ನಾನು ಅಣುಗ, ಅಣಗ ನಾನು
ನಾನು ಅಣಗನಾದರೇನು
ಅಣುಗನಾದರೇನು ನಾನು
ನಾದರೇನು.. ನಾದರೇನು…
ಇದು ಇತ್ತೀಚೆಗೆ ನಾನು ಕೇಳಿದ ಅಭಿಮನ್ಯು ಕಾಳಗದ ಪದ. ಶಾಲಾ ನಾಟಕದ ನೃತ್ಯರೂಪಕದ ಹಿನ್ನೆಲೆ ಗಾಯನವಲ್ಲ. ಅಂದರೆ ನಮ್ಮ ಯಕ್ಷಗಾನ ಭಾಗವತಿಕೆಯ ಧಾಟಿ ಯಾವ ಪರಿ ಬದಲಾಗಿದೆ ಎಂಬುದು ನಿಮ್ಮ ಊಹೆಗೆ ಬಿಟ್ಟ ವಿಚಾರ. ಪದದ ಪೂರ್ಣ ಪಾಠ ಹೀಗಿದೆ. “ನಾನು ಅಣುಗನಾದ ಡೆನ್ನ/ಬಾಣಗಳಿಗೆ ಬಾಲತನವೇ! ಹೂಣಿ ನೋಡಿರೆನುತಲೆಚ್ಚ/ ನಾಣಿಶರಗಳ’.
ದ್ರೋಣಾಚಾರ್ಯರು ಬಲಿದ ಚಕ್ರವ್ಯೂಹದ ದ್ವಾರವನ್ನು ಭೇದಿಸಿ ಒಳ ಪ್ರವೇಶಿಸಿದ ಅಭಿಮನ್ಯುವನ್ನು ಕಂಡು ಕೌರವಾದಿಗಳು ಸಣ್ಣವನಾದ ನಿನಗೆ ನಮ್ಮೊಡನೆ ಕಾದಾಡಿ ಜಯಿಸಲು ಸಾಧ್ಯವೇ ಎಂದು ಕೇಳಿದಾಗ, ಆತ್ಮವಿಶ್ವಾಸದ ಹಾಗೂ ವಿರೋಚಿತವಾದ ಮಾತುಗಳನ್ನೇ ಆಡು ತ್ತಾನೆ. ನಾನು ಬಾಲಕನಾದರೇನು ನನ್ನ ಬಾಣಗಳಿಗೆ ಬಾಲತನವಿದೆಯೇ ಪರೀಕ್ಷಿಸಿ ಎಂದು ಕೌರವ ಪಡೆಯ ಮೇಲೆ ಬಾಣದ ಸುರಿಮಳೆ ಗರೆಯುತ್ತಾನೆ. ಇದರ ಭಾವ ಹೇಗಿರತಕ್ಕದ್ದು? ಇದು ಸನ್ನಿವೇಶ.
Advertisement
ಇನ್ನೊಂದು ಸಂದರ್ಭ. ಪದ- “ಕುರುರಾಯ ಕೇಳೆನ್ನಮಾತ..’ ವೈಶಂಪಾ ಯನ ಸರೋವರದಲ್ಲಿ ವರುಣ ಮಂತ್ರ ಜಪಿಸುತ್ತಾ ಮುಳುಗಿ ಕುಳಿತಿರುವ ಕೌರವನನ್ನು ದಡದಲ್ಲಿ ನಿಂತು ಅಶ್ವತ್ಥಾಮ ಮಾತಾಡಿಸುವುದು. ಗೋಚರಕ್ಕೆ ಸಿಗಬಾರದೆಂಬ ಉದ್ದೇಶದಿಂದಲೇ ಕೌರವ ನೀರಿನಲ್ಲಿ ಮುಳುಗಿ ಅಡಗಿಕೊಂಡಿದ್ದಾನೆ. ಅವನೊಡನೆ ಮಾತಾಡುವ ಸನ್ನಿವೇಶದ ಭಾವ ಹೇಗಿರಬೇಕು! ನಾನು ಕಂಡ ಪ್ರದರ್ಶನದಲ್ಲಿ ಅಶ್ವತ್ಥಾಮ ಹದಿನೈದು ನಿಮಿಷ ಕುಣಿದ ಅಥವಾ ಭಾಗವತರು ಕುಣಿಸಿದರು. ಪದದ ಸ್ಥಾಯಿಭಾವ ಪ್ರಕಟವಾಗಲಿಲ್ಲ. ರಂಗಸ್ಥಳದಲ್ಲಿ ಏನೋ ಗೌಜು ಆಗುತ್ತಿರುವುದು ಅನುಭವಕ್ಕೆ ಬರುತ್ತದೆ.
Related Articles
Advertisement
ಬೆಳಕಿನ ಸೇವೆ ಬೆಳಗಿನ ತನಕ ಮಾಡದೆ ಕಾಲಮಿತಿಗೆ ಕ್ರಾಂತಿಕಾರಿಯಾಗಿ ಅನುಷ್ಠಾನಕ್ಕೆ ತರಲು ಭಾವನಾತ್ಮಕ ಹಾಗೂ ತಾಂತ್ರಿಕ ಅಡಚಣೆಗಳಿವೆ. ಯಕ್ಷಗಾನ ಕೇವಲ ಪ್ರದರ್ಶನ ಕಲೆಯಾಗಿರದೆ, ಆರಾಧನಾ ಕಲೆಯಾಗಿ ಉಳಿದು, ಬೆಳೆದು ಬಂದಿದೆ. ಅದರ ಸುತ್ತ ನಂಬಿಕೆಯ ಆವರಣವಿದ್ದು, ಆಸ್ತಿಕರ ಭಾವನೆಗೆ ಸಂಬಂಧಿಸಿದ ವಿಚಾರ. ಅಲ್ಲದೆ ಕಾಲಮಿತಿ ಪ್ರದರ್ಶನಕ್ಕಾಗಿ ಪ್ರಸಂಗವನ್ನು ಸಂಕುಚಿತಗೊಳಿಸುವಾಗ ಉಂಟಾಗಬಹುದಾದ ಅಪೂರ್ಣತೆಯನ್ನು ಭರ್ತಿ ಮಾಡುವ ವಿಧಾನ ಇನ್ನೂ ಕರಗತವಾಗಿಲ್ಲ. ಈ ಅಂಶಗಳನ್ನೆಲ್ಲ ಗಮನದಲ್ಲಿರಿಸಿಕೊಂಡು ಬದಲಾವಣೆಗಳನ್ನು ಮಾಡಿದಲ್ಲಿ ಮಾತ್ರವೇ ಯಕ್ಷಗಾನ ಕಲೆಯ ನೈಜತೆ ಉಳಿದು, ಮತ್ತಷ್ಟು ಬೆಳೆಯಲು ಸಾಧ್ಯ.ನಮ್ಮ ಕರಾವಳಿಯ ಯಕ್ಷಗಾನ ಶತಮಾನಗಳಿಂದ ಉಳಿದು, ಬೆಳೆದು ಬಂದ ಕಲೆ. ಇದರಲ್ಲಿ ನಮ್ಮ ಭಾರತೀಯ ಸಾಂಸ್ಕೃತಿಕ ಪರಂಪರೆ ಅಡಕವಾಗಿದೆ. ಈ ದೃಶ್ಯಮಾಧ್ಯಮದ ನೆಲೆಗಟ್ಟು, ಮೂಲಸ್ವರೂಪವನ್ನು ಕಾಪಿಟ್ಟು ಮುಂದಿನ ತಲೆಮಾರಿಗೆ ದಾಟಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಬೇಳೂರು ರಾಘವ ಶೆಟ್ಟಿ