Advertisement

ಚಟುವಟಿಕೆ ಸ್ತಬ್ಧ ; ಕಲಾವಿದರ ಸಂಕಷ್ಟ ಆಲಿಸುವವರಿಲ್ಲ 

12:09 AM Aug 26, 2021 | Team Udayavani |

ಕೋಟ: ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿ ಹಾಗೂ ಬಯಲಾಟ ಅಕಾಡೆಮಿಗೆ ಅಧ್ಯಕ್ಷರಿಲ್ಲದೆ ಹಲವು ತಿಂಗಳು ಕಳೆದಿದ್ದು  ಅವುಗಳ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದೆ.

Advertisement

ಇಂದಿನ ಕೋವಿಡ್‌ ಸಂಕಷ್ಟದ ಸಮಯದಲ್ಲಿ ಕಲಾವಿದರ ಸಮಸ್ಯೆಗಳನ್ನು ಸರಕಾರಕ್ಕೆ ಮನವರಿಕೆ ಮಾಡಲೂ ಸಾಧ್ಯವಾಗುತ್ತಿಲ್ಲ.

ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿದ್ದ ಡಾ| ಟಿ.ಬಿ. ಸೊಲಬಕ್ಕನವರ್‌ 2020ರ ನ. 19ರಂದು ಅಸೌಖ್ಯದಿಂದ ನಿಧನ ಹೊಂದಿದ್ದರು. ಅಂತೆಯೇ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ಅವರು 2021 ಎ. 18ರಂದು ನಿಧನ ಹೊಂದಿದ್ದರು. ಹೀಗೆ ತೆರವಾದ ಎರಡೂ ಅಕಾಡೆಮಿಗಳ ಅಧ್ಯಕ್ಷ ಸ್ಥಾನಕ್ಕೆ ಅರ್ಹರನ್ನು ನಿಯೋಜಿಸುವ ಕಾರ್ಯ ಸರಕಾರದಿಂದ ಇದುವರೆಗೆ ನಡೆದಿಲ್ಲ.

ಕಾರ್ಯಕ್ರಮಗಳಿಗೂ ಹಿನ್ನಡೆ:

ಯಕ್ಷಗಾನ ಅಕಾಡೆಮಿಯಿಂದ ತರಬೇತಿ ಶಿಬಿರ, ದಾಖಲೀಕರಣ, ಹಿರಿಯ ಕಲಾವಿದರಿಗೆ ಗೌರವಾರ್ಪಣೆ, ನೆನಪಿನ ಬುತ್ತಿ ಎನ್ನುವ  ಆನ್‌ಲೈನ್‌ ಲೈವ್‌ ಮೂಲಕ ಹಿರಿಯ ಕಲಾವಿದರನ್ನು ಪರಿಚಯಿಸುವ ಕಾರ್ಯ ಮುಂತಾದ ಕಾರ್ಯ ಕ್ರಮ ಚಾಲ್ತಿಯಲ್ಲಿದ್ದವು. ಪ್ರಸ್ತುತ ಈ ಎಲ್ಲವೂ ಸ್ಥಗಿತಗೊಂಡಿವೆ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೂಡ ನಡೆದಿಲ್ಲ. ಬಯಲಾಟ ಅಕಾಡೆಮಿಯಲ್ಲೂ ಇದೇ ರೀತಿ ಹಲವು ಚಟುವಟಿಕೆಗಳು ಸ್ಥಗಿತವಾಗಿವೆ.

Advertisement

ಎಲ್ಲ ಅಕಾಡೆಮಿಗಳಿಗೆ 3 ವರ್ಷಗಳ ಅವಧಿಗೆ ಸದಸ್ಯರು, ಅಧ್ಯಕ್ಷರನ್ನು ನೇಮಿಸಲಾಗುತ್ತದೆ. ಈಗಾಗಲೇ 2 ವರ್ಷ ಕೋವಿಡ್‌ ಕಾರಣ ಕಾರ್ಯ ಕ್ರಮಗಳಿಗೆ ಹಿನ್ನಡೆಯಾಗಿದ್ದು, ಇನ್ನುಳಿದ ಒಂದು ವರ್ಷ ಅವಧಿಯ ಚಟುವಟಿಕೆಗಳು ವೇಗವಾಗಿ ನಡೆಸುವ ಸಲುವಾಗಿ ಅಧ್ಯಕ್ಷರನ್ನು ಶೀಘ್ರ ನೇಮಿಸುವ ಕಾರ್ಯ ನಡೆಯಬೇಕಿದೆ.

ನಿಂತ ನೀರಾದ ಅಕಾಡೆಮಿಗಳು! :

ಅಕಾಡೆಮಿಯ ಮೂಲಕ ಯಾವುದೇ ಕಾರ್ಯಕ್ರಮ ಆಯೋಜಿಸಬೇಕಾದರೆ ಹಾಗೂ ಈ ಹಿಂದೆ ಹಾಕಿಕೊಂಡ ಕಾರ್ಯಕ್ರಮವನ್ನು ಮುಂದುವರಿಸಬೇಕಾದರೆ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕು. ಆದರೆ ಅಧ್ಯಕ್ಷರೇ ಇಲ್ಲದ ಕಾರಣ ಬಯಲಾಟ ಅಕಾಡೆಮಿಗೆ 9 ತಿಂಗಳಿಂದ ಹಾಗೂ ಯಕ್ಷಗಾನ ಅಕಾಡೆಮಿಗೆ 5 ತಿಂಗಳಿಂದ ಸಭೆ ನಡೆದಿಲ್ಲ.

ಕಲಾವಿದರ ಪರ ಧ್ವನಿಯಾಗಬೇಕಿತ್ತು :

ಕೋವಿಡ್‌ ಸಂಕಷ್ಟದಲ್ಲಿ ಕಲಾವಿದರು ಕಾರ್ಯಕ್ರಮಗಳಿಲ್ಲದೆ ಸಾಕಷ್ಟು ಸಮಸ್ಯೆಗೆ ಸಿಲುಕಿದ್ದಾರೆ. ಅವರ ಕಷ್ಟಗಳನ್ನು ಸರಕಾರಕ್ಕೆ ಮನವರಿಕೆ ಮಾಡಿ ಹೆಚ್ಚಿನ ಸಹಕಾರ ನೀಡುವ ಹಾಗೂ ಸರಕಾರದಿಂದ ಈಗಾಗಲೇ ಜಾರಿಯಾದ ಯೋಜನೆಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸಂಪರ್ಕ ಸೇತುವಾಗಿ ಈ ಅಕಾಡೆಮಿಗಳು ಕಾರ್ಯ ನಿರ್ವಹಿಸಬೇಕಿತ್ತು. ಆದರೆ ನಾಯಕನಿಲ್ಲದೆ ಇದ್ಯಾವುದೂ ಸಾಧ್ಯವಾಗಿಲ್ಲ.

ಶೀಘ್ರ ಕ್ರಮ :

ಅಧ್ಯಕ್ಷರಿಲ್ಲದೆ ಅಕಾಡೆಮಿಯ ಕಾರ್ಯನಿರ್ವಹಣೆಗೆ ಹಿನ್ನಡೆಯಾಗಿರುವುದು ಹೌದು. ಈ ಬಗ್ಗೆ ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಗಮನಕ್ಕೆ ತರಲಾಗಿದೆ. ಅಧ್ಯಕ್ಷರನ್ನು ನೇಮಿಸುವ ಕುರಿತು ಸಚಿವರು ಶೀಘ್ರ ಕ್ರಮ ಕೈಗೊಳ್ಳಲಿದ್ದಾರೆ.- ಎಸ್‌. ರಂಗಪ್ಪ , ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

 

ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next