Advertisement

Yakshagana; ಮಕ್ಕಳ ಯಕ್ಷಗಾನ ಅರ್ಧದಲ್ಲೇ ಸ್ಥಗಿತ!: ಸಂಘಟಕರು ಹೇಳುವುದೇನು?

09:16 PM Nov 05, 2023 | Team Udayavani |

ಕುಂದಾಪುರ: ಇಲ್ಲಿಗೆ ಸಮೀಪದ ಹೇರಿಕುದ್ರು ಎಂಬಲ್ಲಿ ಮಹಾಗಣಪತಿ ಮಾನಸ ಮಂದಿರದಲ್ಲಿ ಶನಿವಾರ ರಾತ್ರಿ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ವೇಳೆ ಅನುಮತಿಸಿದ ಸಮಯ ಮೀರಿ ಮೈಕ್‌ ಬಳಕೆ ಮಾಡಲಾಗುತ್ತಿದೆ ಎಂಬ ದೂರಿನ ಮೇಲೆ ಆಗಮಿಸಿದ ಪೊಲೀಸರು ಯಕ್ಷಗಾನ ಪ್ರದರ್ಶನಕ್ಕೆ ತಡೆಯೊಡ್ಡಿದ್ದಾರೆ. ಈ ಘಟನೆ ವ್ಯಾಪಕ ಟೀಕೆಗೆ, ಯಕ್ಷಗಾನ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಯಕ್ಷಗಾನ ನಿಲ್ಲಿಸಬಾರದಿತ್ತು, ಖಾಸಗಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಬಳಕೆಗೆ ನಿಯಂತ್ರಣ ಹೇರಬಹುದಿತ್ತು ವಿನಾ ಪ್ರದರ್ಶನ ನಿಲ್ಲಿಸಿದ್ದು ಸರಿಯಲ್ಲ, ಎಚ್ಚರಿಕೆ ಕೊಟ್ಟು ಮುಂದಿನ ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ಮುಗಿಸುವಂತೆ ಸೂಚಿಸಬಹುದಿತ್ತು ಎಂಬ ಆಕ್ರೋಶದ ಮಾತುಗಳು ಕೇಳಿ ಬಂದಿವೆ.

ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಹೇರಿಕುದ್ರು ಯಕ್ಷ ಹಬ್ಬ ನ.3ರಿಂದ ಆರಂಭವಾಗಿದ್ದು ನ.11ರವರೆಗೆ ಆಯೋಜನೆಯಾಗಿದೆ. ನ.4ರಂದು ಗೆಜ್ಜೆನಾದ ಯಕ್ಷಗಾನ ಕಲಾ ಮಂಡಳಿ ಕುಂದಾಪುರ ಇವರಿಂದ ವಿಘ್ನೇಶಪ್ರಸಾದ ಗಂಗೊಳ್ಳಿ ನಿರ್ದೇಶನದಲ್ಲಿ ಶ್ರೀ ಕೃಷ್ಣ ಲೀಲಾಮೃತ ಪ್ರಸಂಗದ ಪ್ರದರ್ಶನ ನಡೆಯುತ್ತಿತ್ತು. ಈ ವೇಳೆ ಪೊಲೀಸರು ಆಗಮಿಸಿ ದೂರು ಬಂದ ಹಿನ್ನೆಲೆಯಲ್ಲಿ ಪ್ರದರ್ಶನ ಸ್ಥಗಿತಗೊಳಿಸಲು ಸೂಚಿಸಿದ್ದಾಗಿ ಮೈಕ್‌ ಮೂಲಕ ಘೋಷಣೆ ಮಾಡಿ ಪ್ರದರ್ಶನ ರದ್ದು ಮಾಡಲಾಯಿತು. ಆನ್‌ಲೈನ್‌ ಮೂಲಕ ಪ್ರದರ್ಶನ ಇದ್ದ ಕಾರಣ ಈ ತುಣುಕು ಎಲ್ಲೆಡೆ ವೈರಲ್‌ ಆಗಿ ವಿರೋಧ ಕೇಳಿ ಬಂದಿದೆ.

ಈ ಬಗ್ಗೆ ಸಂಘಟಕರು ಹೇಳುವುದು ಹೀಗೆ
ರಾತ್ರಿ 10.30ವರೆಗೆ ಅನುಮತಿ ಪಡೆದಿದ್ದೆವು, ಇದು ರಾಜಕೀಯ ಷಡ್ಯಂತ್ರ. 8-10 ವರ್ಷದ ಮಕ್ಕಳಿಗೆ ತರಬೇತಿ ನೀಡಿ ಪ್ರದರ್ಶನ ನಡೆಯುತ್ತಿತ್ತು. ಭಾಗವತಿಕೆ ಮಾಡಲು ಬಾಲಕನೇ ಇದ್ದು ಬೆಳಕಿನ ಪ್ರಖರತೆಗೆ ಭಾಗವತಿಕೆ ಅಸಾಧ್ಯವಾಗಿ ಅರ್ಧದಲ್ಲೇ ನಿಲ್ಲಿಸಿದ ಕಾರಣ ಮರವಂತೆಯಿಂದ ದೇವದಾಸ ಭಾಗವತರನ್ನು ಕರೆಸಿದ ಕಾರಣ ಮುಗಿಸಿದ್ದು ವಿಳಂಬವಾಯಿತು. 2004ರಲ್ಲಿ ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿ ಯಕ್ಷೋತ್ಸವ ಸಮಿತಿ ಪ್ರಾರಂಭಿಸಿ ಪ್ರತೀ ವರ್ಷ ಸಪ್ತಾಹ ನಡೆಸಲಾಗುತ್ತಿದೆ. ಆದರೆ ಈಗ ರಾಜಕೀಯ ನುಸುಳಿದೆ. ನಮ್ಮ ಸಂಸ್ಥೆಯಿಂದಲೇ ಕಲಿತ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆಗಮಿಸಿ ಯಕ್ಷಗಾನ ನಿಲ್ಲಿಸಿದ್ದಾರೆ ಎಂದು ಯಕ್ಷೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ, ಪ್ರಸಂಗಕರ್ತ ಮಹಾಬಲ ಹೇರಿಕುದ್ರು ಉದಯವಾಣಿಗೆ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next