Advertisement

ಇನ್ನಿಲ್ಲವಾದ ಭಾಗವತ ನಗರ ಸುಬ್ರಹ್ಮಣ್ಯ ಆಚಾರ್‌

08:00 PM Feb 06, 2020 | mahesh |

ಸುಂದರವಾದ ಆಳಂಗ ಶರೀರ-ಶಾರೀರ, ಸ್ಪಷ್ಟ ಉಚ್ಚಾರ, ಅಪೂರ್ವವಾದ ರಂಗತಂತ್ರ, ಪ್ರಸಂಗ ನಡೆಯಿಂದ ಅಸಂಖ್ಯಾತ ಯಕ್ಷಗಾನ ಪ್ರಿಯರ ಮನಗೆದ್ದ ಮಂದಾರ್ತಿ ಮೇಳದ ಪ್ರಧಾನ ಭಾಗವತ ನಗರ ಸುಬ್ರಹ್ಮಣ್ಯ ಆಚಾರ್‌ ದುರಂತವಾಗಿ ಅಭಿಮಾನಿಗಳನ್ನು ಅಗಲಿದ್ದಾರೆ.ಅವರಿಗೆ 43 ವರ್ಷವಷ್ಟೇ ವಯಸ್ಸಾಗಿತ್ತು.

Advertisement

ಕಣಕಿಬೆಳ್ಳೂರಿನಲ್ಲಿ ಜನಿಸಿದ ಅವರು ಬಾಲ್ಯದಲ್ಲಿಯೇ ಯಕ್ಷಗಾನದ ಸೆಳೆತಕ್ಕೊಳಗಾಗಿ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಬಡಗುತಿಟ್ಟಿನ ಕುಂಜಾಲು ಶೈಲಿಯ ಪ್ರಾತಿನಿಧಿಕ ಭಾಗವತರಾಗಿ ಮೂಡಿಬಂದರು. ನೃತ್ಯ ಅಭ್ಯಾಸ ಮಾಡಿ, ಮದ್ದಳೆ ವಾದನವನ್ನೂ ಕಲಿತರು.

ಪ್ರಥಮವಾಗಿ ಗೋಳಿಗರಡಿ ಮೇಳದಲ್ಲಿ ಸಂಗೀತಗಾರನಾಗಿ ಸೇರಿಕೊಂಡ ಅವರು ಬಳಿಕ ಎರಡು ವರ್ಷ ಕಮಲಶಿಲೆ ಮೇಳದಲ್ಲಿ ಸಹ ಭಾಗವತರಾಗಿ ಸೇವೆಸಲ್ಲಿಸಿದ್ದರು.ಅವರ ಭಾಗವತಿಕೆಯ ವಿವಿಧ ಮಜಲುಗಳು ಪ್ರೇಕ್ಷಕರಿಗೆ ತಲುಪಿದ್ದು ಮಂದಾರ್ತಿ ಮೇಳದ ತಿರುಗಾಟದಲ್ಲಿ. ಭಾಗವತಿಕೆಗೆ ಪರಂಪರೆಯನ್ನು ಸೇರಿಸಿ ನಿತ್ಯ ನೂತನತೆಯನ್ನು ಪ್ರೇಕ್ಷಕರಿಗೆ ಅವರು ಬಡಿಸುತ್ತಿದ್ದ ರೀತಿ ಅಸಾಧಾರಣ. ರಾಮಾಯಣ ಭಾರತ ಪ್ರಸಂಗಗಳ ಪದ್ಯಗಳಲ್ಲಿ ಅಪಾರವಾದ ಹಿಡಿತದೊಂದಿಗೆ ಅವರು ನಿರ್ದೇಶಿಸುತ್ತಿದ್ದ ರಂಗನಡೆ ಅಪೂರ್ವವಾಗಿತ್ತು. ದೈವೀದತ್ತವಾಗಿ ದಕ್ಕಿರುವ ಏರು ಶ್ರುತಿಯ ಕಂಠ, ಕಲಾವಿದರನ್ನು ದುಡಿಸಿಕೊಳ್ಳುತ್ತಿದ್ದ ರೀತಿಯಿಂದ ಮಂದಾರ್ತಿ ಐದೂ ಮೇಳದ ಕಲಾವಿದರ ಪ್ರೀತಿಗೆ ಪಾತ್ರರಾಗಿದ್ದರು.

ಬಯಲಾಟ ವಲಯದಲ್ಲಿ ಅತ್ಯುನ್ನತ ಸ್ಥಾನ ಪಡೆದ ಅವರು ಯಕ್ಷಗಾನದ ಗುರುಗಳಾಗಿ ನಾಲ್ಕು ವರ್ಷ ಉಡುಪಿ ಕೇಂದ್ರದಲ್ಲಿ ಸೇವೆ ಸಲ್ಲಿಸಿ ಅನೇಕ ಭಾಗವತರನ್ನು ತರಬೇತಿಗೊಳಿ ಸಿದ್ದಾರೆ.ಜನ್ಸಾಲೆ ರಾಘವೇಂದ್ರ ಆಚಾರ್ಯ, ಚಂದ್ರಕಾಂತ ರಾವ್‌, ಮೊಗೆಬೆಟ್ಟು ಪ್ರಸಾದ ಕುಮಾರ್‌, ಸುದೀಪ ಕುಮಾರ್‌ ಶೆಟ್ಟಿ, ಗಣೇಶ ಅಚಾರ್‌ ಮುಂತಾದವರು ಅವರ ಗರಡಿಯಲ್ಲೇ ಪಳಗಿದವರು.

ಮಳೆಗಾಲದಲ್ಲಿ ಅವರೇ ಯೋಜಿಸಿ ನಿರ್ಧರಿಸಿದ ನೂತನ ಯಕ್ಷ ಪ್ರಯೋಗವೇ ನಡುಮನೆಯಲ್ಲಿ ಯಕ್ಷ ಗಾಯನ, ಮೊದಲು ಕೇವಲ ಪೌರಾಣಿಕ ಪ್ರಸಂಗಗಳ ಪದ್ಯವನ್ನು ಮದ್ದಳೆ ಜೊತೆಗೆ ಮನೆಮನೆಯಲ್ಲಿ ಹಾಡಿ ಭಾಗವತಿಕೆಗೆ ಅಭಿಮಾನಿಗಳನ್ನೇ ಸೃಷ್ಟಿಸಿ ಮೊದಲ ವರ್ಷದಲ್ಲೇ 500 ಪ್ರಯೋಗಗಳನ್ನು ಮಾಡಿ ದಾಖಲೆ ನಿರ್ಮಿಸಿದ್ದರು.ಅನಂತರ ರೇಣುಕಾ ಮಹಾತ್ಮೆ, ಸಾಲ್ವ ಶೃಂಗಾರ, ಚಿತ್ರಾಕ್ಷಿ ಕಲ್ಯಾಣ, ದಕ್ಷ ಯಜ್ಞ ಮುಂತಾದ ಪೌರಾಣಿಕ ಪ್ರಸಂಗಳನ್ನು ಎರಡು ತಾಸಿಗೆ ಸೀಮಿತಗೊಳಿಸಿ ಯಶಸ್ವಿ ಪ್ರದರ್ಶನ ನೀಡಿದ್ದರು. ತಾಳವೇ ಹಾಕದೆ ಲಯದಲ್ಲಿ ಪದ್ಯ ಹೇಳುವ ಕ್ರಮ, ಅವರದ್ದೇ ಆದ ರಾಗದ ಸಂಚಾರ ಕ್ರಮ, ಎಷ್ಟೇ ಸಾರಿ ಕೇಳಿದರೂ ಹೊಸತೆನಿಸುವ ರಾಗ ಮಾಧುರ್ಯ, ಹಾಡುಗಾರಿಕೆಯಲ್ಲಿ ತನ್ನತನ ಮತ್ತು ಸರ್ವರನ್ನೂ ಆಕರ್ಷಿಸುವ ಗಂಧರ್ವ ಗುಣವನ್ನು ಅವರ ಪದ್ಯಗಳಲ್ಲಿ ಕಾಣಬಹುದು.ಏರು ಶ್ರುತಿಯ ಕಂಠದಿಂದ ಮೂಡಿಬರುವ ಭಾಮಿನಿ ಪದ್ಯಗಳು ಕರ್ಣಾನಂದ ನೀಡುತ್ತಿದ್ದವು.

Advertisement

ಅಬೇರಿ, ವೃಂದಾವನ ಸಾರಂಗ, ಬಹುದಾರಿ,ದೇಶಿ, ಚಕ್ರವಾಕ, ವಾಸಂತಿ, ಚಾಂದ್‌, ಮಧ್ಯಮಾವತಿ ರಾಗಗಳಲ್ಲಿ ಅಪಾರ ಹಿಡಿತವಿದ್ದು ರತ್ನಾವತಿ ಕಲ್ಯಾಣದ “ಸರಿಯಾರೀ ತರುಣಿ ಮಣಿಗೆ’ ಮತ್ತು ಪಟ್ಟಾಭಿಷೇಕದ ಬಹುದಾರಿ ರಾಗದಲ್ಲಿ “ಜನಕಾ ಕಿರುಜನನಿಯಹ ವನಜಮುಖೀ ಕೈಕೇಯಿ’ ಇವೆರಡು ಪದ್ಯ ಸಾಕು ಅವರ ಭಾಗವತಿಕೆಯ ಆಳ ವಿಸ್ತಾರ ಅರಿಯಲು.

-ಪ್ರೊ| ಎಸ್‌.ವಿ.ಉದಯ ಕುಮಾರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next