Advertisement

“ಯಕ್ಷಗಾನವನ್ನು ಖುಷಿ ಬಂದಂತೆ ಬದಲಾಯಿಸುವಂತಿಲ್ಲ’

03:45 AM Jun 30, 2017 | Harsha Rao |

ಕಾಸರಗೋಡು: ಯಕ್ಷಗಾನವನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವ ಪರಿಪಾಠ ಇತ್ತೀಚೆಗೆ ಹೆಚ್ಚಾಗಿದೆ. ಕಾಲಕ್ಕೆ ಹೊಂದಿಕೊಂಡು ಅನಿವಾರ್ಯ ಬದಲಾವಣೆಗಳನ್ನು ಮಾಡುವಾಗ ಈ ಕಲೆಯ ಮೂಲಸತ್ವಕ್ಕೆ ಚ್ಯುತಿಯಾಗಬಾರದು ಎಂದು ಹಿರಿಯ ವಿದ್ವಾಂಸ, ಯಕ್ಷಗಾನ ಹಿಮ್ಮೇಳ-ಮುಮ್ಮೇಳಗಳ ಅಧ್ಯಯನ ನಡೆಸಿದ ಸಂಶೋಧಕ ಡಾ|ರಾಘವನ್‌ ನಂಬಿಯಾರ್‌ ಅಭಿಪ್ರಾಯಪಟ್ಟರು.

Advertisement

ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ಒಂದು ತಿಂಗಳ ಯಕ್ಷಗಾನ ತರಬೇತಿ ಶಿಬಿರದ ಅಂಗವಾಗಿ ಆಯೋಜಿಸಿದ ಅಧ್ಯಯನ ಪ್ರವಾಸದ ಮಧ್ಯೆ  ಅವರು ಉಡುಪಿಯ ಯಾತ್ರಿ ನಿವಾಸ ಸಭಾಂಗಣದಲ್ಲಿ ನಡೆದ ವಿಶೇಷೋಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಾವುದೇ ಒಂದು ರಂಗದಲ್ಲಿ ಲೋಕಧರ್ಮಿ ಹಾಗೂ ನಾಟ್ಯಧರ್ಮಿ ಎಂಬ ಧರ್ಮಗಳಿವೆ. ಯಕ್ಷಗಾನದಲ್ಲೂ ಇದನ್ನು ಕಾಣಬಹುದು. ಆಹಾರ್ಯ ಬಹಳ ಮುಖ್ಯವಾದುದು. ವೇಷ ವಿಸ್ತಾರವಾದಂತೆ  ನಡಿಗೆಯೂ ವಿಸ್ತಾರಗೊಂಡು ನಿಧಾನಗತಿಯನ್ನು  ಪಡೆಯಬೇಕು. ಆದು ದರಿಂದ ಪುಂಡುವೇಷಗಳ  ವೇಗ ಬಣ್ಣದ ವೇಷದಲ್ಲಿಲ್ಲ. ಬಣ್ಣಗಾರಿಕೆ ಮತ್ತು  ವೇಷಗಳ ಬಣ್ಣದ ಬಳಕೆಯಲ್ಲಿಯೂ  ಕಲಾವಿದ ತಿಳಿದಿರಬೇಕಾದ ಹಲವು ವಿಚಾರಗಳಿವೆ. ತನಗೆ ತೋಚಿದಂತೆ ಬಣ್ಣಗಾರಿಕೆಯನ್ನು  ಮಾಡಬಾರದು. ಬದಲಾವಣೆ ಅಥವಾ ಸ್ವಂತಿಕೆ ಅಳವಡಿಸುವುದಿದ್ದರೆ  ಅದಕ್ಕೆ ನಿರ್ದಿಷ್ಟವಾದ  ಚೌಕಟ್ಟು ಅಥವಾ ಮಾನದಂಡ ಇರಬೇಕು. ರಸನಿಷ್ಪತ್ತಿಯಲ್ಲೂ ಬಣ್ಣಕ್ಕೆ ಮಹತ್ವವಿದೆ. ಅದ್ಭುತ-ಹಳದಿ, ಹಾಸ್ಯ-ಬಿಳಿ, ಶೃಂಗಾರ-ಹಸುರು, ರೌದ್ರ-ಕೆಂಪು, ಭಯಾನಕ-ಕಪ್ಪು, ಕರುಣ-ತೌಡು, ವೀರ-ಬಂಗಾರ, ಬೀಭತ್ಸ-ನೀಲಿ ಈ ರೀತಿಯಲ್ಲಿ ವೇಷಧಾರಿ ಬಣ್ಣಗಳ ಬಳಕೆ ಮಾಡಬೇಕಾಗುತ್ತದೆ. ಬಣ್ಣದ ವೇಷ ಪದದ ನಿಷ್ಪತ್ತಿ ಮಲೆಯಾಳದ ವಣ್ಣಂ (ದಪ್ಪ) ಎಂಬರ್ಥದಲ್ಲಿ ಬಂದಿರಬೇಕು. ಹೊರತು ಅದು ಬಣ್ಣದಿಂದ ಕೂಡಿದ್ದು ಎಂಬರ್ಥವಿಲ್ಲ.

ಆಂಗಿಕವಾಗುವಾಗ ಹಾಡು ಬರಿಯ ಹಾಡಲ್ಲ. ಹಾಡಿನ ರೂಪದಲ್ಲಿ ಕಥೆಯನ್ನು ಹೇಳುವುದೇ ಮಹತ್ವ. ಪಾತ್ರದ ಘನತೆಗೆ ಹೊಂದಿಕೊಂಡು ನಡೆಯಲ್ಲಿ ವೇಗ ಮತ್ತು ನಿಧಾನವನ್ನು ಅನುಸರಿಸಬೇಕಾಗುತ್ತದೆ ಇಂತಹ ಕಡೆ ಕಲಾವಿದನಲ್ಲಿ ಕಲೆಯ ಬಗ್ಗೆ ಗೌರವ ಭಾವನೆ ಮತ್ತು  ಅದರ ಪ್ರತಿಯೊಂದು ಒಳನೋಟಗಳೊಳಗಿನ ಬಗ್ಗೆ ಎಚ್ಚರ ಇರಬೇಕಾಗುತ್ತದೆ ಎಂದು ಡಾ|ರಾಘವನ್‌ ನಂಬಿಯಾರ್‌ ಅಭಿಪ್ರಾಯಪಟ್ಟರು. 

ಶಿಬಿರಾರ್ಥಿಗಳು ಸಂವಾದದಲ್ಲಿ ಭಾಗವಹಿಸಿದ್ದರು. ಶಿಬಿರದ ಸಂಚಾಲಕ ಡಾ.ರತ್ನಾಕರ ಮಲ್ಲಮೂಲೆ ಸ್ವಾಗತಿಸಿದರು. ಶಿಬಿರಾರ್ಥಿ ಶ್ರದ್ಧಾ  ನಾಯರ್ಪಳ್ಳ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next