ದರ್ಶನ್ ನಾಯಕರಾಗಿರುವ “ಯಜಮಾನ’ ಚಿತ್ರಕ್ಕೆ ಇಬ್ಬರು ನಿರ್ದೇಶಕರು! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೂ ನಿಜ. “ಯಜಮಾನ’ ಚಿತ್ರದ ನಿರ್ದೇಶಕರು ಪೊನ್‌ಕುಮಾರ್ ಅಲ್ವಾ ಎಂದು ನೀವು ಹೇಳಬಹುದು. ಖಂಡಿತಾ ಹೌದು, ಪೊನ್‌ಕುಮಾರ್ ಈ ಚಿತ್ರದ ನಿರ್ದೇಶಕರು ನಿಜ. ಅವರ ಜೊತೆಗೆ ಇನ್ನೊಬ್ಬರು ಕೂಡ ಇರುತ್ತಾರೆ. ಅದು ವಿ.ಹರಿಕೃಷ್ಣ. ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರು “ಯಜಮಾನ’ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.
ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಇಬ್ಬರು ನಿರ್ದೇಶಕರಿಗೂ ಕ್ರೆಡಿಟ್ ಸಿಗಲಿದೆ – ಕಥೆ, ಚಿತ್ರಕಥೆ, ನಿರ್ದೇಶನ – ವಿ.ಹರಿಕೃಷ್ಣ- ಪೊನ್‌ಕುಮಾರ್. ಹಾಗಂತ ವಿ.ಹರಿಕೃಷ್ಣ ಸುಖಾಸುಮ್ಮನೆ ನಿರ್ದೇಶನದ ಕ್ರೆಡಿಟ್ ತೆಗೆದುಕೊಂಡಿಲ್ಲ. “ಯಜಮಾನ’ ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನದಲ್ಲಿ ಹರಿಕೃಷ್ಣ ಸಂಪೂರ್ಣವಾಗಿ ಪಾಲ್ಗೊಂಡಿದ್ದಾರೆ. ಅದೇ ಕಾರಣದಿಂದ ಅವರು ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳದೇ “ಯಜಮಾನ’ದಲ್ಲಿ ತೊಡಗಿಸಿಕೊಂಡಿದ್ದಾರೆ.
ಚಿತ್ರದ ಸಂಭಾಷಣೆಯಲ್ಲೂ ಹರಿಕೃಷ್ಣ ಭಾಗಿಯಾಗಿದ್ದು, ಚೇತನ್ ಕುಮಾರ್ ಹಾಗೂ ಹರಿಕೃಷ್ಣ ಸೇರಿಕೊಂಡು ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಚಿತ್ರದ ನಿರ್ದೇಶನದ ಕ್ರೆಡಿಟ್‌ನಲ್ಲೂ ಅವರಿಗೆ ಸಮಪಾಲು ಸಿಗಲಿದೆ. ಈ ಬಗ್ಗೆ ಮಾತನಾಡುವ ನಿರ್ಮಾಪಕಿ ಶೈಲಜಾ ನಾಗ್, “ಹೌದು, ಚಿತ್ರದ ಕಥೆ, ಚಿತ್ರಕಥೆ ನಿರ್ದೇಶನದಲ್ಲಿ ಇಬ್ಬರಿಗೆ ಕ್ರೆಡಿಟ್ ಇದೆ. ಆರಂಭದಿಂದಲೂ ಹರಿಕೃಷ್ಣ ಅವರು “ಯಜಮಾನ’ದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಅವರ ಇಷ್ಟು ವರ್ಷದ ಸಂಗೀತದ ಅನುಭವ ಜೊತೆಗೆ ನಿರ್ದೇಶನದ ಕನಸು ಇಲ್ಲಿ ಸಾಕಾರಗೊಂಡಿದೆ’ ಎನ್ನುವುದು ಶೈಲಜಾ ನಾಗ್ ಅವರ ಮಾತು. ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದು, ಶ್ರೀಶ ಕೂದುವಳ್ಳಿ ಅವರ ಛಾಯಾಗ್ರಹಣವಿದೆ. ಈಗಾಗಲೇ ಮಾತಿನ ಹಾಗೂ ಮೂರು ಹಾಡುಗಳ ಚಿತ್ರೀಕರಣ ಮುಗಿದಿದ್ದು, ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಚಿತ್ರ ಯುರೋಪ್‌ಗೆ ಪ್ರಯಾಣ ಬೆಳೆಸಲಿದೆ. ಚಿತ್ರತಂಡ ಅಕ್ಟೋಬರ್‌ನಲ್ಲೇ ಯುರೋಪ್‌ಗೆ ಹೋಗಬೇಕಿತ್ತು.
ಆದರೆ, ಅಪಘಾತದಲ್ಲಿ ದರ್ಶನ್ ಅವರ ಕೈಗೆ ಏಟಾಗಿರುವುದರಿಂದ ನವೆಂಬರ್ ಕೊನೆಯ ವಾರದಲ್ಲಿ ಯುರೋಪ್‌ಗೆ ತೆರಳಲಿದೆ. ಚಿತ್ರದ ಡಬ್ಬಿಂಗ್ ಕೆಲಸ ಆರಂಭವಾಗುತ್ತಿದ್ದು, ಈ ವಾರದಲ್ಲಿ ದರ್ಶನ್ ಡಬ್ಬಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಚಿತ್ರದಲ್ಲಿ ಅನೂಪ್ ಸಿಂಗ್ ಠಾಕೂರ್, ರವಿಶಂಕರ್, ದೇವರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರವನ್ನು ಮೀಡಿಯಾ ಹೌಸ್‌ನಡಿ ಬಿ.ಸುರೇಶ್ ಹಾಗೂ ಶೈಲಜಾ ನಾಗ್ ನಿರ್ಮಿಸುತ್ತಿದ್ದಾರೆ.