Advertisement

T20 World Cup; ಕೋಟಿ ಕೋಟಿ ಖರ್ಚು ಮಾಡಿದರೂ ಅಮೆರಿಕದಲ್ಲಿ ವಿಶ್ವಕಪ್ ವಿಫಲವಾಗಿದ್ಯಾಕೆ?

02:24 PM Jun 27, 2024 | ಕೀರ್ತನ್ ಶೆಟ್ಟಿ ಬೋಳ |

ಐಸಿಸಿ 20ಟಿ ವಿಶ್ವಕಪ್ 2024 ಮುಗಿಯುವ ಹಂತ ತಲುಪಿದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ನಲ್ಲಿ ಜಂಟಿಯಾಗಿ ಆಯೋಜಿಸಿರುವ ಕೂಟದಲ್ಲಿ 20 ತಂಡಗಳು ಭಾಗವಹಿಸಿದೆ. ಪಾಕಿಸ್ತಾನ, ನ್ಯೂಜಿಲ್ಯಾಂಡ್ ನಂತಹ ಬಲಿಷ್ಠ ತಂಡಗಳು ಮೊದಲ ಸುತ್ತಿನಲ್ಲಿಯೇ ಹೊರಬಿದ್ದಿದ್ದು ಸೇರಿ ಹಲವು ಅಚ್ಚರಿಗೆ ಸಾಕ್ಷಿಯಾಯಿತು ಈ ವಿಶ್ವಕಪ್. ಹಾಗಾದರೆ ಹಲವು ಪ್ರಥಮಗಳಿಗೆ ಸಾಕ್ಷಿಯಾದ ಈ ಬಾರಿಯ ವಿಶ್ವಕಪ್ ಯಶಸ್ವಿಯಾಯಿತಾ? ಅಥವಾ 2007ರ ವಿಂಡೀಸ್ ಏಕದಿನ ವಿಶ್ವಕಪ್ ನಂತೆ ಮತ್ತೊಂದು ನಿರಾಸೆ ಅನುಭವಿಸಿತಾ ಐಸಿಸಿ? ಇಲ್ಲಿದೆ ವಿಶ್ಲೇಷಣೆ.

Advertisement

ಕ್ರಿಕೆಟ್ ಕೂಟವನ್ನು ಗ್ಲೋಬಲ್ ಲೆವೆಲ್ ಗೆ ಕೊಂಡೊಯ್ಯಬೇಕು ಎಂಬ ಉದ್ದೇಶದಿಂದ ಕ್ರಿಕೆಟ್ ನ ಅಷ್ಟೇನು ಪರಿಚಯವಿರದ ಅಮೆರಿಕದಲ್ಲಿ ವಿಶ್ವಕಪ್ ನಲ್ಲಿ ನಡೆಸಲು ಐಸಿಸಿ ಮುಂದಾಗಿತ್ತು. ಕೇವಲ ಹೊಸ ಪ್ರೇಕ್ಷಕರನ್ನು ತಲುಪುವುದು ಮಾತ್ರವಲ್ಲ, ಅಮೆರಿಕದ ಆರ್ಥಿಕತೆಯ ಪ್ರಭಾವದಿಂದ ಇನ್ನಷ್ಟು ಬೆಳೆಯುವ ಉದ್ದೇಶದಿಂದ ಯುಎಸ್ ನಲ್ಲಿ ಮೊದಲ ಬಾರಿಗೆ ಟಿ20 ಕ್ರಿಕೆಟ್ ವಿಶ್ವಕಪ್ ಆಯೋಜನೆ ಮಾಡಲು ಐಸಿಸಿ ಯೋಜನೆ ಹಾಕಿತ್ತು. ಆದರೆ ಎಲ್ಲವೂ ಅಂದುಕೊಂಡ ಹಾಗೆ ನಡೆಯಲಿಲ್ಲ ಎನ್ನುವುದು ಮಾತ್ರ ಸತ್ಯ.

ನ್ಯೂಯಾರ್ಕ್ ನಲ್ಲಿ ಕೆಲವೇ ತಿಂಗಳ ಅಂತರದಲ್ಲಿ ದಾಖಲೆಯ ವೇಗದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಿದ್ದು, ವಿಶ್ವಕಪ್ ನ ಆರಂಭಕ್ಕೆ ಹೊಸ ಹುರುಪು ನೀಡಿತ್ತು. ಕನಸಿನ ನಗರಿ ನ್ಯೂಯಾರ್ಕ್ ನ ಗಗನಚುಂಬಿ ಕಟ್ಟಡಗಳ ಹಿನ್ನೆಯಲ್ಲಿ ಬ್ಯಾಟ್-ಬಾಲ್ ಕದನಕ್ಕೆ ಹೊಸ ರೂಪ ನೀಡಬಹುದು ಎಂದು ಕ್ರೀಡಾಭಿಮಾನಿಗಳು ಅಂದಾಜಿಸಿದ್ದರು. ಈ ಮೂಲಕ ಕಾಮನ್ ವೆಲ್ತ್ ದೇಶಗಳಿಗೆ ಸೀಮಿತವಾಗಿರುವ ಕ್ರಿಕೆಟ್ ವಿಶ್ವ ವೇದಿಕೆಯಲ್ಲಿ ಪ್ರದರ್ಶನವಾಗುವ ಘಳಿಗೆಗೆ ಕಾದಿದ್ದರು.

ಆದರೆ ಮೊದಲು ಅಂದುಕೊಂಡಂತೆ ಗಗನಚುಂಬಿ ಕಟ್ಟಡಗಳ ನ್ಯೂಯಾರ್ಕ್ ನಗರದಲ್ಲಿ ಈ ಮೈದಾನ ಇರಲಿಲ್ಲ. ನ್ಯೂಯಾರ್ಕ್ ನಗರದಿಂದ ಸುಮಾರು 95 ಕಿ.ಮೀ ದೂರದ ಲಾಂಗ್ ಐಲ್ಯಾಂಡ್ ಎಂಬ ಜಾಗದಲ್ಲಿ ಹೊಸ ಮೈದಾನದ ನಿರ್ಮಾಣ ಮಾಡಲಾಗಿತ್ತು. ಇದು ನ್ಯೂಯಾರ್ಕ್ ನಿವಾಸಿಗಳನ್ನು, ಟೈಮ್ಸ್ ಸ್ಕ್ವೇರ್ ನಲ್ಲಿ ತಿರುಗುವ ಪ್ರವಾಸಿಗರನ್ನು ಹೆಚ್ಚು ಸೆಳೆಯಲಿಲ್ಲ.

Advertisement

ಕಳಪೆ ಪಿಚ್- ಬಾರದ ರನ್

ಲಾಜಿಸ್ಟಿಕ್ ಸಮಸ್ಯೆಗಳು, ಕಳಪೆ ಪಿಚ್ ಗಳು ಈ ಕೂಟದ ಚಂದವನ್ನು ಒಂದಷ್ಟು ಮಟ್ಟಕ್ಕೆ ಕೆಡಿಸಿತು ಎನ್ನಬಹುದು. ದೂರದ ಅಡಿಲೇಡ್ ನಿಂದ ತಂದು ಲಾಂಗ್ ಐಲ್ಯಾಂಡ್ ನ ನಸ್ಸೌ ಗ್ರೌಂಡ್ ನಲ್ಲಿ ಅಳವಡಿಸಿದ ಡ್ರಾಪ್ ಇನ್ ಪಿಚ್ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡಲಿಲ್ಲ. ಕೂಟ ಆರಂಭಕ್ಕೆ ಕೆಲವೇ ದಿನಗಳು ಇರುವಾಗ ಈ ಅಳವಡಿಸಿದ ಈ ಪಿಚ್ ನಲ್ಲಿ ಸರಿಯಾದ ಬೌನ್ಸ್ ಇರದ ಬ್ಯಾಟರ್ ಗಳು ಕಂಗೆಟ್ಟರು. ಹೇಳಿ ಕೇಳಿ ಟಿ20 ಬ್ಯಾಟರ್ ಗಳ ಆಟ. ಇಲ್ಲಿ ಸಿಕ್ಸರ್ ಬೌನ್ಸರ್ ಗಳಿಗೆ ಜನ ಹುಚ್ಚೆದ್ದು ಕುಣಿಯುತ್ತಾರೆ. ಆದರೆ ನಸ್ಸೌ ಸ್ಟೇಡಿಯಂನಲ್ಲಿ 200 ರನ್ ಬಿಡಿ, 100 ರನ್ ದಾಟುವುದೇ ದೊಡ್ಡ ಸವಾಲಾಗಿತ್ತು.

ಯಾವುದೇ ಒಂದು ಕ್ರಿಕೆಟ್ ಪಿಚ್ ನಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಸುವ ಮೊದಲು ಹಲವು ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ. ಇದರ ಬಳಿಕವಷ್ಟೇ ಐಸಿಸಿ ಅನುಮತಿ ನೀಡುತ್ತದೆ. ಮೊದಲು ಜೂನಿಯರ್ ಕ್ರಿಕೆಟ್, ಬಳಿಕ ದೇಶಿಯ ಪಂದ್ಯಾಟಗಳು, ಬಳಿಕ ದ್ವಿಪಕ್ಷೀಯ ಸರಣಿಗಳನ್ನು ಆಡಿಸಿದ ಬಳಿಕ ಐಸಿಸಿ ಕೂಟಗಳನ್ನು ಆ ಮೈದಾನದಲ್ಲಿ ಆಡಿಸಲಾಗುತ್ತದೆ. ಆದರೆ ಇದನ್ನೆಲ್ಲಾ ಗಾಳಿಗೆ ತೂರಿದ ಐಸಿಸಿ, ಒಂದೇ ಒಂದು ಪಂದ್ಯ ಆಡಿಸದೆ ನೇರ ವಿಶ್ವಕಪ್ ಆಡಿಸಿ ಅದಕ್ಕೆ ಬೆಲೆ ತೆತ್ತಿತು.

ಹೈಪ್ ಸಿಗದ ಪಂದ್ಯಗಳು

ಎಲ್ಲಾ ವಿಶ್ವಕಪ್ ನಂತೆ ಈ ಬಾರಿಯು ಕೆಲವು ಹೈವೋಲ್ಟೇಜ್ ಕದನಗಳಿದ್ದವು. ಆದರೆ ಆರಂಭದಿಂದಲೇ ಕೆಲವು ನೀರಸ ಪಂದ್ಯಗಳು, ಕೆಲವು ಅನಿರೀಕ್ಷಿತ ಫಲಿತಾಂಶಗಳು ಕೂಟದ ವೇಗವನ್ನು ಕಡಿಮೆ ಮಾಡಿತು. ಭಾರಿ ನಿರೀಕ್ಷೆ ಹುಟ್ಟಿಸಿದ್ದ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ರನ್ ಬರದ ಕಾರಣ ಹೆಚ್ಚಿನ ಕ್ರೇಜ್ ಹೆಚ್ಚಲಿಲ್ಲ. ದುಬಾರಿ ದುಡ್ಡು ಕೊಟ್ಟು ಟಿಕೆಟ್ ಪಡೆದು ಪಂದ್ಯ ನೋಡಲು ಬಂದಿದ್ದ ಹೊಸ ಪ್ರೇಕ್ಷಕರಿಗೆ ಇದು ನಿರಾಸೆ ಮೂಡಿಸಿದ್ದು ಮಾತ್ರ ಸುಳ್ಳಲ್ಲ.

ಆತಿಥೇಯ ಯುಎಸ್ಎ ತಂಡ ಮಾತ್ರ ಈ ಬಾರಿ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿ ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡಿತು. ಪಾಕಿಸ್ತಾನ ತಂಡವನ್ನು ಸೋಲಿಸಿದ ಯುಎಸ್ಎ ಸೂಪರ್ 8ಗೂ ಪ್ರವೇಶ ಪಡೆದಿತ್ತು. ಸೌರಭ್ ನೇತ್ರಾವಲ್ಕರ್, ಮೊನಾಂಕ್ ಪಟೇಲ್ ಹೆಸರುಗಳು ಕ್ರಿಕೆಟ್ ವಿಶ್ವದ ಮನೆಮಾತಾದವು.

ಮಳೆರಾಯನ ಕಾಟ

ಕೆಲವು ಪಂದ್ಯಗಳಿಗೆ ಮಳೆ ಅಡ್ಡಿಯಾಯಿತು. ಅದರಲ್ಲೂ ಫ್ಲೋರಿಡಾದಲ್ಲಿ ಮಳೆ ಬಂದಾಗ ಮೈದಾನವನ್ನು ಕವರ್ ಗಳು ಸಾಕಷ್ಟು ಇರಲಿಲ್ಲ. ಮಳೆ ನಿಂತರೂ ಪಂದ್ಯ ಆರಂಭಿಸಲು ಸಾಧ್ಯವಾಗಲಿಲ್ಲ. ಇದು ಭಾರಿ ಟೀಕೆಗೆ ಕಾರಣವಾಯಿತು.

ಭಾರತ ಮತ್ತು ಪಾಕಿಸ್ತಾನದಂತಹ ದೊಡ್ಡ ಪಂದ್ಯಗಳ ಟಿಕೆಟ್ ಬೆಲೆ ಭಾರಿ ಏರಿಕೆಯಾಗಿತ್ತು. ಇದು ಸ್ಥಳೀಯ ಪ್ರೇಕ್ಷಕರನ್ನು ಮೈದಾನಕ್ಕೆ ಬರಲು ಪ್ರೇರಣೆ ನೀಡಲಿಲ್ಲ.

ಸಿಗದ ನಿರೀಕ್ಷಿತ ಸ್ವಾಗತ

ಬೇಸ್ ಬಾಲ್ ಮತ್ತು ಬಾಸ್ಕೆಟ್ ಬಾಲ್ ಗಳನ್ನು ಪ್ರೀತಿಸುವ ಅಮೆರಿಕನ್ನರು ಕ್ರಿಕೆಟ್ ಆಟವನ್ನು ಎರಡೂ ಕೈಗಳಿಂದ ಅಪ್ಪಿಕೊಳ್ಳಲಿಲ್ಲ. ಬೇಸ್ ಬಾಲ್ ಗಿಂತ ನಿಧಾನಗತಿಯ ಕ್ರಿಕೆಟ್ ಬಹುಶಃ ರುಚಿಸಲಿಲ್ಲ. ಒಂದಷ್ಟು ಹೈ ಸ್ಕೋರಿಂಗ್ ಪಂದ್ಯಗಳು ನಡೆದಿದ್ದರೆ ಅಮೆರಿಕನ್ನರಿಗೆ ಕ್ರಿಕೆಟ್ ಹುಚ್ಚು ಹಿಡಿಸುವ ಅವಕಾಶವಿತ್ತು. ಆದರೆ ಕಳಪೆ ಪಿಚ್ ಕಾರಣದಿಂದ ಇದೂ ಸಾಧ್ಯವಾಗಲಿಲ್ಲ.

ಸಾಕಷ್ಟು ಮಾರ್ಕೆಟಿಂಗ್, ಪ್ರಚಾರ ನಡೆಸಿದರೂ ಅಮೆರಿಕನ್ ಸಂಸ್ಕೃತಿಯೊಳಗೆ ಪ್ರವೇಶ ಮಾಡಲು ಕ್ರಿಕೆಟ್ ಸೋತಿದೆ. ವಿಶ್ವಕಪ್ ನ ಬಳಿಕವೂ ಅಮೆರಿಕದಲ್ಲಿ ವಲಸಿಗ ಸಮುದಾಯಕ್ಕೆ ಮಾತ್ರ ಸೀಮಿತವಾಗಿದೆ.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next