ಕಾರವಾರ : ಬಡಗುತಿಟ್ಟು ಯಕ್ಷಗಾನ ರಂಗದ ಪ್ರಸಿದ್ಧ ಸ್ತ್ರೀವೇಷಧಾರಿ ಮೂರೂರು ವಿಷ್ಣು ಗಜಾನನ ಭಟ್(65) ಅವರು ಭಾನುವಾರ ಸಿದ್ದಾಪುರದ ಬಾನ್ಕುಳಿಯಲ್ಲಿ ವಿಧಿವಶರಾಗಿದ್ದಾರೆ.
ಕುಮಟಾ ತಾಲೂಕಿನ ಮೂರೂರಿನಲ್ಲಿ ಗಜಾನನ ಭಟ್-ಭಾಗೀರಥಿ ದಂಪತಿಯ ಪುತ್ರನಾಗಿ ಜನಿಸಿದ ವಿಷ್ಣು ಅವರು ಎಸ್ ಎಸ್ ಎಲ್ ಸಿ ಬಳಿಕ ಯಕ್ಷರಂಗಕ್ಕೆ ಪದಾರ್ಪಣೆ ಮಾಡಿದ್ದರು. ನಾಲ್ಕು ದಶಕಗಳ ಕಾಲ ಯಕ್ಷರಂಗದಲ್ಲಿ ಸ್ತ್ರೀ ಪಾತ್ರಗಳನ್ನು ನಿರ್ವಹಿಸಿ ಅಪಾರ ಯಕ್ಷಗಾನ ಅಭಿಮಾನಿಗಳಿಗೆ ಚಿರಪರಿಚಿತರಾಗಿದ್ದರು.
ಮೂರೂರು ರಾಮ ಹೆಗಡೆಯವರಿಂದ ಆರಂಭಿಕ ಯಕ್ಷಗಾನದ ತರಬೇತಿ ಪಡೆದು ಕರ್ಕಿ ಮೇಳದಲ್ಲಿ ಪ್ರಸಿದ್ಧ ಕಲಾವಿದರಾದ ಪಿ.ವಿ.ಹಾಸ್ಯಗಾರರಲ್ಲಿ ನಾಟ್ಯ ತರಬೇತಿ ಪಡೆದು ಶ್ರೇಷ್ಠ ಕಲಾವಿದರಾಗಿ ತನ್ನದೇ ಛಾಪು ಮೂಡಿಸಿದರು.
ಗುಂಡುಬಾಳ, ಅಮೃತೇಶ್ವರಿ, ಹಿರೆಮಹಾಲಿಂಗೇಶ್ವರ, ಶಿರಸಿ, ಪಂಚಲಿಂಗ, ಪೆರ್ಡೂರು, ಇಡಗುಂಜಿ, ಪೂರ್ಣಚಂದ್ರ ಮೇಳಗಳಲ್ಲಿ ಕಲಾಸೇವೆ ಗೈದಿರುವ ಭಟ್ ಅವರು ಪೌರಾಣಿಕ ಮತ್ತು ನೂತನ ಪ್ರಸಂಗಗಳಲ್ಲಿ ಸ್ತ್ರೀ ಪಾತ್ರಗಳನ್ನು ಮನೋಜ್ಞವಾಗಿ ಅಭಿನಯಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.
ದಾಕ್ಷಾಯಿಣಿ, ಸೀತೆ, ಅಂಬೆ, ಮಂಡೋದರಿ, ಮೇನಕೆ, ಚಂದ್ರಮತಿ, ದಮಯಂತಿ, ಪ್ರಭಾವತಿ, ಸಾವಿತ್ರಿ, ಶಕುಂತಲೆ, ವಿದ್ಯಾಧರ್ ಸೇರಿ ಹಲವು ಪೌರಾಣಿಕ ಸ್ತ್ರೀ ಪಾತ್ರಗಳನ್ನು ಹಿತಮಿತವಾದ ಕುಣಿತ, ಭಾವಪೂರ್ಣ ಅಭಿನಯ, ಲಾಲಿತ್ಯ ಭರಿತ ಮಾತುಗಾರಿಕೆಯಿಂದ ಕಲಾರಸಿಕರ ಮನಗೆದ್ದಿದ್ದರು. ಪುರುಷ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸಿದ್ದ ಅವರು ತಾಳಮದ್ದಲೆ ಅರ್ಥಧಾರಿಯಾಗಿಯೂ ಅನೇಕ ಕೂಟಗಳಲ್ಲಿ ಭಾಗವಹಿಸಿದ್ದರು. ಉಡುಪಿ ಯಕ್ಷಗಾನ ಕಲಾರಂಗದ ಕೋಟ ವೈಕುಂಟ ಪ್ರಶಸ್ತಿ, ಚಿಟ್ಟಾಣಿ ಪ್ರಶಸ್ತಿ ಸೇರಿದಂತೆ ಹಲವು ಸಮ್ಮಾನಗಳಿಗೆ ಭಾಜನರಾಗಿದ್ದರು.
ವಿಷ್ಣು ಭಟ್ ಅವರು ಸಿದ್ದಾಪುರದ ಬಾನ್ಕುಳಿ ಮಠದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಗ,ಸೊಸೆ ಮತ್ತು ಮಡದಿ ಜತೆಗೆ ವಾಸವಿದ್ದರು. ಪತ್ನಿ,ಪುತ್ರನನ್ನು ಅಗಲಿದ್ದಾರೆ. ನಿಧನಕ್ಕೆ ಅಪಾರ ಯಕ್ಷಾಭಿಮಾನಿಗಳು, ಒಡನಾಡಿ ಕಲಾವಿದರು ತೀವ್ರ ಸಂತಾಪ ಸೂಚಿಸಿದ್ದಾರೆ.