Advertisement
ಯಕ್ಷಗಾನದ ಭೂಮಿಯಾದ ಬ್ರಹ್ಮಾವರದ ಸಮೀಪದ ಮಟಪಾಡಿ ಎಂಬಲ್ಲಿ 1906 ರ ಜೂನ್ 21 ರಂದು ಮಟಪಾಡಿ ನಾರಾಯಣ ನಾಯಕರ ಸುಪುತ್ರನಾಗಿ ಜನಿಸಿದ ವೀರಭದ್ರ ನಾಯಕರು 6 ನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿರುವುದು, ಆದರೆ ಯಕ್ಷರಂಗಕ್ಕೆ ಅವರ ಕೊಡುಗೆ ಅಪಾರ.
Related Articles
Advertisement
ಪಾಂಡೇಶ್ವರ ಪುಟ್ಟಯ್ಯ ಎನ್ನುವ ಆ ಕಾಲದ ಶ್ರೇಷ್ಠ ಯಕ್ಷಗಾನ ನಾಟ್ಯಗಾರರಿಂದ ಹೆಜ್ಜೆ ಕಲಿತ ವೀರಭದ್ರ ನಾಯಕರು ಸಕ್ಕಟ್ಟು ಗಣಪತಿ ಪ್ರಭುಗಳಿಂದ ಮಾತುಗಾರಿಕೆಯನ್ನು ಕಲಿತರಂತೆ.
ಹಿಮ್ಮೇಳದ ಬಗೆಗೂ ಆಸಕ್ತಿ ತಳೆತ ನಾಯಕರು ದಿವಂಗತ ಕುಂಜಾಲು ಶೇಷಗಿರಿ ಕಿಣಿ ಅವರಲ್ಲಿ ಭಾಗವತಿಕೆಯ ಬಗೆಗೆ ಅಭ್ಯಸಿಸಿದರು. ಹೆಜ್ಜೆಗಾರಿಕೆಯಲ್ಲಿ ಹೊಸತನವನ್ನು ಕಂಡುಕೊಂಡ ನಾಯಕರು ವಿನೂತನ ಮಟಪಾಡಿ ಶೈಲಿಯ ನಾಟ್ಯ ಶೈಲಿಯನ್ನು ಯಕ್ಷರಂಗಕ್ಕೆ ನೀಡಿದವರು . ಆ ಶೈಲಿ ಇಂದು ಬೆರಳೆಣಿಕೆಯ ಕಲಾವಿದರಲ್ಲಿ ಕಾಣಬೇಕಾಗಿರುವುದು ನೋವಿನ ಸಂಗತಿ.
ಆ ಕಾಲದ ಪ್ರಸಿದ್ಧ ವಾಗ್ಮಿ ಮಲ್ಪೆ ಶಂಕರನಾರಾಯಣ ಸಾಮಗರೊಂದಿಗೆ ತಿರುಗಾಟ ಮಾಡಿದ ಅವರು ಮಾತುಗಾರಿಕೆಯಲ್ಲಿ ಹೆಚ್ಚುಗಾರಿಕೆಯನ್ನು ಸಾಧಿಸಲು ಕಾರಣವಾಯಿತು ಮತ್ತು ಪ್ರದರ್ಶನಗಳ ಸೊಬಗು ಹೆಚ್ಚಲು ಕಾರಣವಾಯಿತು ಎನ್ನುವುದು ಹಲವು ಹಿರಿಯ ಪ್ರೇಕ್ಷಕರ ಅಭಿಪ್ರಾಯವಾಗಿದೆ.
ಯಾವ ಪಾತ್ರಕ್ಕೂ ಸೈ ಎನಿಸಿಕೊಂಡಿದ್ದ ವೀರಭದ್ರ ನಾಯಕರು ಶಶಿಪ್ರಭೆಯಂತಹ ಸ್ತ್ರೀ ವೇಷವನ್ನೂ ನಿರ್ವಹಿಸಿದ್ದರಂತೆ . ನೃತ್ಯದಲ್ಲೇ ಹೆಸರುವಾಸಿಯಾದ ಇವರ ಅತಿಕಾಯ, ತಾಮ್ರಧ್ವಜ, ಮೈರಾವಣ, ಸುಧನ್ವ, ಬಬ್ರುವಾಹನ , ಶುಕ್ರಾಚಾರ್ಯ, ಲಂಕಾದಹನದ ಹನುಮಂತ, ರುಕ್ಮಾಂಗದ ಮೊದಲಾದ ಪಾತ್ರಗಳು ಅಪಾರ ಖ್ಯಾತಿ ತಂದುಕೊಟ್ಟಿದ್ದವು.
ಗುರು ಕುಂಜಾಲು ಶೇಷಗಿರಿ ಕಿಣಿ, ಶ್ರೀನಿವಾಸ ಉಪ್ಪೂರ, ನಾರಣಪ್ಪ ಉಪ್ಪೂರ, ಜಾನುವಾರುಕಟ್ಟೆ ಗೋಪಾಲ ಕೃಷ್ಣ ಕಾಮತ್, ಹಿರಿಯಡಕ ಗೋಪಾಲ ರಾಯರು, ತಿಮ್ಮಪ್ಪ ನಾಯ್ಕ ಮೊದಲಾದ ದಿಗ್ಗಜರೊಡನೆ ಒಡಾನಾಟವನ್ನು ವೀರಭದ್ರ ನಾಯಕರು ಹೊಂದಿದ್ದವರು.
ಮಾರಣಕಟ್ಟೆಯಲ್ಲಿ ಸುದೀರ್ಘ ತಿರುಗಾಟದ ಬಳಿಕ ಮಂದಾರ್ತಿ, ಹಿರಿಯಡಕ, ಸಾಲಿಗ್ರಾಮ ಡೇರೆ ಮೇಳದಲ್ಲೂ ತನ್ನ ಪಾತ್ರಗಳನ್ನು ಮೆರೆಸಿದವರು.
ತನ್ನ ಸಾಧನೆಗೆ ತಕ್ಕಂತೆ ರಾಷ್ಟ್ರ ಪ್ರಶಸ್ತಿ, ರಾಜ್ಯಪ್ರಶಸ್ತಿ, ನೂರಾರು ಸನ್ಮಾನಗಳನ್ನು ಪಡೆದಿದ್ದ ವೀರಭದ್ರ ನಾಯಕರು 1982 ರ ಮಾರ್ಚ್ 14 ರಂದು ಇಹಲೋಕ ತ್ಯಜಿಸಿದರು.
ಬೇಡರ ಕಣ್ಣಪ್ಪ ಪ್ರಸಂಗವನ್ನು ಯಕ್ಷಗಾನ ರಂಗಕ್ಕೆ ತಂದ ಕೀರ್ತಿ ವೀರಭದ್ರ ನಾಯಕರಿಗೆ ಸಲ್ಲುತ್ತದೆ. ಪ್ರಸಂಗದಲ್ಲಿನ ಕೈಲಾಸ ಶಾಸ್ತ್ರಿ ಪಾತ್ರ ಅವರಲ್ಲಿನ ಹಾಸ್ಯಗಾರರನ್ನು ಅಭಿಮಾನಿಗಳ ಮುಂದೆ ತಂದಿಟ್ಟಿತ್ತು.
ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರುವಾಗಿ ಸೇವೆ ಸಲ್ಲಿಸಿದ ವೀರಭದ್ರ ನಾಯಕರು ದಿಗ್ಗಜ ಶಿಷ್ಯರನ್ನೂ ಸಿದ್ದಪಡಿಸಿರುವುದು ಮಟಪಾಡಿ ಶೈಲಿ ಮುಂದುವರಿಯಲು ಕಾರಣವಾಗಿದೆ. ಮಾರ್ಗೋಳಿ ಗೋವಿಂದ ಸೇರಿಗಾರ್, ಹೆರಂಜಾಲು ವೆಂಕಟರಮಣ ಮತ್ತು ಬನ್ನಂಜೆ ಸಂಜೀವ ಸುವರ್ಣ ಅವರು ಶಿಷ್ಯರಲ್ಲಿ ಪ್ರಮುಖರು.
ಅಳಿವುದೇ ಕಾಯ.ಉಳಿಯುವುದೇ ಕೀರ್ತಿ ಎಂಬಂತೆ ಮಟಪಾಡಿ ವೀರಭದ್ರ ನಾಯಕರು ಇಂದಿಗೂ ಯಕ್ಷಗಾನ ರಂಗದಲ್ಲಿ ನೆನಪಿಗೆ ಬರುವ ದಿವ್ಯ ಚೇತನವಾಗಿದ್ದಾರೆ.
(ಪುಸ್ತಕದಿಂದ ಆಯ್ದ ಭಾಗ)
ಚಿತ್ರ ಕೃಪೆ : //bayalata.com/