ಸೋದರಿಯ ಸೋಲಿಗೆ ಕುಪಿತನಾಗಿ ಕೃಷ್ಣನೊಡನೆ ಸಮರಕ್ಕೆ ಅಣಿಯಾಗುವ ಬಲರಾಮ, ಯಾಜ್ಞ ಸೇನೆಗೆ ಅಬ್ಬರಕ್ಕೆ ಬೆರಗಾಗುವ ಕೃಷ್ಣ ಹೀಗೆ ಪ್ರಸಂಗವನ್ನು ಸರಳೀಕೃತಗೊಳಿಸಿಕೊಂಡು ಅಣಿಗೊಳಿಸಿದ್ದು ಅರ್ಥಪೂರ್ಣ.
ಸ್ಪಷ್ಟವಾದ ಮಾತುಗಾರಿಕೆ, ಎಲ್ಲಿಯೂ ಎಡವದ ಸಂಭಾಷಣೆ, ಹೆಜ್ಜೆಗಾರಿಕೆಯಲ್ಲಿ ಲೋಪ ಕಂಡು ಹಿಡಿಯಲಾಗದಷ್ಟು ಸ್ಪಷ್ಟತೆ, ಒಂದೊಂದು ಸನ್ನಿವೇಶಕ್ಕೆ ಪಾತ್ರಧಾರಿ ಬದಲಾಗುತ್ತಿದ್ದರೂ ಕೂಡಾ ತಪ್ಪದ ಲಯ… ಒಟ್ಟಂದದಲ್ಲಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಯಕ್ಷ ಮಂಟಪ ಕಟ್ಟಿದ್ದು ಆತ್ರಾಡಿ ವಿಜಯ ಮಕ್ಕಳ ಕೂಟದ ಸಾಂಸ್ಕೃತಿಕ ವೇದಿಕೆಯಲ್ಲಿ. ಈ ಬಾರಿಯ ದ್ರೌಪದಿ ಪ್ರತಾಪ ಆಖ್ಯಾನ ಸಾವಿರಾರು ಜನ ಪ್ರೇಕ್ಷಕರ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ.
ವೀರ ರಸೋಚಿತ ಪ್ರಸಂಗವನ್ನು ಆಯ್ದುಕೊಂಡಿದ್ದು, ಪಾತ್ರ ನಿರ್ವಹಣೆ ಮಾಡಿದ ಪ್ರತಿಯೋರ್ವ ಬಾಲ ಕಲಾವಿದರೂ ಕೂಡಾ ಶಹಬ್ಟಾಸ್ ಎನ್ನುವಂತಹ ಅಭಿನಯ ನೀಡಿದ್ದಾರೆ. ಕುರುಕ್ಷೇತ್ರ ಸಂಗ್ರಾಮದ ಯಶೋಗಾಥೆಯ ವಿಚಾರದಲ್ಲಿ ನಡೆದ ಚರ್ಚೆ, ಭೀಮನ ಕುಪಿತಗೊಳಿಸಿದ ಪಾರ್ಥನ ನುಡಿ, ಭೀಮನ ಮಾತಿಗೆ ಅಷ್ಟೇ ಪರಿಪಕ್ವವಾದ ಸಮಾಜಾಯಿಸಿಯನ್ನು ನೀಡುವ ಅರ್ಜುನ ಮೊದಲಾರ್ಧದಲ್ಲಿ ಕರತಾಡನಕ್ಕೆ ಪಾತ್ರವಾದರೆ, ಭೀಮ ಕೈ ಸೋತಾಗ ಪಾರ್ಥ ಅರರೇ ಪ್ರಕೋಧರ ಗೆದ್ದ| ಕಟಕಿತನ, ಅರ್ಜುನ-ದ್ರೌಪದಿಯರ ನಡುವೆ ವಾಕ್‌ಚಕಮಕಿ, ನೀರ ನಿನಗೆ ನಮ ಸ್ಕಾರ| ಪದ್ಯಕ್ಕೆ ದ್ರೌಪದಿ ನೃತ್ಯ ಸ್ತಂಭಿಭೂತಗೊಳಿಸಿತು. ಸುಭದ್ರೆ ಮತ್ತು ದ್ರೌಪದಿಯರ ನಡುವಿನ ಸಂಭಾಷಣೆ, ಯಾರಿಗಾಗಿ ಯಾರು ಬರುವರೇ ಅಕ್ಕ ಪದ್ಯಕ್ಕೆ ಸುಭದ್ರೆ ಪಾತ್ರಧಾರಿ ಅರ್ಥಪೂರ್ಣ ಕುಣಿತ ಉತ್ತಮವಾಗಿತ್ತು. ಸೋದರಿಯ ಸೋಲಿಗೆ ಕುಪಿತನಾಗಿ ಕೃಷ್ಣನೊಡನೆ ಸಮರಕ್ಕೆ ಅಣಿಯಾಗುವ ಬಲರಾಮ, ಯಾಜ್ಞಸೇನೆಗೆ ಅಬ್ಬರಕ್ಕೆ ಬೆರಗಾಗುವ ಕೃಷ್ಣ ಹೀಗೆ ಪ್ರಸಂಗವನ್ನು ಸರಳೀಕೃತಗೊಳಿಸಿಕೊಂಡು ಅಣಿಗೊಳಿಸಿದ್ದು ಅರ್ಥಪೂರ್ಣ.
ಭೀಮನಾಗಿ ಶರಣ್, ಅರ್ಜುನನಾಗಿ ಸುಮಂತ್ ರೋಷಾಕ್ರೋಶದೊಂದಿಗೆ ಉತ್ತಮ ನಾಂದಿ ಹಾಡಿದರೆ, ಸಾಂಪ್ರದಾಯಿಕ ಅರ್ಜುನ ರಂಗದಲ್ಲಿ ಕಾಣುವಂತಾಯಿತು. ಕುರುಕ್ಷೇತ್ರ ಸಮರದಲ್ಲಿ ತನ್ನ ಸಾಧನೆ ಅಧಿಕ ಎಂದು ನಿರೂಪಿಸುವ ಅರ್ಜುನನ ಗಾಂಭೀರ್ಯ ನುಡಿ ಮೆಚ್ಚುಗೆ ಪಡೆಯಿತು. ಭೀಮನೂ ಕೂಡಾ ಸಂಭಾಷಣೆಯಲ್ಲಿ ಹಿಂದುಳಿಯಲಿಲ್ಲ.
ಮೊಗೆಬೆಟ್ಟು ಅವರ ಎಂದಿನ ಶೈಲಿಯ ಪದ್ಯಗಳು ಹಿತವಾಗಿದ್ದವು. ಅಷ್ಟತಾಳ, ಬಿಲಹರಿ ರಾಗದಲ್ಲಿ ಮೂಡಿಬಂದ ಅರರೆಕ್ರೋಧರ ಗೆದ್ದ…, ದ್ರೌಪದಿ ಪಾರ್ಥಗೆದುರಾಗುವ ಸಂದರ್ಭ ಮೋಹನ ರಾಗದ ನೀರ ನಿನಗೆ ನಮ ಸ್ಕಾರ…, ಸುಭದ್ರೆ ದ್ರೌಪದಿಗೆ ಎದುರಾದ ವೇಳೆ ಭೀಮಪಲಾಸ್ ರಾಗದಲ್ಲಿ ಏಕಕೊರೆ ತಾಳದಲ್ಲಿ ಯಾರಿಗಾಗಿ ಯಾರು ಬರುವರು ಅಕ್ಕ…, ಯಮನ್ ಕಲ್ಯಾಣಿ ರಾಗದಲ್ಲಿ ಮೂಡಿಬಂದ ವರನಿಂದೆ ಇರುವ ನಾರಿ… ಕೃಷ್ಣ ಸೋದರಿಗೆ ಅರುಹುವ ಅಬೇರಿ ರಾಗ ಏಕಕೊರೆ ತಾಳದಲ್ಲಿ ಏನು ಭ್ರಮರಬಾಷೆ… ಪದ್ಯಗಳು ಚಿತ್ತಬಿತ್ತಿಯಲ್ಲಿ ಅಚ್ಚೊತ್ತುವಂತಿತ್ತು.
ದ್ರೌಪದಿಯಾಗಿ ಶ್ರೀಶ ಸ್ತ್ರೀಸಹಜತೆಯಿಂದ ಗಮನ ಸಳೆದರೆ ಕಸೆವೇಷದಲ್ಲಿ ಪ್ರತೀಕ್ಷಾ, ಅನನ್ಯಾ ಉತ್ತಮ ಪಾತ್ರ ನಿರ್ವಹಣೆ ಮಾಡಿದರು. ಪ್ರಾರಂಭದಲ್ಲಿ ಸುಭದ್ರೆಯಾಗಿ ವೈಭವಿಯದ್ದು ಮುದ್ದಾದ ಅಭಿನಯ, ವೀರಕಸೆ ತೊಟ್ಟ ಸುಭದ್ರೆಯಾಗಿ ಮನ್ವಿತಾ ರಂಗದಲ್ಲಿ ಮಿಂಚಿದರು. ಕೃಷ್ಣನಾಗಿ ರಂಗಪ್ರವೇಶ ಕಂಡುಕೊಂಡ ಟಿ.ಕೆ ನಂದನದ್ದು ಉತ್ತಮ ನೃತ್ಯ.ಅಷ್ಟೇ ಸ್ಪಷ್ಟ ಮಾತುಗಾರಿಕೆ. ಬಲರಾಮನಾಗಿ ರೋಹನ್ ಆಕ್ರೋಶ, ಸಿಡಿಮಿಡಿಯನ್ನು ಉತ್ತಮವಾಗಿ ಅಭಿವ್ಯಕ್ತಿಸಿದ್ದಾರೆ. ಕೃತವರ್ಮನಾಗಿ ಧ್ರುವ, ಮನ್ಮಥನಾಗಿ ಸಚಿನ್, ಈಶ್ವರನಾಗಿ ಅನುಶ್ರೀ, ವೀರಭದ್ರನಾಗಿ ನಿಹಾರ್, ಪಾರ್ವತಿಯಾಗಿ ಧನ್ವಿ, ಚಂಡಿಕೆಯಾಗಿ ವೈಭವಿ, ರುದ್ರಾಂಭಿಕೆಯಾಗಿ ಮನ್ವಿತಾ ಪಾತ್ರಗಳನ್ನು ಸಚೇತನಗೊಳಿಸಿದ್ದಾರೆ. ಬಾಲಗೋಪಾಲರಾಗಿ ಪ್ರಣವ್, ಆಶಿತ್, ರೋಹನ್, ಶಮಂತ್, ರಶುತ್, ಪ್ರಥ್ವಿ, ಅನನ್ಯಾ ಜಿ., ಮನೀಶ್, ಭವಿತ್, ಪೀಠಿಕಾ ಸ್ತ್ರೀವೇಶದಲ್ಲಿ ಅನ್ವೇಶ್, ವೈಭವ್, ಪ್ರಥ್ವಿನ್, ಸೃಜನ್, ಪ್ರಥಮ್ ಮಿಂಚಿದ್ದಾರೆ.
ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರ ಸಮರ್ಥ ನಿರ್ದೇಶನ, ಸುಶ್ರಾವ್ಯ ಭಾಗವತಿಕೆ ಯಶಸ್ಸಿನ ಪ್ರಮುಖಾಂಶ.ಮದ್ದಳೆಯಲ್ಲಿ ರಾಘವೇಂದ್ರ ರಾವ್ ಸಕ್ಕಟ್ಟು, ಚಂಡೆಯಲ್ಲಿ ಭಾಸ್ಕರ ಆಚಾರ್ಯ ಕನ್ಯಾನ ಉತ್ತಮ ಸಾಥ್ ನೀಡಿದ್ದಾರೆ.
ನಾಗರಾಜ್ ಬಳಗೇರಿ