Advertisement

ಖ್ಯಾತ ಸ್ತ್ರೀ ಪಾತ್ರಧಾರಿ ಡಾ.ಕೋಳ್ಯೂರರಿಗೆ ಪಿವಿ ಹಾಸ್ಯಗಾರ ಪ್ರಶಸ್ತಿ

12:13 PM Nov 19, 2018 | Team Udayavani |

ಹೊನ್ನಾವರ:ಪ್ರಸಕ್ತ ಮತ್ತು ಕಳೆದ ತಲೆಮಾರುಗಳ ಮೂರು ತಿಟ್ಟುಗಳ ಯಕ್ಷಗಾನದ ಸ್ತ್ರೀ ಪಾತ್ರಧಾರಿಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿದ್ದವರು ಡಾ.ಕೋಳ್ಯೂರು ರಾಮಚಂದ್ರರಾಯರು. ಇವರು 50 ವರ್ಷಕ್ಕೂ ಹೆಚ್ಚು ಕಾಲ ಯಕ್ಷಗಾನ ಸ್ತ್ರೀ ಪಾತ್ರ ಪ್ರಪಂಚವನ್ನು ಆಳಿದವರು. ಕೋಳ್ಯೂರರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ್ ರಾವ್ ಹೇಳಿದರು.

Advertisement

ಅವರು ಭಾನುವಾರ ಹೊನ್ನಾವರದ ಕರ್ಕಿ ನಾಕಾದಲ್ಲಿನ ಹವ್ಯಕ ಸಭಾಭವನದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಡಾ.ಕೋಳ್ಯೂರು ರಾಮಚಂದ್ರ ರಾವ್ ಅವರಿಗೆ ಪಿವಿ ಹಾಸ್ಯಗಾರ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಡಗು ಮತ್ತು ಬಡಾಬಡಗು ತಿಟ್ಟುಗಳಲ್ಲಿ ಕೋಳ್ಯೂರು ರಾಮಚಂದ್ರ ರಾಯರು ಗಣನೀಯ ಕಲಾಸೇವೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೋಳ್ಯೂರರಿಗೆ ಕರ್ಕಿ ಮೇಳದ ನಯನಗಳೋಪಾದಿಯಲ್ಲಿದ್ದ ಬಡಾಬಡಗು ತಿಟ್ಟಿನ ಪರಂಪರೆಯ ಕಲಾವಿದ ದಿ.ಪಿ.ವಿ.ಹಾಸ್ಯಗಾರರ ಸ್ಮರಣಾರ್ಥ ನೀಡುವ ಈ ವರ್ಷದ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕೋಳ್ಯೂರು ರಾಮಚಂದ್ರ ರಾಯರ ಧರ್ಮಪತ್ನಿ ಭಾಗೀರಥಿ ಅವರನ್ನೂ ಕೂಡಾ ಜೊತೆಯಲ್ಲಿ ಸನ್ಮಾನಿಸಿದರು.

ಮುಖ್ಯ ಅತಿಥಿಯಾಗಿ ಮಲ್ಲಾಪುರ ಗುರುಪ್ರಸಾದ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಅರುಣ ಉಭಯಕರ, ನಾರಾಯಣ ಹಾಸ್ಯಗಾರ, ಕುಮಟಾ ಯಕ್ಷಗಾನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಜಿ.ಎಲ್.ಹೆಗಡೆ, ಕಡತೋಕ ಗೋಪಾಲಕೃಷ್ಣ ಭಾಗವತ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ ಇವರಿಂದ “ಖಾಂಡವ ದಹನ” ಯಕ್ಷಗಾನ ಪ್ರದರ್ಶನಗೊಂಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next