Advertisement

ಯಕ್ಷ ಪರಂಪರೆಯನ್ನು ನೆನಪಿಸಿದ ಅಬ್ಬರ ತಾಳ

06:00 AM Jun 01, 2018 | |

ಯಕ್ಷಗಾನ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ, ಪಕ್ಕದ ಎತ್ತರದ ಪ್ರದೇಶಗಳಲ್ಲಿ ಸ್ವಲ್ಪಕಾಲ ಚೆಂಡೆಯ ವಾದನ ನಡೆಸಲಾಗುತ್ತಿತ್ತು. ಊರವರಿಗೆಲ್ಲ ಇಲ್ಲಿ ಆಟ ನಡೆಯುತ್ತಿದೆ ಎಂದು ತಿಳಿಸುವ ಮತ್ತು ನೆನಪಿಸುವ ಸಾಧನ ಕೂಡಾ ಇದಾಗಿತ್ತು. ಇದೇ ಅಬ್ಬರ ತಾಳ!

Advertisement

ಮಂಗಳೂರಿನ ಅಡ್ಯಾರ್‌ ಗಾರ್ಡನ್‌ ಮತ್ತು ಪರಿಸರ ಕಳೆದ ರವಿವಾರದಂದು ನಿಜ ಅರ್ಥದ ಯಕ್ಷಲೋಕವಾಗಿ ಪರಿವರ್ತನೆಯಾಯಿತು. ಸಮಕಾಲೀನ ಯಕ್ಷಗಾನ ರಂಗದ ಬಹುತೇಕ ಹಿರಿಯ- ಯುವ- ಎಳೆಯ ಕಲಾವಿದರು ಅಲ್ಲಿ ಮೇಳೈಸಿದರು. ತೆಂಕು-ಬಡಗು ತಿಟ್ಟುಗಳ ಅಪೂರ್ವ ಸಂಗಮವಾಯಿತು. ಪರಂಪರೆಯ ಶೈಲಿಯು ಅಲ್ಲಿ ಸಂಭ್ರಮಿಸಿತು. ಮುಂಜಾನೆಯಿಂದ ನಡುರಾತ್ರಿ ಕಳೆಯುವವರೆಗೂ ಅಲ್ಲಿ ದೇಶ ವಿದೇಶಗಳ ಕಲಾಭಿಮಾನಿಗಳು ತುಂಬಿ ತುಳುಕಿದರು! ತಡರಾತ್ರಿ ಸುರಿದ ಮಳೆಯು ಸಮಗ್ರ ಉತ್ಸಾಹಕ್ಕೆ ಯಾವುದೇ ಭಂಗ ಉಂಟು ಮಾಡಲಿಲ್ಲ.


ಸಂದರ್ಭ: ಪ್ರಸಿದ್ಧ ಭಾಗವತ ಸತೀಶ್‌ ಶೆಟ್ಟಿ ಪಟ್ಲ ಅವರು ಸ್ಥಾಪಕಾಧ್ಯಕ್ಷರಾಗಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ನ ಯಕ್ಷಧ್ರುವ ಪಟ್ಲ ಸಂಭ್ರಮ. ಅವರು ವಿವರಿಸುವಂತೆ “ಯಕ್ಷಗಾನ ಕ್ಷೇತ್ರದಲ್ಲಿ ವೃತ್ತಿಪರ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಅಶಕ್ತ ಕಲಾವಿದರ ಬದುಕಿನಲ್ಲಿ ಭರವಸೆಯ ಬೆಳಕನ್ನು ಮೂಡಿಸಲು ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಸ್ಥಾಪನೆಯಾಗಿದೆ. ಕಳೆದ ಮೂವತ್ತು ತಿಂಗಳುಗಳಲ್ಲಿ ಸುಮಾರು ಒಂದೂವರೆ ಕೋಟಿ ರೂ. ಗೂ ಹೆಚ್ಚು ಮೊತ್ತದ ಸೇವಾ ಯೋಜನೆಗಳನ್ನು ಅನುಷ್ಠಾನಿಸಲಾಗಿದೆ.’ ಪ್ರಶಸ್ತಿ, ಗೌರವಧನ, ವಿಮೆ, ಚಿಕಿತ್ಸಾ ವೆಚ್ಚ, ಪರಿಹಾರ ಧನ, ಅಶಕ್ತ ಕಲಾವಿದರಿಗೆ ಗೃಹ ನಿರ್ಮಾಣ, ಯಕ್ಷಕೃತಿಗಳ ಬಿಡುಗಡೆ, ಅಶಕ್ತ ಕಲಾವಿದರ ಮಕ್ಕಳಿಗೆ ಶಿಕ್ಷಣಕ್ಕೆ ನೆರವು ಇತ್ಯಾದಿ ಇದರಲ್ಲಿ ಸೇರಿದೆ. ಮತ್ತಷ್ಟು ಬದ್ಧತೆಯಿಂದ ಈ ಸಾಮಾಜಿಕ ಸೇವಾ ಕಾರ್ಯಗಳು ನಡೆಯಲಿವೆ ಎಂಬ ಸಂದೇಶವನ್ನು ಈ ಸಂಭ್ರಮದ ಅಬ್ಬರ ತಾಳ ಸಾರಿತು!

ಪರಂಪರೆಯಂತೆ ಮುಂಜಾನೆ ಚೌಕಿಪೂಜೆಯೊಂದಿಗೆ ಈ ಸಂಭ್ರಮ ಆರಂಭವಾಯಿತು. ವೇದಿಕೆಗೆ ಶೇಣಿ ಗೋಪಾಲಕೃಷ್ಣ ಭಟ್‌ ಅವರ ಹೆಸರನ್ನು ಇರಿಸಲಾಗಿತ್ತು. ಚೌಕಿ ಪೂಜೆಯ ಬಳಿಕ “ಅಬ್ಬರ ತಾಳ’ ಏರ್ಪಾಡಾದದ್ದು ಇಲ್ಲಿನ ಆರಂಭಿಕ ವೈಶಿಷ್ಟಗಳಲ್ಲೊಂದು. ಹಿಂದಿನ ದಿನಗಳಲ್ಲಿ ಬೇರೆ ಬೇರೆ ಊರುಗಳಲ್ಲಿ ಟೆಂಟ್‌ ಮೇಳಗಳ ಯಕ್ಷಗಾನ ಕಾರ್ಯಕ್ರಮ ರಾತ್ರಿಪೂರ್ತಿ ನಡೆಯುತ್ತಿತ್ತು. ಆಗ, ಪ್ರದರ್ಶನಕ್ಕೆ ಪೂರ್ವಭಾವಿಯಾಗಿ, ಪಕ್ಕದ ಎತ್ತರದ ಪ್ರದೇಶಗಳಲ್ಲಿ ಸ್ವಲ್ಪಕಾಲ ಚೆಂಡೆಯ ವಾದನ ನಡೆಸಲಾಗುತ್ತಿತ್ತು. ಊರವರಿಗೆಲ್ಲ ಇಲ್ಲಿ ಆಟ ನಡೆಯುತ್ತಿದೆ ಎಂದು ತಿಳಿಸುವ ಮತ್ತು ನೆನಪಿಸುವ ಸಾಧನ ಕೂಡಾ ಇದಾಗಿತ್ತು. ಇದೇ ಅಬ್ಬರ ತಾಳ!

ಇಲ್ಲಿ ಅಬ್ಬರ ಎಂದರೆ ಮಾಹಿತಿ ಸೂಚಕ ಎಂಬರ್ಥ. ಹಳ್ಳಿಗಳಲ್ಲಿ ಈ ಕ್ರಮಕ್ಕೆ “ಕೇಳಿ ಬೊಟ್ಟುನು’ ಎಂದು ತುಳುವಿನಲ್ಲಿ ಉಲ್ಲೇಖೀಸಲಾಗುತ್ತಿತ್ತು. ಕನ್ನಡದಲ್ಲಿ “ಕೇಳಿ’ ಎಂದೂ ತಿಳಿದುಕೊಳ್ಳಬಹುದಾಗಿತ್ತು. ಸಾಧಾರಣ ಸಂಜೆ 6ರ ಬಳಿಕ, ಅಂದರೆ ಯಕ್ಷಗಾನ ಆರಂಭದ ಎರಡು ತಾಸು ಮೊದಲು ಈ ಪ್ರಕ್ರಿಯೆ ನಡೆಯುತ್ತಿತ್ತು. (ಆ ಕಾಲದಲ್ಲಿ ವಿದ್ಯುತ್‌ ಮತ್ತಿತರ ಸೌಲಭ್ಯಗಳಿರಲಿಲ್ಲ. ಸಂಪರ್ಕ ಸಾಧನಗಳಿರಲಿಲ್ಲ. ಆದರೆ, ಕತ್ತಲೆಯ ಮೌನವನ್ನು ಸೀಳಿ ಬರುತ್ತಿದ್ದ ಸ್ವಲ್ಪಕಾಲದ ಈ ಅಬ್ಬರ ತಾಳ, ಯಕ್ಷಗಾನಕ್ಕೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿತ್ತು ಎಂದರೆ ಉತೆ³Åàಕ್ಷೆಯಲ್ಲ)
ಅಡ್ಯಾರಿನಲ್ಲಿ ಮುಂಜಾನೆ 8ಕ್ಕೆ ಚೌಕಿ ಪೂಜೆ ಜರಗಿದ ಬಳಿಕ ಅಬ್ಬರ ತಾಳ ಮೊಳಗಿತು. ಪಕ್ಕದ ಮೂರು ಅಂತಸ್ತುಗಳ ಕಟ್ಟಡದ ಮೇಲ್ಛಾವಣಿಯಲ್ಲಿ. ಸುತ್ತಮುತ್ತಲಿನ ಪ್ರದೇಶದಲ್ಲಿ ಅದು ಪ್ರತಿಧ್ವನಿಸಿತು! ವಿಶೇಷವೆಂದರೆ ತೆಂಕು- ಬಡಗಿನ ಪ್ರಸಿದ್ಧ ಚೆಂಡೆವಾದಕ ಕಲಾವಿದರು ಈ ಅಬ್ಬರ ತಾಳವನ್ನು ನಡೆಸಿಕೊಟ್ಟರು.

ಈ ಅಬ್ಬರ ತಾಳದಲ್ಲಿ ಚಕ್ರತಾಳವನ್ನು ನಡೆಸಿದವರು ಭಾಗವತ ಸತೀಶ್‌ ಶೆಟ್ಟಿ ಅವರ ತಂದೆ ಪಟ್ಲ ಮಹಾಬಲ ಶೆಟ್ಟಿ- ಸ್ವತಃ ಯಕ್ಷಗಾನ ಕಲಾವಿದರಾಗಿದ್ದವರು ಅವರು. ಯಕ್ಷಧ್ರುವ ಪಟ್ಲ ಸಂಭ್ರಮದ ಆರಂಭಕ್ಕೆ ಇದು ವಿಶೇಷವಾದ ಮತ್ತು ಪರಂಪರಾಗತ ಮೆರುಗನ್ನು ತುಂಬಿತು. ಯಕ್ಷಗಾನ ಕಲೆ ಕರಾವಳಿಯ ಸಾಂಸ್ಕೃತಿಕ ಮುಖವಾಣಿ ಎಂಬುದು ಸಾರ್ವತ್ರಿಕವಾದ ನಂಬಿಕೆ. ಆದರೆ ಈ ಮಾಧ್ಯಮದ ಮೂಲಕ ಕಲಾವಿದನ ಬದುಕಿಗೂ ಆಧಾರವಾಗಲು ಸಾಧ್ಯ, ಅಶಕ್ತ ಕಲಾವಿದರಿಗೆ ಸಮಾಜ ಶ್ಲಾಘನೀಯ ರೀತಿಯಲ್ಲಿ ಸ್ಪಂದಿಸಲು ಮುಂದಾಗುತ್ತದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್‌ ಸಾಧಿಸಿದೆ. 

Advertisement

 ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next