ಹೊನ್ನಾವರ: ಬಡಾ ಬಡಗು ಯಕ್ಷ ರಂಗದ ವಿಶಿಷ್ಠ ಶೈಲಿಯಾಗಿದ್ದ ಕರ್ಕಿ ಪರಂಪರೆಯ ಹಿರಿಯ ಕೊಂಡಿಯೊಂದು ಕಳಚಿ ಬಿದ್ದಿದ್ದು, 94ರ ಹರೆಯದ ಕೃಷ್ಣ ಹಾಸ್ಯಗಾರ ಅವರು ಗುರುವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಮಹರಾಷ್ಟ್ರದ ಬಲ್ಲಾರಪುರದಲ್ಲಿರುವ ಪುತ್ರನ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಕರ್ಕಿ ಶೈಲಿಯ ಪ್ರಖ್ಯಾತ ಮೇರು ಕಲಾವಿದರಾಗಿದ್ದ ಪರಮಯ್ಯ ಹಾಸ್ಯಗಾರರ ಗರಡಿಯಲ್ಲಿ ಕರ್ಕಿ ಶೈಲಿಯನ್ನು ಮೈಗೂಡಿಸಕೊಂಡ ಕೃಷ್ಣ ಹಾಸ್ಯಗಾರರು ಬೇರೆ ಯಾವುದೇ ಹೊಸ ಶೈಲಿಗೆ ಮಾರು ಹೋಗದೆ ತನ್ನ ಪರಂಪರೆಯ ಚೌಕಟ್ಟಿನಲ್ಲೇ ವಿಶಿಷ್ಠ ಶೈಲಿಯನ್ನು ಉಳಿಸಿ ಬೆಳೆಸಿದ್ದವರು.
ವೃತ್ತಿಯಿಂದ ಪ್ರೌಢಶಾಲಾ ನಿವೃತ್ತ ಕಲಾಶಿಕ್ಷಕರಾಗಿದ್ದ ಕೃಷ್ಣ ಹಾಸ್ಯಗಾರರು ವಂಶಪಾರಂಪರ್ಯವಾಗಿ ಬಂದ ಯಕ್ಷಗಾನ ಮತ್ತು ಮಣ್ಣಿನಮೂರ್ತಿ ತಯಾರಿಕೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದರು.
ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸ್ವೀಕರಿಸುತ್ತಿರುವ ಕೃಷ್ಣ ಹಾಸ್ಯಗಾರರು
ವಿವಿಧ ಪ್ರಸಂಗಗಳಲ್ಲಿನ ಬಣ್ಣದ ವೇಷಗಳು, ಪ್ರೇತ ನೃತ್ಯ, ವಿಶಿಷ್ಠ ಸಿಂಹ ನೃತ್ಯ, ಶಬರಾರ್ಜುನ ಪ್ರಸಂಗದ ಶಬರನ ಪಾತ್ರ ವಿಶೇಷ ವೇಷಗಾರಿಕೆ ಮತ್ತು ನಾಟ್ಯ ಕೃಷ್ಣ ಹಾಸ್ಯಗಾರರ ಹೆಚ್ಚುಗಾರಿಕೆಯಾಗಿತ್ತು.ಸಿಂಹ ವೇಷಧಾರಿಯಾಗಿ ಮುಖವಾಡದಲ್ಲೂ ಅವರ ಕಣ್ಣಿನ ಚಲನೆ ಅದ್ಭುತವಾಗಿರುತ್ತಿತ್ತು.
ಹಲವು ವರ್ಷಗಳ ಹಾಸ್ಯಗಾರ ಮನೆತನದ ಯಕ್ಷಗಾನ ಪರಂಪರೆಯನ್ನು ಕೃಷ್ಣ ಹಾಸ್ಯಗಾರರು ಮುಂದು ವರಿಸಿಕೊಂಡು ಬಂದಿದ್ದರು.
ಕೃಷ್ಣ ಹಾಸ್ಯಗಾರರ ಸಿಂಹನೃತ್ಯ, ಪ್ರೇತ ನೃತ್ಯ, ಶಬರ ನೃತ್ಯ, ಒಡ್ಡೋಲಗಗಳ ವಿಡಿಯೋಗಳು ದಾಖಲಾಗಿದ್ದು, ಅಂತರ್ಜಾಲದಲ್ಲೂ ಲಭ್ಯವಿವೆ. ಸಂಪ್ರದಾಯಿಕ ಯಕ್ಷಗಾನದ ಅಭಿಮಾನಿಗಳು ಕರ್ಕಿ ಶೈಲಿಯ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿದ್ದಾರೆ.
ಕರ್ಕಿ ಶೈಲಿಯ ಅಧ್ಯಯನ ನಡೆಸಿ ಆ ಬಗೆಗಿನ ಪುಸ್ತಕಗಳು ಹೊರ ಬಂದಿರುವುದು ವಿಶೇಷ .
ಕೃಷ್ಣ ಹಾಸ್ಯಗಾರರ ನಿಧನಕ್ಕೆ ಯಕ್ಷರಂಗದ ಗಣ್ಯರು, ಯಕ್ಷಾಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.