Advertisement

ಹಿರಿಯ ಯಕ್ಷಗಾನ ಕಲಾವಿದ ಶ್ರೀಪಾದ ಹೆಗಡೆ ಹಡಿನಬಾಳ ಇನ್ನಿಲ್ಲ

12:13 AM Dec 04, 2020 | sudhir |

ಹೊನ್ನಾವರ: ಯಕ್ಷರಂಗದ ಮೇರು ಕಲಾವಿದ ಹಾಗೂ ಮಣ್ಣಿನ ವಿಗ್ರಹ ತಯಾರಕರೂ ಆಗಿದ್ದ ಹಡಿನಬಾಳ ಶ್ರೀಪಾದ ಹೆಗಡೆ (67)ಯವರು ಗುರುವಾರ ರಾತ್ರಿ ನಿಧನರಾಗಿದ್ದಾರೆ.

Advertisement

ಕಳೆದ ಎರಡು ವರ್ಷದ ಹಿಂದೆ ಅಪಘಾತವೊಂದರಲ್ಲಿ ತಲೆಗೆ ಪೆಟ್ಟು ಬಿದ್ದಿದ್ದು ಚಿಕಿತ್ಸೆ ಪಡೆದು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಗುರುವಾರ ಆರೋಗ್ಯದಲ್ಲಿ ಏರುಪೇರಾದ ಕಾರಣ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

ಕಡು ಬಡತನದಲ್ಲಿ ಬಾಲ್ಯ ಕಳೆದ ಇವರು, ಇದೇ ಕಾರಣಕ್ಕೆ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರು. ಹೊಟ್ಟೆಪಾಡಿಗಾಗಿ ಹಡಿನಬಾಳದಲ್ಲಿ ಟೇಲರಿಂಗ್‌ ವೃತ್ತಿ ಹಾಗೂ ಮಳೆಗಾದಲ್ಲಿ ಛತ್ರಿ ದುರಸ್ತಿ ಕಾರ್ಯ ನಡೆಸುತ್ತಿದ್ದರು. ಯಕ್ಷಗಾನದ ಸೆಳೆತಕ್ಕೆ ಒಳಗಾಗಿ ಅದನ್ನು ಅಭ್ಯಸಿಸಿ ಗುಂಡಬಾಳ ಮೇಳದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ನಂತರ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಹಲವು ಮೇಳಗಳಲ್ಲಿ ದುಡಿದರು. ನಂತರ ಕೆರೆಮನೆ ಮೇಳದ ಖಾಯಂ ಕಲಾವಿದರಾಗಿದ್ದರು.

 

ನಾಯಕ, ಪ್ರತಿ ನಾಯಕ, ಹೀಗೆ ಯಕ್ಷಗಾನದ ಎಲ್ಲ ರೀತಿಯ ಪಾತ್ರಗಳಿಗೂ ಜೀವ ತುಂಬುತ್ತಿದ್ದ ಇವರು ಕರುಣರಸ, ಭಕ್ತಿ ಪ್ರಧಾನ ಪಾತ್ರಗಳಿಂದ ಖ್ಯಾತಿ ಗಳಿಸಿದ್ದರು. ಹನುಮಂತ, ಅಶ್ವತ್ಥಾಮ, ಪರಶುರಾಮ..ಹೀಗೆ ಹತ್ತು ಹಲವು ಪಾತ್ರಗಳಿಂದ ಜನಮೆಚ್ಚುಗೆ ಪಡೆದಿದ್ದರು. ಅನೇಕ ಹಿರಿಯ ಹಾಗೂ ಖ್ಯಾತ ಕಲಾವಿದರ ಎದುರು ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು.

Advertisement

ಸಾತ್ವಿಕ, ಸಜ್ಜನರಾಗಿದ್ದ ಇವರು ತಮ್ಮ ಜೀವನದ ಕೊನೆವರೆಗೂ ಕಲಾಮಾತೆಯ ಸೇವೆಯಲ್ಲಿ ತೊಡಗಿ ಸರಳಜೀವನ ನಡೆಸಿದ್ದರು. ಸಹಕಲಾವಿದರು ಸೇರಿದಂತೆ ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ತಮ್ಮ ನಡತೆಯಿಂದಾಗಿ ಯಕ್ಷರಂಗದಲ್ಲಿ ಹಾಗೂ ರಂಗದ ಹೊರಗೂ ಜನಮನ್ನಣೆ ಗಳಿಸಿದ್ದರು. ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅಪಘಾತದ ನಂತರ ನೂರಾರು ಕಲಾಭಿಮಾನಿಗಳು ಆರ್ಥಿಕ ನೆರವು ನೀಡಿ ಅವರಿಗೆ ನೈತಿಕ ಧೈರ್ಯ ತುಂಬಿದ್ದರು. ಶ್ರೀಪಾದ ಹೆಗಡೆಯವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಕೆರೆಮನೆ ಶಿವಾನಂದ ಹೆಗಡೆ ಸೇರಿದಂತೆ ಹಲವಾರು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಪೂರ್ವಾಹ್ನ ಹತ್ತು ಗಂಟೆಗೆ ಹಡಿನಬಾಳ ಸ್ವಗ್ರಹದ ಸನಿಹ ಅಂತ್ಯಸಂಸ್ಕಾರ ನೆರವೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next