Advertisement

ಯಶಸ್ಸಿನ ಕುದುರೆಗಳು ವಿಶ್ವಕಪ್‌ ಅಶ್ವಮೇಧಕ್ಕೆ ಸಾಕೇ? 

11:59 AM Mar 03, 2018 | Team Udayavani |

2019ರಲ್ಲಿ ಏಕದಿನ ವಿಶ್ವಕಪ್‌. ಇದನ್ನು ನೆನಪಿಟ್ಟುಕೊಂಡು ಇದರ ಸುತ್ತಮುತ್ತಲಿನ ಚಟುವಟಿಕೆಗಳನ್ನು
ಮಹಾಭಾರತ ಕಾಲದ ಅಶ್ವಮೇಧ ಯಾಗದ ದಿನಗಳ ಜೊತೆ ಸಮೀಕರಿಸುವುದಾದರೆ, ವಿಶ್ವಕಪ್‌ ಎಂಬ
ಅಶ್ವಮೇಧ ಯಾಗಕ್ಕೆ, ಭಾರತ ಸ್ಪಿನ್‌ ಕ್ಷೇತ್ರದಲ್ಲಿ ಕಟ್ಟಿರುವ ಯಜುವೇಂದ್ರ ಚಹಲ್‌ ಹಾಗೂ ಕುಲದೀಪ್‌ ಯಾದವ್‌ ರ ಮೊಣಕೈ ಸ್ಪಿನ್ನಿಂಗ್‌ ಜೋಡಿಯೇ ಭಾರತದ ಅಕ್ಷೋಹಿಣಿ  ಸೈನ್ಯಕ್ಕೆ ಸಾಕೇ ಎಂಬ ಪ್ರಶ್ನೆ ಮೂಡುತ್ತದೆ. ಇತ್ತೀಚೆಗೆ ಮುಗಿದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಏಕದಿನ ಹಾಗೂ ಟಿ20 ಸರಣಿಯನ್ನು ಗಳಿಸಿಕೊಟ್ಟ ನಂತರ ಇವರಿಬ್ಬರ ಬಗ್ಗೆ ಅನುಮಾನವನ್ನೇ ಪಡಬಾರದಿತ್ತು. ಆದರೆ, ಒಂದೂವರೆ ವರ್ಷಗಳ ನಂತರ ವಿಶ್ವಕಪ್‌ ನಡೆಯಲಿರುವುದು ಇಂಗ್ಲೆಂಡ್‌ನ‌ಲ್ಲಿ. ಈ ಕಾರಣದಿಂದಲೇ ಹಲವುಗೊಂದಲಗಳು ಹುಟ್ಟಿಕೊಂಡಿವೆ ಎಂಬುದು.

Advertisement

ಇನ್ನೆಲ್ಲಿ ಅಶ್ವಿ‌ನ್‌, ಜಡೇಜಾ?
ಫ್ಲಾಶ್‌ಬ್ಯಾಕ್‌, ಈ ಹಿಂದಿನ ಚಾಂಪಿಯನ್ಸ್‌ ಟ್ರೋμ ಸಂದರ್ಭದಲ್ಲಿ, ಫೈನಲ್‌ನಲ್ಲಿ ದೇಶದ ಅಗ್ರಗಣ್ಯ ಸ್ಪಿನ್ನರ್‌ ಎನ್ನಿಸಿಕೊಂಡಿದ್ದ ರವಿಚಂದ್ರನ್‌ ಅಶ್ವಿ‌ನ್‌ ಬೌಲಿಂಗ್‌ ವಿವರ 10 ಓವರ್‌ಗೆ 70 ರನ್‌, ಇನ್ನೊಬ್ಬ ಸ್ಪಿನ್ನರ್‌ ರವೀಂದ್ರ ಜಡೇಜಾ ಕೊಟ್ಟಿದ್ದು 8 ಓವರ್‌ಗೆ 67 ರನ್‌. ಇಬ್ಬರಿಗೂ ಒಂದು ವಿಕೆಟ್‌ ಕೂಡ ಸಿಕ್ಕಿರಲಿಲ್ಲ. ವೆಸ್ಟ್‌ ಇಂಡೀಸ್‌ ಪ್ರವಾಸದ ನಂತರ ಈ ಇಬ್ಬರೂ ಕೇವಲ ಟೆಸ್ಟ್‌ ಕ್ರಿಕೆಟ್‌ಗೆ ಸೀಮಿತರಾದರು. ಇತ್ತ ಯಜುವೇಂದ್ರ ಚಹಲ್‌, ಕುಲದೀಪ್‌ ಯಾದವ್‌ ಮಾದರಿಯ ರಿಸ್ಟ್‌ ಸ್ಪಿನ್ನರ್‌ಗಳು ಪ್ರಕಾಶಕ್ಕೆ ಬಂದರು. ಈ ಇಬ್ಬರೂ ಮಣಿಕಟ್ಟಿನ ಸ್ಪಿನ್ನರ್‌ಗಳು ಪವಾಡವನ್ನೇ ಮಾಡುತ್ತಿದ್ದಾರೆ. 2014-15 ರಿಂದಲೇ ತಂಡದಲ್ಲಿದ್ದರೂ ಈಗ ಗಮನ ಸೆಳೆಯುತ್ತಿರುವ ಯಾದವ್‌, ಐಪಿಎಲ್‌ನಲ್ಲಿ ಬೆಂಗಳೂರು ಪರ ಪ್ರಭಾವ ಬೀರಿದ ಚಹಲ್‌ ಈ ಕ್ರಿಕೆಟ್‌ ಋತುವಿನಲ್ಲಿ ಭಾರತದ ದಾಳಿಯನ್ನು ಮುನ್ನಡೆಸುತ್ತಿದ್ದಾರೆ. ಇತ್ತೀಚಿನ 17 ಸೀಮಿತ ಓವರ್‌ ಪಂದ್ಯದಲ್ಲಿ ಚಹಲ್‌ 33, 15 ರಲ್ಲಿ ಕುಲದೀಪ್‌ 31 ವಿಕೆಟ್‌ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿಯನ್ನು 5-1ರಿಂದ ಭಾರತ ಗೆಲ್ಲುವಲ್ಲಿ ನಿಸ್ಸಂಶಯವಾಗಿ ಈ ಜೋಡಿಯ ಪಾತ್ರ ಪ್ರಮುಖ. ಕುಲದೀಪ್‌ 17 ವಿಕೆಟ್‌ ಪಡೆದಿರುವುದರ ಜೊತೆಗೆ ಓವರ್‌ಗೆ ಬರೀ 4.63 ರನ್‌ ಕೊಟ್ಟಿರುವುದು ಹಾಗೂ ಚಹಲ್‌ 5.02ರ ಲೆಕ್ಕದಲ್ಲಿ ರನ್‌ ಕೊಟ್ಟು 16 ವಿಕೆಟ್‌ ಸಂಪಾದಿಸಿದರು.

ವಾಂಡರರ್ ಪ್ರದರ್ಶನದ ಎಚ್ಚರಿಕೆ
ಇಂತಹ ಸಾಧನೆಯ ನಂತರವೂ ಜೋಹಾನ್ಸ್‌ಬರ್ಗ್‌ನ ವಾಂಡರರ್ ಪ್ರದರ್ಶನ ಒಂದು
ಎಚ್ಚರಿಕೆಯ ಘಂಟೆಯೇ? ಕೆಲ ವಿಮರ್ಶಕರು ಅದನ್ನು ಒತ್ತಿಹೇಳುತ್ತಾರೆ. ಮಳೆ ಕಾಟಕ್ಕೆ ಒಳಗಾಗಿದ್ದ
ಈ ಪಂದ್ಯದಲ್ಲಿ ದ.ಆಫ್ರಿಕಾ ಗೆಲುವು ಸಾಧಿಸಿತ್ತು. ಆವತ್ತು ಈ ಇಬ್ಬರು ಸ್ಪಿನ್ನರ್‌ಗಳು ವಿಪರೀತ ರನ್‌
ಬಿಟ್ಟುಕೊಟ್ಟಿದ್ದರು. ಚಹಲ್‌ 12.36ರ ಸರಾಸರಿಯಲ್ಲಿ ರನ್‌ ನೀಡುವಲ್ಲಿ ಧಾರಾಳಿಯಾಗಿದ್ದರು.
ಅವರು ಆ ಮುನ್ನ ಆಡಿದ 22 ಪಂದ್ಯಗಳಲ್ಲಿ ಒಂದರಲ್ಲೂ 6.75ಕ್ಕಿಂತ ಹೆಚ್ಚು ಸರಾಸರಿಯಲ್ಲಿ ರನ್‌
ನೀಡಿರಲಿಲ್ಲ. ಬೆಂಗಳೂರಿನಲ್ಲಿ 647 ರನ್‌ ಬೆಳೆ ತೆಗೆದ ಪಿಚ್‌ನಲ್ಲಿ ನೀಡಿದ ಆರು ಪ್ಲಸ್‌ ರನ್‌ ಬಿಟ್ಟರೆ
ಚಹಲ್‌ ಆರನ್ನು ದಾಟಿದವರಲ್ಲ. ಇದೇ ಚಹಲ್‌ ದ.ಆಫ್ರಿಕಾ ಎದುರು ಮೊದಲ ಟಿ20ಯಲ್ಲಿ
4-0-39-1 ಪ್ರದರ್ಶನ ಕೊಟ್ಟರೆ ಸೆಂಚುರಿಯನ್‌ನಲ್ಲಿ ಉಡಾಯಿಸಲ್ಪಟ್ಟಿದ್ದರು.
ಮಣಿಕಟ್ಟಿನ ಸ್ಪಿನ್ನರ್‌ಗಳ ಬಗ್ಗೆ ಆತಂಕ ಮೂಡುವುದೇ ಈ ಕಾರಣಕ್ಕೆ. ಚೆಂಡನ್ನು ಹಿಡಿತದಲ್ಲಿ
ಇಟ್ಟುಕೊಳ್ಳಬೇಕಾದ ವಾತಾವರಣ ಇಲ್ಲದಿದ್ದರೆ ಈ ಸ್ಪಿನ್ನರ್‌ಗಳ ಪ್ರಖರತೆ ಅಷ್ಟರಮಟ್ಟಿಗೆ
ಕಡಿಮೆಯಾಗುತ್ತದೆ. ವಾಂಡರರ್ನಲ್ಲಿ ಆಗಿದ್ದು ಅದೇ. ನಾಳೆ ಇಂಗ್ಲೆಂಡ್‌ನ‌ಲ್ಲಿ ನಡೆಯುವ ವಿಶ್ವಕಪ್‌
ನಲ್ಲಿ ಮಳೆ, ಇಬ್ಬನಿಗಳೆಲ್ಲ ಸಾಮಾನ್ಯ. ಅದರಲ್ಲೂ ಸೆಮಿಫೈನಲ್‌ಗ‌ಳು ನಡೆಯುವ ಬರ್ಮಿಂಗ್‌
ಹ್ಯಾಮ್‌ ಹಾಗೂ ಮಾಂಚೆಸ್ಟರ್‌ ಸದಾ ಮಳೆ ಆವರಿಸುವ ಸ್ಥಳಗಳು. ಮಳೆ ಬಂದು ಒದ್ದೆ ಒದ್ದೆ
ಚೆಂಡನ್ನು ಬಳಸುವ ಸಮಯದಲ್ಲಿ ಈ ಸ್ಪಿನ್ನರ್‌ಗಳಿಬ್ಬರೂ ತೊಂದರೆ ಅನುಭವಿಸಿದರೆ ಗತಿ ಏನು?
ಇದು ಹಿರಿಯ ಕ್ರೀಡಾಪಂಡಿತರ ಆತಂಕ.

ರಾಹುಲ್‌ ದ್ರಾವಿಡ್‌, ರವಿಶಾಸ್ತ್ರಿ ಅವರಿಗೆಲ್ಲ ಮಣಿಕಟ್ಟಿನ ಸ್ಪಿನ್ನರ್‌ಗಳ ಮೇಲೆ ಒಲವು ಜಾಸ್ತಿ.
ಆದರೆ ಕಳೆದ ಬಾರಿ 2013ರಲ್ಲಿ ನಡೆದ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಜಡೇಜಾ 4-0-24-2ರ ಸಾಧನೆ
ಮಾಡಿದರೆ ಅಶ್ವಿ‌ನ್‌ 4 ಓವರ್‌ಗೆ ಒಂದು ಮೇಡನ್‌ ಸಮೇತ 15 ರನ್‌ಗೆ 2 ವಿಕೆಟ್‌ ಪಡೆದಿದ್ದರು.
ಭಾರತ ಸಾಧಾರಣ ಮೊತ್ತವಾದ 130 ರನ್ನನ್ನು ಕೂಡ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಒಂದೇ
ಮಾದರಿಯ ಇಬ್ಬರು ಸ್ಪಿನ್ನರ್‌ಗಳಿರುವುದಕ್ಕಿಂತ ಲೆಗ್‌ಸ್ಪಿನ್ನರ್‌, ಆಫ್ಸ್ಪಿನ್ನರ್‌ಗಳೂ ಇರುವುದು
ಕ್ಷೇಮವಲ್ಲವೇ?

ಬಲವಂತದ ವಿದಾಯ!
ಮತ್ತೆ ಅಶ್ವಿ‌ನ್‌, ಜಡೇಜಾರನ್ನು ಸೀಮಿತ ಓವರ್‌ ಕ್ರಿಕೆಟ್‌ಗೆ ಕರೆತರುವ ಇರಾದೆಯ ವಾದವಲ್ಲ
ಇದು. ಇವರ ಹೊರತಾಗಿ ಅಕ್ಷರ್‌ ಪಟೇಲ್‌, ಅಮಿತ್‌ ಮಿಶ್ರಾ ತರಹದ ಪ್ರತಿಭೆಗಳಿವೆ. ಇತ್ತೀಚೆಗೆ
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20ಯಲ್ಲಿ ಅಕ್ಷರ್‌ ಪಟೇಲ್‌ಗೆ ಅವಕಾಶ ಸಿಕ್ಕಿತ್ತು. ಆದರೆ
ಆಡುವ ಹನ್ನೊಂದರಲ್ಲಿ ಇರಬೇಕಾದ ಅಮಿತ್‌ ಮಿಶ್ರಾ ಮಾಡಿದ ಮಹಾಪರಾಧ ಏನು ಎಂಬುದು
ತಿಳಿಯುತ್ತಿಲ್ಲ. ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 18 ರನ್‌ಗೆ 5 ವಿಕೆಟ್‌
ಕಬಳಿಸಿದ್ದ ಮಿಶ್ರಾರನ್ನು 2016ರಿಂದ ಮತ್ತೆ ನಾವು ಆಡಿಸಿಲ್ಲ. ಆ ಪಂದ್ಯದ “ಮ್ಯಾನ್‌ ಆಫ್ ದಿ ಮ್ಯಾಚ್‌
ಗೌರವದ ಜೊತೆ ಸದರಿ ನ್ಯೂಜಿಲೆಂಡ್‌ ವಿರುದ್ಧದ ಸರಣಿಯಲ್ಲಿ ಮಿಶ್ರಾ ಸರಣಿ ವ್ಯಕ್ತಿಯೂ ಆಗಿದ್ದರು.
ಅವರನ್ನು ಇಲ್ಲಿಗೇ ಬಿಟ್ಟು ಭಾರತ ಮುಂದೆ ಹೋದರೆ ತಮ್ಮ ಕೊನೆಯ ಪ್ರದರ್ಶನದಲ್ಲಿ ಪಂದ್ಯದ
ವ್ಯಕ್ತಿ ಹಾಗೂ ಸರಣಿ ಪುರುಷೋತ್ತಮ ಆಗಿದ್ದ ಅಪರೂಪದ ದಾಖಲೆ ಮಿಶ್ರಾರದ್ದಾಗಿರುತ್ತದೆ!
ಮತ್ತೂಮ್ಮೆ ಬಂದಿರುವ ಐಪಿಎಲ್‌, ಶ್ರೀಲಂಕಾದ ತ್ರಿಕೋನ ಟಿ20, ಆಫ್ಘಾನಿಸ್ತಾನ್‌ ವಿರುದ್ಧದ
ಏಕೈಕ ಬೆಂಗಳೂರು ಟೆಸ್ಟ್‌ ನಂತರದಲ್ಲಿ ಭಾರತ ಜುಲೈನಲ್ಲಿ ಇಂಗ್ಲೆಂಡ್‌ ಪ್ರವಾಸಗೈಯಲಿದೆ. ಈ
ವೇಳೆ 3 ಟಿ20 ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿಕ್ಕಿದೆ. ಈ ಸರಣಿ ಭಾರತ ವಿಶ್ವಕಪ್‌
ವೇಳೆಗೆ ಹೊಂದಿರಬೇಕಾದ ಬೌಲರ್‌ಗಳ ಸಂಯೋಜನೆಯನ್ನು ನಿಕ್ಕಿ ಮಾಡುತ್ತದೆ. ಅಲ್ಲಿಯವರೆಗೆ
ಕಾಯೋಣ!

Advertisement

 ಮಾ.ವೆಂ.ಸ.ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next