Advertisement

ಅಭಿಜಾತ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆ

11:32 PM Dec 04, 2020 | mahesh |

ಗದಾಯುದ್ಧದ ಭೀಮನಾಗಿ ಅಬ್ಬರದ ಆಕ್ರೋಶ, ಹನುಮಂತನ ಪಾತ್ರದಲ್ಲಿ ರಾಮಭಕ್ತಿ ತಾದಾತ್ಮ, ದಕ್ಷನ ಪ್ರವೇಶದಲ್ಲಿ ಪ್ರೇಕ್ಷಕರ ಗಮನ ಸೆಳೆಯುವ ಗತ್ತು -ಗಾಂಭೀರ್ಯ, ಕುರುಬರ ಕಾಳನಲ್ಲಿ ಹೆಡ್ಡತನದ ಅನಾವರಣ, ವಲಲ ಭೀಮನಾಗಿ ಅಸಹಾ ಯಕತೆ ಅಭಿವ್ಯಕ್ತಿಸುವ ರೀತಿ, ಕಂಸನಾಗಿ ಕೃಷ್ಣನನ್ನು ಕನಸಿನಲ್ಲಿ ಕಂಡು ಕಳವಳಗೊಂಡು ಭಾವದ ಹೊಯ್ಲಿ ನಲ್ಲಿ ಬಳಲುವ ಬಗೆ, ಕಾಡು ಕಿರಾತನಾಗಿ ಕೈರಾತ ಸಂಸ್ಕಾರವನ್ನು ಅಭಿವ್ಯಕ್ತಿಸುವ ಪರಿ.. ಹೀಗೆ ಅನೇಕ ವೈವಿಧ್ಯಪೂರ್ಣ ಪಾತ್ರಗಳನ್ನು, ಪಾತ್ರ ಭಾವವನ್ನು ಅನನ್ಯವಾಗಿ ಕಟ್ಟಿಕೊಡುತ್ತ ಯಕ್ಷಪ್ರೇಕ್ಷಕರ ಹೃದಯ ದಲ್ಲಿ ಗಟ್ಟಿಯಾಗಿ ನೆಲೆನಿಂತ ಅಪ್ಪಟ ಕಲಾವಿದ ಹಡಿನಬಾಳ ಶ್ರೀಪಾದ ಹೆಗಡೆ.

Advertisement

ಕೆರೆಮನೆ ಮಹಾಬಲ ಹೆಗಡೆಯವರ ಈ ಶಿಷ್ಯ ಅವರ ಕಲಾವ್ಯಕ್ತಿತ್ವದ ಅನೇಕ ಧನಾತ್ಮಕ ಅಂಶಗಳನ್ನು ಮೈಗೂಡಿಸಿಕೊಂಡಿದ್ದರು. ಆದರೆ ಅದು ಅನುಕರಣೆ ಆಗಿರಲಿಲ್ಲ. ನಾಟ್ಯಶಾಸ್ತ್ರದಲ್ಲಿ ಹೇಳಿರುವ ಆಂಗಿಕ, ಆಹಾರ್ಯ, ವಾಚಿಕ, ಸಾತ್ವಿಕದ ಸಮನ್ವಯ ಸಾಧಿ ಸಿದ ಸಂತುಲಿತ ಕಲಾವಿದರಾಗಿದ್ದರು. ಅವರ ಆಳಂಗ ಪ್ರತಿನಾಯಕ ಪಾತ್ರಗಳಿಗೆ ಹೆಚ್ಚು ಅನುಕೂಲಕರ ವಾಗಿತ್ತು. ಬಣ್ಣಗಾರಿಕೆಯಲ್ಲಿ ಆಲಸ್ಯವಿರಲಿಲ್ಲ, ಹೇಗಾ ಗಬೇಕೊ ಹಾಗೆ ಬರಬೇಕು. ರೇಖಾವಿನ್ಯಾಸದ ಒಳ ಸುಳಿ ಬಲ್ಲ ಕಲಾಭಿಜ್ಞರಾಗಿದ್ದರು. ಒಪ್ಪ ಓರಣದ ವೇಷಗಾರಿಕೆಯಿಂದ ಪೌರಾಣಿಕ ಪಾತ್ರಗಳನ್ನು ಸೊಗಸಾಗಿ ರೂಪಿಸುತ್ತಿದ್ದರು. ಭಾವ-ಭಾಷೆಯ ಪರಿಣಾಮಕಾರಿ ಬಳಕೆಯಿಂದ ರಂಗದಲ್ಲಿ ಪಾತ್ರ ಕಳೆಗಟ್ಟುವಂತೆ ಮಾಡುತ್ತಿದ್ದರು. ಅವರ ವಾಚಿಕ ಪಟ ಪಟ ಭತ್ತದ ಅರಳು ಸಿಡಿದಂತಲ್ಲ, ಬತ್ತದ ತೊರೆ ಹರಿದಂತೆ. ವಾಚಾಳಿಯಾಗದ ವಾಕ³ಟುತ್ವ. ಪ್ರಮಾಣ ಬದ್ಧ ಹದವರಿತ ಕುಣಿತ. ಎಷ್ಟೋ ಸಲ ಗತ್ತುಗಾರಿ ಕೆಯ ಹೆಜ್ಜೆಯಿಂದಲೇ ಉದ್ದೇಶ ಸಾಧಿಸುತ್ತಿದ್ದರು. ಔಚಿತ್ಯವರಿತ ಅಭಿನಯ ಕಣ್ಣು, ಕೈಗಳ ಬಳಕೆಯಲ್ಲಿ ಸುವ್ಯಕ್ತವಾಗುತ್ತಿತ್ತು. ಕೇವಲ ಶಬ್ದಾಭಿನಯವಾಗದೆ ಭಾವಾಭಿನಯವಾಗುವಂತೆ ಎಚ್ಚರಿಕೆ ವಹಿಸುತ್ತಿದ್ದರು. ಪ್ರಸಿದ್ಧಿಗೆ ಹಾತೊರೆಯದ ಸಂಯಮಿಗೆ ಮಾತ್ರ ಇದು ಸಾಧ್ಯ. ಸಾತ್ವಿಕ ಅಭಿನಯದಲ್ಲಿ ಅಸಾಧಾರಣ ಸಿದ್ಧಿ ಅವರಿಗಿತ್ತು. ಕೇವಲ ಕಣ್ಣೋಟದಿಂದ, ನಿಶ್ಚಲ ನಿಲುವಿನಿಂದ ಅದನ್ನು ಸಾಧಿಸುತ್ತಿದ್ದರು. ರಂಗ ಚಲನೆಯ ಸೂಕ್ಷ್ಮಾತಿಸೂಕ್ಷ್ಮವನ್ನು ಅರಿತು ವ್ಯವಹರಿ ಸುತ್ತಿದ್ದರು. ಭಾವತನ್ಮಯತೆಯಿಂದ ರಸಿಕ ನನ್ನು ರಸಲೀಲಗೊಳಿಸುತ್ತಿದ್ದರು.

ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡ ಈ ಬಾಲಕನಿಗೆ ಸೋದರಮಾವ ಹಡಿನಬಾಳ ಸತ್ಯ ಹೆಗಡೆಯವರು ಆಸರೆಯಾದರು. ಗುಂಡಬಾಳ ಮೇಳದ ಯಜಮಾನರೂ ಕಲಾವಿದರೂ ಆಗಿದ್ದ ಅವರೇ ಯಕ್ಷಗಾನ ಕಲಿಕೆಗೆ ಆರಂಭದ ಗುರುವಾದರು. ಯಕ್ಷಗಾನದ ಕಾರಣಿಕ ಸ್ಥಳ ಗುಂಡಬಾಳ ಮುಖ್ಯಪ್ರಾಣನ ಸನ್ನಿಧಿ ಕಲಾಕಲಿಕೆಗೆ ಆಡುಂಬೊಲವಾಯಿತು. ಕಲಿಯುತ್ತಾ ಕುಣಿದರು, ಕುಣಿಯುತ್ತಾ ಕಲಿತರು. ಉದರ ಪೋಷಣೆಗೆ ಒಂದೆ ರಡು ವರ್ಷ ಹೊಲಿಗೆಯನ್ನೇ ವೃತ್ತಿಯಾಗಿ ಸ್ವೀಕರಿಸಿ ದರು. ಆದರೆ ಅವರೊಳಗಿನ ಕಲಾವಿದ ಬಿಡಲಿಲ್ಲ. ಮುಂದೆ ಪ್ರವೃತ್ತಿಯೇ ವೃತ್ತಿಯಾಯಿತು. ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆಯವರಂಥ ಶ್ರೇಷ್ಠ ಕಲಾವಿದರ ಒಡನಾಟ ಅವರ ಕಲಾಬದುಕಿಗೆ ಪೋಷಣೆ ನೀಡಿತು. ಅವರಲ್ಲೇ ಕಲಿತು ಅವರ ಎದುರು ಪಾತ್ರಧಾರಿಯಾಗಿ ಅವರಿಂದಲೇ ಬೆನ್ನು ತಟ್ಟಿಸಿಕೊಂಡರು. ಕೋಡಂಗಿ, ನಿತ್ಯವೇಷ, ಸ್ತ್ರೀವೇಷ, ಪುರುಷ ವೇಷ ಹೀಗೆ ಹಂತ ಹಂತವಾಗಿ ಬೆಳೆಯುತ್ತಾ ಬಂದ ಅವರಿಗೆ ರಂಗಸ್ಥಳ ನೀಡಿದ್ದು ಕಡಿಮೆಯೇನಲ್ಲ. ಸದಾ ಹೊಸ ಹೊಸದಾಗಿ ಬರುವ ಪಾತ್ರಗಳನ್ನು ಸವಾಲಾಗಿ ಸ್ವೀಕರಿಸಿದರು. ಪಾತ್ರಗಳ ಕುರಿತು ಚಿಂತಿಸಿದರು. ಪಾತ್ರ ಪರಕಾಯ ಪ್ರವೇಶ ಕರಗತ ಮಾಡಿಕೊಂಡರು. ಶ್ರೇಷ್ಠ ಕಲಾವಿದರಾಗಿ ರೂಪುಗೊಂಡರು. ವಿವಿಧ ವೃತ್ತಿ ಮೇಳಗಳಲ್ಲಿ ನಾಲ್ಕೂವರೆ ದಶಕಗಳ ಕಾಲ ಕಲಾಸೇವೆಗೈದರು.

ಸರಳ, ಸಜ್ಜನಿಕೆಯ ನಿರಾಡಂಬರ ವ್ಯಕ್ತಿಯಾಗಿದ್ದರು. ಅಪಾರ ದೈವಭಕ್ತರು. ಸದಾ ಸಜ್ಜನರ ಒಡನಾಟ ಬಯಸುತ್ತಾ ಸಾತ್ವಿಕ ಬದುಕು ನಡೆಸಿದರು. ಇನ್ನೂ ಹತ್ತು ವರ್ಷ ಕುಣಿಯುವ ತಾಕತ್ತು ಅವರಲ್ಲಿತ್ತು. ಆದರೆ ವಿಧಿ ವಿಪರ್ಯಾಸ. ಒಂದೂವರೆ ವರ್ಷದ ಹಿಂದೆ ಆದ ರಸ್ತೆ ಅಪಘಾತ ಅವರ ಬದುಕಿಗೆ ಮುಳುವಾಯಿತು. ಆಗ ಅವರ ಸಂಕಷ್ಟಕ್ಕೆ ಒದಗಿದ ಕಲಾಭಿಮಾನಿಗಳ ಪುರಸ್ಕಾರವೇ ಅವರು ಅಭಿಮಾನಿಗಳ ಹೃದಯ ವನ್ನು ಯಾವ ಪ್ರಮಾಣದಲ್ಲಿ ಗೆದ್ದಿದ್ದರು ಎಂಬು ದಕ್ಕೂ ಸಾಕ್ಷಿಯಾಗಿತ್ತು. ಇದು ನಮ್ಮನ್ನಗಲಿರುವ ಆ ಕಲಾಚೇತನಕ್ಕೆ ಅಕ್ಷರ ನಮನ.

ಪ್ರೊ| ನಾರಾಯಣ ಎಂ. ಹೆಗಡೆ

Advertisement
Advertisement

Udayavani is now on Telegram. Click here to join our channel and stay updated with the latest news.

Next