Advertisement

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

06:18 PM Jan 05, 2025 | Team Udayavani |

ಶ್ರೀ ಸುಬ್ರಹ್ಮಣ್ಯೇಶ್ವರ ಕಲಾ ಕೇಂದ್ರ ತಕಧಿಮಿ ತಂಡಕ್ಕೆ ಈ ಬಾರಿ ಪಂಚಮ ವಾರ್ಷಿಕೋತ್ಸವದ ಸಂಭ್ರಮ. ಗುರುಪುರ ಕೈಕಂಬದ ಶ್ರೀರಾಮ್‌ ಸಭಾಂಗಣದಲ್ಲಿ ಯಕ್ಷಗಾನ ಹಿಮ್ಮೇಳ, ಮುಮ್ಮೇಳ ಹಾಗೂ ಭಜನಾ ತರಗತಿ ಗಳನ್ನು ನಡೆಸುತ್ತಾ ಬಂದಿರುವ ಈ ಸಂಸ್ಥೆಯು ಇಂದು ಕೈಕಂಬ ಹಾಗೂ ಸುತ್ತಮುತ್ತಲಿನ ಪರಿಸರದವರ ಹೆಮ್ಮೆಯ ಕಲಾಕೇಂದ್ರವಾಗಿ ಬೆಳೆದು ನಿಂತಿದೆ. ಜಿಲ್ಲೆಯ ಹಲವೆಡೆ ಯಶಸ್ವಿ ಯಕ್ಷಗಾನ ಪ್ರದರ್ಶನಗಳನ್ನು ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ ಹೆಗ್ಗಳಿಕೆಯೂ ಈ ಸಂಸ್ಥೆಗಿದೆ. ಇಲ್ಲಿ ಕಲಿಯುತ್ತಿರುವವರಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿ ಯರು ಮಾತ್ರವಲ್ಲ, ಪುರುಷ ಹಾಗೂ ಮಹಿಳಾ ಉದ್ಯೋಗಿಗಳೂ ಇದ್ದಾರೆ.

Advertisement

ಕೈಕಂಬದ ದೇವದಾಸ್‌ ಸಂಕೀರ್ಣದ ಮುಂಭಾಗ ಡಿ. 7 ರಂದುನಡೆದ 5 ನೇ ವಾರ್ಷಿಕೋತ್ಸವದ ಕಾರ್ಯಕ್ರಮಗಳು ಕಲಾಪ್ರಿಯರ ಮನ ತಣಿಸುವಲ್ಲಿ ಯಶಸ್ವಿಯಾಯಿತು. ಪ್ರಾರಂಭದಲ್ಲಿ ಸಂಸ್ಥೆಯ ಭಾಗವತಿಕೆ ಗುರುಗಳಾದ ದಯಾನಂದ ಕೋಡಿಕಲ್‌ ಹಾಗೂ ಚೆಂಡೆ-ಮದ್ದಳೆ ಗುರುಗಳಾದ ಜಯರಾಮ್‌ ಆಚಾರ್ಯ ಚೇಳ್ಯಾರು ಇವರ ವಿದ್ಯಾರ್ಥಿಗಳಿಂದ ನಡೆದ ಯಕ್ಷಗಾನಾರ್ಚನೆ ಬಹಳ ಉತ್ತಮವಾಗಿ ಮೂಡಿ ಬಂತು. ಭವಿಷ್ಯದಲ್ಲಿ ಉತ್ತಮ ಹಿಮ್ಮೇಳ ಕಲಾವಿದರಾಗುವ ಪ್ರತಿಭೆಯೂ ಇವರ ಶಿಷ್ಯರಲ್ಲಿದೆ. ಅನಂತರ ಸತೀಶ್‌ ಪೂಂಜ ನಿರ್ದೇಶನದಲ್ಲಿ ಸಂಸ್ಥೆಯ ನಾದಪ್ರಿಯ ತಂಡದ ವಿದ್ಯಾರ್ಥಿಗಳಿಂದ ನಡೆದ ಭಕ್ತಿ ಸಂಗೀತ ಕಾರ್ಯಕ್ರಮವು ಸಂಗೀತ ಪ್ರಿಯರ ಮನರಂಜಿಸಿತು. ಈ ನಡುವೆ ಸಂಸ್ಥೆಯ ನಾಲ್ಕೂ ಗುರುಗಳಿಗೆ ಗುರು ವಂದನೆ ಹಾಗೂ ಕಟೀಲು ಮೇಳದ ಕಲಾವಿದ ವಾದಿರಾಜ ಕಲ್ಲೂರಾಯರಿಗೆ ಅವರ ಹುಟ್ಟೂರಲ್ಲೇ ಪ್ರಥಮ ಬಾರಿ ಗೌರವ ಸಮ್ಮಾನ ನಡೆಯಿತು.

ಕೊನೆಯಲ್ಲಿ ಸಂಸ್ಥೆಯ ಯಕ್ಷಗಾನ ನಾಟ್ಯ ಗುರುಗಳಾದ ರಕ್ಷಿತ್‌ ಶೆಟ್ಟಿ ಪಡ್ರೆ ಯವರ ನಿರ್ದೇಶನದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ “ದಾಶರಥಿ ದರ್ಶನ’ ಯಕ್ಷಗಾನ ಪ್ರದರ್ಶನ ನಡೆಯಿತು. ದಾಶರಥಿ ದರ್ಶನದಲ್ಲಿ ಯಜ್ಞ ಸಂರಕ್ಷಣೆ, ಸೀತಾ ಕಲ್ಯಾಣ, ರಾಮ ಕಾರುಣ್ಯ, ಜಟಾಯು ಮೋಕ್ಷ, ಇಂದ್ರಜಿತು ಕಾಳಗ ಹಾಗೂ ರಾವಣ ವಧೆ ಎಂಬ ಆರು ಪೌರಾಣಿಕ ಆಖ್ಯಾನಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಬಹಳ ಸೊಗಸಾಗಿ ಪ್ರದರ್ಶಿಸಿದರು. ಇದು ವೀರ, ಶಾಂತ, ಶೃಂಗಾರ, ರೌದ್ರ ರಸಗಳಿಗೆ ವಿಪುಲ ಅವಕಾಶವಿದ್ದ ವೈವಿಧ್ಯಮಯ ಪ್ರಸಂಗಗಳಾದ್ದರಿಂದ ಕೋಲು ಕಿರೀಟ, ಪುಂಡು, ಸ್ತ್ರೀ ಹಾಗೂ ಬಣ್ಣದ ವೇಷದ ಪಾತ್ರಧಾರಿಗಳು ತಮ್ಮ ವೇಷಗಾರಿಕೆ, ಕುಣಿತ, ಮತ್ತು ಪಾತ್ರದ ಗತ್ತುಗಾರಿಕೆಯಿಂದ ರಂಗಸ್ಥಳದಲ್ಲಿ ವಿಜೃಂಭಿಸಿದರು. ಬಾಲ ಕಲಾವಿದರ ಲಾಲಿತ್ಯಪೂರ್ಣ ಕುಣಿತ ಮತ್ತು ಹಾಸ್ಯ ಲೇಪನದ ರಂಜನೀಯ ಮಾತುಗಾರಿಕೆ ಪ್ರೇಕ್ಷಕರಿಗೆ ಮುದ ನೀಡಿತು.

ಹಿಮ್ಮೇಳದಲ್ಲಿ ಅಮೃತ ಅಡಿಗ ಮತ್ತು ಡಾ| ಪ್ರಖ್ಯಾತ್‌ ಶೆಟ್ಟಿ ಇವರ ಭಾವಪೂರ್ಣವಾದ ದ್ವಂದ್ವ ಭಾಗವತಿಕೆ ಹಾಗೂ ಯುವ ಪ್ರತಿಭೆಗಳಾದ ಶ್ರೀವತ್ಸ ಸೋಮಯಾಜಿ ಮತ್ತು ಲಕ್ಷ್ಮೀ ನಾರಾಯಣ ಹೊಳ್ಳ ಇವರ ಮಧುರ ಕಂಠದ ಹಾಡುಗಾರಿಕೆ ಮತ್ತಷ್ಟು ಕೇಳಬೇಕೆನಿಸುತ್ತಿತ್ತು. ರೋಹಿತ್‌ ಉಚ್ಚಿಲ, ಸುಮಿತ್‌ ಆಚಾರ್ಯ, ವರುಣ್‌ ಆಚಾರ್ಯ ಹಾಗೂ ಸಮರ್ಥ ಉಡುಪ ಇವರುಗಳ ಚೆಂಡೆ, ಮದ್ದಳೆಯ ಕೈಚಳಕ ಪ್ರದರ್ಶನ ವನ್ನು ಉತ್ತುಂಗಕ್ಕೇರಿಸುವಲ್ಲಿ ಸಹಕಾರಿ ಯಾಯಿತು. ಒಟ್ಟಿನಲ್ಲಿ ವೃತ್ತಿಪರ ಮೇಳದ ಕಲಾವಿದರಿಗೆ ಸರಿ ಸಮಾನ ವಾಗಿ ಸಂಸ್ಥೆಯ ವಿದ್ಯಾರ್ಥಿಗಳು ನೀಡಿದ ಯಕ್ಷಗಾನ ಪ್ರದರ್ಶನ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

ನರಹರಿ ರಾವ್‌, ಕೈಕಂಬ

Advertisement
Advertisement

Udayavani is now on Telegram. Click here to join our channel and stay updated with the latest news.

Next