Advertisement

ಮರೆಯಾದ ಮಹಾಬಲ…: ಯಕ್ಷಗಾನದ ಪೌರಾಣಿಕ ಆಖ್ಯಾನ ರಚಿಸಿಕೊಡುವ ಅಪರೂಪದ ಸಾಹಿತಿ

11:21 PM Apr 18, 2021 | Team Udayavani |

ಕಂಡಿದ್ದನ್ನು ಕಂಡ ಹಾಗೆ, ಸರಿ ಅಲ್ಲ ಎಂದರೆ ಅದು ಹೇಗೆ ಸರಿ ಎಂಬುದನ್ನೂ ಸಾಬೀತು ಮಾಡುವ ತಾಕತ್ತು ಉಳ್ಳ, ಕಲ್ಮಶವಿಲ್ಲದ ಮನಸ್ಸಿನ, ಎತ್ತರದ ಸಾಧನೆ ಮಾಡಿ ಯಕ್ಷಗಾನಕ್ಕೆ ಮಹಾಬಲರಾಗಿದ್ದ ಪ್ರೊ|ಮಹಾಬಲೇಶ್ವರ ಅಣ್ಣಪ್ಪ ಹೆಗಡೆ (ಪ್ರೊ| ಎಂ. ಎ. ಹೆಗಡೆ)ಅವರ ಅಗಲಿಕೆ ಕನ್ನಡದಷ್ಟೇ ಸಂಸ್ಕೃತ ಕ್ಷೇತ್ರಕ್ಕೂ ಅಪಾರ ಹಾನಿ. ಸಮಾಜಕ್ಕೂ ನಷ್ಟ .

Advertisement

1948ರಲ್ಲಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಜೋಗಿನಮನೆಯಲ್ಲಿ ಜನಿಸಿದ್ದ ಎಂ.ಎ. ಹೆಗಡೆ ಅವರು ಹೆಗ್ಗರಣಿ, ಶಿರಸಿಯಲ್ಲಿ ಓದಿ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ಸ್ನಾತಕೋತ್ತರ ಪದವಿ ಪಡೆದಿದ್ದರು. ಹುಬ್ಬಳ್ಳಿಯ ಕಾಡ ಸಿದ್ದೇಶ್ವರ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಆರಂಭಿಸಿ, ಸಿದ್ದಾಪುರದ ಎಂಜಿಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ನಿವೃತ್ತರಾಗಿದ್ದರು.

ಅಪರೂಪದ ಸಾಹಿತಿ
ಯಕ್ಷಗಾನ, ಕನ್ನಡ ಹಾಗೂ ಸಂಸ್ಕೃತ ಭಾಷೆಯ ಮೇಲೆ ಅಪಾರ ಪಾಂಡಿತ್ಯ ಹೊಂದಿದ್ದ ಅವರು ಯಕ್ಷಗಾನದ ಪೌರಾಣಿಕ ಆಖ್ಯಾನಗಳನ್ನು ರಚಿಸಿ ಕೊಡುವ ಅಪರೂಪದ ಸಾಹಿತಿಯಾಗಿದ್ದರು. ರಂಗಸ್ಥಳಕ್ಕೆ ಬೇಕಾದಂತೆ, ರಂಗ ನಡೆ ಸ್ವತಃ ಕಲಾವಿದರೂ ಆಗಿದ್ದು ಎಲ್ಲ ಪಾತ್ರಗಳಿಗೂ ನ್ಯಾಯ ಕೊಡುವಂತಹ ಸಾಹಿತ್ಯ ರಚಿಸಿದ ಕಾರಣದಿಂದಲೇ “ಸೀತಾವಿಯೋಗ’ದಂತಹ ಯಕ್ಷಗಾನಗಳು ವರ್ಷಕ್ಕೆ ಸಾವಿರಾರು ಪ್ರಯೋಗಗಳನ್ನು ಕಂಡವು. ಕಳೆದ ಆರು ವರ್ಷಗಳಿಂದ ವಿಶ್ವಶಾಂತಿ ಸರಣಿ ಏಕವ್ಯಕ್ತಿ ರೂಪಕಕ್ಕೆ ತಮ್ಮದೇ ಸಾಹಿತ್ಯ ನಿರ್ದೇಶನ ಮಾಡಿದ್ದರು. ಅಕ್ಷರ ಪ್ರೀತಿಯ, ಸಮಯ ಪಾಲನೆ ಅವರ ವಿಶೇಷತೆಗಳಲ್ಲಿ ಒಂದು.

ಶಂಕರ ಭಾಷ್ಯದ ಬ್ರಹ್ಮಸೂತ್ರ ಚತಃಸೂತ್ರಿ, ಅಲಂಕಾರ ತತ್ವ, ಭಾರತೀತ ತತ್ವಶಾಸ್ತ್ರ ಪ್ರವೇಶ, ಕುಮಾರಿಲಭಟ್ಟ, ಶಬ್ಧ ಮತ್ತು ಜಗತ್ತು, ಭಾರತೀಯ ದರ್ಶನಗಳು ಹಾಗೂ ಭಾಷೆ, ಅಭಿನಯ ದರ್ಪಣ, ಧ್ವನ್ಯಾಲೋಕ ಮತ್ತು ಲೋಚನ, ಭಗವದ್ಭಕ್ತಿರಸಾಯನಂ, ಸಿದ್ಧಾಂತ ಬಿಂದು, ಪರಮಾನಂದ ಸುಧಾ, ಗೀತಾಗೂಢಾರ್ಥ ದೀಪಿಕಾ, ಸೌಂದರ್ಯ ಲಹರಿ ಮತ್ತು ಸಮಾಜ, ಪ್ರಮಾಣ ಪರಿಚಯ, ಹಿಂದೂ ಸಂಸ್ಕಾರಗಳು, ಮರೆಯಲಾಗದ ಮಹಾಬಲ, ಬಾಲರಾಮಾಯಣ ಕೃತಿಗಳನ್ನು ಬರೆದಿದ್ದರು.

ಸೀತಾ ವಿಯೋಗ, ರಾಜಾ ಕರಂಧಮ, ವಿಜಯೀ ವಿಶ್ರುತ, ಧರ್ಮ ದುರಂತ, ವಿಶ್ವಶಾಂತಿ ಸರಣಿ ರೂಪಕಗಳ ಸಾಹಿತ್ಯ ಗಳನ್ನು ರಚಿಸಿದ್ದರು. ಅಖೀಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನ ಅಧ್ಯಕ್ಷರೂ ಆಗಿದ್ದರು. ಈಚೆಗಷ್ಟೇ ಸ್ವರ್ಣವಲ್ಲೀ ಯಕ್ಷ ಶಾಲ್ಮಲಾದ ಅಧ್ಯಕ್ಷರೂ ಆಗಿದ್ದರು. ಯಕ್ಷಗಾನದ ಕಲಾವಿದರ, ಸಾಹಿತ್ಯದ ಕುರಿತು ಅಪಾರ ಕಾಳಜಿ ಹೊಂದಿದ್ದ ಹೆಗಡೆ ಅವರಲ್ಲಿ ಸಂಸ್ಕೃತ ಪಾಂಡಿತ್ಯವಿದ್ದರೂ ಕನ್ನಡದ ಮೇಲೆ ಅಕ್ಕರೆಯಿತ್ತು. ಯಕ್ಷಗಾನ ಎಂದರೆ ಉಸಿರಾಗಿತ್ತು. ಪ್ರಸಿದ್ಧ ವೇಷಧಾರಿ, ಅರ್ಥದಾರಿ, ಪ್ರಸಂಗಕರ್ತ, ಸಂಶೋಧಕ, ಚಿಂತಕರೂ ಅವರಾಗಿದ್ದರು.

Advertisement

ಪ್ರಶಸ್ತಿ, ಪುರಸ್ಕಾರ
ಕೆರೆಮನೆ ಮೇಳದಲ್ಲೂ ಪಾತ್ರ ಮಾಡಿದ್ದ ಅವರು ಶಂಭು ಹೆಗಡೆ ಅವರನ್ನು ಗುರುವಾಗಿ ಕಂಡವರು. ಮಹಾಬಲ ಹೆಗಡೆ ಅವರ ಒಡನಾಡಿಯೂ ಹೌದು. ಸದಾನಂದ ಪ್ರಶಸ್ತಿ, ಶೇಣಿ ಪುರಸ್ಕಾರ, ಚಿಟ್ಟಾಣಿ ಪ್ರಶಸ್ತಿ, ಅನಂತಶ್ರೀ ಪ್ರಶಸ್ತಿ, ಎಂ.ಹಿರಣ್ಣಯ್ಯ ಪ್ರಶಸ್ತಿ, ಭಾರತೀಯ ದರ್ಶನಗಳು ಹಾಗೂ ಭಾಷೆ ಗ್ರಂಥಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. ಪಾಂಡಿತ್ಯ ಇದ್ದರೂ ತೋರಿಸಿಕೊಳ್ಳದೇ ಒಂದು ಬಗಲು ಚೀಲ ಹಾಕಿಕೊಂಡು ಎಲ್ಲ ಗೊತ್ತಿದ್ದೂ ಹೇಳಿಕೊಳ್ಳದ ಅಕಾಡೆಮಿಕ್‌ ವ್ಯಕ್ತಿ ಅವರಾಗಿದ್ದರು. ಯಕ್ಷಗಾನ ಅಕಾಡೆಮಿ ಪ್ರಥಮ ಅಧ್ಯಕ್ಷರಾಗಿ ರಚನಾತ್ಮಕ ಚಟುವಟಿಕೆ ಮೂಲಕವೇ ಮನೆ ಮಾತಾಗಿದ್ದರು. ಯಕ್ಷಗಾನ ಪುರಸ್ಕಾರದ ಸಂಖ್ಯೆ ಕೂಡ ಏರಿಸಿದ್ದರು. ಯಕ್ಷಗಾನ ಡಿಜಟಲೀಕರಣ, ಸಂಶೋಧನೆ, ಕೋವಿಡ್‌ ಕಾಲದಲ್ಲಿ ಕಲಾವಿದರ ಆತ್ಮಸ್ಥೈರ್ಯ ಹೆಚ್ಚಿಸುವ ಮನೆಯಂಗಳದಲ್ಲಿ ಮಾತುಕತೆ ಕೂಡ ನಡೆಸಿದ್ದರು.

ಇನ್ನು ಸರಕಾರ ಅಕಾಡೆಮಿಗಳ ಅಧ್ಯಕ್ಷರಿಗೆ ಕೊಡುತ್ತಿದ್ದ ಮಾಸಿಕ 25 ಸಾವಿರ ರೂ. ಗೌರವಧನವನ್ನು ಯಕ್ಷಗಾನ ಪ್ರದರ್ಶನಗಳು ಹಾಗೂ ಸಂಕಷ್ಟದಲ್ಲಿದ್ದ ಕಲಾವಿದರಿಗೆ ನೆರವು ನೀಡುತ್ತಿದ್ದರು. ಕಳೆದ ಮಾರ್ಚ್‌ನಲ್ಲಿ ಕೋವಿಡ್‌ ಕಾರಣ ಲಾಕ್‌ಡೌನ್‌ ಮಾಡಿದಾಗ ರಾಜ್ಯ ಸರಕಾರದ ನಿಧಿಗೆ ಒಂದು ಲಕ್ಷ ರೂ. ನೆರವನ್ನೂ ಹಸ್ತಾಂತರಿಸಿದ್ದರು. ಆದರೆ ಅದೇ ಕೋವಿಡ್‌ ಎರಡನೇ ಅಲೆ ಹೆಗಡೆಯವರನ್ನೂ ಬಿಡಲಿಲ್ಲ. ಮರಣೋತ್ತರ ತಪಾಸಣೆ ಮಾಡಿದಾಗ ನೆಗೆಟಿವ್‌ ವರದಿ ಬಂದಿತ್ತು.

ರಚನಾತ್ಮಕ ಚಟುವಟಿಕೆ
ಯಕ್ಷಗಾನ ಅಕಾಡೆಮಿ ಪ್ರಥಮ ಅಧ್ಯಕ್ಷರಾಗಿ ರಚನಾತ್ಮಕ ಚಟುವಟಿಕೆ ಮೂಲಕವೇ ಮನೆ ಮಾತಾಗಿದ್ದರು. ಯಕ್ಷಗಾನ ಪುರಸ್ಕಾರದ ಸಂಖ್ಯೆ ಕೂಡ ಏರಿಸಿದ್ದರು. ಯಕ್ಷಗಾನ ಡಿಜಟಲೀಕರಣ, ಸಂಶೋಧನೆ, ಕೋವಿಡ್‌ ಕಾಲದಲ್ಲಿ ಕಲಾವಿದರ ಆತ್ಮಸ್ಥೈರ್ಯ ಹೆಚ್ಚಿಸುವ ಮನೆಯಂಗಳದಲ್ಲಿ ಮಾತುಕತೆ ಕೂಡ ನಡೆಸಿದ್ದರು.

– ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next