Advertisement

ಹಿರಿಯ ಯಕ್ಷಗಾನ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಇನ್ನಿಲ್ಲ

04:14 PM Sep 27, 2020 | keerthan |

ವಿಟ್ಲ: ಕರೋಪಾಡಿ ಗ್ರಾಮದ ತೆಂಕಬೈಲು ನಿವಾಸಿ, ಹಿರಿಯ ಯಕ್ಷಗಾನ ಭಾಗವತ, ಯಕ್ಷಗುರು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ (76) ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.27ರಂದು ನಿಧನ ಹೊಂದಿದರು. ಅವರು ಪುತ್ರ-ಹವ್ಯಾಸಿ ಭಾಗವತ-ಶಿಕ್ಷಕ ಮುರಳೀಕೃಷ್ಣ ಶಾಸ್ತ್ರಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Advertisement

ತನ್ನದೇ ಶೈಲಿಯ ಹಾಡುಗಾರಿಕೆಯಿಂದ ಕಲಾಭಿಮಾನಿಗಳ ಮನಗೆದ್ದಿದ್ದ ಅವರು ಉಡುಪಿ ಯಕ್ಷಗಾನ ಕಲಾರಂಗ, ದ.ಕ.ಜಿಲ್ಲಾ ರಾಜ್ಯೋತ್ಸವ, ಕುರಿಯ ವಿಟ್ಠಲ ಶಾಸ್ತ್ರಿ, ಸಂಪಾಜೆ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಪದ್ಯಾಣ, ಪಟ್ಟಾಜೆ, ದಿವಾಣ ಪ್ರಶಸ್ತಿಗಳಲ್ಲದೆ ಹಲವು ಪುರಸ್ಕಾರ, ಸಮ್ಮಾನಗಳಿಗೆ ಭಾಜನರಾಗಿದ್ದರು.

1944ರಲ್ಲಿ ಪ್ರಸಿದ್ಧ ಚಕ್ರಕೋಡಿ ಮನೆತನದ ತೆಂಕಬೈಲು ಕೃಷ್ಣ ಶಾಸ್ತ್ರಿ ಸಾವಿತ್ರಿಯಮ್ಮ ದಂಪತಿಯ ಪುತ್ರರಾಗಿ ಜನಿಸಿದ ತಿರುಮಲೇಶ್ವರ ಶಾಸ್ತ್ರಿಯವರು ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ತೆಂಕಬೈಲು ಎಂಬಲ್ಲಿ ವಾಸಿಸುತ್ತಿದ್ದರು.

ಇದನ್ನೂ ಓದಿ: ಆಧ್ಯಾತ್ಮ ಮತ್ತು ಪ್ರಕೃತಿಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ ಶೀರೂರು ಮಠ !

ಅವರು ಪೆರ್ಲದ ಶ್ರೀ ಪಡ್ರೆ ಚಂದು ಯಕ್ಷಗಾನ ತರಬೇತಿ ಕೇಂದ್ರದ ಹಿಮ್ಮೇಳ ಅಧ್ಯಾಪಕರಾಗಿ ಹಲವಾರು ಶಿಷ್ಯರನ್ನು ಹೊಂದಿದ್ದರು. ಹವ್ಯಾಸಿ ಭಾಗವತರಾಗಿಯೂ, ಕೆಲ ವರ್ಷ ವೃತ್ತಿ ಮೇಳಗಳಲ್ಲಿ ಭಾಗವತರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೈರಂಗಳ, ಬಪ್ಪನಾಡು, ಮಲ್ಲ, ಮಧೂರು, ಇರಾ, ಕುಂಟಾರು ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ.

Advertisement

ಸಂಬಂಧಿಕರಾದ ರಾಮ ಭಟ್, ಸುಳ್ಯ ಸುಬ್ರಾಯ ಭಟ್, ನಾರಾಯಣ ಭಟ್ ಅವರ ಪ್ರೋತ್ಸಾಹದಿಂದ ಹಿಮ್ಮೇಳ ಭಾಗವತಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು, ಚೆಂಡೆ, ಮದ್ದಳೆ, ಕೊಳಲು ನುಡಿಸುವುದರಲ್ಲೂ ನಿಷ್ಣಾತರು. ಮಾಂಬಾಡಿ ನಾರಾಯಣ ಭಾಗವತರಿಂದ ಭಾಗವತಿಕೆಯ ಕಲೆಯನ್ನು ಕಲಿತುಕೊಂಡರೆ, ಬಜಕ್ಕಳ ಗಣಪತಿ ಭಟ್ಟರಿಂದ ಶಾಸ್ತ್ರೀಯ ಸಂಗೀತವನ್ನು ಅಭ್ಯಸಿಸಿದರು. ಹವ್ಯಾಸಿ ಭಾಗವತರಾಗಿಯೇ ಜನಪ್ರಿಯರಾಗಿದ್ದ ಇವರು, ಅಗರಿ ಶೈಲಿಯಿಂದ ಪ್ರಭಾವಿತರಾಗಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಹಲವಾರು ಹವ್ಯಾಸಿ ಆಟ, ಕೂಟಗಳಲ್ಲಿ ಭಾಗವತಿಕೆ ಮಾಡುತ್ತಲೇ ತೆಂಕಬೈಲು ಶೈಲಿಯಲ್ಲಿ ಪ್ರಭುತ್ವ ಸಾಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next