Advertisement

ಅಚ್ಚುಕಟ್ಟಾದ ಪ್ರಸ್ತುತಿಯಿಂದ ಮನಗೆದ್ದ ಗುರುಶಿಷ್ಯರ ಗಾನವೈಭವ

06:11 PM Sep 26, 2019 | mahesh |

ಕಲಾಪ್ರಿಯನಾದ ವಿನಾಯಕನಿಗೆ ಯಕ್ಷಗಾನಾರ್ಚನೆಯ ಸೇವೆ ಮೂಲಕ ಗಮನ ಸೆಳೆದಿದ್ದು ಮೂಡುಬೆಳ್ಳೆಯ 40ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ. ತೆಂಕು – ಬಡಗು ಶೈಲಿಗಳ ಸಂಗಮ ಹಾಗೂ ಗುರು-ಶಿಷ್ಯರ ಸಮಾಗಮ ಎರಡನೇ ದಿನ ಮಧ್ಯಾಹ್ನ ನಡೆದ ಗಾನ ವೈಭವದ ವಿಶೇಷವಾಗಿತ್ತು.

Advertisement

ಲೀಲಾವತಿ ಗಾನಾಮೃತ
ತೆಂಕುತಿಟ್ಟಿನ ಪ್ರಥಮ ವೃತ್ತಿಪರ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯರು ಇಳಿವಯಸ್ಸಿನಲ್ಲೂ ಉತ್ಸಾಹದಿಂದ ದೇವಿಸ್ತುತಿ (ಅಗರಿ ವಿರಚಿತ ಕೊಲ್ಲೂರು ಮೂಕಾಂಬಿಕೆ) ಹಾಡಿದರು. ಒಂಭತ್ತು ಮುಕ್ತಾಯದ ಈ ಪದ್ಯ ವಿಶಿಷ್ಟವಾಗಿತ್ತು. ಪೀಠಿಕೆ ಪದ್ಯದ ಬಳಿಕ ಶೃಂಗಾರ ರಸದಲ್ಲಿ ಪ್ರಸ್ತುತಪಡಿಸಿದ “ರಾಘವ ನರಪತೆ’ ಮಧುರವಾಗಿತ್ತು. ಘಂಟಾರವ ಅಷ್ಟತಾಳದಲ್ಲಿ ಪಂಚವಟಿ ಪ್ರಸಂಗದ ಏರು ಪದ್ಯ “ಆರೆಲೋ ಮನುಜ’ ಕಿಡಿ ಹೊತ್ತಿಸಿತು. ಮುಂದೆ “ರಥವೇಕೆ ಬರಿದಾದುದು’ ಎಂಬ ಕರುಣರಸದ ಪದ್ಯ ಸ್ತ್ರೀಸಹಜ ಕಂಠದಲ್ಲಿ ಇನ್ನಷ್ಟು ಮಾಧುರ್ಯಪೂರ್ಣವಾಗಿತ್ತು. ಪರಮಋಷಿ ಮಂಡಲದ ಮಧ್ಯದಿ (ಭೀಷ್ಮ ವಿಜಯ) ಮತ್ತೆ ಮತ್ತೆ ಕೇಳುವಂತಿತ್ತು.

ಧ್ಯಾನಸ್ಥರಾಗಿ ಹಾಡಿದ ಶ್ರೀನಿವಾಸ
ಕಟೀಲು ನಾಲ್ಕನೇ ಮೇಳದ ಪ್ರಧಾನ ಭಾಗವತ, ಲೀಲಾವತಿ ಅವರ ಶಿಷ್ಯ ಶ್ರೀನಿವಾಸ ಬಳ್ಳಮಂಜರಂತೂ ಗುರುವಿನ ಸಾನ್ನಿಧ್ಯದಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಹಾಡಿದ್ದು ಅಪೂರ್ವ ಅನುಭೂತಿಯನ್ನು ನೀಡಿತು. ಸಹಸ್ರಕವಚ ಮೋಕ್ಷದ ಸೂರ್ಯನ ಪೀಠಿಕೆಯ ಪದ್ಯ, ಕನಕ ಕೌಮುದಿ ಪ್ರಸಂಗದ “ಕುಂದಕುಟ್ಮ ರದನ’, ವೀರ ರಸದ “ಭಾನುತನುಜ ಭಳಿರೆ ಮನುಜ’, ಮಾನಿಷಾದ ಪ್ರಸಂಗದ “ಎನಲೆಂದೆ ಶತ್ರುಘ್ನ’, “ಇವ ಕಣಾ ಶ್ರೀರಾಮ’, ಚೂಡಾಮಣಿ ಪ್ರಸಂಗದ “ಕ್ಷೇಮವೇನೈ ಹನುಮ’ – ಒಂದಕ್ಕಿಂತ ಒಂದು ಸೊಗಸಾಗಿದ್ದವು. ಕೆಲವು ಪದ್ಯಗಳಲ್ಲಿ ಗುರು-ಶಿಷ್ಯರ ದ್ವಂದ್ವ ರಂಜಿಸಿತು. ಹರಿನಾರಾಯಣ ಬೈಪಾಡಿತ್ತಾಯ (ಮದ್ದಳೆ) ಹಾಗೂ ಲಕ್ಷ್ಮೀನಾರಾಯಣ ಅಡೂರು (ಚೆಂಡೆ) ಅವರ ಸಾಂಗತ್ಯದಲ್ಲಿ, ಗಾನವೈಭವವಾದರೂ ಯಕ್ಷಗಾನೀಯ ಶೈಲಿಯಿಂದ ಒಂದಿನಿತೂ ಸರಿಯದೆ, ಒಂದು ಪರಂಪರೆಯ ಸೊಗಸನ್ನು ಇಬ್ಬರೂ ಭಾಗವತರು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿದ್ದು ವಿಶೇಷವೆನಿಸಿತು. ಪ್ರಸಾದ್‌ ಮೊಗೆಬೆಟ್ಟು ನೇತೃತ್ವದಲ್ಲಿ ಬಡಗುತಿಟ್ಟಿನ ಹಿಮ್ಮೇಳವೂ ಸರಿಸಮನಾದ ಪ್ರದರ್ಶನ ನೀಡಿತು. ಗಣೇಶ್‌ ಆಚಾರ್ಯ ಜಾನುವಾರುಕಟ್ಟೆ ಹಾಗೂ ರಾಘವ ಪಳ್ಳಿ ಅವರೂ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡಿದ್ದು, ಯುವ ಭಾಗವತರಿಗೆ ಉತ್ತಮ ಭವಿಷ್ಯವಿದೆ ಎನ್ನುವ ಭರವಸೆ ನೀಡಿತು.

ಮನಗೆದ್ದ ಮೊಗೆಬೆಟ್ಟು
ಪಂಚವಟಿ ಪ್ರಸಂಗದ ಪೀಠಿಕೆ ಪದ್ಯ (ನೋಡಿ ನಿರ್ಮಲ ಜಲ ಸಮೀಪದಿ), ರತ್ನಾವತಿ ಕಲ್ಯಾಣದ ಸರಿಯಾರೀ ತರುಣಿಮಣಿಗೆ (ಶೃಂಗಾರ), ಶ್ರೀಮನೋಹರ ಸ್ವಾಮಿ ಪರಾಕು, ಆಗ ಸುಧನ್ವನು, ಭಾಮಿನಿಯಲ್ಲಿ ಆಡದೆಲೆ ಸಂಜಯನೆ ನೀ ಕೇಳು ಮುಂತಾದ ಪದ್ಯಗಳನ್ನು ಮೊಗೆಬೆಟ್ಟು ರಸವತ್ತಾಗಿ ಹಾಡಿದರು. ಗಣೇಶ್‌ ಅವರು ಪನ್ನೀರ ರಾಮನಿಗೆ (ಶ್ರೀರಾಮ ಪಟ್ಟಾಭಿಷೇಕ), ಪೂಗೋಲನುರು ಬಾಧೆಗೆ (ಚಂದ್ರಹಾಸ), ಅಳಬೇಡ ಕಾಣೆ ಸುಮ್ಕಿರೆ (ಕಾಳಿದಾಸ) ಹಾಗೂ ಶರತಋತು (ಜಾಂಬವತಿ ಕಲ್ಯಾಣ) ಪದ್ಯಗಳನ್ನು ಬಡಗಿನ ಸಾಂಪ್ರದಾಯಿಕ ಶೈಲಿಯಲ್ಲಿ ಪ್ರಸ್ತುತಪಡಿಸಿದರು. ರಾಘವ ಪಳ್ಳಿ ಅವರು ಇನ್ನೂ ಭಾಗವತಿಕೆ ಅಭ್ಯಾಸ ಮಾಡುತ್ತಿದ್ದರೂ ಒಂದಿನಿತೂ ಅಳುಕಿಲ್ಲದೆ ಕಂಚಿನ ಕಂಠದಲ್ಲಿ ನಾಲ್ಕು ಪದ್ಯಗಳನ್ನು ಹಾಡಿ ಮೆಚ್ಚುಗೆ ಗಳಿಸಿದರು. ಜೋಡಿ ಮದ್ದಲೆ (ಶಶಿಕಾಂತ ಆಚಾರ್ಯ), ಜೋಡಿ ಚೆಂಡೆ (ಗಣೇಶ್‌ ಶೆಣೈ ಶಿವಪುರ) ರಂಜಿಸಿದವು. ದೇವಭಕ್ತಿ (ತೆಂಕು ತಿಟ್ಟಿನ ಮಂಗಲಪದ್ಯ) ಹಾಗೂ ದೇಶಭಕ್ತಿ (ಬಡಗು- ವಂದೇ ಮಾತರಂ) ಪದ್ಯಗಳನ್ನು ಆಯಾ ತಿಟ್ಟಿನ ಭಾಗವತರು ಒಟ್ಟಾಗಿ ಪ್ರಸ್ತುತ ಪಡಿಸುವುದರೊಂದಿಗೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಸಮಾಪ್ತಿಯಾಯಿತು.

ಲಾಲಿತ್ಯದ ನಿರೂಪಣೆ
ಯುವ ಕಲಾವಿದ, ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿ ಮುಖೇಶ್‌ ದೇವಧರ್‌ ಹದವರಿತ ನಿರೂಪಣೆ ಮೂಲಕ ಭಾಗವತರಿಗೇ ಹೆಚ್ಚಿನ ಸಮಯಾವಕಾಶ ನೀಡಿದ್ದು ಅನುಕರಣೀಯವಾಗಿತ್ತು. ಪದ್ಯ, ಪ್ರಸಂಗ, ರಾಗ, ತಾಳ, ಸನ್ನಿವೇಶಗಳನ್ನಷ್ಟೇ ವಿವರಿಸಿ, ಹಾಡಿನ ಸೊಗಸಿಗೆ ಕಲಶವಿಟ್ಟರು.

Advertisement

ಉಭಯ ತಿಟ್ಟುಗಳ ಕಲಾವಿದರ ನಡುವೆ ಸ್ಪರ್ಧೆ ಇರಲಿಲ್ಲ. ತಮ್ಮ ತಿಟ್ಟಿನ ಸೌಂದರ್ಯವನ್ನು ಕಟ್ಟಿಕೊಡುವ ತುಡಿತವಿತ್ತು. ಬಳ್ಳಮಂಜರು ಹಾಡುವಾಗ ಪ್ರಸಾದ್‌ ಮೊಗೆಬೆಟ್ಟು ತಾಳ ಹಾಕುತ್ತ ಖುಷಿ ಪಟ್ಟರೆ, ಬಡಗಿನ ಮದ್ದಲೆಯನ್ನು ಶ್ರುತಿಗೊಳಿಸಲು ನೆರವಾಗಿ ಅಡೂರು ಮನಗೆದ್ದರು.

ಅನಂತ ಹುದೆಂಗಜೆ

Advertisement

Udayavani is now on Telegram. Click here to join our channel and stay updated with the latest news.

Next