Advertisement

Yakshagana;ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಕಲಾವಿದರಿಂದ ಅಮೆರಿಕದಲ್ಲಿ ಅಭಿಯಾನ

05:39 PM Jul 01, 2024 | Team Udayavani |

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ 9 ಮಂದಿ ಕಲಾವಿದರ ತಂಡ ಜು.9 ರಿಂದ ಅಮೆರಿಕದಲ್ಲಿ 75 ದಿನಗಳ ಕಾಲ ಯಕ್ಷಗಾನ ಅಭಿಯಾನ ನಡೆಸಲಿದೆ.

Advertisement

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡದ ಹಿಮ್ಮೇಳ ಕಲಾವಿದ ಪಟ್ಲ ಸತೀಶ್ ಶೆಟ್ಟಿ ಅವರು, ಟ್ರಸ್ಟ್ ಅಮೆರಿಕ ಸರಕಾರದ ಮಾನ್ಯತೆ ಪಡೆದ ಕಾರಣ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದದಲ್ಲಿ ಟ್ರಸ್ಟ್‌ನ ಯುಎಸ್‌ಎ ಘಟಕದ ಅಧ್ಯಕ್ಷ ಡಾ| ಅರವಿಂದ ಉಪಾಧ್ಯಾಯ, ಡಾ| ಶ್ರೀಧರ ಆಳ್ವ, ಮಹಾಬಲ ಶೆಟ್ಟಿ, ಉಳಿ ಯೋಗೇಂದ್ರ ಭಟ್ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಪೌರಾಣಿಕ ಕಥಾನಕಗಳನ್ನು ಆಯ್ದುಕೊಂಡು ಪ್ರದರ್ಶನ ನೀಡಲಾಗುವುದು. ಕೆಲವು ಕಡೆ ಕಿರು ತರಬೇತಿ ಶಿಬಿರ, ಪ್ರಾತ್ಯಕ್ಷಿಕೆಗಳು ಕೂಡ ನಡೆಯಲಿವೆ.

ಹಿಮ್ಮೇಳ ಕಲಾವಿದರಾಗಿ ಪದ್ಮನಾಭ ಉಪಾಧ್ಯ, ಚೈತನ್ಯ ಕೃಷ್ಣ ಪದ್ಯಾಣ, ಮುಮ್ಮೇಳದಲ್ಲಿ ಪ್ರೊ| ಎಂ.ಎಲ್.ಸಾಮಗ, ಹರಿನಾರಾಯಣ ಭಟ್ ಎಡನೀರು, ಚಂದ್ರಶೇಖರ ಧರ್ಮಸ್ಥಳ, ಮಹೇಶ ಮಣಿಯಾಣಿ, ಪ್ರಶಾಂತ್ ನೆಲ್ಯಾಡಿ, ಮೋಹನ ಬೆಳ್ಳಿಪಾಡಿ ಅವರು ತಂಡದಲ್ಲಿರುತ್ತಾರೆ. ಪುತ್ತಿಗೆ ಮಠಗಳು, ಕನ್ನಡ ಕೂಟದವರು, ಯಕ್ಷಗಾನ ಸಂಘದವರು, ದೇವಸ್ಥಾನಗಳು, ವಿವಿಧ ಸಂಘಗಳು ಸಹಕಾರ ನೀಡಲಿವೆ. ಇದೇ ವೇಳೆ ಎರಡು ವರ್ಷಗಳಿಗೊಮ್ಮೆ ಅಮೆರಿಕದಲ್ಲಿ ನಡೆಯುವ ‘ಅಕ್ಕ’ ಸಮ್ಮೇಳನದಲ್ಲಿಯೂ ತಂಡ ಕಾರ್ಯಕ್ರಮ ನೀಡಲಿದೆ ಎಂದವರು ತಿಳಿಸಿದರು.

20 ರಾಜ್ಯಗಳ ನಗರಗಳಲ್ಲಿ ಪ್ರದರ್ಶನ ಅಮೆರಿಕದ ಸ್ಯಾನೋಸೆ, ಸಿಯಾಟಲ್, ಫೀನಿಕ್ಸ್, ಲಾಸ್ ಎಂಜಲೀಸ್, ಆಸ್ಟಿನ್, ಹ್ಯೂಸ್ಟನ್, ಡೆಟ್ರೈಟ್, ಇಜಾಮ್ಸ್ ವಿಲ್ಲೆ, ಮೇರಿಲ್ಯಾಂಡ್, ಟಂಪಾ, ಮಿಲ್ವಾಕಿ, ಶಾರ್ಲೋಟ್, ರಾಲೆ, ಎಡಿಸನ್, ಕೊಲಂಬಸ್, ಬಾಸ್ಟನ್, ಒರ್ಲಾಂಡೊ, ಅಟ್ಲಾಂಟಾ, ಚಿಕಾಗೋ, ಡಲ್ಲಾಸ್, ನ್ಯೂಜೆರ್ಸಿ, ರಿಚ್ಮಂಡ್, ಎಡಿಸನ್ ಸೇರಿದಂತೆ ಅಮೆರಿಕದ 20 ರಾಜ್ಯಗಳ ಮುಖ್ಯನಗರಗಳಲ್ಲಿ ಅಭಿಯಾನ ನಡೆಯಲಿದೆ. ದೇಶದ ಕಲೆ, ಸಂಸ್ಕೃತಿಯನ್ನು ವಿದೇಶಗಳಲ್ಲಿ ಪಸರಿಸುವ ಪ್ರಯತ್ನ ಇದಾಗಿದೆ. ಕಳೆದ ವರ್ಷ ಯಕ್ಷಧ್ರುವ ಯಕ್ಷ ಶಿಕ್ಷಣದ ತಂಡ ಯುರೋಪ್ ಖಂಡದಲ್ಲಿ ಪ್ರದರ್ಶನ, ತರಬೇತಿ, ಪ್ರಾತ್ಯಕ್ಷಿಕೆ ನೀಡಿತ್ತು ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ತಂಡದ ಕಲಾವಿದರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next