Advertisement

ಕಾಂಬುಕೆ ವೇಷ ಉಂಬುಕೆ ಕೃಷಿ

10:21 AM Jan 11, 2020 | mahesh |

ಕುಂದಾಪುರದ ಶಿರಿಯಾರ ಸಮೀಪವಿರುವ ಹಳ್ಳಾಡಿ ಎಂಬ ಹಳ್ಳಿಯ ರಸ್ತೆಯಲ್ಲಿ ಗೇಟಿನೊಳಗೆ ಪ್ರವೇಶಿಸಿ, ಎಡಬದಿ ಅಡಿಕೆ ತೋಟ- ಬಲಬದಿ ಸಣ್ಣದೊಂದು ಭತ್ತದ ಗದ್ದೆಯ ನಡುವಿನ ರಸ್ತೆಯಲ್ಲಿ ಎರಡೆಜ್ಜೆ ಹಾಕಿದರೆ ಎದುರು ಹಳ್ಳಾಡಿ ಜಯರಾಮ ಶೆಟ್ಟರ ಮನೆ. ನಾಯಿ ಬೊಗಳಿದ ಸದ್ದು ಕೇಳಿ, “ಹ್ವಾಯ್‌! ಯಾರೋ ಬಂದ್ರ್ ಕಾಣಿ’ ಎಂದು ರೇಣುಕಾ ಗಂಡನನ್ನು ಕೂಗಿ ಹೇಳಿದರು. ‘ಯಾರ್‌ ಯಾರ್‌?’ ಎಂದು ಹಳ್ಳಾಡಿ ಜಯರಾಮ ಶೆಟ್ಟರು ಚಾವಡಿಯಿಂದ ಹೊರಬಂದು ಅಂಗಳಕ್ಕಿಳಿದರು. ನಮ್ಮನ್ನು ಸ್ವಾಗತಿಸುತ್ತ, “ನಿನ್ನೆ ರಾತ್ರಿ ಹಟ್ಟಿಯಂಗಡಿ ಮೇಳದ್‌ ಆಟ ಇತ್ತ್ ಕಾಣಿ’ ಎಂದು ನಿದ್ದೆ ಕಣ್ಣು ತಿಕ್ಕುತ್ತ ಮಾತಿಗೆ ತೊಡಗಿದರು. ಗಂಭೀರ ಮಾತು. ನಗುವಿಲ್ಲ. ಅವರೆಲ್ಲಿ ನಗುತ್ತಾರೆ ! ಅವರ ಮಾತು ಕೇಳಿ ನಾವು ನಗಬೇಕಷ್ಟೆ. “ಸಾಲಿಗ್ರಾಮ ಮೇಳ ಬಿಟ್ರ್ಯಾ?’ ಎಂದು ಕೇಳಿದೆವು. “ಮೇಳದ ಯಜ್ಮಾನ್ರು ಬನ್ನಿ ಅಂದ್ರು. ನಂಗೆ ಮನೆ ಜವಾಬ್ದಾರಿ ಇತ್ತ್. ಹಂಗಾಗಿ ಬಪ್ಪೂಕೆ ಕಷ್ಟ ಅಂದೆ’ ಎನ್ನುತ್ತ ಸುಖ-ಕಷ್ಟ ಹಂಚಿಕೊಳ್ಳುವಷ್ಟರಲ್ಲಿ-

Advertisement

ಜಯರಾಮ ಶೆಟ್ಟರ ಪತ್ನಿ ರೇಣುಕಾ ಬೆಲ್ಲ-ನೀರು ತಂದರು. “ಮನೇಲೇ ಬೆಳೆದದ್‌ ‘ ಎಂದು ಒಂದು ಚಿಪ್ಪು ಬಾಳೆಹಣ್ಣನ್ನು ತಂದಿಟ್ಟರು. “ಅವ್‌ ಯಾವತ್ತೂ ಹಿಂಗೆ ಮಾತಾಡುದು’ ಎಂದು ಗಂಡನ ಮಾತಿಗೆ ಭಾಷ್ಯ ನುಡಿದು ತಾವೇ ಮಾತಿಗೆ ಕುಳಿತರು. ಯಾವಾಗಲೂ ರಂಗಸ್ಥಳದಲ್ಲಿ ಹಳ್ಳಾಡಿ ಜಯರಾಮ ಶೆಟ್ಟರ “ಅರ್ಥ’ ಕೇಳುತ್ತಿದ್ದ ನಾವು ಈಗ ಅವರ ಪತ್ನಿಯ ಮಾತುಗಳಿಗೆ ಕಿವಿಯಾದೆವು.

ಮಧ್ಯದಲ್ಲೊಮ್ಮೆ ಜಯರಾಮ ಶೆಟ್ಟರು ವಿಶಾಲ ಅಂಗಳದಲ್ಲಿ ಒಣಗಿಸಿಟ್ಟಿದ್ದ ಅಡಿಕೆಯನ್ನು ಹರಡಿ ಬಂದರು. “ಒಂದ್ನಿಮಿಷ ನೀರ್‌ ತತ್ತೆ’ ಎಂದು ಪತ್ನಿ ರೇಣುಕಾ ಕೊಡಪಾನವನ್ನು ಬಾವಿಗಿಳಿಸಿ ನೀರು ತಂದರು. ಮಾತು ಮುಂದುವರಿದೇ ಇತ್ತು…

ಅನ್ನ ಕೊಡುವ ಕೃಷಿ ಕೆಲಸಕ್ಕಿಂತ ಮಿಗಿಲಾದುದು ಯಾವುದಿದೆ… ಚಿಕ್ಕಂದಿನಿಂದಲೂ ಈ ಕೃಷಿ ಕೆಲಸಕಾರ್ಯಗಳ ನಡುವೆಯೇ ಬೆಳೆದವಳು ನಾನು. ಮದುವೆಯಾದ ಬಳಿಕವೂ ಈ ಕೃಷಿ ಕೆಲಸವೇ ನನ್ನ ಕೈ ಹಿಡಿದು ನಡೆಸುತ್ತ ಬಂದಿದೆ. ಅವರು ಕಲಾವಿದರಾದ್ದರಿಂದ ಮನೆಯ ಹೊರಗೇ ಹೆಚ್ಚು ತಿರುಗಾಟ ಅನಿವಾರ್ಯ ತಾನೆ. ಆದ್ದರಿಂದ, ಈ ಕೃಷಿಯನ್ನು ನಿಭಾಯಿಸುವುದು ನನಗೆ ಇಷ್ಟ ಕೂಡ. ಹಾಗಾಗಿಯೇ ಇತ್ತೀಚೆಗೆ ನಾವು ಭತ್ತದ ಗದ್ದೆಗಳಲ್ಲಿ ತೋಟ ಇಡುವಾಗಲೂ ಅವರ ಬಳಿ ಹಠ ಹಿಡಿದು ಗದ್ದೆಯೊಂದನ್ನು ಉಳಿಸಿಕೊಂಡಿದ್ದೇನೆ.

ನಾನು ಮದುವೆಯಾಗಿ ಅಮಾಸೆಬೈಲಿನಿಂದ ಹಳ್ಳಾಡಿಗೆ ಬಂದಾಗ ಬಡತನವೇ ಇತ್ತು. ಚೂರುಪಾರು ಕೃಷಿಯಿಂದಲೇ ಎಲ್ಲವೂ ಆಗಬೇಕಿತ್ತು. ಮದುವೆಯೆಂದರೆ ಆಗೆಲ್ಲ ಈಗಿನಂತೆ ವಿಜೃಂಭಣೆ ಎಲ್ಲಿತ್ತು? ಒಡವೆಗಳನ್ನೂ ಖರೀದಿಸಿದ್ದಿಲ್ಲ. ನಮ್ಮ ಕಡೆಯ ಸಂಪ್ರದಾಯದಂತೆ ಹಿಂಗಾರ ಮತ್ತು ತುಲಸೀದಳವನ್ನು ಸೇರಿಸಿ ಪುರೋಹಿತರು ಮಾಡಿಕೊಟ್ಟ ತಾಳಿಯನ್ನೇ ಅವರು ನನಗೆ ಕಟ್ಟಿದ್ದರು. ಅಂದೇ ಸಂಜೆ ನಮ್ಮ ಮನೆಯಲ್ಲಿ ಹರಕೆ ರೂಪದಲ್ಲಿ ಬೇಡರ ಕಣ್ಣಪ್ಪ ಎಂಬ ಯಕ್ಷಗಾನ ಆಡಿಸಿದ್ದರು. ಅದೇ ಪ್ರಸಂಗದಲ್ಲಿ ಇವರು ಕಾಶಿಮಾಣಿ ಪಾತ್ರ ಮಾಡಿದ್ದರು. ತುಸು ಹೊತ್ತಷ್ಟೇ ಯಕ್ಷಗಾನ ನೋಡಿದ್ದೆ. ಗೆಳತಿಯರು, ಹಿರಿಯರ ಮುಂದೆ ಅಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದಕ್ಕೆ ಬಹಳ ಮುಜುಗರವಾಯಿತು. ಆ ವಿಚಾರವೊಂದೇ ಅಲ್ಲ, ನಿದ್ದೆ ಬಿಡುವುದೆಂದರೆ ನನ್ನಿಂದಾಗದು. ಯಕ್ಷಗಾನ ಪ್ರದರ್ಶನಕ್ಕೇನಾದರೂ ಹೋದರೆ ಬಹಳ ತಲೆನೋವಾಗುತ್ತದೆ. ಆದ್ದರಿಂದ ಅಪರೂಪಕ್ಕೆ ನಾನು ಯಕ್ಷಗಾನ ನೋಡುವುದು. ಅವರು ಅಭಿನಯಿಸಿದ ಯಕ್ಷಗಾನ ಪ್ರಸಂಗಗಳನ್ನು ನೋಡಿದ್ದುಂಟು. ಅವರು ನಕ್ಕು ನಗಿಸುತ್ತ ಪಾತ್ರ ನಿಭಾಯಿಸುವುದನ್ನು ನೋಡಿದ್ದೇನೆ. ಮನೆಯಲ್ಲಿಯೂ ಹಾಗೆಯೇ ಸ್ವಲ್ಪ ಕುಶಾಲು ರೀತಿಯಲ್ಲಿಯೇ ಅವರು ಮಾತನಾಡುತ್ತಾರೆ. ಅದಕ್ಕೇ ನಮ್ಮ ಮನೆಯಲ್ಲಿ ಭಾರಿ ಜಗಳವೇನೂ ಆಗುವುದಿಲ್ಲ. ಹಾಗಂತ ಜಗಳವೇ ಇಲ್ಲವೆಂದಿಲ್ಲ. ನನ್ನ ಮಗ ರತೀಶ್‌ ಕೂಡ ಈಗ ಯಕ್ಷಗಾನ ಮೇಳವನ್ನೇ ಸೇರಿದ್ದಾನೆ. ಇವರು ಈಗ ಮೇಳ ಬಿಟ್ಟಿದ್ದರೂ ಅವಕಾಶ ಸಿಕ್ಕಾಗ ಪಾತ್ರಗಳನ್ನು ಮಾಡುತ್ತಾರೆ. ಆಗ ಇಬ್ಬರೂ ಹಗಲು ನಿದ್ದೆ ಮಾಡುತ್ತಿದ್ದರೆ ನನಗೆ ಮನೆಯ ಕೆಲಸ-ಬೊಗಸೆ ಸಾಗುತ್ತಿಲ್ಲವಲ್ಲ ಅಂತ ರೇಗಿಹೋಗುತ್ತದೆ. ಅದೇ ವಿಚಾರಕ್ಕೆ ನಾಲ್ಕು ಜೋರು ಮಾತುಗಳಾಗುವುದುಂಟು. ಮತ್ತೆ ಇವರಿಗೆ ಪಾತ್ರ ಮುಗಿಸಿ ಮನೆಗೆ ಬರುವುದಕ್ಕೆ ಸಾಧ್ಯವಾಗದೇ ಇದ್ದಾಗ ನನಗೆ ಆತಂಕವಾಗುತ್ತದೆ. ಅವರ ಊಟೋಪಚಾರದ ಬಗ್ಗೆ ಆತಂಕವಾಗಿ ರೇಗುತ್ತೇನೆ. ಹಾಂ… ಆಹಾರವೆಂದಾಗ ನೆನಪಾಯಿತು. ಅವರಿಗೆ ಬೈಗೆ ಮೀನು, ಬಂಗುಡೆ ಮೀನಿನ ಸಾರು ಇಷ್ಟವಾಗುತ್ತದೆ. ಆದರೆ, ಬಡತನದ ಸಂದರ್ಭದಲ್ಲಿ ಈ ರೀತಿ ಇಷ್ಟ-ಕಷ್ಟಗಳ ಬಗ್ಗೆ ಮಾತನಾಡುತ್ತ ಕೂರುವುದಕ್ಕೆ ಅವಕಾಶವೇ ಇರುತ್ತಿರಲಿಲ್ಲವೆನ್ನಿ. ಹಿಂದೆಲ್ಲ ಯಕ್ಷಗಾನದ ಕಲಾವಿದರೆಂದರೆ ಹೆಣ್ಣು ಕೊಡುವುದಕ್ಕೆ ಅಳುಕುತ್ತಿದ್ದರಂತೆ. ಆದರೆ, ನನ್ನ ಅಜ್ಜ ಹಳ್ಳಾಡಿ ಮಂಜಯ್ಯ ಶೆಟ್ಟರೇ ದೊಡ್ಡ ಕಲಾವಿದರು. ಅವರೇ ನನ್ನ ತಾಯಿ ಕೃಷಿ¡ ಶೆಟ್ಟಿಗೆ ಇವರ ಬಗ್ಗೆ ಹೇಳಿದ್ದರಿಂದ ಈ ಮದುವೆ ನಡೆಯಿತು. ನನ್ನ ಅಪ್ಪನ ಹೆಸರೂ ಮಂಜಯ್ಯ ಶೆಟ್ಟಿ. ಕೃಷಿಕರಾಗಿದ್ದರು. ಅಪ್ಪ ನನಗೆ “ಗುಲಾಬಿ’ ಎಂದು ಹೆಸರಿಟ್ಟಿದ್ದರು. ಮದುವೆಯಾದ ಸಂದರ್ಭದಲ್ಲಿ ಅಜ್ಜ ಮಂಜಯ್ಯ ಶೆಟ್ಟರು ನನಗೆ “ರೇಣುಕಾ’ ಅಂತ ಹೆಸರಿಟ್ಟರು. ಮದುವೆಯಾಗಿ ನಾನು ಕೂಡು ಕುಟುಂಬದ ಸೊಸೆಯಾದೆ. ತವರಿನಲ್ಲಿ ಕೃಷಿ ಕೆಲಸದ ಅನುಭವವಿದ್ದುದರಿಂದ ಗಂಡನ ಮನೆಯಲ್ಲಿ ಕೃಷಿ ಕೆಲಸ ಕಷ್ಟವಾಗಲಿಲ್ಲ. ಅನಂತರ ಬಾಡಿಗೆ ಮನೆಯಲ್ಲಿದ್ದಾಗಲೂ, ನಾವು ಖರೀದಿಸಿಟ್ಟುಕೊಂಡ ಜಾಗದಲ್ಲಿ ನಾನೇ ಬಂದು ಗಿಡಗಳನ್ನು ನೆಡುವುದು, ನೀರುಣಿಸುವುದು, ತೆಂಗು, ಕಂಗುಗಳ ದೇಖರೇಖೀ ಮಾಡುವುದು ನಡೆದೇ ಇತ್ತು.

Advertisement

ನಮ್ಮ ಮದುವೆಯಾಗಿ ನಲ್ವತ್ತು ವರ್ಷವಾಗುತ್ತ ಬಂತು. ಮದುವೆ ನಡೆದು ಸುಮಾರು 20 ವರ್ಷಗಳ ಬಳಿಕ ಇವರು ನನಗೊಂದು ಚಿನ್ನದ ಕರಿಮಣಿ ಸರ ಮಾಡಿಸಿಕೊಟ್ಟರು. ಅಷ್ಟು ವರ್ಷಗಳ ಕಾಲ ಚಿನ್ನದೊಡವೆ ಧರಿಸುವುದು ಸಾಧ್ಯವಾಗಲಿಲ್ಲ. ಅದಕ್ಕೊಂದು ಕಾರಣವೂ ಉಂಟು. ಅದು ಹೇಗೋ ಕುಡಿತವನ್ನು ಅಭ್ಯಾಸ ಮಾಡಿಕೊಂಡ ಇವರ ದುಡಿಮೆಯೆಲ್ಲ ಅದಕ್ಕೆ ಸೋರಿಕೆಯಾಗುತ್ತಿತ್ತು. ಆದರೆ, ಸಾಲಿಗ್ರಾಮ ಮೇಳದಲ್ಲಿರುವಾಗ ಏನೋ ಮಾತುಕತೆ ನಡೆದು ಇವರು ಕೆಲವು ದಿನಗಳ ಕಾಲ ಮಂಕಾಗಿ ಮನೆಯಲ್ಲಿಯೇ ಕುಳಿತಿದ್ದರು. ತಮ್ಮ ಪ್ರತಿಭೆಯನ್ನು ಕುಡಿತವೇ ಮಸುಕುಗೊಳಿಸಿದೆ ಎಂಬುದು ಅವರ ಅರಿವಿಗೆ ಬಂದಿರಬೇಕು. ಒಂದು ಸಂಜೆ ಪೇಟೆ ಕಡೆ ಹೋದವರು, ಮರಳಿ ಬಂದು ನನ್ನನ್ನು ಕರೆದುಕೊಂಡು ದೇವಸ್ಥಾನಕ್ಕೆ ಹೋದರು. ಆಗಲೂ ಕುಡಿದೇ ಇದ್ದರು. ಹಳ್ಳಾಡಿ ನಂದಿಕೇಶ್ವರ ದೇವಸ್ಥಾನದ ಮುಂದೆ ನಿಂತು, “ಇನ್ನು ಮುಂದೆ ಎಂದೂ ಕುಡಿತಕ್ಕೆ ಆಸೆಪಡುವ ಮನಸ್ಸು ಕೊಡದಿರು ದೇವರೇ’ ಎಂದು ಅವರು ಬೇಡಿಕೊಂಡರು. ಅವರಿಗಿಂತಲೂ ಹೆಚ್ಚು ಭಕ್ತಿಯಿಂದ ನಾನೂ ಬೇಡಿಕೊಂಡಿದ್ದೇನೆ ಎಂದು ಬೇರೆ ಹೇಳಬೇಕೆ! ಆ ಘಟನೆಯ ಬಳಿಕವೂ ಅವರು ಮತ್ತೆ ಕುಡಿತ ಶುರು ಮಾಡಬಹುದೇನೋ ಎಂಬ ಸಂಶಯ ನನ್ನಲ್ಲಿದ್ದೇ ಇತ್ತು. ಆದರೆ, ದೇವರ ದಯೆಯಿಂದ ಹಾಗಾಗಲಿಲ್ಲ. ಕುಡಿತವನ್ನು ಸಂಪೂರ್ಣ ಕೈಬಿಟ್ಟರು. ದುಡ್ಡು ಕೈಯಲ್ಲಿ ನಿಂತು ಬದುಕು ಸುಧಾರಿಸಿತು.

ಶ್ರಮವೇ ನನ್ನ ಜೀವನದ ಹಾದಿಯಾಗಿಬಿಟ್ಟಿದೆ. ಸೊಸೆ ರೂಪಾ ಕೂಡ ನನಗೆ ಬಲಗೈಯಂತೆ ಇದ್ದಾಳೆ. ಮದುವೆಯಾಗಿ ದೂರದ ಊರಿನಲ್ಲಿರುವ ಮಗಳು ಸೌಮ್ಯಾ ಆಗಾಗ ಮನೆಗೆ ಬರುತ್ತಿರುತ್ತಾಳೆ. ಉಂಡುಟ್ಟು ಬದುಕಲು ಬೇಕಾದಷ್ಟು ದೇವರು ಕೊಟ್ಟರು ಎಂಬುದು ಸುಳ್ಳಲ್ಲ. ಮೊಮ್ಮಕ್ಕಳು ಆಶ್ರಿತಾ ಮತ್ತು ಆರತಿ ಮನೆಯಲ್ಲಿ ಖುಷಿ ತುಂಬಿದ್ದಾರೆ.

ಎಲೆಯಡಿಕೆ ಸಾಂಗತ್ಯ
ಇವರು ಆಗಾಗ ಮಲ್ಲಿಗೆ ಹೂವು ತರುವುದುಂಟು. ಹೆಚ್ಚು ಹೊತ್ತು ಮುಡಿದರೆ ತಲೆನೋವು ಬರುವುದರಿಂದ ಪಕ್ಕಕ್ಕಿಡುತ್ತೇನೆ. ಇವರು ಇತ್ತೀಚೆಗೆ ಎಲೆ-ಅಡಿಕೆ ಹೆಚ್ಚು ಹಾಕಿಕೊಳ್ಳುತ್ತಾರೆ. ನಮ್ಮ ತೋಟದಲ್ಲಿಯೇ ವೀಳ್ಯದೆಲೆಯು, ಅಡಿಕೆಯೂ ಬೆಳೆಯುವುದಕ್ಕೆ ಶುರುಮಾಡಿದ ಮೇಲೆ ನಾನೂ ಎಲೆಯಡಿಕೆ ತಿನ್ನುತ್ತೇನೆ. ಹಲ್ಲುನೋವಿನ ನೆಪದಲ್ಲಿ ಈ ಅಭ್ಯಾಸ ಶುರುವಾಯಿತು. ಈಗ ಇದೊಂದು ನಮಗಿಬ್ಬರಿಗೂ ಇರುವ ಸಮಾನ ವ್ಯಸನ… ಎನ್ನಬೇಕು.
-ರೇಣುಕಾ ಶೆಟ್ಟಿ

ಹಳ್ಳಾಡಿ ರೇಣುಕಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next