Advertisement

ಜ್ಯೋತಿ ಅವರ ಕೃತಿ ಮೈಸೂರಿನಲ್ಲಿ ಸಿಎಂ ಬಿಡುಗಡೆ

12:30 AM Nov 29, 2019 | Sriram |

ಕಾಸರಗೋಡು: ಅತಿಮಾನುಷ ಸಾಧನೆಗೈದ ವೀರ ಸಾಹಸಿಗರ ಜೀವನಗಾಥೆಯನ್ನು ಆಧರಿಸಿದ ಪ್ರಸಂಗಗಳು ಯಕ್ಷಗಾನಕ್ಕೆ ಹೊಸತಲ್ಲ. ಆದರೆ ದೇಶದ ಪ್ರಧಾನಮಂತ್ರಿಯೊಬ್ಬರ ಬದುಕಿನ ಯಶೋಗಾಥೆ, ರಾಜಕೀಯ ಏಳಿಗೆಯ ಕಥೆ, ದೇಶದ ಅಭ್ಯುದಯದ ಹೆಜ್ಜೆಯ ಕಥೆ ಯಕ್ಷಗಾನಕ್ಕೆ ಇದೇ ಮೊದಲು. ಅದುವೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನುದ್ದೇಶಿಸಿದ “ನರೇಂದ್ರ ವಿಜಯ’. ಹೀಗೊಂದು ಪ್ರಸಂಗ ಹೆಣೆಯುವ ಕಥನ ಕೈಂಕರ್ಯ ಮುಗಿದು, ನೂತನ ಚರಿತ್ರೆಯ ಕೃತಿಯನ್ನು ಮೈಸೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಿಡುಗಡೆಗೊಳಿಸಿದರು.

Advertisement

ಉದಯೋನ್ಮುಖ ಮಹಿಳಾ ಯಕ್ಷಗಾನ ಕಲಾವಿದೆ ಜ್ಯೋತಿ ಶಾಸ್ತ್ರಿ ಅವರು ಹೆಣೆದಿರುವ ಪ್ರಧಾನಿ ನರೇಂದ್ರಮೋದಿಯವರ ಯಕ್ಷಗಾನೀಯ ಜೀವನಗಾಥೆಗೆ ಪ್ರಸಿದ್ಧ ಕಲಾವಿದ, ಪ್ರಸಂಗಕತೃ ಎಂ.ಕೆ.ರಮೇಶ ಆಚಾರ್ಯ ಪದ್ಯಗಳನ್ನು ಬರೆದಿದ್ದಾರೆ.

ಜಾಗತಿಕ ನೆಲೆಯಲ್ಲಿ ಭಾರತವನ್ನು ವಿಶ್ವರಾಷ್ಟ್ರಗಳ ಮುಂದೆ ಮುಂಪಕ್ತಿಯಲ್ಲಿ ನಿಲ್ಲುವಂತೆ ಮತ್ತು ಗೌರವಿಸುವಂತೆ ಮಾಡಿದ ಪ್ರಧಾನಿ ಮೋದಿಯವರ ಜೀವನದ ಸಂಕ್ಷಿಪ್ತ ಪೂರ್ವ ವೃತ್ತಾಂತ ಮತ್ತು ಗುಜರಾತಿನ ಮುಖ್ಯಮಂತ್ರಿಯಾಗಿ ಅಭಿವೃದ್ಧಿ ಪರ್ವವನ್ನು ದೇಶಕ್ಕೆ ಪರಿಚಯಿಸಿದ ಮೋದಿಯವರ ಯಶೋಗಾಥೆಯಲ್ಲಿ ಬಲಗೈಯ್ಯಂತೆ ನಿಂತ ಅಮಿತ್‌ ಶಾರ ಕುರಿತಾಗಿಯೂ ಪ್ರಸಂಗದಲ್ಲಿ ವಿಶೇಷ ಪಾತ್ರಚಿತ್ರಣಗಳಿವೆ.

ಒಟ್ಟಂದದಲ್ಲಿ ಮೋದಿ ವೈಭವೀಕರಣಕ್ಕಿಂತ ಮಿಗಿಲಾಗಿ ಯಕ್ಷಗಾನೀಯ ಆಶಯದಲ್ಲಿ ಎಲ್ಲಾ ರಸಗಳ ಆಧಾರದಲ್ಲಿ ವೈವಿಧ್ಯ ಪಾತ್ರಗಳು ಮತ್ತು ಮೋದಿ ಆಡಳಿತ ಬಂದ ಮೇಲೆ ದೇಶದಲ್ಲಿ ನಡೆದ ಪಲ್ಲಟಗಳು, ಕರೆನ್ಸಿ ಬದಲಾವಣೆ ಹಾಗೂ ಪರಿಣಾಮ, ಉಗ್ರರನ್ನು ಹೆಡೆಮುರಿಕಟ್ಟಿದ ದಿಟ್ಟತೆ ಸೇರಿದಂತೆ ವೈವಿಧ್ಯ ರಸಘಟ್ಟಗಳು ಬರುವಂತೆ ಕಥನ ಶೈಲಿಯಲ್ಲಿ ಹೆಣೆದ ಯಕ್ಷಗಾನ ಪ್ರಸಂಗವನ್ನು ಹಿಂದಿ ಭಾಷೆಗೂ ತರ್ಜುಮೆ ಮಾಡಲಾಗುತ್ತಿದೆ.

ಮುಂಬರುವ ದಿನಗಳಲ್ಲಿ ದೆಹಲಿಯಲ್ಲೂ ಪ್ರದರ್ಶನ ಏರ್ಪಡಿಸುವಂತೆ ಸಂಕಲ್ಪ ತೊಡಲಾಗಿದೆ.ಕರಾವಳಿಯಲ್ಲಿ ಜನರ ಮೇಲೆ ಯಕ್ಷಗಾನದಷ್ಟು ಪ್ರಭಾವ ಬೀರುವ ಕಲೆ ಮತ್ತೂಂದಿಲ್ಲ.

Advertisement

ಈ ದಿಶೆಯಲ್ಲಿ ಯಕ್ಷಗಾನದ ಮೂಲಕ ಭಾರತದ ಭವ್ಯ ನವೋತ್ಥಾನಕ್ಕೆ ಮುನ್ನುಡಿ ಬರೆದ ರಾಷ್ಟ್ರನಾಯಕರ ಕತೆಯನ್ನು ಹೇಳುತ್ತಾ, ದೇಶಭಕ್ತಿಯ ಸ್ಫೂರ್ತಿಗಾಥೆಗಳನ್ನು ತಿಳಿಸುತ್ತಾ ಹೊಸ ಪೀಳಿಗೆಯಲ್ಲಿ ಭಾರತದ ನವನಿರ್ಮಾಣದ ಪ್ರೇರಣೆ ಮೂಡಿಸುವುದಷ್ಟೇ ಈ ಪ್ರಸಂಗದ ಆಶಯ.

ಇದು ಎಲ್ಲಾ ಮೇಳಗಳಲ್ಲೂ, ಎಲ್ಲಾ ಹವ್ಯಾಸಿ ಸಂಘಸಂಸ್ಥೆಗಳಲ್ಲೂ ಪ್ರದರ್ಶನಗೊಳ್ಳಬೇಕು. ಕೇವಲ 11 ಕಥಾಪಾತ್ರಗಳಿರುವ, ಎರಡೂವರೆ ತಾಸಿನ ಕಥಾಹಂದರ ಇದಾಗಿದ್ದು, ಮೊದಲ ಪ್ರದರ್ಶನಕ್ಕೆ ಸ್ಥಳ ನಿರ್ಣಯವಾಗಿಲ್ಲ.
ಪ್ರಾಯೋಜಕತ್ವ ಒದಗಿಸಿದ್ದಲ್ಲಿ ಯಕ್ಷಗಾನೀಯ ವಾತಾವರಣ ಇದ್ದಡೆ ಪ್ರದರ್ಶನ ನೀಡಲು ತಂಡ ಸಜ್ಜಾಗಿದೆಯೆಂದು ಪ್ರಸಂಗಕರ್ತೆ, ಕಲಾವಿದೆ ಜ್ಯೋತಿ ಶಾಸ್ತ್ರಿ ತಿಳಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲಿನಲ್ಲಿ ನ.26ರಂದು ನಡೆದ ಕೃತಿ ಬಿಡುಗಡೆ ಸಮಾರಂಭದ‌ಲ್ಲಿ ಮುಖ್ಯಮಂತ್ರಿಯವರ ಜೊತೆ ಹುಣಸೂರು ಬಿಜೆಪಿ ಅಭ್ಯರ್ಥಿ ಅಡಗೂರು ವಿಶ್ವನಾಥ, ಶಾಸಕ ನಾಗೇಂದ್ರ, ಉದ್ಯಮಿ ಇವಾಂಕಾ ಗ್ರೂಪ್‌ ಆಫ್‌ ಡೆವಲಪರ್ ಎಂ.ಡಿ. ಗೋಪಾಲಕೃಷ್ಣ, ಪ್ರಸಂಗಕರ್ತೆ, ಕಲವಿದೆ ಜ್ಯೋತಿಶಾಸ್ತ್ರಿ ತೀರ್ಥಹಳ್ಳಿ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next