ಸೇರಿ ಆಚರಿಸುವ ದೀಪಾವಳಿ ಕಾರ್ಯಕ್ರಮದಲ್ಲಿ, ಸುಮಾರು 3,000 ಜನರೆದುರು ಪ್ರದರ್ಶಿಸಿದ ನರಕಾಸುರ ಮೋಕ್ಷ ಅಮೋಘವಾಗಿತ್ತು. ವಿಕ್ಟೋರಿಯಾದ ಮಂತ್ರಿಗಳು ಪ್ರದರ್ಶನವನ್ನು, ಕಲೆಯ ಸೊಬಗನ್ನು ಶ್ಲಾ ಸಿ ಪ್ರಮಾಣಪತ್ರ ನೀಡಿದರು.

ಎರಡನೇ ಹೆಜ್ಜೆ ಇರಿಸಿದ್ದು ನ್ಯೂಸೌತ್‌ವೇಲ್ಸ್‌ ರಾಜ್ಯದ ಸಿಡ್ನಿಯಲ್ಲಿ. ಇಲ್ಲಿಯೂ 700 ಪ್ರೇಕ್ಷಕರೆದುರು ಸುಧನ್ವಾರ್ಜುನ ಪರಿಣಾಮಕಾರಿ ಪ್ರದರ್ಶನವನ್ನು ಕಂಡಿತು. ಎಲ್ಲರೂ ಬಹಳ ತನ್ಮಯತೆಯಿಂದ ಯಕ್ಷಗಾನವನ್ನು ಆಸ್ವಾದಿಸಿದರು. ಇಲ್ಲಿ ಯಕ್ಷಗಾನವನ್ನು ಕಲಿತು ಈಗ ಅಲ್ಲಿ ನೆಲೆಯಾಗಿರುವ ಸುಹಾಸ್‌ ಮತ್ತು ಅನಿರುದ್ಧ್ ಪಾತ್ರ ಮಾಡಿದರು. ಇಲ್ಲಿಯೂ ಎರಡು ಮನೆಗಳಲ್ಲಿ ನರಕಾಸುರ ಮೋಕ್ಷ ಯಕ್ಷಗಾನ ಮತ್ತು ಜಾಬಾಲಿ – ನಂದಿನಿ ತಾಳಮದ್ದಳೆಗಳು ಆಯೋಜನೆಗೊಂಡವು.

Advertisement

ಕೊನೆಯ ಹೆಜ್ಜೆಯಿರಿಸಿದ್ದು ಪಶ್ಚಿಮ ಆಸ್ಟ್ರೇಲಿಯಾದ ಪರ್ತ್‌ನಲ್ಲಿ. ನಮ್ಮ ಕರಾವಳಿ ತಂvದ ಆಯೋಜನೆಯ ಐದನೇ ವರ್ಷದ ಸಂಭ್ರಮದ ದೀಪಾವಳಿಗೆ ಗಂಡುಕಲೆಯನ್ನು ಜೋಡಿಸಿಕೊಂಡು ಸ್ಮರಣೀಯವನ್ನಾಗಿಸಿದರು. ಇಲ್ಲಿಯೂ ಸತೀಶ್‌ ಮುಚ್ಚಾರು ಮತ್ತು ದಿನೇಶ್‌ ಪಾತ್ರವನ್ನು ಮಾಡಿ ಸೈ ಎನಿಸಿಕೊಂಡರು. ಇಸ್ವ (ಇಂಡಿಯನ್‌ ಸೊಸೈಟಿ ಆಫ್ ವೆಸ್ಟರ್ನ್ ಆಸ್ಟ್ರೇಲಿಯಾ) ಆಯೋಜನೆಯ ದೀಪಾವಳಿಯಲ್ಲಿ ಸುಮಾರು 6,000 ಭಾರತೀಯರ ಎದುರು ನರಕಾಸುರ ಮೋಕ್ಷ ಯಕ್ಷಗಾನ ಅಮೋಘ ಮೆಚ್ಚುಗೆಯನ್ನು ಗಳಿಸಿತು. ಈ ಪ್ರದರ್ಶನಕ್ಕೆ ಆ ರಾಜ್ಯದ ಸಾಂಸ್ಕೃತಿಕ, ಪ್ರವಾಸೋದ್ಯಮ, ಆಂತರಿಕ ಭದ್ರತಾ ಸಚಿವ ಪಾಲ್‌ ಪಪಾಲಿಯ ಶಿರಬಾಗಿ ವಂದಿಸಿ, ಕಲಾವಿದರಿಗೆ ಪ್ರಶಸ್ತಿಪತ್ರ ವಿತರಿಸಿದರು.

ಹಿಮ್ಮೇಳದಲ್ಲಿ ಭಾಗವತ ರವಿಚಂದ್ರ ಕನ್ನಡಿಕಟ್ಟೆ, ಮದ್ದಳೆ ವಾದಕ ಚೈತನ್ಯಕೃಷ್ಣ ಪದ್ಯಾಣ, ದೇವಾನಂದ ಭಟ್‌, ಮುಮ್ಮೇಳದಲ್ಲಿ ಕಟೀಲು ಮೇಳದ ಕಲಾವಿದರಾದ ಡಾ| ಶ್ರುತಕೀರ್ತಿರಾಜ (ಅರ್ಜುನ), ಲಕ್ಷ್ಮಣಕುಮಾರ್‌ ಮರಕಡ (ಸುಧನ್ವ) ಮತ್ತು ಅಕ್ಷಯಕುಮಾರ್‌ ಮಾರ್ನಾಡ್‌ (ಪ್ರಭಾವತಿ ಮತ್ತು ಕೃಷ್ಣ) ಇದ್ದರು.

ಡಾ| ಶ್ರುತಕೀರ್ತಿರಾಜ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next