ಕೃಷ್ಣಮೂರ್ತಿ ತುಂಗರು ಕಲಾವಿದನಾಗಿ, ನಿರ್ದೇಶಕನಾಗಿ, ಸಂಘಟಕನಾಗಿ ಮತ್ತು ಯಕ್ಷಗುರುವಾಗಿ ಗುರುತಿಸಿಕೊಂಡವರು. ಹೆಜ್ಜೆಗಾರಿಕೆ, ಹಿಮ್ಮೇಳ, ಅಭಿನಯ, ಮಾತುಗಾರಿಕೆ, ನಿರ್ದೇಶನ, ಆಹಾರ್ಯ, ಪ್ರಸಾದನ ಹೀಗೆ ಎಲ್ಲ ವಿಷಯಗಳಲ್ಲಿ ಪರಿಣಿತರಾಗಿ ಅದನ್ನು ಆಸಕ್ತರಿಗೆ ಪರಿಣಾಮಕಾರಿಯಾಗಿ ಕಲಿಸುವ ಚಾಕಚಕ್ಯತೆ ಅವರಿಗಿದೆ.
ಪೂರ್ವರಂಗ, ಒಡ್ಡೋಲಗ, ಯುದ್ಧನೃತ್ಯ, ಪ್ರಯಾಣ ಕುಣಿತ ಮೊದಲಾದವುಗಳು ಕೇವಲ ಕಾರ್ಯಗಾರದ/ಪ್ರಾತ್ಯಕ್ಷಿಕೆಯ ವಸ್ತುವಾಗಿರದೆ ಪ್ರದರ್ಶನದ ಅಂಗವಾಗಿರಬೇಕು ಎಂಬದು ತುಂಗರ ಚಿಂತನೆ. ಇದಕ್ಕಾಗಿ ಈ ಎಲ್ಲ ಅಪರೂಪದ ಸಾಂಪ್ರದಾಯಿಕ ಭಾಗಗಳನ್ನು ಕಲಿಸಿ, ಅವಕಾಶ ಇರುವ ಕಡೆಗಳೆಲ್ಲೆಲ್ಲ ಅವುಗಳನ್ನು ಪ್ರದರ್ಶನಗೊಳಿಸುತ್ತ ಬಂದಿದ್ದಾರೆ. ಕೋಡಂಗಿ ವೇಷ, ಪೀಠಿಕಾ ಸ್ತ್ರೀ ವೇಷ, ಪಾಂಡವರ ಒಡ್ಡೋಲಗ, ಯುದ್ಧನೃತ್ಯ, ಬಣ್ಣದ ಒಡ್ಡೋಲಗ, ಕಿರಾತ ಒಡ್ಡೋಲಗ, ಕೃಷ್ಣನ ಒಡ್ಡೋಲಗ, ಗುಹನ ಒಡ್ಡೋಲಗ, ಪ್ರಯಾಣ ಕುಣಿತ ಇತ್ಯಾದಿಗಳನ್ನು ಮರೆತೇ ಹೋಗಿದ್ದ ಪ್ರೇಕ್ಷಕರು ತುಂಗರ ಮೂಲಕ ಪುನಃ ನೋಡುವಂತಾಗಿದೆ.
ಮಕ್ಕಳ ಅಭಿಮನ್ಯು ಕಾಳಗದ ಸುಭದ್ರೆ-ಅಭಿಮನ್ಯು ಪಾತ್ರಗಳು ಪ್ರತಿ ಬಾರಿಯೂ ಪ್ರೇಕ್ಷಕರ ಕಣ್ಣು ಒದ್ದೆಯಾಗುವಂತೆ ಮಾಡುತ್ತಿದ್ದು, ಕೃಷ್ಣಾರ್ಜುನ ಕಾಳಗದ ಅರ್ಜುನ-ಸುಭದ್ರೆಯ ಸನ್ನಿವೇಶ ಜನ ಭಾವಲಹರಿಯಲ್ಲಿ ಮೀಯುವಂತೆ ಮಾಡಿದ್ದು, ಭೀಷ್ಮೋತ್ಪತ್ತಿಯ ವಿಶಿಷ್ಟ ಕಂದರನ ಪಾತ್ರ ನಗೆಗಡಲಿನಲ್ಲಿ ತೇಲುವಂತೆ ಮಾಡಿದ್ದು ಇವರ ಸಾಮರ್ಥ್ಯದ ಬಗೆಗಿನ ಕೆಲವು ಉದಾಹರಣೆಗಳು.ಮಕ್ಕಳಿಂದ ಭೀಷ್ಮೋತ್ಪತ್ತಿ, ಕೃಷ್ಣಾರ್ಜುನ, ಮಹಿಷಮರ್ಧಿನಿ,ಪಾರಿಜಾತ,ವೃಷಸೇನ ಕಾಳಗ ಇತ್ಯಾದಿ ಮೌಲ್ಯಯುತ ಪ್ರಸಂಗಗಳನ್ನು ಉತ್ಕೃಷ್ಟ ಗುಣಮಟ್ಟದಲ್ಲಿ ಪ್ರದರ್ಶನಗೊಳಿಸಿದ ಖ್ಯಾತಿಯೂ ತುಂಗರಿಗೆ ಸೇರುತ್ತದೆ.
ನಗರಗಳಲ್ಲಿ ಹೆಚ್ಚಾಗಿ ಕಾಣುವ ಪ್ಯೂಷನ್ ನೃತ್ಯಗಳಲ್ಲಿ ಯಕ್ಷಗಾನವನ್ನು ಅಳವಡಿಸಿ ಯಕ್ಷಗಾನದ ವೇಷ, ನೃತ್ಯ, ಬಣ್ಣಗಾರಿಕೆ, ಅಭಿನಯ ಇತ್ಯಾದಿಗಳ ಬಗ್ಗೆ ಹೊರ ಜಗತ್ತು ಬೆಕ್ಕಸ ಬೆರಗಾಗುವಂತೆ ಮಾಡಿ ಯಕ್ಷಗಾನದ ಬಗ್ಗೆ ಕುತೂಹಲ ಮೂಡುವಂತೆ ಮಾಡಿದ್ದಾರೆ. ನರಸಿಂಹ ಅವತಾರ, ಸಮುದ್ರ ಮಥನ, ಕಂಸ ವಧೆ ಇತ್ಯಾದಿ ಪುರಾಣ ಕತೆಗಳಿಗೆ ಸಹಾ ಯಕ್ಷ ನೃತ್ಯ ರೂಪಕವನ್ನು ಅಳವಡಿಸಿದ್ದಾರೆ.
ಇದೀಗ ಯಕ್ಷಸಿಂಚನ ತಂಡವು ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಸೆ. 7 ಮತ್ತು 8 ರಂದು ದಶಮಾನೋತ್ಸವವನ್ನು ಆಚರಿಸುತ್ತಿದೆ. ತುಂಗರಿಗೆ ಗುರುವಂದನೆ ಹಾಗೂ ಸಾರ್ಥಕ ಸಾಧಕ ಪ್ರಶಸ್ತಿ ಪ್ರದಾನವಾಗುತ್ತಿದೆ.
ರವಿ ಮಡೋಡಿ